ಶನಿವಾರ, ಜೂನ್ 12, 2021
24 °C

ಕ್ರಿಕೆಟ್: ಲಂಕಾಕ್ಕೆ ಜಯ ಅನಿವಾರ್ಯ; ಪ್ರಶಸ್ತಿಯ ಕನಸಿನಲ್ಲಿ ಆಸ್ಟ್ರೇಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್: ಮೊದಲ ಫೈನಲ್‌ನಲ್ಲಿ ದೊರೆತ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಫೈನಲ್‌ನಲ್ಲಿ ಮಂಗಳವಾರ ಶ್ರೀಲಂಕಾ ಜೊತೆ  ಹಣಾಹಣಿ ನಡೆಸಲಿದೆ.

ಅಡಿಲೇಡ್‌ನಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆಲುವು ಪಡೆದರೆ `ಕಾಮನ್‌ವೆಲ್ತ್ ಬ್ಯಾಂಕ್ ಟ್ರೋಫಿ~ ಆಸ್ಟ್ರೇಲಿಯಾ ತಂಡದ ಪಾಲಾಗಲಿದೆ. ಬ್ರಿಸ್ಬೇನ್‌ನಲ್ಲಿ ಭಾನುವಾರ ನಡೆದಿದ್ದ `ಬೆಸ್ಟ್ ಆಫ್ ತ್ರೀ~ ಫೈನಲ್‌ನ ಮೊದಲ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್ ಬಳಗ 15 ರನ್‌ಗಳ ಗೆಲುವು ಪಡೆದಿತ್ತು.ಈ ಕಾರಣ ಇಂದು ನಡೆಯುವ ಎರಡನೇ ಫೈನಲ್ ಲಂಕಾ ತಂಡಕ್ಕೆ `ಮಾಡು ಇಲ್ಲವೇ ಮಡಿ~ ಹೋರಾಟ ಎನಿಸಿದೆ. ಸೋಲು ಅನುಭವಿಸಿದರೆ, ಪ್ರಶಸ್ತಿಯ ಕನಸು ಅಸ್ತಮಿಸಲಿದೆ. ಮಾಹೇಲ ಜಯವರ್ಧನೆ ಬಳಗ ಗೆಲುವು ಪಡೆದರೆ ಉಭಯ ತಂಡಗಳು 1-1 ರಲ್ಲಿ ಸಮಬಲ ಸಾಧಿಸಲಿವೆ. ಹಾಗಾದಲ್ಲಿ ಗುರುವಾರ ನಡೆಯುವ ಕೊನೆಯ ಫೈನಲ್ ನಿರ್ಣಾಯಕ ಎನಿಸಲಿದೆ.ಮಂಗಳವಾರ ನಡೆಯುವ ಪಂದ್ಯದಲ್ಲೇ ಗೆಲುವು ಪಡೆದು ಟ್ರೋಫಿ ಎತ್ತಿಹಿಡಿಯುವ ಕನಸಿನಲ್ಲಿ ಆಸೀಸ್ ತಂಡ ಇದೆ. ಇದಕ್ಕಾಗಿ ಪ್ರದರ್ಶನ ಮಟ್ಟದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳುವುದು ಅಗತ್ಯ. ಮೊದಲ ಫೈನಲ್‌ನಲ್ಲಿ ಆತಿಥೇಯ ತಂಡದ ಬೌಲಿಂಗ್ ಅಷ್ಟೊಂದು ಪ್ರಭಾವಿ ಎನಿಸಿರಲಿಲ್ಲ.ಗೆಲುವಿಗೆ 322 ರನ್‌ಗಳ ಗುರಿ ಬೆನ್ನಟ್ಟಿದ್ದ ಲಂಕಾ ತಂಡ 306 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ವೇಗದ ಬೌಲರ್ ನುವಾನ್ ಕುಲಶೇಖರ ಬ್ಯಾಟಿಂಗ್‌ನಲ್ಲಿ ಮಿಂಚಿ 73 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನು ನೋಡಿದರೆ ಆಸೀಸ್ ಬೌಲರ್‌ಗಳು ವೈಫಲ್ಯ ಅನುಭವಿಸಿದ್ದು ಸ್ಪಷ್ಟವಾಗುತ್ತದೆ.ಫೈನಲ್‌ನಲ್ಲಿ 1-0 ರಲ್ಲಿ ಮೇಲುಗೈ ಪಡೆಯಲು ಯಶಸ್ವಿಯಾಗಿದ್ದರೂ ನಾಯಕ ಕ್ಲಾರ್ಕ್ ಅವರಿಗೆ ತಂಡದ ಪ್ರದರ್ಶನದ ಬಗ್ಗೆ ಪೂರ್ಣ ತೃಪ್ತಿಯಿಲ್ಲ. `ಪವರ್ ಪ್ಲೇ ಹಾಗೂ ಕೊನೆಯ ಓವರ್‌ಗಳಲ್ಲಿ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಡುತ್ತಿರುವುದು ಚಿಂತೆಯ ವಿಷಯ. ನೆಟ್ಸ್‌ನಲ್ಲಿ  ಎಲ್ಲರೂ ಚೆನ್ನಾಗಿ ಬೌಲ್ ಮಾಡುವರು. ಆದರೆ ಒತ್ತಡದ ಸಂದರ್ಭಗಳಲ್ಲಿ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವಲ್ಲಿ ಎಡವುತ್ತಿದ್ದಾರೆ~ ಎಂದು ಕ್ಲಾರ್ಕ್ ಮೊದಲ ಫೈನಲ್ ಬಳಿಕ ನುಡಿದಿದ್ದರು.ಕಳೆದ ಪಂದ್ಯದ `ಹೀರೊ~ ಡೇವಿಡ್ ವಾರ್ನರ್ ಅವರ  `ಫಿಟ್‌ನೆಸ್~ ಕೂಡಾ ಆಸೀಸ್ ಆತಂಕಕ್ಕೆ ಕಾರಣವಾಗಿದೆ. ಮೊದಲ ಫೈನಲ್‌ನಲ್ಲಿ ಭರ್ಜರಿ 163 ರನ್ ಗಳಿಸಿದ್ದ ವಾರ್ನರ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಆಡುವುದು ಅನುಮಾನ. ಅವರು ಕಣಕ್ಕಿಳಿಯದಿದ್ದರೆ, ಪೀಟರ್ ಫಾರೆಸ್ಟ್ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಬಹುದು.

ಮತ್ತೊಂದೆಡೆ ಜಯವರ್ಧನೆ ಬಳಗ ಪುಟಿದೆದ್ದು ನಿಲ್ಲುವ ಕನಸು ಕಾಣುತ್ತಿದೆ.ಮಂಗಳವಾರ ಸೋಲು ಎದುರಾದರೆ ಪ್ರಶಸ್ತಿಯ ಕನಸು ಕೈಬಿಡಬೇಕೆಂಬ ಅರಿವು ಈ ತಂಡದ ಆಟಗಾರರಿಗೆ ಇದೆ. ಇದರಿಂದ ತನ್ನ ಸಂಪೂರ್ಣ ಶಕ್ತಿಯೊಂದಿಗೆ ಆಸೀಸ್ ತಂಡದ ಮೇಲೆರಗುವ ಲೆಕ್ಕಾಚಾರದಲ್ಲಿದೆ. ನಾಯಕ ಜಯವರ್ಧನೆ ಅಲ್ಲದೆ,  ತಿಲಕರತ್ನೆ ದಿಲ್ಶಾನ್ ಮತ್ತು ದಿನೇಶ್ ಚಂಡಿಮಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಲ್ಲೊಬ್ಬರು ಕ್ರೀಸ್ ಬಳಿ ನೆಲೆಯೂರಿ ನಿಂತರೆ ಲಂಕಾಕ್ಕೆ ಸವಾಲಿನ ಮೊತ್ತ ಪೇರಿಸಲು ಸಾಧ್ಯ.ಬೌಲಿಂಗ್ ವಿಭಾಗದ ವೈಫಲ್ಯ ಲಂಕಾ ತಂಡವನ್ನೂ ಕಾಡುತ್ತಿದೆ. ಪ್ರಮುಖ ವೇಗಿ ಮಾಲಿಂಗ ಎಂದಿನ ಫಾರ್ಮ್ ಕಂಡುಕೊಳ್ಳುವುದು ಅಗತ್ಯ. ಕಳೆದ ಪಂದ್ಯದಲ್ಲಿ ಅವರು 74 ರನ್ ಬಿಟ್ಟುಕೊಟ್ಟಿದ್ದರು. ಭಾರತ ವಿರುದ್ಧದ ಲೀಗ್ ಪಂದ್ಯದಲ್ಲಿ 96 ರನ್ ಸೋರಿಹೋಗಿತ್ತು. ಮಾಲಿಂಗ ತಮ್ಮ ಮಾರಕ  `ಯಾರ್ಕರ್~ಗಳ ಮೂಲಕ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವರೇ ಎಂಬುದನ್ನು ನೋಡಬೇಕು.

ತಂಡಗಳು ಇಂತಿವೆ:


ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ದಿನೇಶ್ ಚಂಡಿಮಾಲ್, ಲಾಹಿರು ತಿರಿಮನ್ನೆ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ರಂಗನಾ ಹೆರಾತ್, ಧಮ್ಮಿಕಾ ಪ್ರಸಾದ್, ಫರ್ವೀಜ್ ಮಹರೂಫ್, ಉಪುಲ್ ತರಂಗಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಮ್ಯಾಥ್ಯೂ ವೇಡ್, ಶೇನ್ ವ್ಯಾಟ್ಸನ್, ಪೀಟರ್ ಫಾರೆಸ್ಟ್, ಮೈಕ್ ಹಸ್ಸಿ, ಡೇವಿಡ್ ಹಸ್ಸಿ, ಡೇನಿಯಲ್ ಕ್ರಿಸ್ಟಿಯನ್, ಕ್ಸೇವಿಯರ್ ಡೋಹರ್ತಿ, ಬ್ರೆಟ್ ಲೀ, ಬೆನ್ ಹಿಲ್ಫೆನಾಸ್, ಜೇಮ್ಸ ಪ್ಯಾಟಿಸನ್

ಪಂದ್ಯದ ಆರಂಭ: ಬೆಳಿಗ್ಗೆ 8.50ಕ್ಕೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.