ಸೋಮವಾರ, ಆಗಸ್ಟ್ 2, 2021
28 °C

ಕ್ರಿಕೆಟ್: ವಿಶ್ವಕಪ್‌ಗೆ 30 ಮಂದಿ ಸಂಭಾವ್ಯ ಆಟಗಾರರು,

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಉಪಖಂಡದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಭಾರತದ ಸಂಭವನೀಯ ಆಟಗಾರರನ್ನು ಪ್ರಕಟಿಸಲಾಗಿದ್ದು ರಾಹುಲ್ ದ್ರಾವಿಡ್ ಹಾಗೂ ಇರ್ಫಾನ್ ಪಠಾಣ್‌ಗೆ ಸ್ಥಾನ ಲಭಿಸಿಲ್ಲ. ಶನಿವಾರ ಇಲ್ಲಿ ಸಭೆ ಸೇರಿದ್ದ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯು 30 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ.ಮುಂಬೈನ ಬ್ಯಾಟ್ಸ್‌ಮನ್ ಆಜಿಂಕ್ಯ ರಹಾನೆ ಹಾಗೂ ಸೌರಾಷ್ಟ್ರದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಸ್ಥಾನ ಪಡೆದಿರುವ ಹೊಸ ಮುಖಗಳು. ಕರ್ನಾಟಕದ ವೇಗಿ ಆರ್.ವಿನಯ್ ಕುಮಾರ್‌ಗೆ ಕೂಡ ಸಂಭಾವ್ಯ ಪಟ್ಟಿಯಲ್ಲಿ ಅವಕಾಶ ಲಭಿಸಿದೆ. ಗಿರುವ ಸಂಭಾವ್ಯ ಪಟ್ಟಿಯನ್ನು ಮುಂದಿನ ತಿಂಗಳು 19ರಂದು 15 ಮಂದಿಗೆ ಇಳಿಸಲಾಗುತ್ತದೆ. ವಿಶ್ವಕಪ್ ಫೆಬ್ರುವರಿ 19ರಂದು ಢಾಕಾದಲ್ಲಿ ಶುರುವಾಗಲಿದೆ. ಮಾಜಿ ನಾಯಕ ದ್ರಾವಿಡ್ 2009ರ ಸೆಪ್ಟೆಂಬರ್‌ನಿಂದ ಯಾವುದೇ ಏಕದಿನ ಪಂದ್ಯ ಆಡಿಲ್ಲ. ಎಡಗೈ ವೇಗಿ ಇರ್ಫಾನ್ 2009ರ ಫೆಬ್ರುವರಿಯಿಂದ ಏಕದಿನ ಕ್ರಿಕೆಟ್ ಆಡಲು ಕಣಕ್ಕಿಳಿದಿಲ್ಲ. ಹಾಗಾಗಿ ಅವರನ್ನು ಆಯ್ಕೆದಾರರು ಪರಿಗಣಿಸಿಲ್ಲ. ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇರುವ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಹೇಳಿದ್ದಾರೆ. ‘ತಂಡದಲ್ಲಿ ಹೇಳಿಕೊಳ್ಳುವಂತಹ ಅಚ್ಚರಿಯ ಅಂಶಗಳು ಇಲ್ಲ. ಸಂಭಾವ್ಯ ಪಟ್ಟಿಯಲ್ಲಿರುವ ಪ್ರತಿ ಆಟಗಾರರು ಪ್ರತಿಭಾವಂತರು. ಅಂತಿಮ ತಂಡವನ್ನು ಆಯ್ಕೆ ಮಾಡಲು ಇನ್ನೂ ಒಂದು ತಿಂಗಳ ಕಾಲಾವಕಾಶವಿದೆ’ ಎಂದು ಅವರು ನುಡಿದಿದ್ದಾರೆ. ‘ವಿಶ್ವಕಪ್‌ನಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ತೋರಲಿದೆ ಎಂಬ ವಿಶ್ವಾಸ ನನ್ನಲ್ಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವೀಗ ಉತ್ತಮ ಪ್ರದರ್ಶನ ತೋರುತ್ತಿದೆ. ಇದು ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್’ ಎಂದು ಶ್ರೀಕಾಂತ್ ವಿವರಿಸಿದ್ದಾರೆ. ಸಂಭಾವ್ಯ ತಂಡದಲ್ಲಿ 12 ಮಂದಿ ಬ್ಯಾಟ್ಸ್‌ಮನ್ ಗಳಿದ್ದಾರೆ. ಐದು ಮಂದಿ ಸ್ಪಿನ್ನರ್ ಹಾಗೂ ಏಳು ಮಂದಿ ವೇಗಿಗಳಿಗೆ ಸ್ಥಾನ ನೀಡಲಾಗಿದೆ. ದೋನಿ ಸೇರಿದಂತೆ ನಾಲ್ಕು ಮಂದಿ ವಿಕೆಟ್ ಕೀಪರ್‌ಗಳಿದ್ದಾರೆ. ಇಬ್ಬರು ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಲಾಗಿದೆ.ಸಂಭಾವ್ಯ ತಂಡ ಇಂತಿದೆ: ಮಹೇಂದ್ರ ಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹರಭಜನ್ ಸಿಂಗ್, ಜಹೀರ್ ಖಾನ್, ಆಶೀಶ್ ನೆಹ್ರಾ, ಎಸ್.ಶ್ರೀಶಾಂತ್, ಮುನಾಫ್ ಪಟೇಲ್, ಇಶಾಂತ್ ಶರ್ಮ, ಆರ್.ವಿನಯ್ ಕುಮಾರ್, ಮುರಳಿ ವಿಜಯ್, ರೋಹಿತ್ ಶರ್ಮ, ರವೀಂದ್ರ ಜಡೇಜಾ, ಆಜಿಂಕ್ಯ ರಹಾನೆ, ಸೌರಭ್ ತಿವಾರಿ, ಯೂಸುಫ್ ಪಠಾಣ್, ಪಾರ್ಥಿವ್ ಪಟೇಲ್, ಆರ್.ಅಶ್ವಿನ್, ವೃದ್ಧಿಮಾನ್ ಸಹಾ, ದಿನೇಶ್ ಕಾರ್ತಿಕ್, ಶಿಖರ್ ಧವನ್, ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ, ಚೇತೇಶ್ವರ ಪೂಜಾರ, ಪ್ರಗ್ಯಾನ್ ಓಜಾ ಹಾಗೂ ಪ್ರವೀಣ್ ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.