ಶುಕ್ರವಾರ, ಜೂನ್ 18, 2021
22 °C

ಕ್ರಿಮಿಯಾದಲ್ಲಿ ರಷ್ಯಾ ಪರ ಜನಮತಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಫೆರೊಪಾಲ್‌ (ಎಎಫ್‌ಪಿ): ಉಕ್ರೇ­ನ್‌­­­ನಿಂದ ಬೇರ್ಪಟ್ಟು, ರಷ್ಯಾದೊಂದಿಗೆ ಸೇರಲು ಅಥವಾ ಸ್ವಾಯತ್ತ ದೇಶ­ವಾಗಲು ಕ್ರಿಮಿಯಾ ಗಣ­ರಾಜ್ಯ­ದಲ್ಲಿ ಭಾನುವಾರ ನಡೆದ ಜನಮತ­ ಗಣನೆ­ಯಲ್ಲಿ ಸಾಕಷ್ಟು ಸಂಖ್ಯೆಯ ಜನರು  ಭಾಗ­­ವಹಿಸಿ ಮತದಾನ ಮಾಡಿದರು.



ಬಹುತೇಕ ರಷ್ಯಾ ಮೂಲನಿವಾಸಿ­ಗಳೇ ಹೆಚ್ಚಿರುವ ಈ ವಜ್ರದಾಕಾರದ ಕಪ್ಪು ಸಮುದ್ರ ಪರ್ಯಾಯ ದ್ವೀಪ­ದಲ್ಲಿ ೧೫ ಲಕ್ಷ­ ಜನರು ಜನ­ಮತ­ಗಣನೆ ಮತ­ದಾನದಲ್ಲಿ ಪಾಲ್ಗೊಂಡಿದ್ದರು.



ಜನಮತಗಣನೆಯ ಫಲಿತಾಂಶವನ್ನು ತಾವು ಮಾನ್ಯ ಮಾಡುವುದಿಲ್ಲ ಎಂದು ರಷ್ಯಾ ಹೊರತುಪಡಿಸಿ, ಉಕ್ರೇ­ನ್‌ನ ಹೊಸ ಸರ್ಕಾರ ಮತ್ತು ಅಂತರ­ರಾಷ್ಟ್ರೀಯ ಸಮುದಾಯ ಈಗಾಗಲೇ ಸ್ಪಷ್ಟಪಡಿಸಿವೆ.



ಕಳೆದ ತಿಂಗಳು ಉಕ್ರೇನ್‌ನಲ್ಲಿ ಅಧ್ಯಕ್ಷ­ವಿಕ್ಟರ್‌ ಯನುಕೋವಿಚ್‌ ಅವರ ವಿರುದ್ಧ ಪ್ರತಿಭಟನೆ ನಡೆದು, ಅವರನ್ನು ಪದಚ್ಯುತಿಗೊಳಿಸಿದ ನಂತರ ಹೊಸ ಹಂಗಾಮಿ ಸರ್ಕಾರ ಸ್ಥಾಪನೆಯಾಗಿದೆ.



ಆನಂತರ ರಷ್ಯಾ ಸರ್ಕಾರಿ ಸೇನೆ ಮತ್ತು ಅದರ ಪರ­ವಿರುವ ಪ್ರಜಾ ಸೇನೆ, ಉಕ್ರೇನ್‌ ಆಡ­ಳಿತವಿದ್ದ ­ಕ್ರಿಮಿಯಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಕ್ರಿಮಿಯಾ ಸಂಸತ್‌ ಕೂಡ ರಷ್ಯಾ ಪರ­ನಿರ್ಣಯ ಕೈಗೊಂಡಿದೆ.



ಉಕ್ರೇನ್‌ ಮತ್ತು ರಷ್ಯಾ ಸೇನೆಗಳು ಈಗ ಕ್ರಿಮಿಯಾ ಗಡಿ­ಯಲ್ಲಿವೆ. ವಿಶ್ವ­ಸಂಸ್ಥೆ, ಅಮೆರಿಕ, ಐರೋಪ್ಯ ಒಕ್ಕೂಟ ಸೇರಿ ಅಂತರ­ರಾಷ್ಟ್ರೀಯ ಸಮುದಾ­ಯ, ರಷ್ಯಾದ ಹಸ್ತಕ್ಷೇಪವನ್ನು ವಿರೋಧಿಸಿವೆ.



ಭದ್ರತಾ ಮಂಡಳಿಯಲ್ಲಿ ಪಾಶ್ಚಿ­ಮಾತ್ಯ ರಾಷ್ಟ್ರಗಳು ಶನಿವಾರ ರಾತ್ರಿ ಮಂಡಿಸಿದ ನಿರ್ಣಯವನ್ನು ರಷ್ಯಾ ತನ್ನ ವಿಟೊ ಅಧಿ­ಕಾರ ಬಳಸಿ ತಿರಸ್ಕರಿಸಿದ್ದು, ಚೀನಾ ಈ ಸಭೆಗೆ ಗೈರುಹಾಜರಾಗಿತ್ತು.



ಇದರಿಂದ ಪೂರ್ವ ಯೂರೋಪ್‌ ಗಡಿ­ಯಲ್ಲಿ­ರುವ ಈ ಗಣರಾಜ್ಯದಲ್ಲಿ ಶೀತ­ಲ­ಸಮರ ಮಾದರಿಯ ಭದ್ರತಾ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧ ಭೀತಿ ನಿರ್ಮಾಣವಾಗಿದ್ದು, ಇದನ್ನು ಖಂಡಿಸಿ ಪ್ರತಿಭಟನೆಗಳು ನಡೆದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.