ಶುಕ್ರವಾರ, ಆಗಸ್ಟ್ 6, 2021
22 °C

ಕ್ರಿಸ್ಮಸ್ ಖುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕ್ರಿಸ್ಮಸ್ ಈವ್’ ವಿಧಿವತ್ತಾಗಿ ಮುಗಿದಿದೆ. ಯೇಸುಭಕ್ತರ ಭಕ್ತಿಯ ಪರಾಕಾಷ್ಠೆ, ಪ್ರಾರ್ಥನೆ, ಪೂಜೆ,  ಕೇಕ್-ವೈನ್ ಹಾಗೂ ಶುಭಾಶಯ ವಿನಿಮಯ... ಮುಂದಿನ ಕ್ರಿಸ್ಮಸ್‌ವರೆಗೂ ನಿಮ್ಮ ಶುಭಾಶೀರ್ವಾದ ನಮ್ಮ ಮೇಲಿರಲಿ ಎಂದು ಬೇಡಿ ಕಾಲಿಗೆರಗಿದ ಕಿರಿಯರಿಗೆ ಹಿರಿಯರಿಂದ ಮನಸಾ ಶುಭಹಾರೈಕೆ... ಕ್ರೈಸ್ತ ಬಾಂಧವರು ಪಕ್ಕಾ ಸಾಂಪ್ರದಾಯಿಕ ಮತ್ತು ಕೌಟುಂಬಿಕ ವಾತಾವರಣದಲ್ಲಿ ಯೇಸುಜನ್ಮದಿನವನ್ನು ಸಂಪನ್ನಗೊಳಿಸಿದ್ದು ಹೀಗೆ.ದಿನಾಂಕದ ಲೆಕ್ಕದಲ್ಲಿ ಇಂದು, ಶನಿವಾರ ಕ್ರಿಸ್ಮಸ್ ಎಂದಿದ್ದರೂ ಅದರ ಸಂಭ್ರಮಾಚರಣೆ ಶುಕ್ರವಾರ ಮಧ್ಯರಾತ್ರಿ 12ರಿಂದಲೇ ಶುಭಾರಂಭಗೊಂಡಿದೆ. ಇಂದು ಉಳಿದಿರುವುದು ಅದರ ಉತ್ತರಾರ್ಧ ಮಾತ್ರ. ರಾತ್ರಿಯಿಂದ ಮುಂಜಾವಿನವರೆಗೂ ಚರ್ಚ್‌ಗಳಲ್ಲಿ  ಜರುಗಿದ ಧಾರ್ಮಿಕ ವಿಧಿವಿಧಾನ, ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳಲಾಗದ ಮಂದಿ ಇಂದು ಬೆಳಗಿನ ಜಾವದ ಮಾಸ್‌ಗೆ ಹಾಜರಾಗಿದ್ದಾರೆ. ಹಬ್ಬದಡುಗೆಯ ತಯಾರಿಯಲ್ಲಿ ಮುಳುಗಿದ್ದ ಮನೆಯೊಡತಿ ರಾತ್ರಿಯ ಪೂಜೆಗೆ ಹಾಜರಾಗಲಿಲ್ಲ.ಕರಾವಳಿಯಿಂದ ಸಿಲಿಕಾನ್ ಸಿಟಿಗೆ ಸ್ಥಳಾಂತರಗೊಂಡಿರುವ ಅನುಷ್ಕಾ ಕುಟುಂಬಕ್ಕೆ ಕ್ರಿಸ್ಮಸ್ ಆಚರಣೆಗೆ ತವರಿಗೆ ಹೋಗುವ ಬದಲು ತವರಿನಿಂದ ಎಲ್ಲಾ ಬಂಧುಗಳು ಬೆಂಗಳೂರಿನ ಮನೆಯಲ್ಲಿ ಕಲೆಯುವುದು ಕಳೆದೈದು ವರ್ಷಗಳಿಂದ ರೂಢಿಯಾಗಿದೆಯಂತೆ. ಹೀಗಾಗಿ ಪಕ್ಕಾ ಕರಾವಳಿ ಶೈಲಿಯ ಕೇಕ್, ಮೆನು, ಕಾರ್ನಿವಲ್, ಗೋದಲಿ ಸಜ್ಜಾಗಿದೆ. ಹತ್ತು ದಿನಗಳ ಹಿಂದೆಯೇ ಸಿದ್ಧಪಡಿಸಿದ ವೈನ್ ಮತ್ತು ನಿನ್ನೆ ತಾನೇ ತಯಾರಿಸಿದ ಕೇಕ್ ಇಂದಿನ ಊಟದ ಹೈಲೈಟ್. ಅನುಷ್ಕಾಳ ಅಮ್ಮ ಎಂದಿನಂತೆ ಅಚ್ಚ ಬಿಳುಪಿನ ಹೂಭಾರದ ಮಲ್ಲಿಗೆ ಇಡ್ಲಿ ತಯಾರಿಸಿದ್ದಾರೆ.‘ಹಬ್ಬದ ಮೆನುವಿನಲ್ಲಿ ಈ ಮೂರು ಐಟಂ ಇದ್ದೇ ಇರುತ್ತದೆ. ವೆಜ್ ಮತ್ತು ನಾನ್‌ವೆಜ್ ಮಾಡುತ್ತೇವೆ. ಹಿಂದೂ,ಮುಸಲ್ಮಾನ ಬಂಧುಗಳನ್ನು ಮನೆಗೆ ಆಹ್ವಾನಿಸಿ ಸತ್ಕರಿಸದಿದ್ದರೆ ನಮ್ಮ ಹಬ್ಬ ಪೂರ್ತಿಗೊಳ್ಳುವುದಿಲ್ಲ. ಪ್ರತಿಯೊಬ್ಬರಿಗೂ ಕೇಕ್ ಮತ್ತು ಉಡುಗೊರೆ ಕೊಟ್ಟು ಬೀಳ್ಕೊಡುತ್ತೇವೆ’ ಎಂಬ ಅವಳ ವಿವರಣೆಯಲ್ಲೇ ಸಡಗರ ತುಳುಕುತ್ತದೆ.ಅನುಷ್ಕಾಳಂತೆ ಎಲ್ಲರೂ ಮನೆಯಲ್ಲೇ ಹಬ್ಬದಡುಗೆ ಮಾಡುವುದಿಲ್ಲ. ಹೋಟೆಲ್‌ಗಳಲ್ಲಿ ಕ್ರಿಸ್ಮಸ್‌ಗಾಗಿಯೇ ಬಗೆಬಗೆ ಥಾಲಿಗಳು ಗ್ರಾಹಕರನ್ನು ಅದಾಗಲೇ ಮುಂಗಡ ಕಾದಿರಿಸಿಕೊಂಡಿವೆ. ಹೊಸ ಗ್ರಾಹಕರ ಆಗಮನದ ಲೆಕ್ಕಾಚಾರ ಕೊನೆಕ್ಷಣದವರೆಗೂ ಏರುಪೇರಾಗುತ್ತಲೇ ಇರುತ್ತದೆ. ಹಿರಿಯರಿಗೇ ಒಂದು ಬಗೆ, ಕಿರಿಯರಿಗೇ ಒಂದು, ಸಸ್ಯಾಹಾರಿಗಳಿಗೇ ಮೀಸಲಾದ ಮೆನು, ಮಾಂಸಾಹಾರಿಗಳದ್ದೇ ತರಾವರಿ ಮೆನು... ಕೇಕ್, ಐಸ್‌ಕ್ರೀಂ, ಕಸ್ಟರ್ಡ್, ಸಲಾಡ್‌ಗಳಲ್ಲೂ ಹತ್ತಾರು ನಮೂನೆ. ವಿದೇಶಿ ಪಾಕದ್ದೇ ಮೇಲುಗೈ.ರೆಸ್ಟೋರೆಂಟ್, ತಾರಾ ಹೋಟೆಲ್‌ಗಳ ಬಾಣಸಿಗರಿಗೆ ಹಳೆಯ ಮೆನುಗಳು ಪುನರಾವರ್ತನೆಯಾಗದೆ ನವೀನ ಮಾದರಿಯನ್ನು ಪರಿಚಯಿಸುವ ಸ್ಪರ್ಧೆ. ಊಟಕ್ಕೂ ಮೊದಲು ಗ್ರಾಹಕ ಕಾಣುವ ಭರ್ಜರಿ ಕಾರ್ನಿವಲ್, ಸವಿಯುವ ಕೇಕ್, ವೈನ್ ಎಷ್ಟೇ ರುಚಿವತ್ತಾಗಿರಲಿ, ಅಂತಿಮ ಫಲಿತಾಂಶ ಸಿಗುವುದು ಊಟದ ತಟ್ಟೆಯಲ್ಲೇ! ಹೋಟೆಲ್‌ನ ತಿಜೋರಿ ತುಂಬುವುದೂ ಅಲ್ಲೇ. ಇವೆರಡಕ್ಕೂ ಶೆಫ್‌ನ ಪಾಕಪ್ರಾವೀಣ್ಯವೇ ಮಾನದಂಡ!ಗ್ರಾಹಕರಿಗೋ ರಸಗವಳ.

ಕ್ರಿಸ್ಮಸ್, ಸೌಹಾರ್ದತೆ ಮತ್ತು ಕೂಡಿಬಾಳುವ, ಕೂಡಿ ತಿನ್ನುವ ಹಬ್ಬವೂ ಹೌದು. ಹೊಸ ವರ್ಷವನ್ನು ತೆಕ್ಕೆಯಲ್ಲಿಟ್ಟುಕೊಂಡು ಬರುವ ಕಾರಣ ಕ್ರಿಸ್ಮಸ್ ಶುಭಾಶಯ, ಆಚರಣೆಯಲ್ಲಿ ಹೊಸವರ್ಷದ ಛಾಯೆಯೂ ಅಡಗಿರುವುದು ವಿಶೇಷ.ಭೂತಕಾಲದ ನೆಲೆಗಟ್ಟಿನಲ್ಲಿ ವರ್ತಮಾನದ ಸೋಪಾನವೇರುತ್ತಾ, ಭವಿಷ್ಯತ್ತಿನತ್ತ ಕನಸುಗಣ್ಣು ನೆಡುವ ಪರ್ವಕಾಲದಲ್ಲಿ ಬರುತ್ತದೆ ಕ್ರಿಸ್ಮಸ್ ಎಂಬ ಜೋವಿಯಲ್ ಹಬ್ಬ. ಡಿಸೆಂಬರ್ ಎಂದರೆ ಕ್ರಿಸ್ಮಸ್ ಮಾಸ.ಹೊಸ ಕ್ಯಾಲೆಂಡರ್ ವರ್ಷಕ್ಕೆ  ಮುಖ ಮಾಡಬೇಕಾದರೆ ಕ್ರಿಸ್ಮಸ್ ದಾಟಿಬರಲೇಬೇಕು.ಇನ್ನೇನಿದ್ದರೂ ವರ್ಷಾಂತ್ಯಕ್ಕೆ ಕ್ಷಣಗಣನೆ... ಹೊಸ ವರ್ಷದ ಪ್ರತೀಕ್ಷೆ...

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.