ಗುರುವಾರ , ಏಪ್ರಿಲ್ 22, 2021
29 °C

ಕ್ರೀಡಾಭಿಮಾನಿಗಳ ಕ್ಷಮೆಯಾಚಿಸಿದ ಮಧುರಾ

ಪ್ರಜಾವಾಣಿ ವಾರ್ತೆ ಪೂರ್ಣಿಮಾ ನಟರಾಜ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡದ ಸದಸ್ಯರ ಜತೆಗೆ ಪಥಸಂಚಲನದಲ್ಲಿ ನಡೆದು ಅಚ್ಚರಿಗೆ ಕಾರಣರಾಗಿರುವ ಬೆಂಗಳೂರಿನ ಬೆಡಗಿ ಮಧುರಾ ಕೆ.ನಾಗೇಂದ್ರ (ಮಧುರಾ ಹನಿ) ಆರು ದಿನಗಳ ಬಳಿಕ ಮೌನ ಮುರಿದಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ಉಂಟಾದ ಕಾರಣಕ್ಕಾಗಿ ಭಾರತೀಯ ಕ್ರೀಡಾಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.ಶುಕ್ರವಾರ ನಡೆದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತ ತಂಡದ ಸದಸ್ಯರ ಜತೆಗೆ ಸಾಗಿದ್ದ ಮಧುರಾ ವಿವಾದಕ್ಕೆ ಗುರಿಯಾಗಿದ್ದರು. ಕ್ರೀಡಾಭಿಮಾನಿಗಳು ಯಾರಿವಳು ಎಂದು ಉದ್ಘಾರ ತೆಗೆದಿದ್ದರು. ಒಲಿಂಪಿಕ್ಸ್ ಕ್ರೀಡಾ ಸಮಿತಿಯ ನಿರ್ವಹಣೆಯಲ್ಲಿಯೇ ಲೋಪದೋಷ ಆಗಿರಬಹುದು ಎಂಬ ಪ್ರಶ್ನೆ ಎದ್ದಿತ್ತು. ಆದರೆ ನಗರಕ್ಕೆ ಗುರುವಾರ ಬಂದಿಳಿದ ಮಧುರಾ `ಪ್ರಜಾವಾಣಿ~ಯೊಂದಿಗೆ ಮಾತನಾಡಿ ಒಲಿಂಪಿಕ್ಸ್ ಪಥಸಂಚಲನದಲ್ಲಿ ಏಕೆ ಪಾಲ್ಗೊಂಡೆ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.`ಮಾಧ್ಯಮಗಳಲ್ಲಿ ವರದಿಯಾದಂತೆ ಭದ್ರತಾ ನಿಯಮಗಳನ್ನೂ ಉಲ್ಲಂಘಿಸಿಲ್ಲ. ಡ್ಯಾನಿ ಬೊಯ್ಲೆ ನೃತ್ಯ ತಂಡದ ಸದಸ್ಯೆಯಾಗಿದ್ದೆ. ಉದ್ಘಾಟನಾ ಸಮಾರಂಭದಲ್ಲಿ ನಮ್ಮ ತಂಡ ಪಾಲ್ಗೊಳ್ಳಲು ಅನುಮತಿ ಸಿಕ್ಕಿತ್ತು. ಪಥಸಂಚಲನದಲ್ಲಿ ನಾನು ತುಂಬಾ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಆದರೆ, ಯಾರೂ ನನ್ನನ್ನು ತಡೆಯಲಿಲ್ಲ~ ಎಂದು ಮಧುರಾ ಸ್ಪಷ್ಟಪಡಿಸಿದರು.`ಪಥಸಂಚಲನದಲ್ಲಿ ಸಾಗುವಾಗ ಪಕ್ಕದಲ್ಲೇ ಇದ್ದರೂ ಧ್ವಜಧಾರಿ ಕ್ರೀಡಾಪಟು ಸುಶೀಲ್ ಕುಮಾರ್ ಹಾಗೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಎಲ್ಲ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ತಲ್ಲೆನರಾಗಿದ್ದರು. ಹಾಗಾಗಿ ಅವರೊಂದಿಗೆ ಮಾತನಾಡಲು ಆಗಿಲ್ಲ~ ಎಂದು ಅವರು ತಿಳಿಸಿದರು.`ಕ್ರೀಡಾಪಟುಗಳ ಜತೆಗೆ ಅಪರಿಚಿತೆಯೊಬ್ಬಳು ಪಥಸಂಚಲನದಲ್ಲಿ ಪಾಲ್ಗೊಂಡ ಘಟನೆ ಸಂಭವಿಸಿದರೆ, ಇತರ ಭಾರತೀಯರಂತೆ ನಾನೂ ಪ್ರತಿಕ್ರಿಯಿಸುತ್ತಿದೆ. ಆ ವ್ಯಕ್ತಿಯ ನಾನೂ ಕುತೂಹಲ ತಾಳುತ್ತಿದೆ~ ಎಂದು ಮಧುರಾ ಇಡೀ ಘಟನಾವಳಿಗಳ ಬಗ್ಗೆ ಪ್ರತಿಕ್ರಿಯಿಸಿದರು.ಲಂಡನ್ ಸ್ಕೂಲ್ ಆಫ್ ಬ್ಯುಸಿನೆಸ್ ಹಾಗೂ ಫೈನಾನ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮಧುರಾ ಒಲಿಂಪಿಕ್ಸ್‌ನಲ್ಲಿ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಳು. ಒಲಿಂಪಿಕ್ಸ್ ಆರಂಭವಾಗುವ ಎರಡು ದಿನಗಳ ಮೊದಲು ತಂದೆ ನಾಗೇಂದ್ರ ಕೆ, ತಾಯಿ ಜಾಹ್ನವಿ, ಸಹೋದರಿಯರಾದ ದಿವ್ಯಾ ಹಾಗೂ ಶ್ರೀರಕ್ಷಾ ಅವರು ಮಧುರಾ ನೃತ್ಯದ ಪೂರ್ವಭಾವಿ ತಯಾರಿ ವೀಕ್ಷಿಸಲು ಲಂಡನ್‌ಗೆ ತೆರಳಿದ್ದರು.`ನಾವು ಎಲ್ಲರೂ ಲಂಡನ್‌ಗೆ ತೆರಳಿದ್ದೆವು. ಆಕೆಯ ನೃತ್ಯ ರಿಹರ್ಸಲ್ ವೀಕ್ಷಿಸುವ ಅವಕಾಶ ಲಭ್ಯವಾಗಿತ್ತು. ಆದರೆ, ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ವೀಕ್ಷಿಸಲು ಪ್ರವೇಶ ಪತ್ರ ದೊರೆತಿರಲಿಲ್ಲ. ಹಾಗಾಗಿ ಅದೇ ದಿನ ಬೆಂಗಳೂರಿಗೆ ಹಿಂತಿರುಗಿದೆವು. ಮಧುರಾ ಭಾರತೀಯ ತಂಡದವರ ಜತೆಗೆ ಪಥಸಂಚಲನದಲ್ಲಿ ಹೆಜ್ಜೆ ಹಾಕುತ್ತಾಳೆ ಎಂಬ ಕಲ್ಪನೆಯೇ ಇರಲಿಲ್ಲ.ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ಬಳಿಕವೇ ಈ ವಿಚಾರ ಗೊತ್ತಾಯಿತು. `ನನ್ನ ಮಗಳು ಅಮಾಯಕಿ. ಆಕೆ ಯಾವುದೇ ಭದ್ರತಾ ನಿಯಮಗಳನ್ನು ಉಲ್ಲಂಘಿಸಿಲ್ಲ~ ಎಂದು ಮಧುರಾ ಅವರ ತಂದೆ ನಾಗೇಂದ್ರ ಕೆ. ಸ್ಪಷ್ಟಪಡಿಸಿದರು.`ಅಕ್ಕ ಯಾವುದೇ ತಪ್ಪು ಮಾಡಿಲ್ಲ. ಇದೊಂದು ಕಾಕತಾಳೀಯ ಘಟನೆ. ಈ ಘಟನೆಯ ಬಗ್ಗೆ ಇಡೀ ಕುಟುಂಬ ಕ್ಷಮೆಯಾಚಿಸುತ್ತದೆ~ ಎಂದು ಮಧುರಾ ಸಹೋದರಿ ಶ್ರೀರಕ್ಷಾ ಪ್ರತಿಕ್ರಿಯಿಸಿದರು.`ಪಥಸಂಚಲನದಲ್ಲಿ ಪಾಲ್ಗೊಂಡು ಕೆಟ್ಟ ಪ್ರಚಾರ ಪಡೆದ್ದದನ್ನು ಮರೆಯಲು ಯತ್ನಿಸುತ್ತೇನೆ.  ಉದ್ಯಮದಲ್ಲಿ ಅಪ್ಪನೊಂದಿಗೆ ಕೈಜೋಡಿಸುವ  ಹಂಬಲವಿದೆ~ ಎಂದು ಮಧುರಾ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.