ಬುಧವಾರ, ಮೇ 12, 2021
20 °C

ಕ್ರೀಡಾ ಇಲಾಖೆ ಅಧಿಕಾರಿ ಬದಲಾವಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕರಾಗಿ ಕಳೆದ 10 ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ದೊಡ್ಡಬಸವರಾಜು ಅವರನ್ನು ಸ್ಥಾನದಿಂದ ಮುಕ್ತಿಗೊಳಿಸಿ ಅವರ ಬದಲಿಗೆ `ಸಿ' ಗ್ರೇಡ್ ನೌಕರರೊಬ್ಬರನ್ನು ನಿಯೋಜಿಸಿರುವುದು ವಿವಾದಕ್ಕೆ ಎಡೆ ಮಾಡಿದೆ.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕರಾದ ದೊಡ್ಡಬಸವರಾಜು ಅವರಿಗೆ ಕಳೆದ 10 ತಿಂಗಳ  ಹಿಂದೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆ ಮತ್ತು ಬಿಟಿಡಿಎ ಪುನರ್ವಸತಿ ಅಧಿಕಾರಿ ಹುದ್ದೆಯನ್ನು ಅಂದಿನ ಶಾಸಕ ವೀರಣ್ಣ ಚರಂತಿಮಠ ಅವರ ಮನವಿಯ ಮೇರೆಗೆ ಹೆಚ್ಚುವರಿಯಾಗಿ ನೀಡಲಾಗಿತ್ತು.ದೊಡ್ಡ ಬಸವರಾಜು ಅವರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಬಳಿಕ ಇಲಾಖೆಗೆ ಹೊಸ ರೂಪ ನೀಡಿದ್ದರು. ಸಾಕಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಅವರು ಜಿಲ್ಲಾ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಪೈಕಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.ಸೌಲಭ್ಯಗಳಿಂದ ವಂಚಿತವಾಗಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಿದ್ದರು. ಏಳೆಂಟು ವರ್ಷದಿಂದ ಪಾಳು ಬಿದ್ದಿದ್ದ ಈಜುಕೊಳಕ್ಕೆ ಕಾಯಕಲ್ಪ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಜಿಲ್ಲೆಯ ಕ್ರೀಡಾಪಟುಗಳ ಮತ್ತು ಇಲಾಖೆ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.ಇದೀಗ ಏಕಾಏಕಿ ದೊಡ್ಡಬಸವರಾಜು ಅವರನ್ನು ಬದಲಾಯಿಸಿ ಅವರ ಸ್ಥಾನಕ್ಕೆ ಬೋಡನಾಯಕದಿನ್ನಿ ಶಾಲೆಯ ದೈಹಿಕ ಶಿಕ್ಷಕ ವಾಲಿಕಾರ ಎಂಬುವವರನ್ನು ನಿಯೋಜಿಸಲಾಗಿದೆ. ಜಿ.ಪಂ. ಸದಸ್ಯರೊಬ್ಬರ ಹಿತಾಸಕ್ತಿಗೆ ಮಣಿದು ಸ್ಥಳೀಯ ಶಾಸಕರು ಈ ಬದಲಾವಣೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹುದ್ದೆಯು `ಬಿ' ಗ್ರೇಡ್ ಅಂದರೆ ಗೆಜೆಟೆಡ್ ಆಫೀಸರ್ ಹುದ್ದೆಯಾಗಿದೆ. ಈ ಹುದ್ದೆಗೆ `ಸಿ' ಗ್ರೇಡ್ ಅಧಿಕಾರಿಯನ್ನು ನಿಯೋಜಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.