ಸೋಮವಾರ, ಮೇ 23, 2022
21 °C

`ಕ್ರೀಡೆಯನ್ನೇ ನೆಚ್ಚಿಕೊಳ್ಳುವುದು ಕಷ್ಟ'

ಪಿಜಿಕೆ Updated:

ಅಕ್ಷರ ಗಾತ್ರ : | |

`ಸ್ನೂಕರ್ ಅಥವಾ ಬಿಲಿಯರ್ಡ್ಸ್‌ನಲ್ಲಿ ಸಾಧನೆ ಮಾಡುತ್ತಲೇ ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವುದು ಕಷ್ಟ. ಈ ಕ್ರೀಡೆಯನ್ನೇ ನಂಬಿಕೊಂಡು ಜೀವನ ಸಾಗಿಸುವುದು, ವೃತ್ತಿಯಾಗಿ ಸ್ವೀಕರಿಸುವುದು ಅಸಾಧ್ಯದ ಮಾತು....'-ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ಜುಲೈ ಮೊದಲ ವಾರದಲ್ಲಿ ನಡೆದ ಏಷ್ಯಾ ಒಳಾಂಗಣ ಕ್ರೀಡಾಕೂಟದ ಸ್ನೂಕರ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಚಿತ್ರಾ ಮಗಿಮೈರಾಜ್ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಸ್ಪಷ್ಟ ಮಾತಿದು.ಇದನ್ನು ಹೇಳಿದ ಅವರ ಮಾತುಗಳಲ್ಲಿ ಬೇಸರವಿತ್ತು. ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಕ್ರೀಡೆಯನ್ನೇ ನೆಚ್ಚಿಕೊಂಡು ಬದುಕು ರೂಪಿಸಿಕೊಳ್ಳುತ್ತೇನೆ ಎನ್ನುವುದು ಆಗದ ಮಾತು ಎನ್ನುವ ನಿಚ್ಚಳತೆಯಿತ್ತು. ಇದರ ಹಿಂದಿರುವ ಕಾರಣವನ್ನೂ ಅವರು ವಿವರಿಸಿದರು.2006ರಲ್ಲಿ ದೋಹಾ, 2010ರ ಚೀನಾದ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟಗಳಲ್ಲಿಯೂ ಚಿತ್ರಾ ಪಾಲ್ಗೊಂಡಿದ್ದರು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಭಾರತ ಒಲಿಂಪಿಕ್ ಸಂಸ್ಥೆ ಅಮಾನತುಗೊಂಡಿರುವ ಕಾರಣ ಅವರು ಒಲಿಂಪಿಕ್ಸ್ ಧ್ವಜದ ಅಡಿ ಭಾರತವನ್ನು ಪ್ರತಿನಿಧಿಸಿದ್ದರು.ಚಿತ್ರಾ 2006 (8 ಬಾಲ್ ಪೂಲ್), 2007 (9 ಬಾಲ್ ಪೂಲ್) ಹಾಗೂ 2011(6 ಬಾಲ್ ಪೂಲ್) ಹೀಗೆ ಅನೇಕ ರಾಷ್ಟ್ರೀಯ ಟೂರ್ನಿಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಡಬ್ಲ್ಯುಎಲ್‌ಬಿಎಸ್‌ಎ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲೂ 2006 ಮತ್ತು 07ರಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ. ಆದರೆ, ಈ ಎಲ್ಲಾ ಸಾಧನೆಗಿಂತ ಏಷ್ಯಾ ಒಳಾಂಗಣ ಕ್ರೀಡಾಕೂಟದಲ್ಲಿ ಗೆದ್ದ ಪದಕ ಅತ್ಯಂತ ಶ್ರೇಷ್ಠ ಮತ್ತು ಹೆಮ್ಮೆಯ ಪದಕ ಎಂದು ಅವರು ಹೇಳಿದ್ದಾರೆ. ಚಿತ್ರಾ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ಸಾರ ಇಲ್ಲಿದೆ.* ಪದಕ ಗೆದ್ದ ಖುಷಿಯಲ್ಲಿದ್ದೀರಿ. ಏನೆನಿಸುತ್ತಿದೆ?

ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ಅನಾರೋಗ್ಯದ ನಡುವೆಯೂ ಪದಕ ಜಯಿಸಿದ್ದು ವಿಶ್ವಾಸ ಹೆಚ್ಚಿಸಿದೆ. ಸೆಮಿಫೈನಲ್ ಪಂದ್ಯ ಶುರುವಾಗುವ ಕೆಲ ತಾಸಿನ ಮೊದಲು ವಿಪರೀತ ಅನಾರೋಗ್ಯ ಕಾಡಿತು. ನಿಲ್ಲಲು ಸಾಧ್ಯವಾಗದಷ್ಟು ಅಸಹಾಯಕಳಾದೆ. ಪ್ರಶಸ್ತಿ ಹಂತದವರೆಗೆ ಬಂದು ಸೋಲು ಕಾಣುವುದು ನನಗಿಷ್ಟವಿರಲಿಲ್ಲ. ಪದಕ ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಮುನ್ನುಗ್ಗಿದೆ. ಆದರೆ, ಏಕೋ ಮನದಲ್ಲಿ ಹಿಂಜರಿಕೆ. ಆಗ ಜೊತೆಗಿದ್ದವರು ಧೈರ್ಯ ತುಂಬಿದರು. ಆದ್ದರಿಂದ ಪದಕ ಗೆಲ್ಲಲು ಸಾಧ್ಯವಾಯಿತು. ಈ ಪದಕ ನನಗೆ ತುಂಬಾ ವಿಶೇಷವಾದದ್ದು.*  ಏನು ಆ ವಿಶೇಷ?

1994ರಲ್ಲಿ ಮಂಡಿಯ ಮೂಳೆ ಮುರಿದ ಕಾರಣ ಸಾಕಷ್ಟು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು. ನಂತರ ಕ್ರೀಡೆಯ ಸನಿಹಕ್ಕೂ ಸುಳಿಯಲು ಕುಟುಂಬದವರು ಬಿಡುತ್ತಿರಲಿಲ್ಲ. ಇದುವರೆಗೆ ಐದು ಸಲ ಶಸ್ತ್ರಚಿಕಿತ್ಸೆಯಾಗಿದೆ. ಆದ್ದರಿಂದ ದೈಹಿಕವಾಗಿ ಶ್ರಮವಿಲ್ಲದ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡೆ. ಆದರೂ, ಅನೇಕ ಸಲ ನೋವು ಕಾಡಿತು. ಈ ಕ್ರೀಡೆಯತ್ತ ಮುಖ ಮಾಡಿದಾಗಿನಿಂದ ಸ್ನೂಕರ್‌ನಲ್ಲಿ ವಿಭಿನ್ನ ಸಾಧನೆ ಮಾಡಬೇಕು ಎನ್ನುವ ಕನಸಿತ್ತು. ಕೊನೆಗೂ ಮನೆಯವರ ಬೆಂಬಲ ಪಡೆದು ಕನಸನ್ನು ನನಸು ಮಾಡಿಕೊಂಡಿದ್ದೇನೆ. ಮುಂದಿನ ಸಲ ಬಂಗಾರದ ಸಾಧನೆ ತೋರಲು ಕಂಚಿನ ಪದಕ ವಿಶ್ವಾಸ ತುಂಬಿದೆ.*  ಯಾವ ದೇಶದ ಸ್ಪರ್ಧಿಗಳಿಂದ ಪ್ರಬಲ ಸವಾಲು ಎದುರಾಯಿತು?

ಹಾಂಕಾಂಗ್, ಚೀನಾ, ಥಾಯ್ಲೆಂಡ್, ಚೈನಿಸ್ ತೈಪೆ, ಕತಾರ್, ಇರಾನ್ ದೇಶದ ಸ್ಪರ್ಧಿಗಳು ಚೆನ್ನಾಗಿ ಸ್ನೂಕರ್ ಆಡುತ್ತಾರೆ. ಅವರು ಯಾವುದೇ ಕ್ರೀಡೆಯಾದರೂ ಅದನ್ನು ವೃತ್ತಿಪರತೆಯಿಂದ ಸ್ವೀಕರಿಸುತ್ತಾರೆ. ಆದ್ದರಿಂದ ಅವರು ಎಲ್ಲಾ ಕ್ರೀಡೆಗಳಲ್ಲಿಯೂ ಮುಂದಿರುತ್ತಾರೆ.* ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುವ ಆಸಕ್ತ ಕ್ರೀಡಾಪಟುಗಳಿಗೆ ನಿಮ್ಮ ಸಲಹೆ?

ನಿಸ್ಸಂದೇಹ ಹಾಗೂ ನಿಚ್ಚಳವಾಗಿ ಹೇಳುತ್ತೇನೆ. ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಲು ಹೋಗಬೇಡಿ. ಹವ್ಯಾಸಕ್ಕೆ ಹಾಗೂ ಮನಸ್ಸಿನ ತೃಪ್ತಿಗೆ ಆಡಬಹುದು. ಆದರೆ ಇದರಿಂದಲೇ ಬದುಕು ಕಟ್ಟಿಕೊಳ್ಳಲು ಆಗದು. ಇದು ಸ್ವಂತ ಅನುಭವ ಕೂಡ.* ಹೀಗೆ ಹೇಳಲು ಕಾರಣ?

ಬೇರೆ ಕ್ರೀಡೆಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ನೂಕರ್ ಈಗಿನ್ನೂ ಪರಿಚಯವಾಗುತ್ತಿದೆ. ಇದರಲ್ಲಿ ಸಾಧನೆ ಮಾಡಿದವರು ಕೆಲವೇ ಆಟಗಾರರು ಮಾತ್ರ. ಕೆಲವರು ಈ ಕ್ರೀಡೆಯ ಹೆಸರನ್ನೂ ಕೇಳಿಲ್ಲ. ಸರ್ಕಾರದಿಂದಾಗಲಿ ಅಥವಾ ಖಾಸಗಿ ಸಂಸ್ಥೆಗಳಿಂದಾಗಲಿ ಬೆಂಬಲ ಸಿಗುವುದು ಕಡಿಮೆ. ಅಭ್ಯಾಸಕ್ಕೆ ಬೇಕಾದ ಸಲಕರಣೆಗಳನ್ನು ಖರೀದಿಸುವುದೂ ಕಷ್ಟ. ಸ್ನೂಕರ್‌ನಲ್ಲಿ ಮುಂದುವರಿಯುವುದು ಸುಲಭವಲ್ಲ.* ನಿಮ್ಮ ಮಾತು ಯುವ ಕ್ರೀಡಾಪಟುಗಳಿಗೆ ನಿರಾಸೆ ಉಂಟು ಮಾಡುವುದಿಲ್ಲವೇ?

ಸಾಕಷ್ಟು ಕನಸು ಹಾಗೂ ಗುರಿ ಇಟ್ಟುಕೊಂಡು ಈ ಕ್ರೀಡೆಗೆ ಬಂದು ನಿರಾಸೆ ಅನುಭವಿಸುವುದಕ್ಕಿಂತ, ಯಾವ ಕ್ರೀಡೆಯಲ್ಲಿ ಮುಂದುವರಿದರೆ ಭವಿಷ್ಯ ಎನ್ನುವುದು ಮೊದಲೇ ತಿಳಿದಿದ್ದರೆ ಒಳ್ಳೆಯದು. ಮುಂದೆ ಎದುರಾಗುವ ಬಹಳಷ್ಟು ನಿರಾಸೆಯನ್ನು ಮೊದಲೇ ತಡೆಯಬಹುದು.* ಮುಂದಿನ ಗುರಿ?

ಏಷ್ಯಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕೆನ್ನುವ ಕನಸು ಈಗ ನನಸಾಗಿದೆ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಸ್ನೂಕರ್ ಟೂರ್ನಿ ನಡೆಯಲಿದೆ. ಅದಕ್ಕಾಗಿ ಅಭ್ಯಾಸ ನಡೆಸುತ್ತಿದ್ದೇನೆ. 2008ರಲ್ಲಿ ಆಸ್ಟ್ರೇಲಿಯನ್ ಸ್ನೂಕರ್ ಟೂರ್ನಿಯಲ್ಲಿ ಬಂಗಾರ ಜಯಿಸಿದ್ದೆ. ಮತ್ತೆ ಈ ಸಲವೂ ಅದೇ ಸಾಧನೆ ಮಾಡುವ ವಿಶ್ವಾಸವಿದೆ.*  ಭಾರತದಲ್ಲಿ ಸ್ನೂಕರ್ ಭವಿಷ್ಯ?

ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಯುವ ಕ್ರೀಡಾಪಟುಗಳು ಸ್ನೂಕರ್ ಹಾಗೂ ಬಿಲಿಯರ್ಡ್ಸ್‌ನತ್ತ ಮುಖ ಮಾಡುತ್ತಿದ್ದಾರೆ. ಆದರೆ ನೌಕರಿ ಅಥವಾ ಆರ್ಥಿಕ ಬೆಂಬಲ ಲಭಿಸದೇ ಹೋದರೆ, ಇದರ ಸಂಖ್ಯೆ ಇಳಿಮುಖವಾಗಬಹುದು. ಇರಾನ್, ಥಾಯ್ಲೆಂಡ್‌ನಲ್ಲಿ ನೀಡುವ ಬೆಂಬಲ ಭಾರತಕ್ಕೆ ಪ್ರೇರಣೆಯಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.