ಶನಿವಾರ, ಜೂನ್ 19, 2021
27 °C

ಕ್ರೀಡೆ: ಚುಟುಕು ಗುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಒಲಿಂಪಿಕ್‌ನಿಂದ ಹಿಂದೆ ಸರಿಯುವ ಯೋಚನೆ ಮಾಡಿರಲೇ ಇಲ್ಲ~

ನವದೆಹಲಿ (ಐಎಎನ್‌ಎಸ್):
`ಲಂಡನ್ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದೆ ಸರಿಯುವ ಯೋಚನೆ ಮಾಡಿರಲೇ ಇಲ್ಲ~ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ,ಮಾಕನ್ ಸ್ಪಷ್ಟಪಡಿಸಿದ್ದಾರೆ.ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿದ ಡೌ ಕೆಮಿಕಲ್ಸ್‌ನ ಒಲಿಂಪಿಕ್ ಪ್ರಾಯೋಜಕತ್ವ ರದ್ದು ಪಡಿಸುವ ಭಾರತದ ಮನವಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿರಸ್ಕರಿಸಿದ ನಂತರ ಅದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಬೇಕಿತ್ತು ಎನ್ನುವ ವಾದವನ್ನು ಒಪ್ಪದ ಅವರು. `ಕ್ರೀಡಾಪಟುಗಳ ಹಿತಕ್ಕೆ ಧಕ್ಕೆ ಆಗುವಂಥ ಯಾವುದೇ ಯೋಚನೆ ನಮ್ಮ ಮನದಲ್ಲಿ ಇರಲಿಲ್ಲ~ ಎಂದು ತಿಳಿಸಿದ್ದಾರೆ.ಚೇತರಿಸಿಕೊಂಡ ಸೆಹ್ವಾಗ್

ನವದೆಹಲಿ (ಪಿಟಿಐ):
ಗಾಯಗೊಂಡ ಕಾರಣದಿಂದ ವಿಶ್ರಾಂತಿ ಪಡೆದಿದ್ದ ವೀರೇಂದ್ರ ಸೆಹ್ವಾಗ್ `ನಾನೀಗ ಆಡಲು ಸಜ್ಜಾಗಿದ್ದೇನೆ~ ಎಂದು ತಿಳಿಸಿದ್ದಾರೆ.ಏಷ್ಯಾಕಪ್ ಕ್ರಿಕೆಟ್‌ಗೆ ತಂಡವನ್ನು ಪ್ರಕಟಿಸಿದ್ದಾಗ `ವೀರೂ~ಗೆ ಒತ್ತಾಯದ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ವಿರುದ್ಧ ಟೀಕೆ ಮಾಡಲಾಗಿತ್ತು. ಅಷ್ಟೇ ಅಲ್ಲ ಅದೇ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ನೀಡಿದ್ದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಎಲ್ಲ ವಿವಾದಕ್ಕೆ ತೆರೆ ಎಳೆದಿರುವ ಸೆಹ್ವಾಗ್ ವಿಶ್ರಾಂತಿಯ ನಂತರ ಚೇತರಿಸಿಕೊಂಡಿದ್ದೇನೆಂದು ಹೇಳಿದ್ದಾರೆ.ಬಾಂಗ್ಲಾದೇಶದಲ್ಲಿ ಆಡದಿರುವ ಕಾರಣ ಸಚಿನ್ ತೆಂಡೂಲ್ಕರ್ ಅವರ ನೂರನೇ ಅಂತರರಾಷ್ಟ್ರೀಯ ಶತಕ ಸಾಧನೆಗೆ ಸಾಕ್ಷಿಯಾಗುವ ಅವಕಾಶ ತಪ್ಪಿತೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.`ಬುಕ್ ಮೈ ಶೋ~ನಲ್ಲಿ ಐಪಿಎಲ್ ಟಿಕೆಟ್

ನವದೆಹಲಿ (ಪಿಟಿಐ):
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಟಿಕೆಟ್ ಮಾರಾಟಕ್ಕಾಗಿ `ಬುಕ್ ಮೈ ಶೋ~ ಜೊತೆಗೆ ಐಪಿಎಲ್ ಆಡಳಿತವು ಒಪ್ಪಂದ ಮಾಡಿಕೊಂಡಿದೆ. www.bookmyshow.­com  ನಲ್ಲಿ ಕ್ರಿಕೆಟ್ ಆಸಕ್ತರಿಗೆ ಟಿಕೆಟ್‌ಗಳು ಲಭ್ಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕ್ರಿಕೆಟ್: ದಕ್ಷಿಣ ವಲಯಕ್ಕೆ ಜಯ

ಗುವಾಹಟಿ (ಐಎಎನ್‌ಎಸ್):
ಸತೀಶ್ ವಿಶ್ವನಾಥ್ (64; 11 ಬೌಂಡರಿ, 1 ಸಿಕ್ಸರ್) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ವಲಯ ತಂಡದವರು ಭಾರತ ಕ್ರೀಡಾ ಪತ್ರಕರ್ತರ ಫೆಡರೇಷನ್ (ಎಸ್‌ಜೆಎಫ್‌ಐ) ಆಶ್ರಯದ ಜೆ.ಕೆ.ಬೋಸ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ ಬುಧವಾರ ಎಂಟು ವಿಕೆಟ್‌ಗಳ ಅಂತರದಿಂದ ಪಶ್ಚಿಮ ವಲಯ ವಿರುದ್ಧ ಜಯ ಸಾಧಿಸಿದರು.ದಕ್ಷಿಣ ವಲಯವನ್ನು ಪ್ರತಿನಿಧಿಸಿರುವ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್)ದ ಸದಸ್ಯರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು.ಸಂಕ್ಷಿಪ್ತ ಸ್ಕೋರ್: ಪಶ್ಚಿಮ ವಲಯ: 20 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 174 (ದೇವೇಂದ್ರ ಪಾಂಡೆ 43, ಅಭಿಜಿತ್ ಕುಲಕರ್ಣಿ 32, ಮಲ್ಲಿಕಾಚರಣ ವಾಡಿ 26ಕ್ಕೆ2, ಮೊಹಮ್ಮದ್ ನೂಮಾನ್ 27ಕ್ಕೆ1); ದಕ್ಷಿಣ ವಲಯ: 17.5 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 176 (ಸತೀಶ್ ವಿಶ್ವನಾಥ್ 64, ಸತೀಶ್ ಪಾಲ್ ಔಟಾಗದೆ 30, ಮಲ್ಲಿಕಾಚರಣ ವಾಡಿ ಔಟಾಗದೆ 28).ಹಾಕಿ ಆಟಗಾರರಿಗೆ ಬಹುಮಾನ

ಲಖನೌ (ಪಿಟಿಐ):
ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಹಾಕಿ ತಂಡದವರಿಗೆ ಬಹುಮಾನಗಳ ಮಳೆ ಇನ್ನೂ ಸುರಿಯುತ್ತಲೇ ಇದೆ.ಸಹಾರಾ ಇಂಡಿಯನ್ ಪರಿವಾರ್ ಗ್ರೂಪ್ ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ದಾರ್ ಸಿಂಗ್ ಹಾಗೂ ಸಂದೀಪ್ ಸಿಂಗ್ ಅವರಿಗೆ ತಲಾ 11 ಲಕ್ಷ ರೂಪಾಯಿ ಬಹುಮಾನ ನೀಡಿತು.

ಒಟ್ಟಾರೆಯಾಗಿ ಹಾಕಿ ತಂಡಕ್ಕೆ 1 ಕೋಟಿ 16 ಲಕ್ಷ ರೂಪಾಯಿಯನ್ನು ಪ್ರದಾನ ಮಾಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.