ಕ್ವಾರ್ಟರ್ ಫೈನಲ್‌ಗೆ ವಿಷ್ಣು

7

ಕ್ವಾರ್ಟರ್ ಫೈನಲ್‌ಗೆ ವಿಷ್ಣು

Published:
Updated:
ಕ್ವಾರ್ಟರ್ ಫೈನಲ್‌ಗೆ ವಿಷ್ಣು

ಬೆಂಗಳೂರು: ವಾರದ ಹಿಂದೆಯಷ್ಟೇ ಅರಮನೆಗಳ ನಗರಿಯಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ ವಿಷ್ಣುವರ್ಧನ್ ಈಗ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ. ಡೇವಿಸ್ ಕಪ್ ಆಟಗಾರ ಕೂಡ ಆಗಿರುವ ವಿಷ್ಣು ಇಲ್ಲಿ ನಡೆಯುತ್ತಿರುವ 5.5 ಲಕ್ಷ ರೂಪಾಯಿ ಬಹುಮಾನ ಮೊತ್ತದ ಐಟಿಎಫ್ ಪುರುಷರ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅವರು 6-2, 6-3ರಲ್ಲಿ ಅಭಿಜಿತ್ ತಿವಾರಿ ಅವರನ್ನು ಪರಾಭವಗೊಳಿಸಿದರು. ಟೂರ್ನಿಯ ಫೇವರಿಟ್ ಪಟ್ಟ ಹೊಂದಿರುವ ವಿಷ್ಣು ಎರಡೂ ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದರು.ಹಾಗಂತ ಅವರಿಂದ ಅತ್ಯುತ್ತಮ ಪ್ರದರ್ಶನವೇನು ಹೊರಹೊಮ್ಮಲಿಲ್ಲ. ಪಂದ್ಯದ ಮೊದಲ ಗೇಮ್‌ನಲ್ಲಿಯೇ ಡಬಲ್ ಫಾಲ್ಟ್ಸ್ ಎಸಗಿ ತಮ್ಮ ಸರ್ವ್ ಹಾಳು ಮಾಡಿಕೊಂಡರು. ಆದರೆ ನಂತರ ಎದುರಾಳಿ ಸರ್ವ್ ಬ್ರೇಕ್ ಮಾಡಿ ತಮ್ಮ ತಪ್ಪನ್ನು ಸರಿಪಡಿಸಿಕೊಂಡರು. ನಾಲ್ಕನೇ ಹಾಗೂ ಎಂಟನೇ ಗೇಮ್‌ನಲ್ಲಿ ಮತ್ತೆ ಎದುರಾಳಿಯ   ಸರ್ವ್ ಮುರಿದು ಮುನ್ನಡೆದರು. ಬಲಿಷ್ಠ ಸರ್ವ್ ಮೂಲಕ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದರು.ಇನ್ನೊಂದು ಪಂದ್ಯದಲ್ಲಿ ಎನ್. ಶ್ರೀರಾಮ್ ಬಾಲಾಜಿ 6-3, 6-4ರಲ್ಲಿ ವೆಂಕಟ್ ಅಯ್ಯರ್ ಅವರನ್ನು ಮಣಿಸಿ ಎಂಟರ ಘಟ್ಟ ಪ್ರವೇಶಿಸಿದರು. ಈ ಪಂದ್ಯ ಸಾಕಷ್ಟು ಕುತೂಹಲ ಹಾಗೂ ಪೈಪೋಟಿಗೆ ಕಾರಣವಾಯಿತು.ಆರನೇ ಶ್ರೇಯಾಂಕದ ಬಾಲಾಜಿ ತಾಳ್ಮೆಯಿಂದಲೇ ಎದುರಾಳಿ ಆಕ್ರಮಣಕಾರಿ ಆಟಕ್ಕೆ ಉತ್ತರ ನೀಡಿದರು. ಆದರೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ ವೆಂಕಟ್ ಪ್ರತಿ ಪಾಯಿಂಟ್ ಸೋತಾಗಲೂ ತಾಳ್ಮೆ ಕಳೆದುಕೊಳ್ಳುತ್ತಿದ್ದರು.

ಎರಡನೇ ಸೆಟ್‌ನಲ್ಲಿ ಈ ಆಟಗಾರನಿಗೆ ಗೆಲುವಿನ ಅವಕಾಶವಿತ್ತು. ಆದರೆ ಅವಸರ ಹಾಗೂ ಸಿಡುಕು ಸೋಲಿಗೆ ಕಾರಣವಾದವು.ಈ ಸೆಟ್‌ನಲ್ಲಿ ಉಭಯ ಆಟಗಾರರು 4-4ರಲ್ಲಿ ಸಮಬಲ ಸಾಧಿಸಿದ್ದರು. ಆದರೆ ಒಂಬತ್ತನೇ ಗೇಮ್‌ನಲ್ಲಿ ವೆಂಕಟ್ ಅವರ ಸರ್ವ್ ಬ್ರೇಕ್ ಮಾಡಿದ ಬಾಲಾಜಿ ಮುನ್ನಡೆ ಸಾಧಿಸಿದರು. ನಂತರ ತಮ್ಮ ಸರ್ವ್‌ನಲ್ಲಿ ಯಶಸ್ವಿಯಾಗಿ ಪಂದ್ಯವನ್ನೇ ಗೆದ್ದರು. ಬಾಲಾಜಿ ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ವಿಷ್ಣುವರ್ಧನ್ ಅವರ ಸವಾಲನ್ನು ಎದುರಿಸಲಿದ್ದಾರೆ.ಅಗ್ರ ಶ್ರೇಯಾಂಕದ ಆಟಗಾರ ಚೀನಾ ತೈಪಿಯ ಟಿ ಚೆನ್ 6-0, 6-1ರಲ್ಲಿ ತೇಜಸ್ ಚಾಕುಲ್ಕರ್ ಎದುರು ಗೆದ್ದು ಮುಂದಿನ ಹಂತದಲ್ಲಿಆಡಲು ಅರ್ಹತೆ ಪಡೆದುಕೊಂಡರು. ನಾಲ್ಕನೇ ಶ್ರೇಯಾಂಕದ ಆಟಗಾರ ಜೀವನ್ ನೆಡುಂಚೆಳಿಯನ್ 6-0, 6-0ರಲ್ಲಿ ಜತಿನ್ ದಹಿಯಾ ಅವರನ್ನು ಮಣಿಸಿದರು. 23 ವರ್ಷ ವಯಸ್ಸಿನ ಜೀವನ್ ಎದುರಾಳಿಗೆ ಒಂದೇಒಂದು ಗೇಮ್ ಗೆಲ್ಲಲು ಅವಕಾಶ ನೀಡಲಿಲ್ಲ. ತೇಜಸ್ ಅರ್ಹತಾ ಸುತ್ತಿನಲ್ಲಿ ಆಡಿ ಈ ಹಂತದಲ್ಲಿ ಬಂದಿದ್ದರು.ಇನ್ನುಳಿದ 16ರ ಘಟ್ಟದ ಪಂದ್ಯಗಳಲ್ಲಿ ಅಶ್ವಿನ್ ವಿಜಯರಾಘವನ್ 6-2ರಲ್ಲಿ ಥಾಯ್ಲೆಂಡ್‌ನ ಕಿಟಿಫಾಂಗ್ ವಾಚಿರಮಾನವೊಂಗ್ (ಗಾಯಗೊಂಡು ನಿವೃತ್ತಿ) ಎದುರೂ, ರಂಜಿತ್ ವಿರಾಲಿ 6-0, 6-1ರಲ್ಲಿ ಆಸ್ಟ್ರೇಲಿಯಾದ ಜಾಕ್ ಇಸ್ತೀನ್ ವಿರುದ್ಧವೂ, ವಿಜಯಂತ್ ಮಲಿಕ್ 6-1, 6-7, 6-4ರಲ್ಲಿ ಕುನಾಲ್ ಆನಂದ್ ಮೇಲೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry