ಗುರುವಾರ , ಏಪ್ರಿಲ್ 22, 2021
30 °C

ಕ್ವಿಂಟಲ್ ಬತ್ತಕ್ಕೆ ರೂ.1,900 ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರೈತರಿಂದ ಬಿತ್ತನೆಗೆ ಯೋಗ್ಯವೆಂದು ಖರೀದಿಸಲ್ಪಟ್ಟ ಪ್ರತಿ ಕ್ವಿಂಟಲ್ ಬತ್ತಕ್ಕೆ 1,900 ರೂ. ಹಣವನ್ನು ಕರ್ನಾಟಕ ರಾಜ್ಯ ಬೀಜ ನಿಗಮ ಪಾವತಿಸಬೇಕು ಎಂದು ರೈತ ಸಂಘ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದರು.ನಿಗಮವು ರೈತರಿಂದ ಸುಮಾರು 4 ಸಾವಿರ ಕ್ವಿಂಟಲ್ ಬತ್ತ ಖರೀದಿಸಿದ್ದರೂ, ಬೆಲೆ ನಿಗದಿ ಮಾಡಿಲ್ಲ. ತಕ್ಷಣ 1,900 ರೂ. ದರ ನಿಗದಿ ಪಡಿಸಿ, ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಬೆಳೆಗಳಿಗೆ ಬೆಲೆ ನಿಗದಿ ಪಡಿಸುವಾಗ, ಸಮಿತಿಯಲ್ಲಿ ರೈತರನ್ನು ಸೇರಿಸಿಕೊಂಡು ಅವರ ಅಭಿಪ್ರಾಯಕ್ಕೂ ಮುನ್ನಣೆ ನೀಡಬೇಕು. ಸಮಿತಿಯಲ್ಲಿ ಐಎಎಸ್ ಅಧಿಕಾರಿಗಳಷ್ಟೇ ಇದ್ದರೆ, ರೈತರಿಗೆ ಸೂಕ್ತ ಬೆಲೆ ದೊರೆಯುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಹೇಳಿದರು.ಖಂಡನೆ: ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ರೈತರ ಮೇಲೆ ಲಾಠಿ ಪ್ರಹಾರ, ಗೋಲಿಬಾರ್ ನಡೆಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರದ ಕೃಷಿ ಸಚಿವರ ರಾಜ್ಯದಲ್ಲೇ ರೈತರ ಮೇಲೆ ದೌರ್ಜನ್ಯ ನಡೆದಿರುವುದು ತಲೆತಗ್ಗಿಸುವ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಬ್ಬು ದರ ಹೆಚ್ಚಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತರು ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಗಮನಹರಿಸಿಲ್ಲ. ರೈತರ ಬಗೆಗೆ ಗೌರವವಿದ್ದರೆ, ಸರ್ಕಾರ ತಕ್ಷಣ ಸ್ಪಂದಿಸಬೇಕು.

 

ಇಲ್ಲದಿದ್ದರೆ, ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನ. 24ರಂದು ಹುತಾತ್ಮ ರೈತರ ಸಂಸ್ಮರಣೆ ದಿನವಿದೆ. ಅದೇ ದಿನ ರೈತ ಸಂಘದ ರಾಜ್ಯ ಸಮಿತಿ ಸಭೆ ಕರೆದು ಕಬ್ಬು ಬೆಲೆ ನಿಗದಿ ಮತ್ತು ಮುಂದಿನ ರಾಜಕಾರಣ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.ನೆರವಿಗೆ ಬರಲಿ: ಕರ್ನಾಟಕ ಹಾಲು ಮಹಾಮಂಡಳ ಸಂಕಷ್ಟಕ್ಕೆ ಸಿಲುಕಿರುವುದರಿಂದ ಎಲ್ಲ ಹಾಲು ಒಕ್ಕೂಟಕ್ಕೂ ತಲಾ 50 ಕೋಟಿ ರೂ. ಪ್ರೋತ್ಸಾಹಧನ ಅಥವಾ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.ಮೈಷುಗರ್‌ನಲ್ಲಿನ ಸ್ಪಿರಿಟ್ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾರ್ಖಾನೆ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ, ಇಬ್ಬರ ನಡುವಿನ ಆಂತರಿಕ ಸಮಸ್ಯೆಯಿಂದಾಗಿ ರೈತರಿಗೆ ತೊಂದರೆ ಆಗಲಿದೆ. ಈ ಬಗ್ಗೆ ಶೀಘ್ರ ಒಮ್ಮತಕ್ಕೆ ಬರಬೇಕು ಎಂದು ಆಗ್ರಹಿಸಿದರು. ಕೋಣಸಾಲೆ ನರಸರಾಜು, ಹನಿಯಂಬಾಡಿ ನಾಗರಾಜು, ಚಂದ್ರು ಪಾಂಡವಪುರ, ಶ್ಯಾಮ್, ಮರಿಲಿಂಗೇಗೌಡ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.