ಭಾನುವಾರ, ಏಪ್ರಿಲ್ 18, 2021
33 °C

ಕ್ಷಮಾದಾನ ಅರ್ಜಿ ಕುರಿತು ಕಲಾಂ ಅಭಿಪ್ರಾಯ: ರಾಷ್ಟ್ರಪತಿಗೆ ಇಷ್ಟವಾಗದ ವಿಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮರಣದಂಡನೆಗೆ ಒಳಗಾದ ಕೈದಿಗಳು ಸಲ್ಲಿಸುವ ಕ್ಷಮಾದಾನದ ಅರ್ಜಿ, ಯಾವ ರಾಷ್ಟ್ರಪತಿಗೂ ಇಷ್ಟವಾಗದ ವಿಚಾರ ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಭಿಪ್ರಾಯಪಟ್ಟಿದ್ದಾರೆ.ರಾಷ್ಟ್ರಪತಿ ಭವನದಲ್ಲಿ ನೆನೆಗುದಿಯಲ್ಲಿ ಇರುವ ಈ ಅರ್ಜಿಗಳು ಒಂದು ರೀತಿಯಲ್ಲಿ ಹೊಸ ರಾಷ್ಟ್ರಪತಿಗೆ `ಅನುವಂಶೀಯ ಗುರಿ~ಯಾಗಿರುತ್ತವೆ. ಅದನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಕಲಾಂ ಹೇಳಿದ್ದಾರೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ `ಟರ್ನಿಂರ್ಗ್ ಪಾಯಿಂಟ್~ ಪುಸ್ತಕದಲ್ಲಿ ಕಲಾಂ ಈ ಅಂಶಗಳನ್ನೆಲ್ಲ ಚರ್ಚಿಸಿದ್ದಾರೆ.ಅವರು ರಾಷ್ಟ್ರಪತಿಯಾಗಿದ್ದಾಗ ಅಫ್ಜಲ್ ಗುರುವನ್ನು ಬೇಗನೇ ಗಲ್ಲಿಗೇರಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಈ ವಿಚಾರಗಳನ್ನೆಲ್ಲ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದು, ತಾವು ಸಾಮಾನ್ಯ ನಾಗರಿಕನ ಸ್ಥಾನದಲ್ಲಿ ನಿಂತು ಕ್ಷಮಾದಾನದ ಅರ್ಜಿಗಳನ್ನು ಕೂಲಂಕಷವಾಗಿ ಪರೀಶೀಲಿಸಿದ್ದಾಗಿ ತಿಳಿಸಿದ್ದಾರೆ.ಬಹುತೇಕ ಎಲ್ಲ ಪ್ರಕರಣಗಳಲ್ಲೂ ಸಾಮಾಜಿಕ ಹಾಗೂ ಆರ್ಥಿಕ ಪೂರ್ವಗ್ರಹ ಅಡಗಿದ್ದನ್ನು ಕಲಾಂ ಗಮನಿಸಿದ್ದಾರೆ. ಅಪರಾಧ ಮಾಡುವ ನೇರ ಉದ್ದೇಶ ಹೊಂದಿರದಿದ್ದ, ದ್ವೇಷ ಭಾವನೆ ಹೊಂದಿರದಿದ್ದ ವ್ಯಕ್ತಿಗಳನ್ನು ಸಹ ನಾವು ಶಿಕ್ಷಿಸುತ್ತಿದ್ದೇವೆ ಎಂದು ಅನಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.ಎಲ್ಲ ಮನವಿ, ಮೇಲ್ಮನವಿಗಳ ನಂತರ ಕೋರ್ಟ್‌ಗಳು ನೀಡಿದ್ದ ಮರಣ ದಂಡನೆಯನ್ನು ದೃಢೀಕರಿಸುವುದು ರಾಷ್ಟ್ರಪತಿಯಾಗಿ ತಮಗೆ ಅತಿ ಕಷ್ಟದ ಕೆಲಸವಾಗಿತ್ತು. ನಾವೆಲ್ಲರೂ ದೇವರ ಸೃಷ್ಟಿ. ಮನುಷ್ಯನಾಗಿ ಕೇವಲ ಸಾಕ್ಷ್ಯಗಳ ಆಧಾರದಲ್ಲಿ ಮತ್ತೊಬ್ಬ ಮನುಷ್ಯನ ಜೀವ ತೆಗೆಯುವ ಹಕ್ಕು ನಮಗಿದೆಯೇ ಎಂಬ ಜಿಜ್ಞಾಸೆ ಉಂಟಾಗುತ್ತಿತ್ತು ಎಂದು ಕಲಾಂ ಹೇಳಿಕೊಂಡಿದ್ದಾರೆ.ಲಿಫ್ಟ್ ಆಪರೇಟರ್ ಧನಂಜಯ ಚಟರ್ಜಿ ಪ್ರಕರಣದಲ್ಲಿ ಮಾತ್ರ ಆತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಯಾವುದೇ ಅನುಮಾನವಿಲ್ಲದೇ ಸಾಬೀತಾಗಿತ್ತು. ಆ ಒಂದು ಪ್ರಕರಣದಲ್ಲಿ ನಾನು ಶಿಕ್ಷೆ ದೃಢಪಡಿಸಿದ್ದೆ ಎಂದು ಮಾಜಿ ರಾಷ್ಟ್ರಪತಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.