ಸೋಮವಾರ, ಮೇ 23, 2022
21 °C

ಕ್ಷೇತ್ರಾಭಿವೃದ್ಧಿ ನಿಧಿ 5 ಕೋಟಿಗೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು (ಎಂಪಿಎಲ್‌ಎಡಿ) ಐದು ಕೋಟಿ ರೂಪಾಯಿಗೆ ಏರಿಸುವ ಸಲುವಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಶುಕ್ರವಾರ 2,370 ಕೋಟಿ ರೂಪಾಯಿಗಳ ಇಡುಗಂಟು ತೆಗೆದಿರಿಸಿದ್ದಾರೆ.ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯನ್ನು ಕೊನೆಗೊಳಿಸಿದ ಸಂದರ್ಭದಲ್ಲಿ ಸಂಸದರ ಒಕ್ಕೊರಲ ಬೇಡಿಕೆಯಾದ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು ಹೆಚ್ಚಿಸುವ ನಿರ್ಧಾರವನ್ನು ಅವರು ಪ್ರಕಟಿಸಿದರು. ಇದುವರೆಗೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಮೂಲಕ ರೂ 2 ಕೋಟಿ  ಒದಗಿಸಲಾಗುತ್ತಿತ್ತು. ಐದು ಕೋಟಿ ರೂಪಾಯಿಗೆ ಏರಿಸುವ ಸರ್ಕಾರದ ನಿರ್ಧಾರವನ್ನು ಸದಸ್ಯರೆಲ್ಲರೂ ಪಕ್ಷಭೇದ ಮರೆತು ಸ್ವಾಗತಿಸಿದರು. ಬಳಿಕ 2010-11ನೇ ಸಾಲಿನ ಪೂರಕ ಬೇಡಿಕೆಗಳನ್ನು ಮತ್ತು ಸೂಕ್ತ ಮಸೂದೆಗಳಿಗೆ ಲೋಕಸಭೆ ಅನುಮೋದನೆ ನೀಡಿತು.ಈ ಮೂಲಕ ಮೂರು ಹಂತದ ಬಜೆಟ್ ಪ್ರಕ್ರಿಯೆಯ ಮೊದಲ ಹಂತ ಕೊನೆಗೊಂಡಂತಾಯಿತು.ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಾರ್ಚ್ 25ರೊಳಗೆ ಇಡೀ ಬಜೆಟ್ ಪ್ರಕ್ರಿಯೆ ಕೊನೆಗೊಳ್ಳಲಿದೆ. ಹೀಗಾಗಿ ಈ ವರ್ಷ ಲೇಖಾನುದಾನ ಪ್ರಕ್ರಿಯೆ ಇರುವುದಿಲ್ಲ. ಮೀನುಗಾರಿಕೆಯಲ್ಲಿ ತೊಡಗಿರುವ 20 ಲಕ್ಷ ಜನರಿಗೆ ಅನುಕೂಲ ಮಾಡಿಕೊಡಲು ಅವರಿಗೆ ನೀಡುತ್ತಿರುವ ಬಡ್ಡಿ ರಿಯಾಯ್ತಿ ಯೋಜನೆಯನ್ನು ಮುಂದುವರಿಸುವುದಾಗಿ ಪ್ರಣವ್ ತಿಳಿಸಿದರು.ಆರೋಗ್ಯ ಕ್ಷೇತ್ರಕ್ಕೆ ವಿಧಿಸಲಾಗಿರುವ ಸೇವಾ ತೆರಿಗೆ ಹಿಂದೆಗೆತ ಸಹಿತ ಇತರ ಬೇಡಿಕೆಗಳು ಪರಿಶೀಲನೆಯಲ್ಲಿದ್ದು, 2011ರ ಹಣಕಾಸು ಮಸೂದೆ ಮೇಲೆ ಚರ್ಚೆ ನಡೆಯುವ ವೇಳೆ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಹೆಚ್ಚುತ್ತಿರುವುದು ಆತಂಕದ ಸಂಗತಿಯಾದರೂ ದೇಶವು 2011-12ರಲ್ಲಿ ಶೇ 9ರ ಆರ್ಥಿಕ ಪ್ರಗತಿ ಕಾಣುವ ವಿಶ್ವಾಸವನ್ನು ಪ್ರಣವ್ ಮುಖರ್ಜಿ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.