ಭಾನುವಾರ, ಜೂಲೈ 12, 2020
27 °C

ಖಾಲಿ ಖಾಲಿ ಕ್ರೀಡಾಂಗಣ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಲಿ ಖಾಲಿ ಕ್ರೀಡಾಂಗಣ...!

ಬೆಂಗಳೂರು: ಮೂರು ದಿನಗಳ ಹಿಂದೆ ಕ್ರೀಡಾಂಗಣದಲ್ಲಿ ಇದ್ದವರ ಸಂಖ್ಯೆ ಮೂವತ್ತಾರು ಸಾವಿರ. ಆಗ ಕ್ರಿಕೆಟ್ ಪ್ರೇಮಿಗಳ ಅಬ್ಬರವೂ ಅಪಾರ. ಅಂದು ಭಾನುವಾರದಂದು ಇದ್ದ ಭಾರಿ ‘ಕ್ರಿಕೆಟ್ ಪ್ರೀತಿ’ ಇಂದು ಬುಧವಾರದಂದು ಉದ್ಯಾನನಗರಿಯ ಜನರೊಳಗಿಂದ ಮಾಯ!ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಳೆದ ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದಾಗ ಸುತ್ತಲಿನ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿದ್ದವು. ಕ್ರೀಡಾಂಗಣದ ಒಳಗೆ ಬಹುತೇಕ ಗ್ಯಾಲರಿಗಳು ‘ಫುಲ್’ ಆಗಿದ್ದವು. ಆದರೆ ಇಂಗ್ಲೆಂಡ್ ಎದುರು ಐರ್ಲೆಂಡ್ ಆಡಿದಾಗ ಗ್ಯಾಲರಿಗಳಲ್ಲಿ ಪ್ರೇಕ್ಷಕರ ಸಂಖ್ಯೆ ಬೆರಳು ತೋರಿಸಿ ಸುಲಭವಾಗಿ ಎಣಿಸುವಷ್ಟು ಮಾತ್ರ. ಭದ್ರತೆಯ ವ್ಯವಸ್ಥೆಗಾಗಿ ನಿಯೋಜಿತರಾಗಿದ್ದ ಪೊಲೀಸರಿಗೆ, ಪ್ರವೇಶ ದ್ವಾರದಲ್ಲಿನ ಸಿಬ್ಬಂದಿಗೆ ಕೆಲಸವೇ ಇರಲಿಲ್ಲ. ಇಂಗ್ಲೆಂಡ್ ತಂಡದ ಅಭಿಮಾನಿ ಬಳಗವಾದ ‘ಬರ್ಮಿ ಆರ್ಮಿ’ ಕ್ರೀಡಾಂಗಣದ ಕೆಲವೆಡೆ ತಮ್ಮ ದೇಶದ ಧ್ವಜವನ್ನು ಹರಡಿಕೊಂಡು ಚಿತ್ರವಿತ್ರಾಗಿ ಚದುರಿಕೊಂಡು ಕುಳಿತಿದ್ದು ಗಮನ ಸೆಳೆಯಿತು. ಸುಮಾರು ಒಂದೂವರೆ ಸಾವಿರದಷ್ಟು ಇಂಗ್ಲೆಂಡ್‌ನವರು ಕ್ರೀಡಾಂಗಣಕ್ಕೆ ಬಂದಿದ್ದರು ಎನ್ನುವುದು ಪ್ರವೇಶ ದ್ವಾರಗಳಲ್ಲಿ ದಾಖಲಾದ ಲೆಕ್ಕ. ಐರ್ಲೆಂಡ್ ತಂಡವನ್ನು ಬೆಂಬಲಿಸಲು ಬಂದವರ ಸಂಖ್ಯೆ ಮಾತ್ರ ತೀರ ಕಡಿಮೆ.ಭಾರತ-ಇಂಗ್ಲೆಂಡ್ ನಡುವಣ ಪಂದ್ಯದ ಟಿಕೆಟ್ ಹಾಗೂ ಪಾಸ್ ಸಿಗಲಿಲ್ಲವೆಂದು ಗದ್ದಲ ಮಾಡಿದ ಜನರು ಕೂಡ ಐರ್ಲೆಂಡ್‌ನಂಥ ತಂಡವು ಆಡಿದಾಗ ಕ್ರೀಡಾಂಗಣಕ್ಕೆ ಬರುವ ಉತ್ಸಾಹ ತೋರಲಿಲ್ಲ ಎನ್ನುವುದು ಅಚ್ಚರಿ. ಕ್ರಿಕೆಟ್ ಎಂದರೆ ಎಲ್ಲ ಪಂದ್ಯವೂ ಒಂದೇ; ಆಟದ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಪ್ರತಿಯೊಂದು ಪಂದ್ಯವೂ ಸಂತಸ ನೀಡುತ್ತದೆ. ಆದರೆ ಆಟದ ಪ್ರೀತಿಯು ದೇಶಗಳ ಅಭಿಮಾನದ ಗಡಿಯೊಳಗೆ ಉಳಿದಾಗ ವಿಶ್ವಕಪ್‌ನಂಥ ದೊಡ್ಡ ಕ್ರಿಕೆಟ್ ಟೂರ್ನಿಯ ಕೆಲವು ಪಂದ್ಯಗಳೂ ಪ್ರೇಕ್ಷಕರ ಕೊರತೆಯಿಂದ ಸೊರಗುವುದು ಸಹಜ.ದೇಶಿ ವಾದ್ಯಗಳ ನಿನಾದ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದ ನಂತರ ಕ್ರಿಕೆಟ್ ನಡೆದರೆ ಚೀಯರ್ ಗರ್ಲ್ಸ್ ನಲಿದಾಟವು ಕ್ರೀಡಾಂಗಣದಲ್ಲಿ ಇರಬೇಕು, ಅಬ್ಬರದ ಸಂಗೀತವೂ ಇರಬೇಕು ಎನ್ನುವ ನಿರೀಕ್ಷೆಯು ಬಲವಾಗಿರುವುದು ಸಹಜ. ಆದರೆ ವಿಶ್ವಕಪ್ ಪಂದ್ಯಗಳ ಸಂದರ್ಭದಲ್ಲಿ ಅಂಥ ಬೆಡಗಿಯರ ನೃತ್ಯವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಉದ್ಯಾನನಗರಿಯಲ್ಲಿಯಂತೂ ಅಂಥ ವಾತಾವರಣದಿಂದ ಜನರನ್ನು ರಂಜಿಸುವ ಪ್ರಯತ್ನ ಮಾಡಲಾಗಿಲ್ಲ. ಅದೇ ಒಳಿತು!ಬ್ಯಾಟ್ಸ್‌ಮನ್‌ಗಳು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದಾಗ ಮತ್ತು ಬೌಲರ್‌ಗಳು ವಿಕೆಟ್ ಪಡೆದಾಗ ದೇಶಿ ವಾದ್ಯಗಳ ಹಿತವಾದ ನಿನಾದವಂತೂ ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಪಂದ್ಯದ ಸಂದರ್ಭದಲ್ಲಿ ಕೇಳಿತು. ಕೆವಿನ್ ಪೀಟರ್ಸನ್ ಹಾಗೂ ಆ್ಯಂಡ್ರ್ಯೂ ಸ್ಟ್ರಾಸ್ ಚೆಂಡನ್ನು ಸಿಕ್ಸರ್‌ಗೆ ಎತ್ತಿದಾಗ, ಐರ್ಲೆಂಡ್ ಕ್ಷೇತ್ರ ರಕ್ಷಕರು ಚೆಂಡನ್ನು ಆಕರ್ಷಕವಾಗಿ ತಡೆದಾಗ ಮತ್ತದೇ ದೇಶಿ ವಾದ್ಯಗಳಿಂದ ಹೊಮ್ಮಿದ ಸದ್ದು ಕ್ರೀಡಾಂಗಣದಲ್ಲಿ ಅಲೆ ಅಲೆಯಾಗಿ ತೇಲಿತು.ಜನಪದ ಕಲಾವಿದರ ತಂಡವು ಬೌಂಡರಿ ಗೆರೆಯಾಚೆ ನಿಂತುಕೊಂಡು ವಾದ್ಯಗಳನ್ನು ನುಡಿಸುತ್ತಿದ್ದರೆ ಅದರ ಲಯದೊಂದಿಗೆ ವಿದೇಶಿ ಪ್ರೇಕ್ಷಕರೂ ಹೆಜ್ಜೆಹಾಕಿದರು. ಅಬ್ಬರದ ಸಂಗೀತಕ್ಕಿಂತ ಈ ಜನಪದ ವಾದ್ಯಗಳ ತಾಳಕ್ಕೆ ತಲೆದೂಗುವುದೇ ಹೆಚ್ಚು ಹಿತವೆನ್ನಿಸಿದ್ದು ಸಹಜ. ಪ್ರಶಾಂತವಾದ ವಾತಾವರಣದಲ್ಲಿ ಆಟವು ವಿಶಿಷ್ಟವಾದ ಅಂದದಿಂದ ನಡೆದಾಗ; ಐಪಿಎಲ್ ಪಂದ್ಯಗಳ ಸದ್ದಿಗಿಂತ ಹೀಗೆ ಪ್ರಶಾಂತವಾದ ಕ್ರಿಕೆಟ್ ವಾತಾವರಣವೇ ಹೆಚ್ಚು ಹಿತ ಎನಿಸಿತು.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.