ಮಂಗಳವಾರ, ಮೇ 17, 2022
27 °C

ಖಾಸಗಿ ಕ್ಷೇತ್ರದ ಭ್ರಷ್ಟಾಚಾರ: ಹೋರಾಟಕ್ಕೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭ್ರಷ್ಟಾಚಾರ ವಿರುದ್ಧದ ಹೋರಾಟಗಳು ಸರ್ಕಾರಿ ವಲಯಕ್ಕೆ ಮಾತ್ರ ಸೀಮಿತವಾಗಿದ್ದು, ಖಾಸಗಿ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ಆರಂಭವಾಗಬೇಕು~ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಕರೆ ನೀಡಿದರು.ಭ್ರಷ್ಟಾಚಾರಿ ವಿರೋಧಿ ಪ್ರಗತಿಪರ ವೇದಿಕೆಯು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಭಾನುವಾರ `ಭ್ರಷ್ಟಾಚಾರ ವಿರೋಧಿ ಸಮಾಜಕ್ಕಾಗಿ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಕರ್ನಾಟಕ ಲೋಕಾಯುಕ್ತ ವರದಿ ಅಂಗೀಕಾರಕ್ಕಾಗಿ ಒತ್ತಾಯಿಸಿ~ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.`ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚಳವಳಿಗಳೆಲ್ಲಾ ಸರ್ಕಾರದ ಭ್ರಷ್ಟಾಚಾರಗಳನ್ನು ವಿರೋಧಿಸುತ್ತಿವೆ. ಖಾಸಗೀಕರಣವೇ ಭ್ರಷ್ಟಾಚಾರಕ್ಕೆ ಪ್ರಧಾನವಾಗಿದ್ದು, ಈ ವಲಯದಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಮೊದಲು ಹತ್ತಿಕ್ಕುವ ಕಾರ್ಯ ಮಾಡಬೇಕಿದೆ~ ಎಂದು ಅಭಿಪ್ರಾಯಪಟ್ಟರು.`ಸಂಪತ್ತಿನ ಕ್ರೋಡಿಕರಣವೇ ಭ್ರಷ್ಟಾಚಾರದ ಮೂಲ. ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸರ್ವಾಧಿಕಾರ ಇದೆ. ಗಾಂಧಿ ಕಂಡ ಬ್ರಿಟೀಷ್ ವಸಾಹತುಶಾಹಿ ದೂರವಾಗಿದೆ. ಆದರೆ, ಆರ್ಥಿಕವಾಗಿ ಪ್ರಬಲವಾಗಿರುವ ಖಾಸಗಿಯವರ ಮುಂದೆ ಸರ್ಕಾರವೇ ಮಂಡಿಯೂರಿ ಕುಳಿತುಕೊಳ್ಳುವ ಸ್ಥಿತಿಯಲ್ಲಿದೆ~ ಎಂದು ವಿಷಾದಿಸಿದರು.ಭ್ರಮೆ ಬೇರೂರಿದೆ: `ಅಣ್ಣಾ ನಡೆಸಿದ ಭ್ರಷ್ಟಾಚಾರ ವಿರೋಧಿ ಚಳವಳಿ ಕೇವಲ ಕೇಂದ್ರ ಸರ್ಕಾರ ಹಾಗೂ ಸಚಿವರ ವಿರುದ್ಧಕ್ಕಷ್ಟೇ ಸೀಮಿತವಾಗಿದೆ. ಇದರಿಂದ ದೇಶದ ಎಲ್ಲಾ ಭ್ರಷ್ಟಾಚಾರ ಹೋಗಲಾಡಿಸಬಹುದು ಎಂಬ ಭ್ರಮೆ ಜನರಲ್ಲಿ ಬೇರೂರಿದೆ. ಮಾಧ್ಯಮದ ಪ್ರಚಾರದಿಂದ ಹೋರಾಟಕ್ಕೆ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಯಿತು. ಹಾಗೆಂದ ಮಾತ್ರಕ್ಕೆ ನಾನು ಅಣ್ಣಾ ಹೋರಾಟವನ್ನಾಗಲೀ ಲೋಕಪಾಲ ಮಸೂದೆಯನ್ನಾಗಲೀ ವಿರೋಧಿಸುವುದಿಲ್ಲ. ಹೋರಾಟಗಳು ವಾಸ್ತವತೆ ಮೇಲೆ ನಡೆಯಬೇಕು~ ಎಂದವರು ಪ್ರತಿಪಾದಿಸಿದರು.`ಖಾಸಗೀಕರಣದಿಂದ ಶಿಕ್ಷಣ ಹಾಗೂ ವೈದ್ಯಕೀಯ ವಲಯಗಳು ಉದ್ದಿಮೆಗಳಾಗಿ ಮಾರ್ಪಟ್ಟಿವೆ. ಖಾಸಗೀಕರಣ ಇಲ್ಲಿಗೂ ಕಾಲಿಟ್ಟಿದ್ದು ಮುಂದಿನ ದಿನಗಳಲ್ಲಿ ಇಡೀ ದೇಶವೇ ಖಾಸಗೀಕರಣವಾದರೆ ಅಚ್ಚರಿಯಿಲ್ಲ. ಭ್ರಷ್ಟಾಚಾರವನ್ನು ಕಿತ್ತುಹಾಕಲು ಲೋಕಪಾಲ ಮಸೂದೆಯೊಂದೇ ಅಂತಿಮ ಅಸ್ತ್ರವಲ್ಲ~ ಎಂದು ನುಡಿದರು.ಡಾಲರ್ ಭ್ರಷ್ಟಾಚಾರ: `ಅನೇಕ ಸಂಸ್ಥೆಗಳಿಗೆ ಕೋಟಿಗಟ್ಟಲೆ ವಿದೇಶಗಳಿಂದ ಹಣ ಹರಿದು ಬರುತ್ತಿದೆ. ಸಮಾಜದಲ್ಲಿ ಸಂಘಟನೆಗಳು ನಡೆಸುವ ಹೋರಾಟವನ್ನು ಹತ್ತಿಕ್ಕಲು ಈ ವಿದೇಶಿ ಹಣ ನೆರವಾಗುತ್ತಿದೆ. ದೇಶದಲ್ಲಿ ನಡೆಯುವ ರೂಪಾಯಿ ಭ್ರಷ್ಟಾಚಾರದ ವಿರುದ್ಧವಲ್ಲದೆ ಡಾಲರ್ ಮತ್ತು ಪೌಂಡ್ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ~ ಎಂದರು.ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿ, `ಬಂಡಾಯ ಸಾಹಿತ್ಯಕ್ಕೆ 70- 80ರ ದಶಕದಲ್ಲಿದ್ದ ಶಕ್ತಿ ಈಗ ಇಲ್ಲವಾಗಿದೆ. ಪರಸ್ಪರ ವೈಯಕ್ತಿಕ ಕಾರಣಗಳಿಂದ ಎಲ್ಲರೂ ದೂರವಾಗಿದ್ದೇವೆ. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಲು ಪ್ರಗತಿಪರರಾದ ನಾವು ಮತ್ತೊಂದು ವೇದಿಕೆಯನ್ನು ಹುಟ್ಟು ಹಾಕುವುದು ಬೇಡ. ಎಲ್ಲರೂ ಒಂದಾಗಿ `ಬಂಡಾಯ ಸಾಹಿತ್ಯ ಸಂಘಟನೆ~ ವೇದಿಕೆಯಲ್ಲಿಯೇ ಹೋರಾಡೋಣ. ಈ ಮೂಲಕ ಬಂಡಾಯ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡೋಣ~ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.ಸಿಪಿಐ ರಾಜ್ಯ ಕಾರ್ಯದರ್ಶಿ ಜಿ.ಎನ್.ನಾಗರಾಜ್ ಮಾತನಾಡಿ, `ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು~ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಚಿಂತಕ ಜಿ.ಕೆ.ಗೋವಿಂದರಾವ್ ಮಾತನಾಡಿ `ರಾಜ್ಯ ಹಾಗೂ ದೇಶದಲ್ಲಿ ಆರ್ಥಿಕ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಯುತ್ತಿದೆ. ಸಾಮಾಜಿಕ ಅಸಮಾನತೆಯ ವಿರುದ್ಧವೂ ಹೋರಾಟ ನಡೆಯಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಅರಿವು ಮೂಡಿಸಲು ಕ್ರಿಯಾಶೀಲ ಚಿಂತನೆ ನಡೆಯಬೇಕಿದೆ~ ಎಂದರು.

ಸಿಪಿಐ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ಇತರರು ಹಾಜರಿದ್ದರು.

ಕಿಡ್ನಾಪ್ ಮಾಡಿ...

`ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಉಪವಾಸ ಕೂರುವವರೇ ಆಗಿದ್ದಾರೆ. ಇದರಿಂದ ನನಗೇನೂ ಬೆಸರವಿಲ್ಲ. ಇದು ಬ್ಲಾಕ್ ಮೇಲ್ ತಂತ್ರ. ಈ ಪದ್ಧತಿ ಗಾಂಧಿ ಮೂಲಕವೇ ಬೆಳೆದು ಬಂದಿದ್ದು  ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಶ್ರೀರಾಮುಲು, ಅನಿತಾ, ಶೋಭಾ ಕರಂದ್ಲಾಜೆ ಎಲ್ಲರೂ ಉಪವಾಸ ಕೂರಲಿ ನನಗೆ ಬೇಸರವಿಲ್ಲ. ಅವರು ಉಪವಾಸ ಕೈಬಿಡುವ ಹೊತ್ತಿಗೆ ನಮ್ಮ ಅನಂತಮೂರ್ತಿಯವರನ್ನು ಕಿಡ್ನಾಪ್ ಮಾಡಿ~ ಎಂದು ಚಂಪಾ ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.