ಬುಧವಾರ, ಮೇ 25, 2022
22 °C

ಖಾಸಗಿ ವಾಹನಗಳಲ್ಲಿ ಹಗಲು ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದಿಂದ ಸದ್ಯದ ಸಾರಿಗೆಯ ದರಕ್ಕೇ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಉತ್ತಮ ಸೇವೆ ಮತ್ತು ನಿಗದಿತ ಸಮಯಕ್ಕೆ ಉದ್ದೇಶಿತ ಸ್ಥಳ ಸೇರಬಹುದು ಎಂಬ ಕಾರಣಕ್ಕೆ ಪ್ರಯಾಣಿಕರು ದೂರದೂರಿಗೆ ಹೋಗಲು ಹೆಚ್ಚಿನ ದರ ನೀಡಿ ಖಾಸಗಿ ವಾಹನ ಅವಲಂಬಿಸುತ್ತಿದ್ದಾರೆ.ಆದರೆ ಸಾರ್ವಜನಿಕರ ಈ ಬಯಕೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖಾಸಗಿ ವಾಹನ ಸಂಸ್ಥೆಗಳು ಹಬ್ಬದ ನೆಪದಲ್ಲಿ ಸಾಧಾರಣ ದಿನದ ದರಕ್ಕಿಂತಲೂ 80ರಿಂದ ಸುಮಾರು 200 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.ಈ ಬಗ್ಗೆ ಖಾಸಗಿ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರೊಬ್ಬರನ್ನು `ಪ್ರಜಾವಾಣಿ~ ವಿಚಾರಿಸಿದರೆ `ಹಬ್ಬದ ಸಂದರ್ಭದಲ್ಲಿ ಸಿಬ್ಬಂದಿಗೆ ಸಮವಸ್ತ್ರ, ಬೋನಸ್, ವಾಹನ ಪೂಜೆ, ಸಾರಿಗೆ ಅಧಿಕಾರಿಗಳಿಗೆ ಮಾಮೂಲು ಇತ್ಯಾದಿ, ಇತ್ಯಾದಿ ನೀಡಬೇಕಿರುತ್ತದೆ. ಹಬ್ಬಕ್ಕೆ ಮಾತ್ರ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅ. 28ರವರೆಗೂ ಮಾತ್ರ ವಿಶೇಷ ದರ.. ಇನ್ನೂಳಿದ ದಿನದಂದು ನಿಗದಿತ ದರ ಮಾತ್ರ ವಿಧಿಸಲಾಗುತ್ತಿದೆ~ ಎನ್ನುತ್ತಾರೆ ಹೈದ್ರಬಾದ್, ಗಂಗಾವತಿ, ಹೊಸಪೇಟೆ, ಚಿತ್ರದುರ್ಗಾ, ಬೆಂಗಳೂರು, ನಡುವೆ ವಾಹನ ಓಡಿಸುವ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕ.ದಸರಾ, ದೀಪಾವಳಿ ಸೇರಿದಂತೆ ಬಹುತೇಕ ಎಲ್ಲ ಹಬ್ಬದ ಸಂದರ್ಭದಲ್ಲೂ ಹೆಚ್ಚುವರಿ ದರ ನಿಗದಿಮಾಡುತ್ತಾರೆ.

ಹಬ್ಬದ ಮುಂಚಿನ ಹಾಗೂ ನಂತರದ ಎರಡು ಸೇರಿ ಒಟ್ಟು ಮೂರರಿಂದ ಐದು ದಿನ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.`ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಸೇರಿದಂತೆ ಇತರ ಪಟ್ಟಣ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋದ ಸಾವಿರಾರು ನೌಕರರು ಹಬ್ಬದ ಸಂದರ್ಭದಲ್ಲಿ ತಮ್ಮೂರಿಗೆ ಬರಲು ಕಾತುರರಾಗಿರುತ್ತಾರೆ.ಏಕಾಏಕಿ ದರ ಹೆಚ್ಚಳದಿಂದ ಹೊರೆಯಾಗುತ್ತದೆ~ ಎನ್ನುತ್ತಾರೆ ಬಸವಪಟ್ಟಣದ ಸುರೇಶ ಕುಮಾರ,

`ಸಹೋದರಿಯನ್ನು ಹುಬ್ಬಳ್ಳಿಗೆ ಕಳಿಸಬೇಕಿತ್ತು. ಟಿಕೆಟ್ ಬುಕ್ ಮಾಡಲು ಹೋದಾಗಲೇ ಖಾಸಗಿ ವಾಹನಗಳು ಹೆಚ್ಚುವರಿ ದರ ವಿಧಿಸುತ್ತಿರುವುದು ತಿಳಿಯಿತು. ಬಸ್ ಪ್ರಯಾಣ ರದ್ದು ಮಾಡಿ, ರೈಲ್ವೆ ಟಿಕೆಟ್ ಬುಕ್ ಮಾಡಬೇಕಾಯಿತು~ ಎಂದು ಪ್ರಸನ್ನ ದೇಸಾಯಿ ತಿಳಿಸಿದ್ದಾರೆ. ಪೂರ್ವ ಮಾಹಿತಿ ನೀಡದೇ ಖಾಸಗಿ ವಾಹನ ಸಂಸ್ಥೆಯವರು ದರ ಹೆಚ್ಚಳ ಮಾಡುತ್ತಾರೆ. ಇದು ಸಾರ್ವಜನಿಕ ವಂಚನೆಯಾಗಿದ್ದು, ಜಿಲ್ಲೆಯಲ್ಲಿರುವ ಸಾರಿಗೆ ನಿಯಂತ್ರಣ ಅಧಿಕಾರಿ ಅಥವಾ ಸಂಬಂಧಿತ ಇಲಾಖೆಯವರು ಗಮನ ಹರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.ಇದು ದರಪಟ್ಟಿ : ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ಮತ್ತು ಖಾಸಗಿ ವಾಹನಗಳ ದರಕ್ಕೂ ಸಾಮಾನ್ಯದಿನ ಹಾಗೂ ವಿಶೇಷದಿನದಲ್ಲಿ ಇರುವ ವ್ಯತ್ಯಾಸದ ದರಗಳ ಮಾಹಿತಿ ಲಭ್ಯವಾಗಿದೆ.ಸಾರಿಗೆ ಸಂಸ್ಥೆಯ ಪ್ರಯಾಣದರ ಎಲ್ಲ ದಿನದಲ್ಲೂ ಏಕರೂಪವಾಗಿದೆ. ಗಂಗಾವತಿ-ಬೆಂಗಳೂರು ನಡುವಿನ ವೇಗದೂತಕ್ಕೆ 232, ಸ್ಲೀಪರ್ ಕೋಚ್‌ಗೆ 473 ಹಾಗೂ 360 (ಮಕ್ಕಳಿಗೆ) ದರ ವಿಧಿಸಲಾಗುತ್ತಿದೆ.ಆದರೆ ರಾಜ್ಯದ ಪ್ರತಿಷ್ಠಿತ ಖಾಸಗಿ ಸಾರಿಗೆ ಸಂಸ್ಥೆಯೊಂದರ 2್ಡ2 ಆಸನವುಳ್ಳ ವಾಹನಕ್ಕೆ ರೂ, 360 (660), ಸ್ಲೀಪರ್ ಕೋಚ್ ವಾಹನಕ್ಕೆ ಲೋವರ್ ಬರ್ತ್ 410 (710), ಅಪ್ಪರ್ ಬರ್ತ್ 460 (760) ಹಾಗೂ ಸಿಟ್ಟಿಂಗ್ 368 (578) ನಿಗದಿ ಗೊಳಿಸಲಾಗಿದೆ.ಆವರಣದಲ್ಲಿ ಸೂಚಿಸಿರುವಷ್ಟು ಅಂದರೆ ಪ್ರತಿ ಪ್ರಯಾಣಿಕರಿಂದ ಸುಮಾರು ತಲಾ 300 ರೂಪಾಯಿ ಹಣವನ್ನು ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ವಸೂಲಿ ಮಾಡುತ್ತಿರುವ ಖಾಸಗಿ ಸಂಸ್ಥೆಯ ವಾಹನಗಳ ಸ್ವೇಚ್ಛೆಗೆ ಕಡಿವಾಣ ಹಾಕಬೇಕಿದೆ. ಹೈದರಾಬಾದ್ ನಡುವೆ ವಾಹನಗಳನ್ನು ಓಡಿಸುತ್ತಿರುವ ಮತ್ತೊಂದು ಸಂಸ್ಥೆ 2*3 ಆಸನದ ವಾಹನಕ್ಕೆ ಸಾಮಾನ್ಯ ದರ ರೂ, 295 (370) ಹವಾನಿಯಂತ್ರಿತ 460 (540) ಮತ್ತು ಡಿಲಕ್ಸ್ ವಾಹನಕ್ಕೆ 380 (460) ರೂಪಾಯಿ ಪಡೆಯಲಾಗುತ್ತಿದೆ.ಮಾಹಿತಿ ನೀಡದೇ ಹೆಚ್ಚುವರಿ ಹಣ ಪಡೆಯುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದ್ದು ಈ ಬಗ್ಗೆ ಸಾರಿಗೆ ಇಲಾಖೆ (ಆರ್‌ಟಿಓ) ಮತ್ತು ಸಂಬಂಧಿತರು ಮಾತ್ರ ಯಾವ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಕಾರಣವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.