ಭಾನುವಾರ, ಮಾರ್ಚ್ 7, 2021
29 °C

ಖಾಸಗಿ ಶಾಲೆಗಳಿಂದ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಶಾಲೆಗಳಿಂದ ದರೋಡೆ

ಮಂಗಳೂರು: `ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಶಿಕ್ಷಣ ಒದಗಿಸುತ್ತಿವೆ. ಕೇವಲ ರ‌್ಯಾಂಕ್, ಅಂಕಗಳ ಬೆನ್ನು ಬಿದ್ದಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು ಪರೋಕ್ಷವಾಗಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿವೆ~ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.ನಗರದ ಬಲ್ಮಠ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಬಲ್ಮಠ ಹೆಣ್ಣುಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ  ಹಾಗೂ ಪದವಿಪೂರ್ವ ಕಾಲೇಜಿನ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲೆಗಳು ಶಿಕ್ಷಣದ ಹೆಸರಿನಲ್ಲಿ ದರೋಡೆ ನಡೆಸುತ್ತಿವೆ. ಬಡವರ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಿಂಚಿತ್ತೂ ರಿಯಾಯಿತಿ ಒದಗಿಸದ ಈ ಶಾಲೆಗಳು ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿವೆ. ಆದರೆ, ಸರ್ಕಾರ ಶೈಕ್ಷಣಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಆದರೂ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಾಗಲೂ ಸರ್ಕಾರಿ ಶಾಲೆಗಳು ಇನ್ನಷ್ಟು ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ~ ಎಂದರು.`ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು, ದೇವೇಗೌಡರು ಪ್ರಧಾನಿ ಆದರು, ಇಂದ್ರಾ ನೂಯಿ ಎಂಬ ಮಹಿಳೆ ಅಮೆರಿಕದ ಪ್ರತಿಷ್ಠಿತ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿಯಾಗಿ ಯಶಸ್ವಿಯಾದರು. ಮಾತೃಭಾಷೆ ಸ್ವಾಭಿಮಾನದ ಬದುಕು ಕಲಿಸುತ್ತದೆ. ಆದರೂ ಜನರಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಶ್ರೇಷ್ಠ ಎಂಬ ಭ್ರಮೆ ಆವರಿಸಿರುವುದು ಬೇಸರದ ಸಂಗತಿ~ ಎಂದರು.ಬಲ್ಮಠ ಶಾಲೆಯ ಅಭಿವೃದ್ಧಿಗೆ ಸಂಸದರ ನಿಧಿಯಿಂದ ರೂ 2 ಲಕ್ಷ ನೀಡುವುದಾಗಿ ಅವರು ಪ್ರಕಟಿಸಿದರು.

ದ.ಕ. ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಮಾತನಾಡಿ, `ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಎಲ್ಲರೂ ಪಣತೊಡಬೇಕು~ ಎಂದರು.ವಿದ್ಯಾರ್ಥಿನಿಯರಿಗೆ ಸಮವಸ್ತ್ರ ನೀಡಲಾಯಿತು. ಶಿಕ್ಷಣ ಹಕ್ಕು ಕಾಯ್ದೆಯ ಭಿತ್ತಿಪತ್ರವನ್ನು ಪಾಲಿಕೆ ಸದಸ್ಯ ರಂಗನಾಥ ಕಿಣಿ ಬಿಡುಗಡೆ ಮಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ ಶೆಟ್ಟಿಗಾರ್, ತೇಜೋಮಯ, ಪ್ರೌಢಶಾಲಾ ಮುಖ್ಯಶಿಕ್ಷಕಿ ವಿನೋದಾ, ಪಿ.ಯು.ಕಾಲೇಜಿನ ಪ್ರಾಂಶುಪಾಲ ವಾಸುದೇವ ಕಾಮತ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ತಾರಾ, ದಾನಿ ವಿದ್ಯಾ ಮತ್ತಿತರರಿದ್ದರು.ಮುಳ್ಳಕಾಡು ಶಾಲೆಯಲ್ಲಿ ಸಸಿ ನೆಟ್ಟರು:ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಅವರು ನಗರದ ಕೊಂಚಾಡಿ ಸಮೀಪದ ಮುಳ್ಳಕಾಡು ಶಾಲೆಯ `ಶಾಲೆಗಾಗಿ ನಾವು ನೀವು~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಟ್ಟರು. ಶಾಲೆಯ ಶಿಕ್ಷಣದ ಗುಣಮಟ್ಟ ಪರಿಶೀಲಿಸಿದರು.ಬಳಿಕ ಮಾತನಾಡಿದ ಅವರು, ಪೋಷಕರು ಹಳೆ ವಿದ್ಯಾರ್ಥಿಗಳು ಹಾಗೂ ಸಮಾಜ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ವಹಿಸಿ ಕುಂದುಕೊರತೆ ನೀಗಿಸಬೇಕು ಎಂದರು.  ಪಾಲಿಕೆ ಸದಸ್ಯ ದೀಪಕ್ ಪೂಜಾರಿ, ಸರ್ವಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿ ಶಿವಪ್ರಕಾಶ್, ನಾಮನಿರ್ದೇಶಕ ಸದಸ್ಯ ಸುಚೇತನ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ ರೈ, ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ ಟೈಲರ್, ಉಪಾಧ್ಯಕ್ಷೆ ಪ್ರಮೀಳಾ, ಪ್ರೌಢಶಾಲಾ ಎಸ್‌ಡಿಂಎಂಸಿ ಅಧ್ಯಕ್ಷ ಮಹಮ್ಮದ್‌ಮತ್ತಿತರರಿದ್ದರು.ಜಿ.ಪಂ. ಸಿಇಒ ಕೆ.ಎನ್.ವಿಜಯಪ್ರಕಾಶ್ ಗಾಂಧಿನಗರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಗರದ ಶಾಲೆಗಳಲ್ಲಿ ಆಯಾ ಪ್ರದೇಶದ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.