ಗುರುವಾರ , ಜೂನ್ 4, 2020
27 °C

ಗಂಭೀರ್ ಮೇಲೆ ನಿರೀಕ್ಷೆಯ ಭಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಭೀರ್ ಮೇಲೆ ನಿರೀಕ್ಷೆಯ ಭಾರ

ಹೈದರಾಬಾದ್: ಶುಕ್ರವಾರ ಜನ್ಮದಿನ ಆಚರಿಸಿಕೊಳ್ಳುವ ಖುಷಿಯಲ್ಲಿರುವ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಮೇಲೆ ಈಗ ನಿರೀಕ್ಷೆಯ ಭಾರ. ಅದಕ್ಕಾಗಿಯೇ ಗುರುವಾರ ನೆಟ್ಸ್‌ನಲ್ಲಿ ಬಹಳ ಹೊತ್ತಿನವರೆಗೆ ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದರು.

ಶುಕ್ರವಾರ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದ ಅಗ್ರಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ನಿರ್ವಹಿಸಲು ತಾವು ಸಿದ್ಧ ಎಂಬ ಮುಖಭಾವ ಅವರದ್ದಾಗಿತ್ತು.

ಇಂಗ್ಲೆಂಡ್‌ನಲ್ಲಿ ಸೋತು ಸುಣ್ಣವಾಗಿ ಬಂದಿರುವ ಭಾರತಕ್ಕೆ ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇವೆಯಿಲ್ಲ. ಅಲ್ಲದೇ ಏಪ್ರಿಲ್ 2ರಂದು ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ 97 ರನ್ನುಗಳ ಅಮೂಲ್ಯ ಕಾಣಿಕೆ ನೀಡಿದ್ದ ಗಂಭೀರ್ ಇಲ್ಲಿಯವರೆಗೆ ಏಕದಿನ ಪಂದ್ಯಗಳನ್ನು ಆಡಿರಲಿಲ್ಲ. ಈಗ ಮತ್ತೆ ಅವರ ಜನ್ಮದಿನದಂದೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿದೆ. ಗಾಯದಿಂದ ಚೇತರಿಸಿಕೊಂಡಿರುವ ಅವರು ಲವಲವಿಕೆಯಿಂದ ನೆಟ್ಸ್‌ನಲ್ಲಿ ಪಾಲ್ಗೊಂಡಿದ್ದರು. ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ ಬಳಗದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ತಮ್ಮ ಅನುಭವದ  ಬ್ಯಾಟಿಂಗ್ ಧಾರೆಯೆರೆಯಲು ಸಿದ್ಧರಾಗಿದ್ದಾರೆ. ಅವರ ಜೊತೆಗೆ ಇನಿಂಗ್ಸ್ ಆರಂಭಿಸುವ ಅವಕಾಶ ಅಜಿಂಕ್ಯ ರಹಾನೆ ಅಥವಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಪಾಲಿಗೆ ಬರಲಿದೆ. ನಂತರದ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸುರೇಶ್ ರೈನಾ, ನಾಯಕ ಮಹೇಂದ್ರಸಿಂಗ್ ದೋನಿ, ಆಲ್‌ರೌಂಡರ್ ರವೀಂದ್ರ ಜಡೇಜಾ ಬರಲಿದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತದ ಬ್ಯಾಟಿಂಗ್ ಪಡೆಯನ್ನು ಅತಿಯಾಗಿ ಕಾಡಿದ್ದ ಮಧ್ಯಮವೇಗಿಗಳಾದ ಟಿಮ್ ಬ್ರೆಸ್ನನ್, ಸ್ಟೀವನ್ ಥಾಮಸ್ ಫಿನ್, ಗ್ರೇಮ್ ಸ್ವಾನ್ ಅವರ ದಾಳಿಯನ್ನು ಭಾರತದ ಬ್ಯಾಟ್ಸ್‌ಮನ್ನರು ತವರು ನೆಲದಲ್ಲಿ ಹೇಗೆ ಎದುರಿಸುತ್ತಾರೆ ಎನ್ನುವುದೇ ಈಗ ಕುತೂಹಲದ ಕೇಂದ್ರಬಿಂದು. 

ಇಂಗ್ಲೆಂಡ್‌ಗೆ ಹೋದಾಗ ಅನುಭವಿಸಿದ್ದ ಗಾಯದ ಸಮಸ್ಯೆ ಈಗ ತಂಡದಲ್ಲಿ ಇರದೇ ಇರುವುದು ನಾಯಕ ದೋನಿಗೆ ಸಮಾಧಾನ ತಂದಿದೆ. ಹೊಸ ಹುಡುಗರು ಸಿಗುವ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂದು ನೋಡಲು ಕಾತರರಾಗಿದ್ದಾರೆ. ವಿಶೇಷವಾಗಿ ಬೌಲಿಂಗ್ ವಿಭಾಗದ ಮೇಲೆ ಹೆಚ್ಚು ನಿಗಾ ವಹಿಸ್ದ್ದಿದಾರೆ. ಏಕೆಂದರೆ ಪ್ರಮುಖ ಬೌಲರ್‌ಗಳಾದ ಜಹೀರ್ ಖಾನ್, ಆಶೀಶ್ ನೆಹ್ರಾ, ಮುನಾಫ್ ಪಟೇಲ್ ಸೇವೆ ತಂಡಕ್ಕೆ ಲಭ್ಯವಿಲ್ಲ. ಅಲ್ಲದೇ ಅನುಭವಿ ಸ್ಪಿನ್ನರ್ ಹರಭಜನ್‌ಸಿಂಗ್ ಅವರನ್ನೂ ತಂಡದಿಂದ ಕೈಬಿಡಲಾಗಿದೆ.

ಈ ವಿಭಾಗದಲ್ಲಿ ಅನುಭವಿ ಎಂದರೆ ಪ್ರವೀಣಕುಮಾರ್ ಒಬ್ಬರೇ. ಅವರಿಗೆ ಕರ್ನಾಟಕದ ಆರ್. ವಿನಯಕುಮಾರ್ ವೇಗದ ದಾಳಿಯಲ್ಲಿ ಸಾಥ್ ನೀಡಿದರೆ, ಇನ್ನೊಬ್ಬ ವೇಗದ ಬೌಲರ್ ಆಗಿ ವರುಣ್ ಆ್ಯರನ್ ಅಥವಾ ಉಮೇಶ್ ಯಾದವ್ ಸ್ಥಾನ ಪಡೆಯಬಹುದು. ಆದರೆ, ಹೊಸ ಪವರ್‌ಪ್ಲೇ ನೀತಿಯಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿದ್ದು ಮೂವರು ಮಧ್ಯಮವೇಗಿಗಳೊಂದಿಗೆ ಕಣಕ್ಕಿಳಿಯುವುದು ಸಂಶಯ. ಇದರಿಂದಾಗಿ ತಮಿಳುನಾಡಿನ ಹುಡುಗ ಆರ್. ಅಶ್ವಿನ್ ಮೇಲೆ ಸ್ಪಿನ್ ವಿಭಾಗದ ಜವಾಬ್ದಾರಿಯಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ, ಪಾರ್ಟ್‌ಟೈಂ ಬೌಲರ್ ಆಗಿ ಸುರೇಶ್ ರೈನಾ, ವಿರಾಟ್ ಕೊಹ್ಲಿ ಕೂಡ ತಮ್ಮ ಭುಜಬಲ ಪ್ರದರ್ಶಿಸಬಹುದು. ಆದರೆ ಇಂಗ್ಲೆಂಡ್‌ನ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಸುಲಭದ ಮಾತಲ್ಲ.

`ಐಸಿಸಿ ವರ್ಷದ ಆಟಗಾರ~ ಗೌರವ ಪಡೆದಿರುವ ಜೋನಾಥ್‌ನ್ ಟ್ರಾಟ್,  ಭಾರತದ ನೆಲದಲ್ಲಿ ಮೊದಲ ಏಕದಿನ ಪಂದ್ಯ ಆಡಲಿರುವ ನಾಯಕ ಅಲಿಸ್ಟರ್ ಕುಕ್, ಕ್ರೇಗ್ ಕೀಸ್‌ವೆಟ್ಟರ್, ಎರಡನೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿರುವ ಹೊಸ ಪ್ರತಿಭೆ ಜೋನಾಥನ್ ಬೈಸ್ಟೋ, ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ರನ್ನುಗಳ ಸುರಿಮಳೆಗರೆಯದಂತೆ ತಡೆಯುವ ದೊಡ್ಡ ಸವಾಲು ಪ್ರವೀಣಕುಮಾರ್ ಮತ್ತು ಸಂಗಡಿಗರಿಗೆ ಇದೆ.

2008-09ರಲ್ಲಿ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಶರಣಾಗಲು ಕಾರಣರಾಗಿದ್ದ ಯುವರಾಜ್ ಸಿಂಗ್ ಈಗ ತಂಡದಲ್ಲಿ ಇಲ್ಲದಿರುವುದು ಕುಕ್ ಪಡೆ ನಿರಾಳವಾಗಲು ಕಾರಣವಾಗಿದೆ.

ತಂಡಗಳು ಇಂತಿವೆ...

ಭಾರತ: ಮಹೇಂದ್ರಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್, ಪ್ರವೀಣಕುಮಾರ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ವರುಣ್ ಆ್ಯರನ್, ಉಮೇಶ್ ಯಾದವ್, ವಿನಯಕುಮಾರ್, ಎಸ್. ಅರವಿಂದ್, ರಾಹುಲ್ ಶರ್ಮಾ, ಮನೋಜ್ ತಿವಾರಿ. ಕೋಚ್: ಡಂಕನ್ ಫ್ಲೆಚರ್.

ಇಂಗ್ಲೆಂಡ್: ಅಲಿಸ್ಟರ್ ಕುಕ್ (ನಾಯಕ), ಜೊನಾಥನ್ ಬೈಸ್ಟೋ, ಇಯಾನ್ ಬೆಲ್, ರವಿ ಬೋಪಾರಾ, ಸಮಿತ್ ಪಟೇಲ್, ಕೆವಿನ್ ಪೀಟರ್ಸನ್, ಗ್ರೇಮ್ ಸ್ವಾನ್, ಜೋನಾಥನ್ ಟ್ರಾಟ್, ಸ್ಕಾಟ್ ಭಾರ್ಥವಿಕ್, ಟಿಮ್ ಬ್ರೆಸ್ನನ್, ಜೇಡ್ ಡೆಮ್‌ಬ್ಯಾಕ್, ಸ್ಟೀವನ್ ಫಿನ್, ಕ್ರೇಗ್ ಕೀಸ್‌ವೆಟ್ಟರ್, ಸ್ಟುವರ್ಟ್ ಮೀಕರ್, ಕ್ರಿಸ್ ವೋಕರ್. ಕೋಚ್: ಆ್ಯಂಡಿ ಫ್ಲವರ್.

ಪಂದ್ಯದ ಆರಂಭ: ಮಧ್ಯಾಹ್ನ 2.30. ನೇರಪ್ರಸಾರ: ನಿಯೊ ಕ್ರಿಕೆಟ್ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.