ಮಂಗಳವಾರ, ಮೇ 24, 2022
26 °C

ಗಂಭೀರ ಲೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ವಿಧಾನಸೌಧದಲ್ಲಿ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದ ಘಟನೆ ಖಂಡನೀಯ.

 

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಎಸ್. ನಟರಾಜ್ ಅವರನ್ನು ಮಲ್ಲೇಶ್ವರ ವೃತ್ತದಲ್ಲಿ ಹಾಡುಹಗಲೇ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಪ್ರಕರಣವೂ ಜನರನ್ನು ಬೆಚ್ಚಿ ಬೀಳಿಸಿದೆ.ಸಚಿವರೊಬ್ಬರ ಮೇಲೆ ವಿಧಾನಸೌಧದಲ್ಲಿ ಹಲ್ಲೆ ನಡೆಸುವುದು ಮತ್ತು ಪಾಲಿಕೆ ಸದಸ್ಯರನ್ನು ಜನನಿಬಿಡವಾಗಿದ್ದ ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡುವುದು ಸಾಧ್ಯವೆಂಬ ಪರಿಸ್ಥಿತಿ ರಾಜಧಾನಿಯಲ್ಲಿರುವುದು ಆಡಳಿತ ವ್ಯವಸ್ಥೆಯಲ್ಲಿನ ಲೋಪ ಎಂಬುದರಲ್ಲಿ ಸಂಶಯವಿಲ್ಲ.ಪೊಲೀಸ್ ಠಾಣೆಯ ಸನಿಹದಲ್ಲಿ ಪಾಲಿಕೆ ಸದಸ್ಯರ ಹತ್ಯೆ ನಡೆದಿರುವುದನ್ನು ಗಮನಿಸಿದರೆ ದುಷ್ಕರ್ಮಿಗಳಿಗೆ ಪೊಲೀಸ್ ಮತ್ತು ನ್ಯಾಯ ವ್ಯವಸ್ಥೆಯ ಬಗ್ಗೆ ಕಿಂಚಿತ್ತೂ ಭಯ ಇಲ್ಲವೆಂಬುದು ಸ್ಪಷ್ಟವಾಗಿದೆ.ಹಲ್ಲೆಯ ಭೀಕರತೆ ಪಾತಕಲೋಕ ಮತ್ತು ರಾಜಕಾರಣ ನಡುವಣ ಸಂಪರ್ಕವನ್ನು ನೆನಪಿಸುತ್ತದೆ. ಸಾರ್ವಜನಿಕರ ಸೇವೆ ಸಲ್ಲಿಸುವುದಕ್ಕೆ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂಬುದಕ್ಕೆ ಈ ಎರಡೂ ಪ್ರಕರಣಗಳು ಸಾಕ್ಷಿಯಾಗಿವೆ.ಬೆಂಗಾವಲು ಪಡೆಯ ಭದ್ರತೆಯಲ್ಲಿರುವ ಸಚಿವರಿಗೆ ವಿಧಾನಸೌಧದಲ್ಲಿಯೇ ರಕ್ಷಣೆ ಸಿಗದಿರುವಂಥ ವಾತಾವರಣ ಇದೆ ಎಂದರೆ ಅದು ಆಡಳಿತ ವ್ಯವಸ್ಥೆಯ ವೈಫಲ್ಯ. ಪಕ್ಷದ ಕಾರ್ಯಕರ್ತನೊಬ್ಬ ತಮ್ಮ ಮೇಲೆ ಹಲ್ಲೆ ನಡೆಸುವಂಥ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನು ಸಚಿವರೇ ವಿವರಿಸಬೇಕು.ಏನೇ ಆದರೂ ಹಲ್ಲೆ ನಡೆಸಿದ ವ್ಯಕ್ತಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ಜೊತೆಗೆ ಅಂಥ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾದ ಅಂಶಗಳನ್ನೂ ಪತ್ತೆ ಹಚ್ಚುವ ಕಾರ್ಯವನ್ನು ಸರ್ಕಾರ ಮಾಡಬೇಕಾಗಿದೆ.ದುಷ್ಕರ್ಮಿಗಳು ರಾಜಧಾನಿಯಲ್ಲಿ ಹಿಂಸಾಕೃತ್ಯಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ ಎಂಬ ಪರಿಸ್ಥಿತಿ ಪೊಲೀಸ್ ವ್ಯವಸ್ಥೆಯಲ್ಲಿನ ದೌರ್ಬಲ್ಯದ ಸಂಕೇತ. ಹತ್ಯೆಗೀಡಾದ ಪಾಲಿಕೆ ಸದಸ್ಯ ನಟರಾಜ್ ತಮಗೆ ಜೀವ ಬೆದರಿಕೆಯ ಕರೆಗಳು ಬರುತ್ತಿರುವ ವಿಷಯವನ್ನು ತಿಳಿಸಿದ್ದಾಗಲೇ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದ್ದರೆ ಹತ್ಯೆ ನಡೆಯುವುದನ್ನು ತಪ್ಪಿಸಲು ಸಾಧ್ಯವಿತ್ತು.ಪಾಲಿಕೆ ಸದಸ್ಯರು ನೀಡುವ ಮಾಹಿತಿಯನ್ನೇ ಕಡೆಗಣಿಸುವ ಪೊಲೀಸರು ಜನಸಾಮಾನ್ಯರ ದೂರುಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಈ ಘಟನೆಯಿಂದಲೇ ಸ್ಪಷ್ಟವಾಗುತ್ತದೆ. ಈ ಪರಿಸ್ಥಿತಿಗೆ ಸರ್ಕಾರವೇ ಕಾರಣ.ಅಧಿಕಾರಿಗಳ ದಕ್ಷತೆಯನ್ನು ಆಧರಿಸಿ ಅವರನ್ನು ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸುವುದಿಲ್ಲ. ಹಣ, ಜಾತಿ, ಪಕ್ಷ ನಿಷ್ಠೆ ಮೊದಲಾದ ಸಂಗತಿಗಳೇ ನಗರದ ಠಾಣೆಗಳಿಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

 

ಪೊಲೀಸರ ಕರ್ತವ್ಯದಲ್ಲಿ ಸಚಿವರು, ಆಡಳಿತ ಪಕ್ಷದ ರಾಜಕಾರಣಿಗಳ ಹಸ್ತಕ್ಷೇಪ ಇರುವ ಕಡೆಗಳಲ್ಲಿ ವ್ಯವಸ್ಥೆ ದುರ್ಬಲವಾಗುತ್ತದೆ. ಹಣ ಮತ್ತು ಜಾತಿ ಬಲ ಮೇಲುಗೈ ಪಡೆದಾಗ ದಕ್ಷತೆಯೂ, ಯೋಗ್ಯತೆಯೂ ಹಿಂದೆ ಸರಿಯುತ್ತವೆ. ಇದರ ಪರಿಣಾಮ ಕಾನೂನು ವ್ಯವಸ್ಥೆಯ ಮೇಲಾಗುತ್ತದೆ. ಮುಖ್ಯಮಂತ್ರಿಯವರೇ ಗಮನ ಹರಿಸಬೇಕಾದ ಗಂಭೀರ ಪರಿಸ್ಥಿತಿ ಇದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.