ಸೋಮವಾರ, ಏಪ್ರಿಲ್ 12, 2021
26 °C

ಗಡಾಫಿ ವಿರುದ್ಧ ಹೊರದೇಶಗಳ ಪ್ರಚೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶಸ್ತ್ರ ಕೊಡಿ ನಾವೇ ಗಡಾಫಿ ವಿರುದ್ಧ ಹೋರಾಡುತ್ತೇವೆ ಎಂದು ಗಡಾಫಿ ವಿರೋಧಿಗಳು ಅಮೆರಿಕಕ್ಕೆ ಕೇಳಿದರೆ, ಅಪಾರ ತೈಲದ ಮೇಲೆ ಕಣ್ಣಿಟ್ಟಿರುವ ಅಮೆರಿಕ ಶಸ್ತ್ರನೀಡುವ ಬದಲು ತಾನೇ ಯುದ್ಧಕ್ಕೆ ನಿಂತಿದೆ. ಇಲ್ಲಿ ತೈಲದಾಹದ ಕುತಂತ್ರ ಅಡಗಿದೆಯೇ ಹೊರತು, ಆಡಳಿತ ವಿರೋಧಿ ಅಲೆಯೆಂಬುದು ಅರ್ಧ ಸತ್ಯ ಮಾತ್ರ.’-ಕಳೆದ 3 ವರ್ಷಗಳಿಂದ ಲಿಬಿಯಾದ ರಾಜಧಾನಿ ಟ್ರಿಪೋಲಿಯಿಂದ 40 ಕಿ.ಮೀ. ದೂರದಲ್ಲಿರುವ ಜಾವಿಯಾ ನಗರದ ‘ಅಲ್ ಜಬಲ್ ಅಲ್ ಗರ್ಬಿ’ (ಪಶ್ಚಿಮದ ಪರ್ವತ) ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದ ತುಮಕೂರಿನ ಪ್ರೊ.ಟಿ.ವಿ.ಎಲ್.ರಂಗನಾಥ್ ಅವರು ಬಹಿರಂಗಪಡಿಸಿದ ವಿಚಾರ ಇದು. ಲಿಬಿಯಾದಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ಗಲಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸಾಗಿರುವ ಅವರು ಅಲ್ಲಿನ ಪರಿಸ್ಥಿತಿ ಮತ್ತು ಇಂದಿನ ಘಟನೆಗಳಿಗೆ ಕಾರಣವನ್ನು ಮಂಗಳವಾರ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.‘ಆಧುನಿಕ ತಂತ್ರಜ್ಞಾನವನ್ನು ಮೊದಲು ಮೈಗೂಡಿಸಿಕೊಂಡ ರಾಷ್ಟ್ರ ಲಿಬಿಯಾ. 35 ವರ್ಷಗಳ ಹಿಂದೆಯೇ ಆ ರಾಷ್ಟ್ರದಲ್ಲಿ ದೊರೆಯುವ ತೈಲವನ್ನು ವೈಮಾನಿಕ ಸರ್ವೆ ನಡೆಸಿ ಸೂತ್ರಬದ್ಧವಾಗಿ ತೈಲ ರಫ್ತು ಮಾಡುವ ಮೂಲಕ ಶ್ರೀಮಂತ ರಾಷ್ಟ್ರವಾಯಿತು. ಹಾಗೆಯೇ ಜನರ ಜೀವನಮಟ್ಟ ಹೆಚ್ಚಿದೆ. ಬರೀ ಮರುಭೂಮಿ ಇರುವ ಆ ನಾಡಿನಲ್ಲಿ 200ಕ್ಕೂ ಅಧಿಕ ಬಗೆಯ ಬಾಳೆಹಣ್ಣು, 300 ಬಗೆಯ ಬಿಸ್ಕತ್ತುಗಳು, ಅಷ್ಟೇ ಬಗೆಯ ಚಾಕೊಲೇಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.’‘ಕೇಳಿದ್ದೆಲ್ಲವನ್ನು ಸರ್ಕಾರ ಒದಗಿಸುತ್ತಿತ್ತು. ಕುರಾನಿನ ನಿಯಮದಂತೆ ಅಲ್ಲಿ ಮಾದಕ ವಸ್ತು ಮತ್ತು ಜೂಜು ನಿಷೇಧ. ಆದರೆ ಗಡಿ ರಾಷ್ಟ್ರಗಳಾದ ಈಜಿಪ್ಟ್, ಟ್ಯುನೀಷಿಯಾಗಳಿಂದ ಸರಬರಾಜು ಆಗುತ್ತಿರುವ ವಿವಿಧ ಉತ್ಪನ್ನಗಳೊಂದಿಗೆ ಡ್ರಗ್ಸ್ ಕೂಡ ಯುವಕರ ಕೈಸೇರುತ್ತಿದೆ. ಅಲ್ಲದೇ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಗಡಾಫಿ ಆಳಿದ್ದರಿಂದ ಸಹಜವಾಗಿ ಕೆಲವರಿಗೆ ಬದಲಾವಣೆ ಬೇಕಾಗಿದೆ. ಆದರೆ ಈಜಿಪ್ಟ್, ಟ್ಯುನೀಷಿಯಾದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲ ವರ್ಗದವರು ಹೋರಾಟದಲ್ಲಿ ಭಾಗವಹಿಸಿದ್ದರು. ಆದರೆ ಇಲ್ಲಿ ಭಾಗವಹಿಸುತ್ತಿರುವವರು ಯುವಕರು ಮಾತ್ರ.’‘ಲಿಬಿಯಾದ ಇಂದಿನ ಪರಿಸ್ಥಿತಿಗೆ ಮುಅಮ್ಮರ್ ಗಡಾಫಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಕಾರಣ. ಕೇಳಿದಾಗಲೆಲ್ಲ ರಸ್ತೆ, ಮನೆ ಕಟ್ಟಿಸಿಕೊಟ್ಟದ್ದರಿಂದ ಜನರು ಕೆಲಸ ಮಾಡದೇ ಸೋಮಾರಿಗಳಾದರು. ಪಕ್ಕದ ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದ ಯುವಕರು ದಂಗೆ ಎದ್ದಿದ್ದಾರೆ. ರಾಷ್ಟ್ರದ ಸಂಪತ್ತು ಎಲ್ಲರ ಮಧ್ಯೆ ಹಂಚಿಕೆಯಾಗಿಲ್ಲ. ಗಡಾಫಿ ಹತ್ತಿರ ಕ್ರೋಢೀಕರಣವಾಗಿದೆ’.‘ಇಲ್ಲಿನ ಇನ್ನೊಂದು ಮಗ್ಗುಲನ್ನೂ ಹೇಳಬೇಕು. ಸಾರ್ವಜನಿಕರು ಗಡಾಫಿಯನ್ನು ಕಂಡರೆ ಹೆದರುತ್ತಾರೆ. ಒಮ್ಮೆ ಟ್ರಿಪೋಲಿಯಲ್ಲಿ ಗಡಾಫಿ ಪರ ಮೆರವಣಿಗೆ ಬರುತ್ತಿತ್ತು. ಅದು ಏನೆಂದು ಕೇಳಿದರೆ ‘ಮುಬೀರ್ (ಯಜಮಾನ) ಮೆರವಣಿಗೆ ಹೋಗುತ್ತಿದೆ’ ಎಂದು ಆಟೊ ಡ್ರೈವರ್ ಕಿವಿಯಲ್ಲಿ ಉಸುರಿದ. ಗಡಾಫಿ ಎಂದು ಕರೆಯಲೂ ಹೆದರುತ್ತಾರೆ’ ಎಂದರು. ರಷೀದ್ ಅಹ್ಮದ್ ಅನುಭವ: ಬೆಂಗಳೂರಿನ ಸೈಯದ್ ರಷೀದ್ ಅಹ್ಮದ್ ಅವರದು ಇನ್ನೊಂದು ರೀತಿಯ ಅನುಭವ. ಲಿಬಿಯಾ ರಾಜಧಾನಿ ಟ್ರಿಪೋಲಿ (ಗಡಾಫಿ ಮನೆಯಿಂದ ಕೇವಲ 3 ಕಿ.ಮೀ.ದೂರ)ಯಲ್ಲಿ ನೆಲೆಸಿದ್ದ ರಷೀದ್ ಅವರು ಅಲ್ಲಿನ ಹಣಕಾಸು ಕಂಪೆನಿಯ ಉದ್ಯೋಗಿಯಾಗಿದ್ದರು.‘ಅಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯಗಳು ಕಂಡು ಬರಲಿಲ್ಲ. ಸುನ್ನಿ ಮುಸ್ಲಿಮರೇ ವಾಸವಾಗಿರುವ ಅಲ್ಲಿ ಮಹಿಳೆಯರೂ ಸೇರಿದಂತೆ ಯಾರು ಬೇಕಾದರೂ ರಾತ್ರಿ ಎರಡು ಗಂಟೆಗೂ ನಿರ್ಭಯವಾಗಿ ಓಡಾಡಬಹುದಿತ್ತು. ಸ್ತ್ರೀಯರು ಮುಖದ ತುಂಬ ಬುರ್ಕಾ ಹಾಕುವ ಮೊದಲು ತಲೆಗೆ ಮಾತ್ರ ಸ್ಕಾರ್ಫ್  ಧರಿಸುತ್ತಿದ್ದರು. ಅಲ್ಲಿ ಚಿತ್ರಮಂದಿರಗಳಿಲ್ಲ. ಆದರೆ ಸರ್ಕಾರಿ ನಿಯಂತ್ರಣದಲ್ಲಿರುವ ಚಾನೆಲ್‌ನಲ್ಲಿ ಹಲವು ಕಾರ್ಯಕ್ರಮಗಳು ಬಿತ್ತರಗೊಳ್ಳುವುದರಿಂದಟಿವಿಯನ್ನೇ ನೋಡುತ್ತಾರೆ.’ನಮಾಜ್ ಕಡ್ಡಾಯವಲ್ಲ: ಪಕ್ಕಾ ಮುಸ್ಲಿಂ ದೇಶವಾದರೂ ಸಹ ಗಡಾಫಿ ಆಡಳಿತವು, ಜನರು ಮಸೀದಿಗೆ ಹೋಗಿ ನಮಾಜ್ ಮಾಡಬೇಕು ಎಂದು ಒತ್ತಾಯಿಸಿದ್ದು ಕಂಡಿಲ್ಲ. ಜನರು ತಮಗೆ ಇಷ್ಟವಿದ್ದರೆ ಮಾತ್ರ ಮಸೀದಿಗೆ ಹೋಗಬಹುದಿತ್ತು. ಅಲ್ಲಿ ‘ಅಲ್ಷಾಮ್ಸ್’ (ಅರೇಬಿಕ್) ಮತ್ತು ‘ಟ್ರಿಪೋಲಿ ಪೋಸ್ಟ್’ (ಇಂಗ್ಲಿಷ್) ಎಂಬ ಎರಡು ಪತ್ರಿಕೆಗಳಿದ್ದು, ಎರಡೂ ಸರ್ಕಾರಿ ನಿಯಂತ್ರಣದಲ್ಲಿವೆ. ಗಡಾಫಿ ಅಲ್ಲಿನ ರಾಜನನ್ನು ಕೆಳಗಿಳಿಸಿ ಅಧಿಕಾರಕ್ಕೇರಿದ ವರ್ಷ 1969ರ ಸೆಪ್ಟೆಂಬರ್ 1ನ್ನು ಪ್ರತಿವರ್ಷ ‘ಅಲ್ಫಾತ್’ (ಕ್ರಾಂತಿ ದಿನ) ಎಂಬ ಹಬ್ಬವನ್ನು ಆಚರಿಸುತ್ತಾರೆ.’‘ಆದರೆ 42 ವರ್ಷಗಳಿಂದ ಆಡಳಿತದ ವಿರುದ್ಧ ಧ್ವನಿಯೆತ್ತದ ಜನತೆ ಈಗ ದಂಗೆಯೆದ್ದಿದ್ದಾರೆ ಎಂದರೆ ಅದು ಕೆಲವು ಸಂಶಯಗಳನ್ನು ಹುಟ್ಟುಹಾಕಿದೆ. ಅದಕ್ಕೆ ಹೊರಗಿನ ಬೆಂಬಲ ಕಾರಣ’ ಎಂದು ರಷೀದ್ ಅವರು ನುಡಿದರು. ‘ಅಲ್ಲಿ ಎಲ್ಲರೂ ಓಡಾಡುವುದು ಕಾರಿನಲ್ಲಿ. ಪೆಟ್ರೋಲ್ ಒಂದು ದಿನಾರ್‌ಗೆ 6 ಲೀಟರ್ ಸಿಗುವುದರಿಂದ ಅಲ್ಲಿ ಸಾರಿಗೆಯನ್ನಾಗಿ ಕಾರ್ ಬಳಸುತ್ತಾರೆ. ರೈಲುಗಳು ಇನ್ನೂ ಬಂದಿಲ್ಲವಾದರೂ, ರೈಲು ಸೌಕರ್ಯ ಹೊಂದಲು ಸಿದ್ಧತೆ ನಡೆದಿದೆ.’‘ಲಿಬಿಯನ್ನರು ಯಾವತ್ತೂ ಗಡಾಫಿ ಸರ್ಕಾರದ ವಿರುದ್ಧ ದನಿಯೆತ್ತಿದವರಲ್ಲ. ಆದರೆ ಟ್ರಿಪೋಲಿಯಿಂದ ಒಂದು ಸಾವಿರ ಕಿ.ಮೀ. ದೂರವಿರುವ ಬೆಂಗಾಝಿಯಲ್ಲಿ ಗಡಾಫಿ ವಿರೋಧಿಗಳು ಪ್ರಬಲರಾಗಿದ್ದಾರೆ. ಆದ್ದರಿಂದ ಅವರನ್ನು ಮಟ್ಟ ಹಾಕುವ ದೃಷ್ಟಿಯಿಂದ ಅಲ್ಲಿ ವಿದ್ಯುತ್ ಮತ್ತು ಆಹಾರ ಪೂರೈಕೆಯನ್ನು ನಿಲ್ಲಿಸಿದೆ. ಆದರೆ ಫ್ರಾನ್ಸ್ ರಾಜಕೀಯ ಹಿತಾಸಕ್ತಿಗಾಗಿ ಅವರನ್ನು ಬೆಂಬಲಿಸುತ್ತಾ ಬಂದಿದೆ. ಈ ಬೆಂಬಲ ಗಡಾಫಿ ವಿರೋಧಿಗಳು ಆಕ್ರಮಣ ಮಾಡಲು ಪ್ರೇರೇಪಿಸಿದೆ.’‘ಆದರೆ 42 ವರ್ಷಗಳಿಂದ ಆಡಳಿತದ ವಿರುದ್ಧ ಧ್ವನಿಯೆತ್ತದ ಜನತೆ ಈಗ ದಂಗೆಯೆದ್ದಿದ್ದಾರೆ ಎಂದರೆ ಅದು ಕೆಲವು ಸಂಶಯಗಳನ್ನು ಹುಟ್ಟುಹಾಕಿದೆ. ಅದಕ್ಕೆ ಹೊರಗಿನ ಬೆಂಬಲ ಕಾರಣ’ ಎಂದು ರಷೀದ್ ಅವರು ನುಡಿದರು.  ‘ಮತ್ತೆ ಲಿಬಿಯಾಕ್ಕೆ ವಾಪಸಾಗುವ ಯೋಜನೆ ಸದ್ಯಕ್ಕೆ ಇಲ್ಲ’ ಎಂದೂ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.