ಭಾನುವಾರ, ಜೂನ್ 7, 2020
22 °C

ಗಡಿನಾಡಿನ ಸರ್ಕಾರಿ ಶಾಲೆ ಮುಚ್ಚಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿನಾಡಿನ ಸರ್ಕಾರಿ ಶಾಲೆ ಮುಚ್ಚಲ್ಲ

ಸುಳ್ಯ: ರಾಜ್ಯದ ಗಡಿ ಭಾಗಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತಲೂ ಕಡಿಮೆ ಇದ್ದರೂ ಅಂತಹ ಶಾಲೆಗಳನ್ನು ಮುಚ್ಚುವುದಿಲ್ಲ. ಕನ್ನಡ ಭಾಷೆ ಬೆಳವಣಿಗೆಗೆ ತಂತ್ರಾಂಶವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.ಹುಟ್ಟೂರಿನ ಅಭಿಮಾನಿಗಳು ಬುಧವಾರ ತಮಗೆ ನೀಡಿದ ಸನ್ಮಾನಕ್ಕೆ ಉತ್ತರಿಸಿ ಹಾಗೂ ಕನ್ನಡ ನುಡಿತೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮುಂದಿಟ್ಟ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲಾಗುವುದು. ನೆರೆಯ ರಾಜ್ಯಗಳಲ್ಲಿರುವ ಕನ್ನಡಿಗರ ಹಿತ ಕಾಯುವುದಕ್ಕೆ ಸಹ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಾಲು ಸೇತುವೆ, ಕಿಂಡಿ ಅಣೆಕಟ್ಟೆಗಳಂತಹ ಮೂಲ ಸೌಕರ್ಯಗಳನ್ನು ನಿರ್ಮಿಸಲು ಸರ್ಕಾರ 15 ಕೋಟಿ ರೂಪಾಯಿ ತೆಗೆದಿರಿಸಿದೆ. ತೂಗು ಸೇತುವೆ ಸರದಾರ ಗಿರೀಶ್ ಭಾರಧ್ವಾಜ್ ಅವರಂತಹವರು ಈ ಹಣವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಸೂಕ್ತ ಸೌಲಭ್ಯ ಒದಗಿಸಿಕೊಡಬೇಕು ಎಂದು ತಿಳಿಸಿದರು.ಆಡಳಿತ ಸುಧಾರಣೆ: ಆಡಳಿತ ಸುಧಾರಣೆಗೆ ಸರ್ಕಾರ ಕೈಗೊಳ್ಳಲು ಮುಂದಾಗಿರುವ ಹಲವು ಕ್ರಮಗಳನ್ನು ವಿವರಿಸಿದ ಡಿ.ವಿ.ಸದಾನಂದಗೌಡ ಅವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿ.ಪಂ. ಸಿಇಒ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಬೇಕು. 15 ದಿನಗಳೊಳಗೆ ಜನರ ಕೆಲಸ ಮಾಡಿಸಿಕೊಡಬೇಕು. ಈ ಅವಧಿಗಿಂತ ಹೆಚ್ಚು ವಿಳಂಬವಾಗುವ ಕಡತಗಳಿಗೆ ಸಂಬಂಧಿಸಿದಂತೆ ಆಯಾ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಿ ದಂಡ ವಿಧಿಸಲಾಗುವುದು. ಈ ಕಾರ್ಯಗಳ ಮೇಲ್ವಿಚಾರಣೆ ವಹಿಸುವ ಹೊಣೆಗಾರಿಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳದ್ದೇ ಆಗಿರುತ್ತದೆ ಎಂದರು.ತಹಸೀಲ್ದಾರ್ ಸಹ ವಾರಕ್ಕೆ 1 ಅಥವಾ 2 ಹೋಬಳಿಗಳಿಗೆ ತೆರಳಿ ಕಡತ ವಿಲೇವಾರಿ ಪರಿಶೀಲನೆ ನಡೆಸಲೇಬೇಕು. ಗ್ರಾಮ ಮಟ್ಟದಿಂದ ಸಿಎಂ ಕಚೇರಿವರೆಗೂ ಎಲ್ಲಾ ಕಡೆಯೂ ಆಡಳಿತಕ್ಕೆ ಚುರುಕು ಮತ್ತು ಪಾರದರ್ಶಕತೆ ಇರಬೇಕು ಎಂಬ ಉದ್ದೇಶದೊಂದಿಗೆ ತಾವು ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಸ್ಪಷ್ಟಪಡಿಸಿದರು.`ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಹೊರತುಪಡಿಸಿ ಮುಂದಿನ ಏಪ್ರಿಲ್‌ವರೆಗೆ ಯಾವ ಅಧಿಕಾರಿಯನ್ನೂ ವರ್ಗಾವಣೆ ಮಾಡುವುದಿಲ್ಲ. ಅಗತ್ಯ ಇರುವ ಕೆಲವು ಖಾಲಿ ಸ್ಥಾನಗಳನ್ನು ತುಂಬುವ ಕೆಲಸ ಮಾತ್ರ ನಡೆಯಲಿದೆ. ಯಾವ ಒತ್ತಡ ಬಂದರೂ ವರ್ಗಾವಣೆ ದಂಧೆಗೆ ಉತ್ತೇಜನ ನೀಡಲಾಗದು~ ಎಂದರು.ಮುಂದಿನ ಏಪ್ರಿಲ್‌ವರೆಗೆ ತಾವು ಯಾವುದೇ ಹೊಸ ಘೋಷನೆಯನ್ನೂ ಮಾಡುವುದಿಲ್ಲ. ಯಡಿಯೂರಪ್ಪ ಅವರ ಸರ್ಕಾರವೇ ಹಲವು ಜನಪ್ರಿಯ ಕಾರ್ಯಕ್ರಮ ಆರಂಭಿಸಿದ್ದು, ಅವುಗಳನ್ನೇ ಯಶಸ್ವಿಯಾಗಿ ಜಾರಿಗೆ ತರುವ ಕಾರ್ಯ ತಾವು ಮಾಡುವುದಾಗಿ ಹೇಳಿದರು.ಕನ್ನಡ ತಂತ್ರಾಂಶ: ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಜಾನಪದ ಜಾಥಾ ಉದ್ಘಾಟಿಸಿ, ಕನ್ನಡ ತಂತ್ರಾಂಶ ಅಭಿವೃದ್ಧಿ ಕಳೆದ ಮೂರು ವರ್ಷಗಳಿಂದ ನಿಂತ ನೀರಾಗಿತ್ತು. ಈ ಸರ್ಕಾರ ಅದಕ್ಕೆ ಚುರುಕು ನೀಡಿದೆ. ಕನ್ನಡ ಉಳಿಯಬೇಕಾದರೆ ಇಂತಹ ಪ್ರಯತ್ನ ಸರ್ಕಾರ ಮುಂದುವರಿಸಲೇಬೇಕಾಗಿದೆ ಎಂದು ಅವರು ಹೇಳಿದರು.ಮುಖ್ಯಮಂತ್ರಿ ಅವರನ್ನು ನಾಗರಿಕರ ಪರವಾಗಿ ಸನ್ಮಾನಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಬೇರೆ ರಾಜ್ಯಗಳನ್ನು ಹೋಲಿಸಿದರೆ ಕರ್ನಾಟಕ ಅಭಿವೃದ್ಧಿಯಲ್ಲಿ ಬಹಳ ಮುಂದಿದೆ. ಆದರೆ ಇಲ್ಲಿ ಸಹ ಭ್ರಷ್ಟಾಚಾರ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಭ್ರಷ್ಟಚಾರಕ್ಕೆ ಕಡಿವಾಣ ಹಾಕಿದ್ದೇ ಆದರೆ ರಾಜ್ಯವು ಇನ್ನಷ್ಟು ಪ್ರಗತಿ ಹೊಂದಲು ಸಾಧ್ಯ ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಮಾತನಾಡಿ, ಜಗತ್ತಿನಲ್ಲಿ 15 ದಿನಕ್ಕೆ ಒಂದು ಭಾಷೆ ನಶಿಸುತ್ತಿದ್ದು, ಭಾರತೀಯ ಭಾಷೆಗಳೇ ಇಂತಹ ಅಪಾಯಕ್ಕೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ತಂತ್ರಾಂಶ ಅಭಿವೃದ್ಧಿ, ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಪ್ರೋತ್ಸಾಹ ಸಹಿತ ಹಲವು ಕ್ರಮಗಳನ್ನು ಇನ್ನಷ್ಟು ತೀವ್ರಗತಿಯಲ್ಲಿ ಮಾಡಬೇಕಾಗಿದೆ. ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ಈ ನುಡಿತೇರು ಅಭಿಯಾನ ನಡೆಯುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಚಂದ್ರಶೇಖರ ಕಂಬಾರ ಮತ್ತು ತೂಗುಸೇತುವೆ ಸರದಾರ ಗಿರೀಶ್ ಭಾರದ್ವಾಜ್ ಅವರನ್ನು ಮುಖ್ಯಮಂತ್ರಿ ಅವರು ಸನ್ಮಾನಿಸಿದರು.ಶಾಸಕ ಎಸ್.ಅಂಗಾರ ಅವರು ತಾಲ್ಲೂಕಿನ ಅಭಿವೃದ್ಧಿಗಾಗಿ ಹೊಸ ರೈಲು ಮಾರ್ಗಗಳು ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಸಿಎಂ ಅವರ ಪತ್ನಿ ಡಾಟಿ ಸದಾನಂದ ಗೌಡ, ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಶಾಸಕರಾದ ಮಲ್ಲಿಕಾ ಪ್ರಸಾದ್, ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಐಜಿಪಿ ಅಲೋಕ್ ಮೋಹನ್, ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪಗೌಡ, ಜಿ.ಪಂ. ಸಿಇಒ ಕೆ.ಎನ್.ವಿಜಯಪ್ರಕಾಶ್ ಸಹಿತ ಹಲವರು ಇದ್ದರು.ಇದೇ ಪ್ರಥಮ ಬಾರಿಗೆ ಸುಳ್ಯಕ್ಕೆ ಬಂದ `ಮಣ್ಣಿನ ಮಗ~ ಸದಾನಂದ ಗೌಡರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ತಾಲ್ಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ್ದರು. ಸುಳ್ಯದ ಹದಗೆಟ್ಟ ರಸ್ತೆ, ಸಂಚಾರ ದಟ್ಟಣೆಯ ನಡುವೆಯೂ ಬೇಸರಪಡದ ಜನರು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ತಾಳ್ಮೆಯಿಂದ ಕಾರ್ಯಕ್ರಮ ವೀಕ್ಷಿಸಿದರು. ಚನ್ನಕೇಶವ ದೇವಸ್ಥಾನದ ಆವರಣ ಮಾತ್ರವಲ್ಲದೆ ಇಡೀ ಸುಳ್ಯ ಪೇಟೆಯೇ ಸದಾನಂದ ಗೌಡರ ಬೃಹತ್ ಭಿತ್ತಿಫಲಕಗಳಿಂದ ಕಂಗೊಳಿಸುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.