ಭಾನುವಾರ, ಮೇ 22, 2022
23 °C
ನಗರ ಸಂಚಾರ

ಗಡಿ ಖಂಡೇನಹಳ್ಳಿ ಅಭಿವೃದ್ಧಿ ಮರೀಚಿಕೆ

ಪ್ರಜಾವಾಣಿ ವಾರ್ತೆ/ವಿ.ವೀರಣ್ಣ Updated:

ಅಕ್ಷರ ಗಾತ್ರ : | |

ಧರ್ಮಪುರ:  ಹೋಬಳಿಯ ಗಡಿ ಖಂಡೇನಹಳ್ಳಿ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದ್ದು, ಸಮಸ್ಯೆಗಳೇ ಇಲ್ಲಿ ಹೆಚ್ಚಾಗಿವೆ.

ಖಂಡೇನಹಳ್ಳಿ, ಗ್ರಾಮ ಪಂಚಾಯ್ತಿ ಕೇಂದ್ರವೂ ಆಗಿದೆ. ಇದು ಹಿಂದೊಮ್ಮೆ ನಕ್ಸಲ್ ಪೀಡಿತ ಗ್ರಾಮವೂ ಆಗಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ  ಆಂಧ್ರ ಪ್ರದೇಶದ ನಕ್ಸಲರು ಇಲ್ಲಿ ವಾಸ್ತವ್ಯ ಹೂಡಿದ್ದರು.  ಸುಮಾರು 1500 ಮನೆಗಳನ್ನು ಹೊಂದಿರುವ ಈ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆಯಾಗಿದೆ.ಗುಡಿಸಲು ಗ್ರಾಮ:  ಅಂದಾಜು 6 ಸಾವಿರ ಜನಸಂಖ್ಯೆಯನ್ನು  ಹೊಂದಿರುವ ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ,  ಕಮ್ಮಾರ, ಕುಂಬಾರ, ಮುಸ್ಲಿಂ ಮತ್ತು ಇತರೆ ಜನಾಂಗದ ಕೇರಿಗಳು  ಗುಡಿಸಲುಗಳಿಂದ ಕೂಡಿವೆ. ಕೆಲವು ಕಡೆ ಮಾತ್ರ ಸಿಮೆಂಟ್  ರಸ್ತೆಗಳಾಗಿವೆ. ಇನ್ನುಳಿದಂತೆ  ಕೆಲವು ಬೀದಿಗಳಲ್ಲಿ  ಒಳಚರಂಡಿ ಇಲ್ಲ. ಇರುವ ಕಡೆ ಚರಂಡಿಗಳು ತುಂಬಿ ದುರ್ನಾತ ಬರುತ್ತಿದೆ. ಹಂದಿ ಮತ್ತು ಸೊಳ್ಳೆಗಳ ತಾಣವಾಗಿ ಸಾಂಕ್ರಾಮಿಕ ರೋಗಕ್ಕೆ ದಾರಿ ಮಾಡಿಕೊಟ್ಟಿದೆ. ಇಲ್ಲಿ ಸರಿಯಾದ  ರಸ್ತೆ ಇಲ್ಲ. ಮಳೆಯ ನೀರು ಮತ್ತು ಮನೆಯ ನೀರು ರಸ್ತೆ ಮೇಲೆ ಹರಿದು ಹೋಗುತ್ತದೆ. ಇದರಿಂದ ಇಲ್ಲಿಯ ನಿವಾಸಿಗಳ ಯಾತನೆ ಹೇಳತೀರದು.ಫ್ಲೋರೈಡ್ ನೀರು: ಈ ಗ್ರಾಮದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಲ್ಲಿರುವ ಕೈಪಂಪುಗಳು ದುರಸ್ತಿಗೆ ಕಾದಿವೆ. ವಿದ್ಯುತ್ ಸಮಸ್ಯೆಯಿಂದ  ಕೆಲವು ಸಂದರ್ಭದಲ್ಲಿ  ದೂರದ ರೈತರ ಹೊಲಗಳಿಂದ ಮತ್ತು ತಾತಯ್ಯನ ಮಠದಿಂದ ನೀರು ತರಬೇಕು. ಇನ್ನು ಇಲ್ಲಿ  ಕುಡಿಯುವ ನೀರಿನಲ್ಲಿ `ಟಿಡಿಎಸ್' ಪ್ರಮಾಣ ಜಾಸ್ತಿ ಇರುವುದರಿಂದ  ಮಕ್ಕಳಲ್ಲಿ ಹಲ್ಲು ಬಾಧೆ ಮತ್ತು ವಯಸ್ಕರಲ್ಲಿ ಕೀಲು ಬಾಧೆ ಕಾಯಿಲೆಗಳು ಉಲ್ಬಣಿಸಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.ನಕ್ಸಲ್ ಪೀಡಿತ ಅನುದಾನ:  ಖಂಡೇನಹಳ್ಳಿ ನಕ್ಸಲ್ ಪೀಡಿತ ಗ್ರಾಮವೆಂದು ಸರ್ಕಾರದಿಂದ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮಂಜೂರಾಯಿತು. ಆದರೆ, ಈ ಅನುದಾನ ಸಮರ್ಪಕವಾಗಿ ಬಳಕೆಯಾಗದೆ  ಅಭಿವೃದ್ಧಿ  ಮರೀಚಿಕೆಯಾಗಿಯೇ ಉಳಿದಿದೆ. ಗ್ರಾಮದಲ್ಲಿ ದೊಡ್ಡ ಸಮಸ್ಯೆ ಎಂದರೆ ಶೌಚಾಲಯ. ಇಲ್ಲಿಯ ಜನಕ್ಕೆ ಬಯಲು ಶೌಚಾಲಯವೇ ಗತಿ. ರಸ್ತೆ  ಬದಿಯೇ ಅವರಿಗೆ ಬಹಿರ್ದೆಸೆಯ ತಾಣವಾಗಿದೆ. ಗ್ರಾಮ ಪಂಚಾಯ್ತಿಯಿಂದ ದೊರೆಯುವ ಶೌಚಾಲಯ ಅನುದಾನ ಬಳಕೆ ಮಾಡಿಕೊಂಡು ಶೌಚಾಲಯ ನಿರ್ಮಾಣಕ್ಕೆ ನಾಗರಿಕರು ಮುಂದಾಗಿಲ್ಲ.ಸುವರ್ಣ ಗ್ರಾಮೋದಯ:   ಖಂಡೇನಹಳ್ಳಿಯನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಸೇರಿಸಿ  ಇಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ  ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ  ಅವಕಾಶ ಮಾಡಿಕೊಡಬೇಕು. ಇಲ್ಲಿ ಅನೇಕ ಜನರು ವಿವಿಧ ಉಪ ಕಸುಬುಗಳನ್ನು ರೂಢಿಸಿಕೊಂಡಿದ್ದು, ಅವರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂಬುದು ಇಲ್ಲಿಯ ನಿವಾಸಿಗಳ ಬೇಡಿಕೆ.ಗುಡಿಸಲುರಹಿತ ಗ್ರಾಮ: ಖಂಡೇನಹಳ್ಳಿಯಲ್ಲಿ ಸುಮಾರು  ಮುನ್ನೂರು  ಕುಟುಂಬಗಳು ಇಂದಿಗೂ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಇಂತವರಿಗೆ ನಿವೇಶನ ಮತ್ತು ವಸತಿ ಸೌಕರ್ಯವನ್ನು  ಮಾಡಿಕೊಡಬೇಕು. ಶಾಸಕ ಡಿ.ಸುಧಾಕರ್ ಗುಡಿಸಲು ರಹಿತ ತಾಲ್ಲೂಕು ಮಾಡುವುದಾಗಿ ಐದು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಈಗ ಮತ್ತೆ ಶಾಸಕರಾಗಿದ್ದಾರೆ. ಈಗಲಾದರೂ ಇಲ್ಲಿಯ ಜನತೆಯ ಆಶೋತ್ತರಗಳು ಈಡೇರಲಿ ಎಂಬುದು ನಿವಾಸಿಗಳ ಆಶಯವಾಗಿದೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.