ಸೋಮವಾರ, ಮೇ 17, 2021
30 °C

ಗಡಿ ಸಮಸ್ಯೆಗೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಕಡೇ ಗಳಿಗೆಯಲ್ಲಿ ರದ್ದಾದರೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಾಂಗ್ಲಾ ಭೇಟಿ ಉಭಯ ದೇಶಗಳ ಬಾಂಧವ್ಯ ವೃದ್ಧಿಯ  ದಿಸೆಯಲ್ಲಿ ಮಹತ್ವವಾದುದನ್ನು ಸಾಧಿಸುವಲ್ಲಿ ಸಫಲವಾಗಿದೆ. ಮುಖ್ಯವಾಗಿ ಉಭಯ ದೇಶಗಳ ನಡುವಣ ಗಡಿ ಸಮಸ್ಯೆಗೆ ಒಂದು ಪರಿಹಾರವನ್ನೂ ಕಂಡುಕೊಂಡಿರುವುದು ಉತ್ತಮ ಬೆಳವಣಿಗೆ.ಬಾಂಗ್ಲಾದೇಶ ರಚನೆಯಾದಂದಿನಿಂದಲೂ ಗಡಿಯ ನೂರಕ್ಕೂ ಹೆಚ್ಚು ಪ್ರದೇಶಗಳು ವಿವಾದಕ್ಕೆ ಎಡೆಕೊಟ್ಟಿದ್ದವು. ಆ ಪ್ರದೇಶಗಳು ಯಾವ ದೇಶಕ್ಕೆ ಸೇರಿದವು ಎಂಬುದೇ ಸಮಸ್ಯೆಯಾಗಿತ್ತು. ಇದರಿಂದಾಗಿ ಆ ಪ್ರದೇಶಗಳ ಜನರಿಗೆ ಮೂಲಭೂತ ಸೌಲಭ್ಯಗಳೇ ಸಿಗದಂತಾಗಿದ್ದವು.ಈಗ ಗಡಿಯನ್ನು ಎರಡೂ ದೇಶಗಳು ಸರಿಯಾಗಿ ಗುರುತಿಸಿದ್ದು ಭಾರತ ತನ್ನದೆಂದು ಹೇಳುತ್ತಿದ್ದ ಹಲವು ಗಡಿ ಪ್ರದೇಶಗಳನ್ನು ಬಾಂಗ್ಲಾಕ್ಕೆ ಬಿಟ್ಟುಕೊಟ್ಟು ವಿವಾದ ಬಗೆಹರಿಸಲು ಅನುವು ಮಾಡಿಕೊಟ್ಟಿದೆ. ಇದು ಮೆಚ್ಚುವಂತಹ ವಿಚಾರ. ಈ ವಿಚಾರದಲ್ಲಿ ಎರಡೂ ದೇಶಗಳು ಕೊಡುಕೊಳ್ಳುವ ಧೋರಣೆ ಅನುಸರಿಸಿರುವುದು ಸೌಹಾರ್ದ ಬಾಂಧವ್ಯ ವೃದ್ಧಿಯತ್ತ ಉತ್ತಮ ಹೆಜ್ಜೆಯಾಗಿದೆ.ವಾಣಿಜ್ಯ ಕ್ಷೇತ್ರದಲ್ಲಿಯೂ ಎರಡೂ ದೇಶಗಳ ನಡುವೆ ಮಹತ್ವದ ಒಪ್ಪಂದವಾಗಿದೆ. ಜವಳಿ ಸೇರಿದಂತೆ ಹಲವು ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಅವಕಾಶ ಕಲ್ಪಿಸಬೇಕೆಂದು ಬಾಂಗ್ಲಾ ಬಹಳ ಕಾಲದಿಂದ ಒತ್ತಾಯಿಸುತ್ತಿತ್ತು. ಇದೀಗ 50ಕ್ಕೂ ಹೆಚ್ಚು ಬಾಂಗ್ಲಾ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.ಭಾರತದ ಜವಳಿ ಕ್ಷೇತ್ರದ ವಿರೋಧದ ನಡುವೆಯೂ ಈ ರಿಯಾಯ್ತಿ ಒದಗಿಸಲಾಗಿದೆ. ದೀರ್ಘಾವಧಿ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇಂಥ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ ಹೇಳಿದೆ.ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ತಮ್ಮ ಸಮ್ಮತಿಯಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮನಮೋಹನ್ ಜತೆ ಬಾಂಗ್ಲಾದೇಶಕ್ಕೆ ಹೋಗಲಿಲ್ಲ. ಈ ವಿರೋಧ ಪ್ರಧಾನಿ ಬಾಂಗ್ಲಾ ಭೇಟಿಯನ್ನು ಹಾಳು ಮಾಡಬಹುದು ಎಂದೇ ಭಾವಿಸಲಾಗಿತ್ತು. ಆದರೆ ಹಾಗೇನೂ ಆಗಲಿಲ್ಲ.ತೀಸ್ತಾ ಒಪ್ಪಂದವನ್ನು ಮುಂದಕ್ಕೆ ಹಾಕಿ ಇತರ ಒಪ್ಪಂದಗಳಿಗೆ ಮನಮೋಹನ್ ಸಿಂಗ್ ಮತ್ತು ಬಾಂಗ್ಲಾ ಪ್ರಧಾನಿ ಷೇಕ್ ಹಸೀನಾ ಅವರು ಸಹಿ ಮಾಡುವ ಮೂಲಕ ಉತ್ತಮ ಹೆಜ್ಜೆಯನ್ನೇ ಇಟ್ಟಿದ್ದಾರೆ. ತೀಸ್ತಾ ನದಿ ಒಪ್ಪಂದ ಆಗಿದ್ದರೆ ಎರಡೂ ದೇಶಗಳಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು.

 

ತೀಸ್ತಾ ನದಿಯ ಆಚೆ - ಈಚಿನ ಪ್ರದೇಶಗಳ ನಡುವೆ ಸಂಪರ್ಕ, ಅಭಿವೃದ್ಧಿ ಹೆಚ್ಚುತ್ತಿತ್ತು. ಸದ್ಯಕ್ಕೆ ಈ ವಿಷಯದಲ್ಲಿ ಹಿನ್ನಡೆಯಾಗಿರುವುದು ನಿಜ. ಮಮತಾ ಬ್ಯಾನರ್ಜಿ ಅವರ ಜತೆ ಕೇಂದ್ರ ಸರ್ಕಾರ ವಿವರವಾಗಿ ಚರ್ಚಿಸಿ ಭಿನ್ನಾಭಿಪ್ರಾಯಗಳನ್ನು ಬೇಗ ಬಗೆಹರಿಸಬೇಕು ಮತ್ತು ಬಾಂಗ್ಲಾದೇಶದ ಜತೆ ಒಪ್ಪಂದ ಸಾಧ್ಯವಾಗುವಂತೆ ಮಾಡಬೇಕು. ಇದರಿಂದ ಎರಡೂ ದೇಶಗಳಿಗೆ ಅನುಕೂಲ ಎನ್ನುವುದನ್ನು ಮರೆಯಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.