ಶನಿವಾರ, ಮೇ 8, 2021
26 °C

ಗಣಪತಿಗೆ ಕಲ್ಲು: ಗೊಳಸಂಗಿ ಪ್ರಕ್ಷುಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಪತಿಗೆ ಕಲ್ಲು: ಗೊಳಸಂಗಿ ಪ್ರಕ್ಷುಬ್ಧ

ಆಲಮಟ್ಟಿ: ಸಮೀಪದ ಗೊಳಸಂಗಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದು, ಕಲ್ಲು ತೂರಾಟ ಮಾಡಲಾಗಿದೆ. ಗಣಪತಿ ಮೂರ್ತಿ ಭಗ್ನಗೊಂಡಿದ್ದು, ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.ಭಾನುವಾರ ರಾತ್ರಿ ಗಣಪತಿ ಮೆರವಣಿಗೆ ಗೊಳಸಂಗಿ ಗ್ರಾಮದ ಮಸೀದಿ ಬಳಿ ಹಾದು ಹೋಗುವಾಗ, ವಾಗ್ವಾದ ಹೊಡೆದಾಟಕ್ಕೆ ತಿರುಗಿತು. ಹಿರಿಯರು ಮಾತುಕತೆ ಮೂಲಕ ಸಂಧಾನ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿದರು.ಇದರಿಂದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರಿಗೆ ಗಾಯಗಳಾಗಿವೆ. ಗಣಪತಿ ಮೂರ್ತಿ ಭಗ್ನಗೊಂಡಿದೆ. ಗಣಪತಿ ವಿಸರ್ಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.ಮೆರವಣಿಗೆಯ ವೇಳೆ ಕಲ್ಲು ತೂರಿ ಬಂದಿದ್ದರಿಂದ, ಜನತೆ ದಿಕ್ಕಾಪಾಲಾಗಿ ಓಡಿ ಹೋದರು. ಈ ಸಂದರ್ಭದಲ್ಲಾದ ಗಡಿಬಿಡಿಯಿಂದ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಲಮಟ್ಟಿ ಮತ್ತು ವಿಜಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಬಿಗಿ  ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮೀಸಲು ಪಡೆಯ ಪೊಲೀಸರು ಗ್ರಾಮದಲ್ಲಿ ಬಿಡಾರ ಹೂಡಿದ್ದಾರೆ.ಶಾಂತಿಸಭೆ

ಬಸವನಬಾಗೇವಾಡಿ
: ಭಾನುವಾರ ರಾತ್ರಿ ತಾಲ್ಲೂಕಿನ ಗೊಳಸಂಗಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಘರ್ಷಣೆ ಮತ್ತು ಕಲ್ಲು ತೂರಾಟ ಘಟನೆ ಹಿನ್ನೆಲೆಯಲ್ಲಿ ಸೋಮವಾರ ಶಾಂತಿ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಮಹಾದೇವಪ್ಪ ಮುರಗಿ ಮಾತನಾಡಿ, ಪ್ರತಿಯೊಬ್ಬರಿಗೂ ಧಾರ್ಮಿಕ ಆಚರಣೆಗಳ ಹಕ್ಕು ಇದೆ.ಶಾಂತಿ ಕದಡುವ ಯತ್ನ ಮಾಡುವುದು ಅಪರಾಧ. ಧಾರ್ಮಿಕ ಮುಖಂಡರು ಯುವಕರನ್ನು ಸರಿದಾರಿಗೆ ತರಲು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.ಗ್ರಾಮದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕಿದರೆ ಎಲ್ಲರಿಗೂ ನೆಮ್ಮದಿ. ಪರಸ್ಪರ ವಿಶ್ವಾಸದಿಂದ ಬದುಕಲು ಸಾಧ್ಯ. ವೈಷಮ್ಯದಿಂದ ಯಾರಿಗೂ ಒಳಿತಾಗುವುದಿಲ್ಲ ಎಂದರು.ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡಿ, ಘರ್ಷಣೆಗೆ ಪ್ರಚೋದನೆ ನೀಡಿದ ಕಿಡಿಗೇಡಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಗ್ರಾಮಸ್ಥರು ಸಹಕರಿಸಿ ಇಂಥಹ ಘಟನೆ ಮರುಕಳಿಸದಂತೆ ಗಮನ ನೀಡಬೇಕು.ಪ್ರಕರಣವನ್ನು ಇಲ್ಲಿಗೆ ಅಂತ್ಯಗೊಳಿಸಿ, ಹೊಸ ವಾತಾವರಣ ನಿರ್ಮಾಣಕ್ಕೆ ನೆರವಾಗಬೇಕು. ಗ್ರಾಮದಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಭದ್ರತೆ ಒದಗಿಸಲು ತಾಲ್ಲೂಕು ಆಡಳಿತ ಸಿದ್ಧವಿದೆ ಎಂದು ಭರವಸೆ ನೀಡಿದರು.ಗ್ರಾಮಸ್ಥರ ಪರವಾಗಿ ಡಾ. ಅಶೋಕ ಪವಾರ, ಅರ್ಜುನ ಪವಾರ, ಅಶೋಕ ಪರಮಗೊಂಡ, ಶೇಖರ ದಳವಾಯಿ, ಮುರುಗೇಶಿ ಹೆಬ್ಬಾಳ ಮಾತನಾಡಿದರು. ಧಾರ್ಮಿಕ ಆಚರಣೆಗಳಿಗೆ ಎಲ್ಲರೂ ಗೌರವ ನೀಡಬೇಕು. ಮುಂದೆ ಇಂಥಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಇದುವರೆಗೆ ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿದ್ದರೂ ಕೂಡ ಕಲ್ಲು ತೂರಾಟ ನಡೆದ ಘಟನೆಯಿಂದ ನೋವಾಗಿದೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಬಂದೇನವಾಜ್ ವಿಜಾಪುರ, ತಜಮುದ್ದೀನ್ ಖಾದ್ರಿ ಜಹಾಗೀರದಾರ, ಕಾಶೀಮಸಾಬ ಸೋಲಾಪುರ ಮಾತನಾಡಿ.ಸಭೆಯಲ್ಲಿ ಮನಗೂಳಿ ಪಿಎಸ್‌ಐ ವೆಂಕಟೇಶ ಮನಗೂಳಿ, ತಾಪಂ ಸದಸ್ಯ ಬಂದೇನವಾಜ್ ಡೋಲಜಿ, ಬಾವಾಸಾಬ ಸುಂಗಾಪುರ, ಸಿದ್ದಪ್ಪ ಕಾಳಗಿ, ಗಜಂಡಪ್ಪ ಮಲಗೊಂಡ, ಸಹದೇವ ಪವಾರ, ಹರೀಬಾ ಜಾಧವ, ಕಾಶಿಂಸಾಬ ಸೊಲಾಪುರ, ಚಂದ್ರಾಮಪ್ಪ ಪರಮಗೊಂಡ, ಅನಿಲ ಪವಾರ, ಸಂಗಪ್ಪ ಕೋಲಾರ, ಬುರನಸಾಬ ಕೀರಶ್ಯಾಳ, ಸಾಹೇಬಲಾಲ್ ಕಮತಗಿ, ಅಮರೇಶಗೌಡ ಪಾಟೀಲ ಭಾಗವಹಿಸಿದ್ದರು.ಅಧಿಕಾರಿಗಳ ಭೇಟಿ: ಗೊಳಸಂಗಿ ಗ್ರಾಮಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಡಿ.ಸಿ. ರಾಜಪ್ಪ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದರು. ಉಭಯ ಕೋಮುಗಳ ಯುವಕರು, ಸಮಾಜದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಅಲ್ಲದೆ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿದರು.ಅಣ್ಣಾ ಹಜಾರೆ ಭೇಟಿಯಾದ ವಿಜಾಪುರ ನಿಯೋಗ

ವಿಜಾಪುರ: ಜಿಲ್ಲೆಯ ಅಣ್ಣಾ ಹಜಾರೆ ವೇದಿಕೆಯವರು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಮಹಾರಾಷ್ಟ್ರ ರಾಜ್ಯದ ರಾಳೇಗಣ ಸಿದ್ಧಿ ಗ್ರಾಮದಲ್ಲಿ ಶನಿವಾರ ಭೇಟಿಯಾಗಿ ಚರ್ಚಿಸಿದರು.ಅಣ್ಣಾ ಹಜಾರೆ ವೇದಿಕೆಯ ವಿಶ್ವನಾಥ ಭಾವಿ, ಪೀಟರ್ ಅಲೆಗ್ಝಾಂಡರ್, ಡಾ. ಕಂಠೀರವ ಕುಲ್ಲೊಳ್ಳಿ, ಶಂಕರಗೌಡ ಪಾಟೀಲ, ಡಿ.ಎಚ್. ಮುಲ್ಲಾ, ಮಲ್ಲಮ್ಮ ಯಾಳವಾರ, ಲಕ್ಷ್ಮಿ ದೇಸಾಯಿ, ಈರಣ್ಣ ಅಳ್ಳಗಿ, ಪ್ರವೀಣ ಹಳಕಟ್ಟಿ, ಎಸ್.ವೈ. ಗಂಗನಳ್ಳಿ, ಶಿವಾನಂದ ಲಕ್ಕುಂಡಿ ಮತ್ತಿತರರು ಈ ಸಂದರ್ಭದಲ್ಲಿದ್ದರು ಎಂದು ತಿಳಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.