ಗುರುವಾರ , ಏಪ್ರಿಲ್ 22, 2021
27 °C

ಗಣ್ಯರ ಪ್ರತಿವೆು ಸ್ಥಾಪನೆಗೆ ಕಡಿವಾಣ

ಪ್ರಜಾವಾಣಿ ವಾರ್ತೆ/ಪಿ.ಎಂ.ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಮೆಗಳಿಗೆ ಸಂಬಂಧಿಸಿದ ವಿವಾದಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗಣ್ಯರು, ಸ್ವಾತಂತ್ರ್ಯ ಯೋಧರು, ಸಂತರು ಮತ್ತಿತರರ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರ ನಿಯಂತ್ರಣ ಹೇರಿದೆ.ಪ್ರತಿಮೆಗಳನ್ನು ಭಗ್ನಗೊಳಿಸುವುದು ಮತ್ತಿತರ ಕಾರಣಗಳಿಂದಾಗಿ ಶಾಂತಿ ಕದಡುವ ಪ್ರಸಂಗಗಳು ಮತ್ತೆ ಮತ್ತೆ ನಡೆಯುತ್ತಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.ಪ್ರತಿಮೆಗಳ ಸ್ಥಾಪನೆಯನ್ನು ನಿರ್ಬಂಧಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೂನ್ 6ರಂದು ಸುತ್ತೋಲೆ ಹೊರಡಿಸಿದೆ.`ಗಣ್ಯ ವ್ಯಕ್ತಿಗಳು ಸಮಾಜಕ್ಕೆ ನೀಡುವ ಕೊಡುಗೆ ಮತ್ತು ಅವರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಅವರ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಅವು ವಿರೂಪಗೊಳ್ಳುತ್ತಿವೆ. ಇದು ಸಾರ್ವಜನಿಕ ವಲಯದ ಶಾಂತಿ ಕದಡುತ್ತಿದೆ~ ಎಂಬ ಅಭಿಪ್ರಾಯ ಸುತ್ತೋಲೆಯಲ್ಲಿ ಇದೆ.`ಪ್ರತಿಮೆಗೆ ಸಂಬಂಧಿಸಿದ ವಿವಾದಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಗ್ರಾಮ ಪಂಚಾಯಿತಿಯಿಂದ ಮಹಾನಗರ ಪಾಲಿಕೆವರೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿಮೆಗಳನ್ನು ವಿರೂಪಗೊಳಿಸುವ ಮತ್ತು ಭಗ್ನಗೊಳಿಸುವ ಘಟನೆಗಳು ಸಮಾಜದಲ್ಲಿ ಶಾಂತಿ ಕದಡಲು ಕಾರಣವಾಗುತ್ತಿವೆ.ಪ್ರತಿಮೆಗಳ ಸ್ಥಾಪನೆ ನಿಯಂತ್ರಿಸಲು ಈವರೆಗೆ ಯಾವುದೇ ನಿಯಮ ಇರಲಿಲ್ಲ. ಇದರ ಲಾಭ ಪಡೆದ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ಬೇಕಾಬಿಟ್ಟಿಯಾಗಿ ಸ್ಥಾಪಿಸಿವೆ. ಕೆಲವರು ಪ್ರತಿಮೆಗಳನ್ನು ಸರ್ಕಾರಿ ಭೂಮಿ ಕಬಳಿಕೆಗೂ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರು~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಪ್ರತಿಮೆಗಳ ಸ್ಥಾಪನೆ ವಿಚಾರ ಅಂತರರಾಜ್ಯ ವಿವಾದವಾಗಿ ಪರಿಣಮಿಸಿದ್ದೂ ಉಂಟು. ತಮಿಳಿನ ಸಂತಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನ ಹಲಸೂರಿನಲ್ಲಿ ಅನಾವರಣ ಮಾಡುವ ವಿಷಯ 18 ವರ್ಷ ಕಗ್ಗಂಟಾಗಿಯೇ ಉಳಿದಿತ್ತು.2009ರಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅವರು, ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರಿಗೆ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡುವುದರೊಂದಿಗೆ ವಿವಾದ ಬಗೆಹರಿಯಿತು. ಇದಕ್ಕೆ ಪ್ರತಿಯಾಗಿ ಚೆನ್ನೈನ ಅಯನಾವರಂನಲ್ಲಿ ಕನ್ನಡದ ಸಂತಕವಿ ಸರ್ವಜ್ಞನ ಪ್ರತಿಮೆಯನ್ನು ಅನಾವರಣ ಮಾಡಲು ತಮಿಳುನಾಡು ಸರ್ಕಾರ ಅವಕಾಶ ನೀಡಿತು.ಸುತ್ತೋಲೆ

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ಸರ್ಕಾರ, ಖಾಸಗಿ ಸ್ವತ್ತುಗಳಲ್ಲಿ ಪ್ರತಿಮೆ ಸ್ಥಾಪಿಸುವುದನ್ನೂ ನಿರ್ಬಂಧಿಸಿದೆ. ಖಾಸಗಿ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪಿಸುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುಮತಿ ಪಡೆಯುವುದು ಇನ್ನು ಮುಂದೆ ಕಡ್ಡಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.