ಬುಧವಾರ, ಏಪ್ರಿಲ್ 14, 2021
24 °C

ಗಮನ ಸೆಳೆದ ಸತ್ಯಭಾಮಾ ಆಕರ್ಷಕ ವಾದ್ಯ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಮನ ಸೆಳೆದ ಸತ್ಯಭಾಮಾ ಆಕರ್ಷಕ ವಾದ್ಯ ವೈಭವ

ಶ್ರೀಕೃಷ್ಣನ ನಾಯಕಿಯರಲ್ಲಿ ಸುಂದರಿ ಹಾಗೂ ನೀಳ ಜಡೆಯ ಸತ್ಯಭಾಮಾಗೆ ವಿಶೇಷ ಸ್ಥಾನಮಾನ. ಆಕೆ ಗರ್ವಿಷ್ಠೆ. ಜೊತೆಗೆ ಅತಿ ಆಡಂಬರದಿಂದ ಸಿಂಗರಿಸಿಕೊಂಡಿರುವ ಆಕ್ರಮಣಕಾರಿ ವ್ಯಕ್ತಿತ್ವದವಳು. ಸಾಹಸಿ. ಮುಂಗೋಪಿಯೂ ಹೌದು. ಇಷ್ಟಾದರೂ ಸಹ ಸತ್ಯಭಾಮಾಳ ವಾದ ಮತ್ತು ತರ್ಕಗಳನ್ನು ಶ್ರೀಕೃಷ್ಣನು ಕೆಲವೊಮ್ಮೆ ಇಷ್ಟಪಡುತ್ತಿದ್ದನು. ಶ್ರೀಮಂತ ಮನೆತನದಿಂದ ಬಂದಿದ್ದರಿಂದ ಆಕೆಯ ಅಹಂಕಾರಕ್ಕೆ ಇತಿ-ಮಿತಿಗಳೇ ಇರಲಿಲ್ಲ. ಶ್ರೀಕೃಷ್ಣನಿಗೆ ಪ್ರೀತಿಪಾತ್ರಳಾಗಿದ್ದ ಅವಳಿಗೆ ತನ್ನ ಪ್ರಭುವಿನ ಬಗೆಗೆ ಒಂದು ರೀತಿಯ ಒಡೆತನದ ಭಾವ.ಕೂಚಿಪುಡಿ ನಾಟ್ಯದ `ಭಾಮಾ ಕಲಾಪಮು~ ಕೃಷ್ಣ ಸತ್ಯಭಾಮಾರ ದೈವಿಕ ಪ್ರಣಯದ ವರ್ಣನೆಯನ್ನು ಹೊಂದಿದೆ. ತನ್ನ ತಪ್ಪು ಮತ್ತು ದುರಹಂಕಾರದಿಂದ ಕೃಷ್ಣನಿಂದ ದೂರವಾದಾಗ ಅದೇ ಸತ್ಯಭಾಮಾಗೆ ವಿರಹ ವೇದನೆ; ಪಶ್ಚಾತ್ತಾಪ. ಸಖಿಯ ಬಳಿ ಮನದಾಳವನ್ನು ಹಂಚಿಕೊಳ್ಳುತ್ತಾಳೆ. ಹಾಗೆಯೇ ಕೃಷ್ಣನ ಒಡನಾಟದ ಮಧುರ ಕ್ಷಣಗಳನ್ನೂ ನೆನೆಸಿಕೊಳ್ಳುತ್ತಾಳೆ. ಅವನಿಲ್ಲದ ಅವಳ ಜೀವನ ಬರಡು. ಅವನಿಗಾಗಿ ಅಲಂಕೃತಳಾಗುತ್ತಿದ್ದುದು, ಕೃಷ್ಣ ನೆರವಾಗುತ್ತಿದ್ದುದು ಜೀವಹಿಂಡುವ ನೆನಪುಗಳು.ಉದ್ದನೆಯ ಜಡೆಯಿಂದ ಹೊಡೆಯುವಂತೆ ಕೃಷ್ಣ ಕೇಳಿಕೊಂಡಿದ್ದು ಮುಂತಾದ ಪ್ರಸಂಗಗಳನ್ನು ಸ್ಮರಿಸುತ್ತಾಳೆ. ಮರುಕ್ಷಣದಲ್ಲೇ  ಕುಪಿತಗೊಂಡು ಕೃಷ್ಣನನ್ನು ಹೀಯಾಳಿಸುತ್ತಾಳೆ. ಆದರೆ ತಕ್ಷಣವೇ ತನ್ನ ತಪ್ಪಿಗೆ ಪರಿತಪಿಸುತ್ತಾಳೆ. ಪತ್ರವೊಂದನ್ನು ನೀಡಿ ಅದನ್ನು ಕೃಷ್ಣನಿಗೆ ತಲುಪಿಸಿ ಅವನು ಕೂಡಲೇ ಹಿಂತಿರುಗದೇ ಹೋದಲ್ಲಿ ಅವಳ ಸಾವು ಖಚಿತವೆಂದು ನಿವೇದಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾಳೆ.ಕೃಷ್ಣ-ಸತ್ಯಭಾಮಾ ಕಥೆಯನ್ನು ದೇವದಾಸಿಯರು ಕುಂತಿ ಮಾಧವ ದೇವಾಲಯದಲ್ಲಿ ಎಂಟು ದಿನಗಳ ಪರ್ಯಂತ ನಿರೂಪಿಸಿ ಅಷ್ಟ ನಾಯಕಿಯರು ಮತ್ತು ನವರಸಗಳನ್ನು ಪ್ರತಿಪಾದಿಸುವುದು ವಾಡಿಕೆ. ಭಾಮಾ ಕಲಾಪದಲ್ಲಿ ವಿಪ್ರಲಂಭ ಶೃಂಗಾರ ಮತ್ತು ಕರುಣಾ ರಸಗಳೇ ಪ್ರಧಾನವಾಗಿರುತ್ತವೆ.ಪ್ರಬುದ್ಧ ಅಭಿನಯ

`ಪದ್ಮಿನಿ ರಾವ್ ಪರಂಪರಾ ಆರ್ಟ್ ಮತ್ತು ಕಲ್ಚರಲ್ ರಿಸೋರ್ಸ್ ಡೆವಲಪ್‌ಮೆಂಟ್ ಸೆಂಟರ್~ನ ಸಭಾಂಗಣದಲ್ಲಿ ಈ ಮೇಲಿನ ಚಿತ್ರಣದ ಸತ್ಯಭಾಮೆ ರಸಿಕರ ಮನ ಗೆದ್ದಳು. ಹಿರಿಯ ನೃತ್ಯ ಗುರು ಹಾಗೂ ವಿವಿಧ ನೃತ್ಯ ಶೈಲಿಗಳಲ್ಲಿ  ಪರಿಣತರಾಗಿರುವ ಉಷಾ ದಾತಾರ್ ಅವರು ಸತ್ಯಭಾಮಾಳನ್ನು ಸೂಕ್ಷ್ಮವೇದಿಯಾಗಿ ಸೂಕ್ಷ್ಮದರ್ಶಿಯಾಗಿ ಪ್ರಕಟಿಸಿದರು. ಸುಮಾರು ಎರಡು ಗಂಟೆಗಳ ಸೀಮಿತ ಅವಧಿಯಲ್ಲಿ ಉಷಾ ಅವರ ಪ್ರಬುದ್ಧ ಅಭಿನಯದಲ್ಲಿ ಲಾಲಿತ್ಯ, ಸುಭಗತೆ ಮತ್ತು ಸಹಜ ಓಟದಲ್ಲಿ ಅವರ ಕಲಾ ಸಿದ್ಧಿಯ ಎಲ್ಲಾ ಹೊಳಹುಗಳೂ ಮಿಂಚಿದವು. ಗುರು ಮುನಿ ವೆಂಕಟರತ್ನಂ ಅವರ ಶಿಷ್ಯೆಯಾದ ಉಷಾ ಅವರು ಲೋಕ ಧರ್ಮಿ ಅಂಶವನ್ನು ಸೂಕ್ತವಾಗಿ ಬಳಸಿಕೊಂಡರು. ಅವರ ಕೇಶಾಲಂಕಾರ ಆಕರ್ಷಿಸಿತು. ಹಾವಿನ ಆಕಾರದಲ್ಲಿದ್ದ ಅವರ ಜಡೆಯು ಮುಕ್ತಿ ಪಥಕ್ಕೆ ಪ್ರತೀಕವಾಗಿತ್ತು.

ವೇಗದ ಪಾದ ಚಲನೆಗಳು ಮತ್ತು ಲಯ ಬಿಗುವಿನ ನೃತ್ತ ತಿಶ್ರ, ಚತುರಶ್ರ, ಖಂಡ ಮುಂತಾದ ನಡೆಗಳಲ್ಲಿ ಮೂಡಿ ಬಂದು ರಂಜಿಸಿತು. ಅವರ ಪುತ್ರ ಕಾರ್ತಿಕ್ ದಾತಾರ್(ನಟುವಾಂಗ), ಶ್ರೀವತ್ಸ (ಸೊಗಸಾದ ಶ್ರೀಮಂತ ಗಾಯನ), ಮಹೇಶ್‌ಸ್ವಾಮಿ (ಕೊಳಲು) ಮತ್ತು ಹರ್ಷಸಾಮಗ (ಮೃದಂಗ) ಅವರ ಪಕ್ಕವಾದ್ಯ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.`ನಾದಶ್ರೀ~ ಪ್ರದಾನ

ಬೆಂಗಳೂರು ಗಾಯನ ಸಮಾಜದ ಆಶ್ರಯದಲ್ಲಿ ಐದು ದಿನಗಳ ವಾದ್ಯ ವೈಭವ-2012 ಸಂಗೀತೋತ್ಸವವು ಶನಿವಾರ ಆರಂಭಗೊಂಡಿತು. ಪಿಟೀಲು ವಾದಕ ಎಂ.ಎಸ್.ಗೋಪಾಲಕೃಷ್ಣನ್ ಅವರನ್ನು ನಾದಶ್ರೀ ಎಂಬ ಬಿರುದು, ಪ್ರಶಸ್ತಿ ಪತ್ರ, ಶಾಲು, ಸ್ಮರಣಿಕೆ ಇತ್ಯಾದಿಗಳೊಂದಿಗೆ ಮೈಸೂರು ಪೇಟಾ ತೊಡಿಸಿ ಗೌರವಿಸಲಾಯಿತು.ವಿಶಿಷ್ಟ ಪಿಟೀಲು ಚತುಷ್ಟಯ

ನಂತರದ ಪಿಟೀಲು ಚತುಷ್ಟಯ ಕಛೇರಿಯಲ್ಲಿ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಹಾಗೂ ಗಣೇಶ್ ಮತ್ತು ಕುಮರೇಶ್ ಸಹೋದರರು ವಾದ್ಯ ವೈಭವವನ್ನು ಧಾರಾಳವಾಗಿ ತೋರಿದರು. ಅವರ ಚಿಂತನೆಯ ಸ್ಪಷ್ಟತೆ, ಪರಿಪೂರ್ಣತೆ, ಸಮಸೂತ್ರತೆ, ಸಮಪ್ರಮಾಣತೆ ಗಮನ ಸೆಳೆದವು. ಇಬ್ಬರು ಅಣ್ಣಂದಿರು (ನಾಗರಾಜ್ ಮತ್ತು ಗಣೇಶ್) ಮತ್ತು ಇಬ್ಬರು ತಮ್ಮಂದಿರು (ಮಂಜುನಾಥ್ ಮತ್ತು ಕುಮರೇಶ್) ಒಟ್ಟಿಗೆ ಕುಳಿತು ತಮ್ಮ ವಿದ್ವತ್ಪ್ರತಿಭೆಗಳನ್ನು ಹರಿಬಿಟ್ಟು ವಿನಿಕೆಯನ್ನು ನಾದಮಯಗೊಳಿಸಿದರು. ಶ್ರೀರಾಗದ ವರ್ಣ ಎರಡು ಕಾಲಗಳಲ್ಲಿ ಉಪಯುಕ್ತವಾದ ಪೀಠಿಕೆಯಾಯಿತು. ಹಂಸಧ್ವನಿ ರಾಗಾಲಾಪನೆ (ಗಣೇಶ್ ಮತ್ತು ನಾಗರಾಜ್)ಯೊಂದಿಗೆ  `ವಾತಾಪಿ ಗಣಪತಿಂ ಭಜೆ~ ಕೃತಿಯ ಸವಿಸ್ತಾರ ವಿಶ್ಲೇಷಣೆ ಮುದ ನೀಡಿತು. ಮುಂದಿನ ಆನಂದಭೈರವಿ ರಾಗಾಲಾಪನೆಯಲ್ಲಿ ಮಂಜುನಾಥ್ ಮತ್ತು ಕುಮರೇಶ್ ಅವರು ವಿಷಯ, ರೀತಿ, ಭಾವ ಮತ್ತು ಭಣತಿಯನ್ನು ಸಮಧಾತುವಾಗೆ ಸೇರಿಸಿ ರಾಗದ ಸಮಗ್ರ ಸೌಂದರ್ಯವನ್ನು ಉಣಬಡಿಸಿದರು. ಶಾಮಾಶಾಸ್ತ್ರಿಗಳ ಮರಿವೇರೆ ಕೃತಿ ಮರೆಯದಂತಹ ಅನುಭವವನ್ನುಂಟು ಮಾಡಿತು.ನಾಸಿಕಾಭೂಷಿಣಿ ರಾಗ, ತಾನ ಮತ್ತು ಪಲ್ಲವಿಯನ್ನು ವಿಶದಪಡಿಸಲಾಯಿತು. ನಾಲ್ಕೂ ಪಿಟೀಲು ವಾದಕರ ಮೂಲಕ ಪರಿಪಕ್ವವಾಗಿದ್ದ ರಾಗ ಭಾವ ಪ್ರಚುರಗೊಂಡಿತು. ಹಿಂದೂಸ್ತಾನಿ ಸಂಗೀತದ ಗತ್‌ನಂತೆ ಪಲ್ಲವಿಯನ್ನು ವ್ಯಾಖ್ಯಾನಿಸಿ ತ್ರಿಕಾಲ, ನಡೆ ಭೇದ ಹಾಗೂ ಸುವಿವೇಚಿತ-ಸುಯೋಜಿತ ಕೋರ್ವೆಯೊಂದಿಗೆ ಸಮಾಪ್ತಗೊಳಿಸಿದರು. ಆಹಿರಿ, ಕಾನಡಾ, ಹಂಸಾನಂದಿ, ಧನ್ಯಾಸಿ ಮುಂತಾದ ರಾಗಗಳಲ್ಲಿ ಕಲ್ಪನಾಸ್ವರಗಳು ಮೆರೆದವು. ತಂಬೂರಿ ಮೀಟಿದವ (ಸಿಂಧುಭೈರವಿ) ಕೇಳುಗರ ಮನಸ್ಸನ್ನು ಆನಂದಕರವಾಗಿ ಮೀಟಿತು. ಅನಂತ ಆರ್. ಕೃಷ್ಣನ್ ಮತ್ತು ವಂಕಾಯಲ ರಾಮಮೂರ್ತಿ (ಮೃದಂಗ) ಅವರ ಪಕ್ಕವಾದ್ಯ ಸಹಕಾರ ಔಚಿತ್ಯಪೂರ್ಣವಾಗಿತ್ತು.ಕಲಾಪೂರ್ಣ ವೀಣಾ ವಾದನ

ವಾದ್ಯ ವೈಭವದ ಎರಡನೆಯ ದಿನ ನುರಿತ ವೀಣಾ ವಾದಕಿ ಡಾ. ಜಯಂತಿ ಕುಮರೇಶ್ ಅವರು ನಾದ ರೂಪಣ ನಾವಿನ್ಯ, ಕಲ್ಪನೆಯ ಅಥವಾ ರಚನೆಯ ಅತಿಶಯತೆಯಿಂದ ಸಂಗೀತ ಪ್ರೇಮಿಗಳ ಮನ ಗೆದ್ದರು. ಕಲ್ಯಾಣಿ ವರ್ಣದ ಆರಂಭ. ಗಜಾನನಯುತಂ (ಚಕ್ರವಾಕ)ದ ಮೂಲಕ ಗಣೇಶ ವಂದನೆ. ತ್ಯಾಗರಾಜರ ಅಪೂರ್ವ ಕಾಂಭೋಜಿ ರಾಗದ ಕೀರ್ತನೆ ಏಲರಾ ಕೃಷ್ಣ ಕೃಷ್ಣ ಜನ್ಮಾಷ್ಟಮಿಯ ಸಂದರ್ಭಕ್ಕೆ ಹೊಂದಿದ್ದು ಹೊಸ ಅನುಭವವನ್ನೀಡಿತು. ಶುದ್ಧ ಸಾರಂಗ್‌ನ ವಿಸ್ತೃತ ನಿರೂಪಣೆ ಗಮನಾರ್ಹವಾಗಿತ್ತು. ಅಠಾಣ (ಏಲ ನೀದಯರಾದು), ಸರಸಾಂಗಿ (ರಾಗ, ತಾನ ಮತ್ತು ಪಲ್ಲವಿ, ತಿಶ್ರನಡೆ ತಿಶ್ರ ಅಟತಾಳ) ಮತ್ತು ಬೇಹಾಗ್(ನಾರಾಯಣತೇ) ರಾಗ ಮತ್ತು ರಚನೆಗಳ ಮಂಡನೆಯಲ್ಲಿ ಜಯಂತಿಯವರ ಕಲಾ ನೈಪುಣ್ಯ ಮತ್ತು ವಿಶಿಷ್ಟ ಮನೋಧರ್ಮಗಳು ಬೆಳಗಿದವು. ಕಾಮಾಕ್ಷಿ ಲೋಲಾಕ್ಷಿ (ಮಧ್ಯಮಾವತಿ) ಮತ್ತು ಬೃಂದಾವನಿ ತಿಲ್ಲಾನಗಳು ಅವರ ಅಪೂರ್ವ ಕಲಾಭಿಜ್ಞತೆಯನ್ನು ಮೈತುಂಬಿಕೊಂಡಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.