ಗಲ್ಲುಶಿಕ್ಷೆ ತೂಗುಗತ್ತಿಗೂ ಜಗ್ಗದ ಭೂಪ!

ಆತನ ಹೆಸರು ಸಾಯಿಕುಮಾರ್. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂಡೇವಾಲ್ ಗ್ರಾಮದವ. ಬ್ಯಾಂಕ್ ಉದ್ಯೋಗಿಯಾಗಿದ್ದ. ಆಸ್ತಿವಂತ. ಸಮೀಪದ ಹಳ್ಳಿಯ ಮಲ್ಲಮ್ಮ ಎಂಬ ಹೆಣ್ಣು ಮಗಳೊಂದಿಗೆ ವಿವಾಹವಾಯಿತು.
ಅನುಮಾನದ ವ್ಯಕ್ತಿತ್ವವುಳ್ಳ ಸಾಯಿಕುಮಾರ್ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ. ಸೆಷನ್ಸ್ ಕೋರ್ಟ್‌ನಿಂದ 1989ರಲ್ಲಿ ಜೀವಾವಧಿ ಶಿಕ್ಷೆಯಾಯಿತು. ಈ ಶಿಕ್ಷೆಯ ರದ್ದತಿಗೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ.
ಪ್ರಕರಣ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ, ಜೈಲಿನಲ್ಲಿ ದತ್ತಣ್ಣ ಎಂಬ ಕೈದಿಯ ಪರಿಚಯವಾಯಿತು ಸಾಯಿಕುಮಾರನಿಗೆ. ಕಷ್ಟಸುಖಗಳ ಹಂಚಿಕೆಯಾದವು. ಆಸ್ತಿ ಪಾಸ್ತಿಯ ವಿವರಗಳನ್ನೂ ಪರಸ್ಪರ ತಿಳಿದುಕೊಂಡರು. ಸಾಯಿಕುಮಾರ್ ಬಳಿ ಇರುವ ಅಪಾರ ಆಸ್ತಿಯ ಬಗ್ಗೆ ತಿಳಿಯುತ್ತಲೇ ದತ್ತಣ್ಣನ ಕಿವಿ ನೆಟ್ಟಗಾಯಿತು. ಆತ ಮಾಡಿರುವ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾಗುತ್ತಿದ್ದಂತೆಯೇ ದತ್ತಣ್ಣ ಅವನ ಆಸ್ತಿಯನ್ನು ಹೇಗೆ ಕಬಳಿಸಬೇಕೆಂದು ಸ್ಕೆಚ್ ಹಾಕಿದ. ಈ ದಿಸೆಯಲ್ಲಿ ಕಾನೂನು ಸಲಹೆಯನ್ನೂ ಪಡೆದುಕೊಂಡ.
ಸಂಪೂರ್ಣ ಆಸ್ತಿ ಲೂಟಿ ಮಾಡಲು ಅವನಿಗೆ ಹೊಳೆದ ಸುಲಭದ ದಾರಿ ಎಂದರೆ ತನ್ನ ಮಗಳನ್ನು ಸಾಯಿಕುಮಾರನಿಗೆ ಕೊಟ್ಟು ಮದುವೆ ಮಾಡಿಸುವುದು. ಇದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬುದನ್ನು ಯೋಚಿಸಿ ಸಾಯಿಕುಮಾರನ ಮುಂದೆ ಮದುವೆಯ ವಿಷಯ ತಿಳಿಸಿದ. ‘ಇನ್ನು ಕೆಲವೇ ದಿನಗಳಲ್ಲಿ ನನ್ನ ಶಿಕ್ಷೆಯ ಅವಧಿ ಮುಗಿಯುತ್ತದೆ. ನಾನು ಬಿಡುಗಡೆಗೊಂಡ ಮೇಲೆ ಮಗಳ ಜೊತೆ ನಿನ್ನ ಮದುವೆ ಮಾಡಿಸುವೆ. ನಂತರ ಹೇಗಾದರೂ ಮಾಡಿ ಜೈಲಿನಿಂದ ಬಿಡುಗಡೆಗೊಳಿಸುವೆ’ ಎಂದ ದತ್ತಣ್ಣ.
ಮದುವೆ, ಬಿಡುಗಡೆ ಎಲ್ಲ ವಿಷಯ ಕೇಳಿ ಸಾಯಿಕುಮಾರ್ ಹಿರಿಹಿರಿ ಹಿಗ್ಗಿದ, ಮದುವೆಗೆ ಒಪ್ಪಿಕೊಂಡ. ಶಿಕ್ಷೆಯ ಅವಧಿ ಮುಗಿದು ದತ್ತಣ್ಣ ಜೈಲಿನಿಂದ ಹೊರಕ್ಕೆ ಬಂದ. ಮದುವೆಗೆಂದು ಸಾಯಿಕುಮಾರ್ ಪೆರೋಲ್ ಮೇಲೆ ಜೈಲಿನಿಂದ ಬಂದ. ದತ್ತಣ್ಣನ ಮಗಳ ಜೊತೆ ಮದುವೆ ನಡೆಯಿತು. ಪೆರೋಲ್ ಮೇಲೆ ಆಗಾಗ್ಗೆ ಬಂದು ಹೋಗುತ್ತಿದ್ದ ಸಾಯಿಕುಮಾರ್. ದಂಪತಿಗೆ ಮಗಳು ಹುಟ್ಟಿದಳು. ವಿಜಯಲಕ್ಷ್ಮಿ ಎಂದು ನಾಮಕರಣ ಮಾಡಲಾಯಿತು.
ಇಷ್ಟೆಲ್ಲಾ ಸುಸೂತ್ರವಾಗಿ ನೆರವೇರಿದ್ದಕ್ಕೆ ಸಾಯಿಕುಮಾರನಿಗೆ ತನ್ನ ಮಾವ ದತ್ತಣ್ಣನ ಮೇಲೆ ಅನುಮಾನ ಬರಲೇ ಇಲ್ಲ. ಮಾವ ಹೇಳಿದ್ದನ್ನೆಲ್ಲ ಕೇಳಿಕೊಂಡು ಬಂದ ಅವನಿಗೆ ತನ್ನ ಸಂಪತ್ತಿಗೆ ಸಂಚಕಾರ ಬರುತ್ತದೆಂದು ಅನಿಸಲೇ ಇಲ್ಲ.
ಇತ್ತ ದತ್ತಣ್ಣ ಮುಂದಿನ ಯೋಜನೆಗಳಿಗೆ ಕಾರ್ಯೋನ್ಮುಖನಾದ. ಅಳಿಯನ ಆಸ್ತಿಗೆ ತನ್ನ ಮಗಳನ್ನು ವಾರಸುದಾರಳನ್ನಾಗಿ ಮಾಡಿದ ತೃಪ್ತಿಯಿಂದ ಬೀಗಿದ. ಸಾಯಿಕುಮಾರ್ ಜೈಲಿನಿಂದ ಬಿಡುಗಡೆಗೊಂಡರೆ ಆಸ್ತಿ ಲಪಟಾಯಿಸಲು ಆಗುವುದಿಲ್ಲವೆಂದು ಮನಗಂಡು ಕೇಸಿನ ಬಗ್ಗೆ ಸಬೂಬುಗಳನ್ನು ಹೇಳುತ್ತಾ ಕಾಲಕಳೆದ. ಇವೆಲ್ಲದರ ಪರಿಣಾಮ ಹೈಕೋರ್ಟ್‌ನಲ್ಲಿ ಸಾಯಿಕುಮಾರ್‌ಗೆ ಜೀವಾವಧಿ ಶಿಕ್ಷೆ ಕಾಯಂ ಆಯಿತು.
ದತ್ತಣ್ಣನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಾಯಿಕುಮಾರನಿಗೆ ತನಗಾದ ಅನ್ಯಾಯದ ಅರಿವಾಯಿತು. ದ್ವೇಷದ ಜ್ವಾಲೆ ಉಕ್ಕಿತು. ಮನದೊಳಗೇ ದತ್ತಣ್ಣನ ಮೇಲೆ ಕತ್ತಿ ಮಸೆಯತೊಡಗಿದ.
1994ರ ಸೆಪ್ಟೆಂಬರ್‌ನಲ್ಲಿ ಪೆರೋಲ್ ಮೇಲೆ ಮನೆಗೆ ಬಂದ ಸಾಯಿಕುಮಾರನಿಗೆ ಅಲ್ಲಿದ್ದ ಕೆಲ ‘ಹಿತಚಿಂತಕರು’ ಪತ್ನಿ ನಾಗಮ್ಮನ ನಡವಳಿಕೆ ಸರಿಯಿಲ್ಲ ಎಂದು ಕಿವಿ ತುಂಬಿದರು. ಮೊದಲೇ ದ್ವೇಷದಿಂದ ಕುದಿಯುತ್ತಿದ್ದ ಸಾಯಿಕುಮಾರನ ಸಿಟ್ಟು ಪತ್ನಿಯತ್ತ ತಿರುಗಿತು.
ದತ್ತಣ್ಣ ಹೊಸಮನೆ ಕಟ್ಟಿಸಿದ್ದ. ಆಗತಾನೇ ಗೃಹಪ್ರವೇಶವಾಗಿತ್ತು. ಹಬ್ಬದ ಊಟಕ್ಕೆ ಮಗಳು, ಅಳಿಯನನ್ನು ಕರೆದ. ತನ್ನ ಪತ್ನಿ, ಒಂದೂವರೆ ವರ್ಷದ ಮಗು ವಿಜಯಲಕ್ಷ್ಮಿ ಹಾಗೂ ಸಹೋದರನ 70 ವರ್ಷ ವಯಸ್ಸಿನ ಅತ್ತೆಯೊಂದಿಗೆ ದತ್ತಣ್ಣನ ಮನೆಗೆ ಹೋದ ಸಾಯಿಕುಮಾರ್. ಹೋಗುವಾಗ ಹರಿತವಾದ ಚಾಕು ತೆಗೆದುಕೊಂಡು ಮತ್ತೊಂದು ರಕ್ತ ಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಿದ್ಧಗೊಂಡ.
ಹಬ್ಬದ ಊಟ ಮುಗಿದು ಪತ್ನಿ ಹಾಗೂ ಮಗು ನಿದ್ರೆಗೆ ಜಾರಿದರು. ಗಾಢ ನಿದ್ರೆಯಲ್ಲಿದ್ದ ಇಬ್ಬರನ್ನೂ ಸಾಯಿಕುಮಾರ್ ತನ್ನಲ್ಲಿದ್ದ ಚಾಕುವಿನಿಂದ ಹಲವು ಬಾರಿ ಇರಿದು ಕೊಂದ. ಮನೆಯಲ್ಲಿ ರಕ್ತದ ಕೋಡಿ ಹರಿಯಿತು. (ಶವ ಪರೀಕ್ಷೆ ಮಾಡಿದಾಗ ಹೆಂಡತಿಯ ಮೇಲೆ 24 ಬಾರಿ ಹಾಗೂ ಮಗುವಿನ ಮೇಲೆ 12 ಬಾರಿ ಇರಿದ ಗಾಯಗಳು ಕಂಡುಬಂದವು). ತನ್ನ ಮೇಲೆ ಪೊಲೀಸರಿಗೆ ಸಂದೇಹ ಬರಬಾರದು ಎಂದು ಅದೇ ಚಾಕುವಿನಿಂದ ಒಂದೆರಡು ಕಡೆ ತಾನೂ ಚುಚ್ಚಿಕೊಂಡ.
ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಪೊಲೀಸರು ಸಾಯಿಕುಮಾರನನ್ನು ಬಂಧಿಸಿದರು. ಆದರೆ ಅಪರಾಧ ಸಾಬೀತಾಗಲು ಕೋರ್ಟ್‌ಗೆ ಸಾಕ್ಷ್ಯಾಧಾರಗಳು ಬೇಕಲ್ಲ? ಹೇಳಿಕೇಳಿ ದತ್ತಣ್ಣ ಹಾಗೂ ಸಾಯಿಕುಮಾರ್ ಆಪ್ತ ಸ್ನೇಹಿತರು. ಪೆರೋಲ್ ಮೇಲೆ ಬಂದಾಗಲೆಲ್ಲ ಪತ್ನಿಯ ಜೊತೆ ಚೆನ್ನಾಗಿಯೇ ವರ್ತಿಸುತ್ತಿದ್ದ ಸಾಯಿಕುಮಾರ್. ಶೀಲ ಶಂಕಿಸಿಯೋ ಅಥವಾ ಇನ್ನಾವುದೋ ಕಾರಣಕ್ಕೆ ದಂಪತಿ ನಡುವೆ ವೈಮನಸ್ಸು ಇತ್ತು ಎನ್ನಲು ಘಟನೆ ನಡೆದ ದಿನ ಇಬ್ಬರ ನಡುವೆ ಜಗಳವೇ ಆಗಿರಲಿಲ್ಲ, ಈ ಬಗ್ಗೆ ಹಿಂದೆಂದೂ ಚಕಮಕಿ ನಡೆದಿರಲಿಲ್ಲ!
ಪ್ರಕರಣ ಭೇದಿಸುವುದು ಸುಲಭವಾಗಿರಲಿಲ್ಲ. ತನ್ನ ಮಾವ ದತ್ತಣ್ಣನ ಗುಂಪಿನವರು ಹೊಡೆದುದರ ಪರಿಣಾಮ ತನ್ನ ಮೈಮೇಲೆ ಗಾಯಗಳಾದವು ಎಂದು ಪೊಲೀಸರ ಎದುರು ನುಡಿದ ಸಾಯಿಕುಮಾರ್. ಸಾಕಷ್ಟು ತನಿಖೆ ಕೈಗೊಂಡಾಗ ಪೊಲೀಸರ ಕೈಗೆ ಸಿಕ್ಕಿದ್ದು ಸಾಯಿಕುಮಾರನ ತಮ್ಮನ ಅತ್ತೆ 70 ವರ್ಷದ ಶರಣವ್ವ. ಘಟನೆ ನಡೆದಾಗ ಶರಣವ್ವ ಮಲಗಿರಬಹುದೆಂಬ ಭ್ರಮೆಯಲ್ಲಿದ್ದ ಸಾಯಿಕುಮಾರ್. ಆದರೆ ಅವನ ಅನಿಸಿಕೆ ಉಲ್ಟಾ ಹೊಡೆದಿತ್ತು. ಕೊಲೆಗೆ ಅವರು ಪ್ರತ್ಯಕ್ಷ ಸಾಕ್ಷಿಯಾಗಿದ್ದರು.
ಶರಣವ್ವನವರ ಸಾಕ್ಷಿಯೊಂದೇ ಪ್ರಕರಣದ ಭವಿಷ್ಯವನ್ನು ನಿರ್ಧರಿಸಬೇಕಿತ್ತು. ಕೊಲೆ ಘಟನೆಯನ್ನು ಯಥಾವತ್ತಾಗಿ ನಿರ್ಭೀತಿಯಿಂದ ನ್ಯಾಯಾಲಯದ ಮುಂದೆ ನುಡಿದರು ಶರಣವ್ವ. ಇವರ ಹೇಳಿಕೆ, ಶವ ಪರೀಕ್ಷೆ ಮಾಡಿದ ವೈದ್ಯರ ದಾಖಲೆ ಹಾಗೂ ತನಿಖಾಧಿಕಾರಿಗಳ ಸಾಕ್ಷ್ಯಗಳಿಂದ ಆರೋಪವನ್ನು ಸಾಬೀತು ಮಾಡುವಲ್ಲಿ ಸರ್ಕಾರದ ಪರ ವಕೀಲರು ಯಶಸ್ವಿಯಾದರು. ಮೊದಲ ಪತ್ನಿಯ ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗಲೇ ಇನ್ನೆರಡು ಕೊಲೆ ಮಾಡಿರುವುದು ಅತ್ಯಂತ ಹೀನಾಯಕರವಾದುದು ಎಂದು ಅಭಿಪ್ರಾಯಪಟ್ಟ ಸೆಷನ್ಸ್ ಕೋರ್ಟ್ 2003ರ ಜನವರಿಯಲ್ಲಿ ಸಾಯಿಕುಮಾರನಿಗೆ ಗಲ್ಲುಶಿಕ್ಷೆ ವಿಧಿಸಿತು.
ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಈ ಹಂತದಲ್ಲಿ ನನಗೆ ಪ್ರಾಸಿಕ್ಯೂಷನ್ ಪರ ವಾದಿಸುವ ಅವಕಾಶ ಸಿಕ್ಕಿತು. ಗಲ್ಲು ಶಿಕ್ಷೆಯನ್ನು ಯಾವ್ಯಾವ ಸಂದರ್ಭಗಳಲ್ಲಿ ಕೊಡಬಹುದೆಂದು ಸುಪ್ರೀಂ ಕೋರ್ಟ್ ನೀಡಿರುವ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದೆ. ಅದರಲ್ಲಿ ಮುಖ್ಯವಾದದ್ದು ‘ಬಚ್ಚನ್ ಸಿಂಗ್’ ಕೇಸ್. ಅಮಾಯಕ ಹೆಣ್ಣು ಮಕ್ಕಳನ್ನು ಕೊಂದರೆ ಶಿಕ್ಷೆ ಹೇಗಿರಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಪೀಠಕ್ಕೆ ಮನವರಿಕೆ ಮಾಡಿದೆ. ಗಲ್ಲುಶಿಕ್ಷೆಯಿಂದ ಸಾಯಿಕುಮಾರನನ್ನು ಪಾರು ಮಾಡಲು ಹೇಗೆಲ್ಲಾ ಸಾಧ್ಯ ಎಂಬ ಬಗ್ಗೆ ಆತನ ಪರ ವಕೀಲ ಜಗದೀಶ ಪಾಟೀಲರೂ ಸಾಕಷ್ಟು ವಾದ ಮಂಡಿಸಿದರು.
ವಾದ, ಪ್ರತಿವಾದ ಆಲಿಸಿದ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳ ಪೈಕಿ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎ.ಎಂ.ಫಾರೂಕ್‌ರವರು ‘ಇದು ವಿರಳದಲ್ಲಿ ಅತಿ ವಿರಳವಾಗಿರುವ ಪ್ರಕರಣವೇನಲ್ಲ. ಆದ್ದರಿಂದ ಗಲ್ಲುಶಿಕ್ಷೆ ಸಲ್ಲದು’ ಎಂದು ಹೇಳಿ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದರು. ಆದರೆ ಕಿರಿಯ ನ್ಯಾಯಮೂರ್ತಿಗಳಾಗಿದ್ದ ಎಸ್.ಆರ್.ಬನ್ನೂರಮಠ ಅವರು, ‘ಇದೊಂದು ಅತ್ಯಂತ ಭಯಾನಕ, ಹೀನ ಕೃತ್ಯ. ಆದ್ದರಿಂದ ಸಾಯಿಕುಮಾರನಿಗೆ ಗಲ್ಲು ಶಿಕ್ಷೆಯೇ ಸರಿಯಾದುದು’ ಎಂದರು.
ಈ ತೀರ್ಪು ಬಂದದ್ದು 2003ರ ಜೂನ್ ತಿಂಗಳಿನಲ್ಲಿ. ಇಬ್ಬರು ನ್ಯಾಯಮೂರ್ತಿಗಳು ಭಿನ್ನ ನಿಲುವು ತಳೆದಿದ್ದರಿಂದ ಪ್ರಕರಣ ಮೂರನೆಯ ನ್ಯಾಯಮೂರ್ತಿಗೆ ವರ್ಗಾವಣೆಗೊಂಡಿತು. ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಪದ್ಮರಾಜ ನಡೆಸಿದರು. ಪತ್ನಿ ಮತ್ತು ಮಗಳು ಮಲಗಿರುವಾಗ ಈ ರೀತಿ ಹೀನಾಯ ಕೃತ್ಯ ನಡೆಸಿರುವುದಕ್ಕೆ ಗಲ್ಲುಶಿಕ್ಷೆಯೇ ಸರಿಯಾದದ್ದು ಎಂದು ನಾನು ಬಲವಾಗಿ ವಾದಿಸಿದೆ. ನನ್ನ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿ, ಗಲ್ಲುಶಿಕ್ಷೆಯನ್ನು ಅದೇ ಸಾಲಿನ ಅಕ್ಟೋಬರ್‌ನಲ್ಲಿ ಕಾಯಂ ಮಾಡಿದರು.
ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. 2005ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣ ಅವರ ನೇತೃತ್ವದ ಪೀಠ ಗಲ್ಲುಶಿಕ್ಷೆಯೇ ಈತನಿಗೆ ಸರಿಯಾದ ಶಿಕ್ಷೆ ಎಂದು ತೀರ್ಪು ನೀಡಿತು. ಇಲ್ಲಿಗೆ ಆರೋಪಿಯ ಮೂರನೆಯ ಹಂತದ ಕಾನೂನಿನ ಹೋರಾಟ ಕೊನೆಗೊಂಡಿತು.
ಆದರೆ ಇಲ್ಲಿಗೆ ಮುಗಿಯಲಿಲ್ಲ. ಸುಪ್ರೀಂ ಕೋರ್ಟ್ ಗಲ್ಲುಶಿಕ್ಷೆ ನೀಡಿದ ಮೇಲೆ, ಶಿಕ್ಷೆಯನ್ನು ಕಡಿಮೆ ಮಾಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವನ್ನು ಕಾನೂನು ಅಪರಾಧಿಗಳಿಗೆ ನೀಡಿದೆ. ಅದೇ ರೀತಿ ಸಾಯಿಕುಮಾರನ ಶಿಕ್ಷೆಯ ತೀರ್ಪು ರಾಷ್ಟ್ರಪತಿಗಳ ಮುಂದೆ ಹೋಯಿತು. ‘ನಾನು ಹಲವಾರು ವರ್ಷಗಳಿಂದ ಸೆರೆವಾಸ ಅನುಭವಿಸಿದ್ದೇನೆ. ಪ್ರಕರಣವು ನ್ಯಾಯಾಲಯದಲ್ಲಿ ವಿಳಂಬವಾಗಿರುವ ಕಾರಣ ಗಲ್ಲು ಶಿಕ್ಷೆ ಸಮಂಜಸ ಅಲ್ಲ’ ಎಂದು ಆತ ಅರ್ಜಿಯಲ್ಲಿ ತಿಳಿಸಿದ್ದ.
ನಿಯಮದ ಅನ್ವಯ ರಾಷ್ಟ್ರಪತಿ ಕರ್ನಾಟಕ ರಾಜ್ಯಕ್ಕೆ ಅರ್ಜಿಯನ್ನು ರವಾನಿಸಿ ರಾಜ್ಯದ ಪ್ರತಿಕ್ರಿಯೆ ಕೇಳಿದರು. (ನಿಯಮ ಏನೆಂದರೆ ರಾಷ್ಟ್ರಪತಿ ಕ್ಷಮಾದಾನ ಕುರಿತ ಅಪರಾಧಿಯ ಅರ್ಜಿಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ವರ್ಗಾಯಿಸುತ್ತಾರೆ. ವಿಷಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರುತ್ತದೆ. ಸಂಪುಟದಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ರಾಷ್ಟ್ರಪತಿ ಕಾಯಂ ಮಾಡುತ್ತಾರೆ). ಸಚಿವ ಸಂಪುಟದಲ್ಲಿ ಗಲ್ಲು ಶಿಕ್ಷೆಯೇ ಆತನಿಗೆ ನೀಡಬಹುದಾದ ಗರಿಷ್ಠ ಶಿಕ್ಷೆ ಎಂದು ತೀರ್ಮಾನ ತೆಗೆದುಕೊಳ್ಳಲಾಯಿತು.
ಆದ್ದರಿಂದ ರಾಷ್ಟ್ರಪತಿ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಿದರು. ಈ ಆದೇಶ ಬಂದದ್ದು 2013ರಲ್ಲಿ. ಕೊನೆಗೂ ಸಾಯಿಕುಮಾರನಿಗೆ ಗಲ್ಲುಶಿಕ್ಷೆಯೇ ಗತಿಯಾಯಿತು.
ರಾಷ್ಟ್ರಪತಿ ಅವರ ಆದೇಶದ ನಂತರ ನೇಣುಗಂಬದ ಕುಣಿಕೆ ಸಾಯಿಕುಮಾರನ ಕುತ್ತಿಗೆಗೆ ಬೀಳಲು ದಿನಾಂಕ ನಿಗದಿಯಾಗುವುದೊಂದೇ ಬಾಕಿ ಇತ್ತು. ಹಾಗೇನಾದರೂ ಆಗಿದ್ದರೆ ಇಷ್ಟೊತ್ತಿಗಾಗಲೇ ಸಾಯಿಕುಮಾರ್ ‘ನೆನಪು’ ಮಾತ್ರ ಆಗಿರುತ್ತಿದ್ದನೇನೋ. ಆದರೆ ಹಾಗೆ ಆಗಲಿಲ್ಲ. ಇನ್ನೂ ಆತ ಜೈಲಿನಲ್ಲಿಯೇ ಇದ್ದಾನೆ, ಜೀವಕ್ಕಾಗಿ ಆತನ ಕಾನೂನು ಹೋರಾಟ ಇನ್ನೂ ಮುಂದುವರಿದಿದೆ, ಆತನ ಅರ್ಜಿ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ!
ಇದಕ್ಕೆ ಕಾರಣ ಇಷ್ಟೇ. ಸಾಯಿಕುಮಾರ್ ಕ್ಷಮಾದಾನ ಕೋರಿ ರಾಷ್ಟ್ರಪತಿ ಅವರಿಗೆ ಅರ್ಜಿ ಸಲ್ಲಿಸಿದ್ದು 2005ರಲ್ಲಿ. ಎಲ್ಲ ಪ್ರಕ್ರಿಯೆ ಮುಗಿಸಿ ರಾಷ್ಟ್ರಪತಿ ಕೊನೆಯದಾಗಿ ಗಲ್ಲುಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು 2013ರಲ್ಲಿ. ಅಂದರೆ ಅಲ್ಲಿಗೆ ಬರೋಬ್ಬರಿ ಎಂಟು ವರ್ಷ ಆಗಿತ್ತು! ಈ ವಿಳಂಬವನ್ನೇ ಬಂಡವಾಳವಾಗಿಸಿಕೊಂಡ ಸಾಯಿಕುಮಾರ್ ಅದೇ ವರ್ಷ ಹೈಕೋರ್ಟ್‌ಗೆ ಪುನಃ ಅರ್ಜಿ ಸಲ್ಲಿಸಿದ.
‘ಈ ಎಂಟು ವರ್ಷಗಳಲ್ಲಿ ನಾನು ವಿಪರೀತ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಯಾವಾಗ ರಾಷ್ಟ್ರಪತಿ ಅವರಿಂದ ಆದೇಶ ಪ್ರಕಟಗೊಳ್ಳುತ್ತದೆಯೋ, ಏನಾಗುವುದೋ ಎಂಬ ಆತಂಕದಲ್ಲಿಯೇ ಜೀವನ ಕಳೆದಿದ್ದೇನೆ. ನಾನು ಅನುಭವಿಸಿರುವ ನೋವು ಅಂಥಿಂಥದ್ದಲ್ಲ. ಈ ನಷ್ಟವನ್ನು ತುಂಬುವುದು ಬಹಳ ಕಷ್ಟವಾಗಿದೆ. ಆದ್ದರಿಂದ ಇದನ್ನು ಗಮನದಲ್ಲಿ ಇಟ್ಟುಕೊಂಡು ನನ್ನನ್ನು ಗಲ್ಲುಶಿಕ್ಷೆಯಿಂದ ಮುಕ್ತಿಗೊಳಿಸಿ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ’ ಎಂದು ಕೋರಿಕೊಂಡಿದ್ದಾನೆ. 2013ರಲ್ಲಿ ಸಲ್ಲಿಸಿರುವ ಈ ಅರ್ಜಿ ಹೈಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ. ಈ ನಡುವೆ ಗಲ್ಲುಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನಾನು 2002ರಲ್ಲಿ ರಾಜ್ಯ ಸರ್ಕಾರದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ನಡೆಸಿದ್ದ ಹತ್ತು ಹಲವು ಕೇಸುಗಳ ಪೈಕಿ ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ಕಾನೂನಿನ ತೊಡಕಿನಿಂದ ಕೂಡಿದ್ದ ಪ್ರಕರಣ.
ಒಬ್ಬ ವ್ಯಕ್ತಿ ಎಷ್ಟು ಕ್ರೂರಿಯಾಗಬಲ್ಲ ಎನ್ನುವುದಕ್ಕೆ ಈ ಪ್ರಕರಣ ಒಂದೆಡೆ ಸಾಕ್ಷಿಯಾದರೆ, ಅಪರಾಧಿ ಕಾನೂನಿನಲ್ಲಿರುವ ನ್ಯೂನತೆಯ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು, ಓಬೀರಾಯನ ಕಾಲದ ಕಾನೂನುಗಳನ್ನು ಇಟ್ಟುಕೊಂಡು ದಶಕಗಳ ಕಾಲ ಪ್ರಕರಣವನ್ನು ಎಳೆಯುತ್ತಾ ಸಾಗಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ. ನ್ಯಾಯದಾನದ ವಿಳಂಬ ಎಂದರೆ ಅದು ನ್ಯಾಯಕ್ಕೆ ಮಾಡುವ ಅನ್ಯಾಯ (Justice delayed is justice denied) ಎನ್ನುವುದಕ್ಕೂ ಇದೊಂದು ಅತ್ಯುತ್ತಮ ಉದಾಹರಣೆ.
(ಆರೋಪಿ ಹೆಸರು ಬದಲಾಯಿಸಲಾಗಿದೆ)
ಲೇಖಕ ರಾಜ್ಯದ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್)
ಮುಂದಿನ ವಾರ: ಸಿಮ್ ಕಾರ್ಡ್‌ನಿಂದ ಗಲ್ಲು ಶಿಕ್ಷೆಯವರೆಗೆ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.