ಗಾರ್ಮೆಂಟ್ ಹುಡುಗಿ ಹೊಲಿದ ಚೆಂದದ ಪೋಷಾಕು

7

ಗಾರ್ಮೆಂಟ್ ಹುಡುಗಿ ಹೊಲಿದ ಚೆಂದದ ಪೋಷಾಕು

Published:
Updated:ಬಟ್ಟೆಯ ಕತ್ತರಿಸುವ ಕತ್ತರಿ

ಇವಳ ಕನಸುಗಳ ಕತ್ತರಿಸುತ್ತದೆ

ಜೋಡಿಸಿ ಹೊಲಿವ ಕೈಗಳು

ಮತ್ತೊಂದು ಕನಸ ಹೊಲಿಯುತ್ತದೆ

ಮೇಲ್ವಿಚಾರಕನ ಸೂಜಿಗಣ್ಣುಅವಳು ಕತ್ತೆತ್ತದಂತೆ ಚುಚ್ಚುತ್ತದೆ

ಅರೆಹೊಟ್ಟೆಯ ನಿಶ್ಯಕ್ತ ಕಾಲು

ಸೆಟೆದುಕೊಳದಂತೆ

ವೇಗವಾಗಿ ತುಳಿಯುತ್ತದೆ

ಒತ್ತರಿಸಿ ಬರುವ ಬಾಯಾರಿಕೆಯೂ

ಜಿಪ್ ಏರಿಸಿದೆಜಲಬಾಧೆ ತೀರಿಸಿಕೊಳಲೂ

ಬೇಕು ಒಪ್ಪಿಗೆಯ ಪತ್ರ

ನೀರೆಲ್ಲ ನಿರಿಗೆಯಾಗಿ

ಪೋಷಾಕು ಸಿಂಗಾರಗೊಳುತ್ತದೆ

ಎಳೆಹಸುಳೆಯ ತಾಯಂದಿರು

ಹಾಲುಣಿಸಲು ಹಂಬಲಿಸಿದರೆನಾಳಿನ ಪಾಳಿಯ ಸೂರಿಲ್ಲ

ಸೋರಿಹೋಗುವ ಎದೆಹಾಲು

ಬೆಳ್ಳನೆ ಲೇಸ್‌ಗಳಾಗಿ

ಕತ್ತಸುತ್ತ ಚಲುವ ಬಲೆಯಾಗಿಸುತ್ತಾಳೆ

ದಿನದ ಟಾರ್ಗೆಟ್ ಮುಗಿಸಿ

ನಿಟ್ಟುಸಿರಿಡಲು ಕಾತರಿಸುತ್ತಾಳೆ

ಮೇಲ್ವಿಚಾರಕನಹದ್ದಿನ ಕಣ್ಣಿಗೆ ತೋಳದ ದಾಹ

ನಿಮಿರಿದ ಮೈ ಮುಳ್ಳುಗಳ

ದುಂಡಗಾಗಿಸಿ ಬಟನ್‌ಗಳಾಗಿ

ಪೋಣಿಸುತ್ತಾಳೆ

ಹೃದಯ ಮೋಂಬತ್ತಿಯಾಗಿ ಉರಿಯುತ್ತಿದೆಕಪ್ಪು ಮಸಿಯ ಮೇಲೆ ರಕ್ತಗೆಂಪಿನ

ಚಿತ್ತಾರದ ಅಂಗಿ ರಫ್ತಿನ ಪೆಟ್ಟಿಗೆಯಲಿ

ಬೆಚ್ಚಗೆ ಗಡಿದಾಟಿದೆ

ಮನೆಗೆ ತೆರಳುವ ಹಾದಿಯಲಿ, ಅತ್ತು

ಕಪ್ಪಾದ ಆಗಸದ ಬಟ್ಟೆ ಹರಿದುಚುಕ್ಕೆಯಂತೆ ಚೂರಾಗಿದೆ

ನಾಳೆ ಮತ್ತೆ ಅವುಗಳನೆಲ್ಲಾ ಹೊಲಿದು

ಒಗೆದು ನೀಲಿ ಹಾಕಿ ಒಣಹಾಕಲು

ಅವಳು ತಯಾರಿ ನಡೆಸುತ್ತಾಳೆ

ಬಟ್ಟೆಯ ಕತ್ತರಿಸುವ ಕತ್ತರಿಅವಳ ಕನಸುಗಳನ್ನು ಕತ್ತರಿಸುತ್ತದೆ

ಜೋಡಿಸಿ ಹೊಲಿವ ಕೈಗಳು

ಮತ್ತೊಂದು ಕನಸನ್ನು ಹೊಲಿಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry