ಭಾನುವಾರ, ಮೇ 16, 2021
26 °C

ಗಿಡಗಳಿಗೆ ಗ್ಲೂಕೋಸ್

ಮಹೇಶ ಕಲಾಲ Updated:

ಅಕ್ಷರ ಗಾತ್ರ : | |

ನಮ್ಮ ಆರೋಗ್ಯ ಹದಗೆಟ್ಟಾಗ ವೈದ್ಯರು ಗ್ಲೂಕೋಸ್ ನೀಡುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಗಿಡಗಳಿಗೆ ಗ್ಲೂಕೋಸ್ ಏರಿಸಿ ಬೆಳೆಸಿದ್ದಾರೆ ಇಲ್ಲೊಬ್ಬ ರೈತ. ಇವರೇ ಯಾದಗಿರಿಯ ಬೆಳಗೇರಾ ಗ್ರಾಮದ ಭೀಮರಾಯ ಎಲ್ಹೇರಿ.ಒಂದೆಡೆ ಬರ, ಇನ್ನೊಂದೆಡೆ ಫಸಲನ್ನು ರಕ್ಷಿಸುವ ಹೊಣೆಗಾರಿಕೆ. ತಾವು ಬೆಳೆದ ಮಾವು, ನಿಂಬೆ, ಕರಿಬೇವು, ಇನ್ನಿತರ ಬೆಳೆಗಳಿಗೆ ನೀರುಣಿಸಲು ಕಷ್ಟವಾಯಿತು ಭೀಮರಾಯರಿಗೆ. ಇರುವ ಅಲ್ಪ ನೀರಿನಲ್ಲಿಯೇ ಬೆಳೆಗಳಿಗೆ ನೀರುಣಿಸಬೇಕಾದ ಪರಿಸ್ಥಿತಿ. ಬೇಸಿಗೆಯ ಪ್ರಥಮಾರ್ಧದಲ್ಲಿ ಪ್ರತಿಯೊಂದು ಗಿಡಕ್ಕೆ ವಿಶೇಷವಾಗಿ ಬಿಂದಿಗೆಯಿಂದ ನೀರುಣಿಸುತ್ತಿದ್ದರು. ತದ ನಂತರ ದಿನ ಕಳೆದಂತೆ ಆ ನೀರು ಕೂಡ ಲಭ್ಯವಾಗದ ಪರಿಸ್ಥಿತಿ ಇವರನ್ನು ಮತ್ತಷ್ಟು ಚಿಂತೆಗೀಡು ಮಾಡಿತು. ಆಗ ಅವರಿಗೆ ಹೊಳೆದದ್ದು ಗ್ಲೂಕೋಸ್ ಮಾದರಿ.ಸಸಿಗಳಿಗೆ ಜೀವ ಹನಿ

ಕೆಲವು ತಿಂಗಳಿನ ಹಿಂದೆ ಗ್ರಾಮದಲ್ಲಿ ಕಾಯಿಲೆ ಇರುವ ವ್ಯಕ್ತಿಯೊಬ್ಬರಿಗೆ ಗ್ಲೂಕೋಸ್ ಏರಿಸಿದ್ದನ್ನು ಕಣ್ಣಾರೆ ಕಂಡಿದ್ದರು ಭೀಮರಾಯರು. ಬಾಟಲಿ ಮುಗಿದ ಮೇಲೆ ಅದನ್ನು ಬಿಸಾಡಿದ್ದನ್ನು ಕಂಡರು. ಆ ಬಾಟಲಿಗಳ ಸದುಪಯೋಗಪಡಿಸಿಕೊಳ್ಳಬಹುದಲ್ಲ ಎಂಬ ಯೋಚನೆ ಅವರಲ್ಲಿ ಮೂಡಿತು. ಯೋಚನೆ ಮೂಡಿದ್ದೇ ತಡ ಅದನ್ನು ಹೊಲದಲ್ಲಿ ತಂದು ಹಾಕಿದರು. `ಇದರಿಂದ ನಮ್ಮಲ್ಲಿರುವ ಎಲ್ಲ ಸಸಿಗಳಿಗೆ ಸದಾ ನೀರು ಸಿಕ್ಕಂತಾಗುತ್ತಿದೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.`ಆಸ್ಪತ್ರೆಯಲ್ಲಿ ಉಪಯೋಗಿಸಿ ಬಿಟ್ಟ ಗ್ಲೂಕೋಸ್‌ನ ಖಾಲಿ ಬಾಟಲಿಗಳು ಮತ್ತು ಡ್ರಿಪ್ ಸೆಟ್‌ಗಳನ್ನು ತಂದು ಅವುಗಳನ್ನು ಶುದ್ಧವಾಗಿ ಬಿಸಿ ನೀರಲ್ಲಿ ತೊಳೆದು ನಂತರ ಒಂದೊಂದು ಬಾಟಲಿಯಲ್ಲಿ ನೀರು ತುಂಬಿಸಿ ಪ್ರತಿ ಸಸಿಗೂ ಬಿಡುತ್ತೇನೆ. ಇದರಿಂದ ಬಾಟಲಿಯಲ್ಲಿನ ಒಂದೊಂದು ಹನಿ ನೀರು ಸಸಿಗಳಿಗೆ ಲಭ್ಯವಾಗುತ್ತದೆ. ಏನಿಲ್ಲವೆಂದರೂ ಕನಿಷ್ಠ 1ಗಂಟೆಯವರೆಗೂ ಬಾಟಲಿ ಖಾಲಿಯಾಗುವುದಿಲ್ಲ. ನಂತರ ಮತ್ತೆ ನೀರು ತುಂಬಿ ಸಸಿಗಳಿಗೆ ಬಿಡುತ್ತೇನೆ. ಇದರಿಂದ ನೀರು ಹೆಚ್ಚು ತರುವ ಗೋಜು ಇಲ್ಲ. ಸಮಯ ಉಳಿತಾಯವೂ ಮಾಡಿದಂತಾಗುತ್ತದೆ' ಎನ್ನುತ್ತಾನೆ ಭೀಮರಾಯ.ಉತ್ತಮ ಪ್ರತಿಕ್ರಿಯೆ

`ಈ ವಿಚಾರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಮೀನಿನಲ್ಲಿ ನೀರಿನ ಕೊರತೆ ಕಾಣತೊಡಗಿದೆ. ಹಲವು ಕಡೆಗಳಲ್ಲಿ ಇನ್ನೂ ಮಳೆಬಿದ್ದಿಲ್ಲ. ಮೈಲಿಗಟ್ಟಲೇ ದೂರ ನಡೆದುಕೊಂಡು ಹೋಗಿ ಬಿಂದಿಗೆ ನೀರು ತರಬೇಕಾದರೆ ಕಣ್ಣಲ್ಲಿ ನೀರು ಬರುತ್ತದೆ. ಅಂಥದ್ದರಲ್ಲಿ ಸಸಿಗಳಿಗೆ ಎಲ್ಲಿಂದ ನೀರು ತರುವುದು? ಅಕ್ಕ ಪಕ್ಕದವರ ಬಾವಿಯಿಂದ ಸ್ವಲ್ಪ ನೀರು ಪಡೆದು ಈ ನೀರು ಸಸಿಗಳಿಗೆ ಹಾಕಿದೆ. ಅದು ಚೆಲ್ಲಾಪಿಲ್ಲಿಯಾಗಿ ಹರಡಿ ಸಸಿ ಒಣಗಿತು. ಇದನ್ನು ಗಮನಿಸಿ ಏನಾದರೊಂದು ಯೋಜನೆ ಮಾಡಬೇಕೆಂದಾಗ ಈ ವಿಚಾರ ಹೊಳೆದಿದೆ' ಎನ್ನುವುದು ಅವರ ನುಡಿ.ಈ ರೀತಿ ರೈತರು ಹೊಸ ಪ್ರಯೋಗಕ್ಕೆ ಕೈ ಹಾಕುವುದರಿಂದ, ರೈತರು ಸ್ವಾವಲಂಬಿಗಳು ಆಗುವುದಲ್ಲದೇ, ಬದುಕು ಕಟ್ಟಿಕೊಳ್ಳಲು ಸರ್ಕಾರ ಸೇರಿದಂತೆ ಇನ್ನಿತರರ ಬಳಿ ಕೈಚಾಚುವುದು ತಪ್ಪುತ್ತದೆ ಎನ್ನುತ್ತಾರೆ ಜಿಲ್ಲಾ ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.