ಬುಧವಾರ, ಜೂನ್ 23, 2021
30 °C

ಗುಂಡ್ಯ ಕಣಿವೆಯಲ್ಲಿ ಆನೆ ಕಾರಿಡಾರ್ ವಿಸ್ತರಣೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ ತಾಲ್ಲೂಕಿನ ಗುಂಡ್ಯ ನದಿ ಕಣಿವೆಯ ಹಳ್ಳಿಗಳ ಜನರು ಈಗ ಜಲವಿದ್ಯುತ್ ಯೋಜನೆಯನ್ನು ಮರೆತು `ಆನೆ ಕಾರಿಡಾರ್~ ಯೋಜನೆ ಕುರಿತು ಮಾತನಾಡಲು ಆರಂಭಿಸಿದ್ದಾರೆ!ಗುಂಡ್ಯ ಕಣಿವೆಯಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಲಭೂತ ಸೌಕರ್ಯಗಳನ್ನೇ ಕಾಣದ ಅವರು ಅರಣ್ಯ ಕಿರುಉತ್ಪನ್ನಗಳು, ಹಡ್ಲು, ಗದ್ದೆ, ಅಂಗೈ ಅಗಲದ ಏಲಕ್ಕಿ ತೋಟಗಳ ಉತ್ಪನ್ನಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.

 

ಇಲ್ಲಿನ ಭೂಹೀನ ಕೃಷಿ ಕಾರ್ಮಿಕರು ಅಲ್ಪ ಸ್ವಲ್ಪ ಸರ್ಕಾರಿ (ಬಗರ್ ಹುಕುಂ) ಭೂಮಿಯಲ್ಲಿ ಒಂದಷ್ಟು ಬೆಳೆದುಕೊಳ್ಳುತ್ತಾರೆ. ಇವರೆಲ್ಲ ಗುಂಡ್ಯ ಯೋಜನೆಯಿಂದ ತಮ್ಮ ಭೂಮಿ, ಮನೆಗಳನ್ನು ಕಳಕೊಂಡು ನಿರಾಶ್ರಿತರಾಗುವ  ಆತಂಕದಲ್ಲಿದ್ದರು. ಗುಂಡ್ಯ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನಿರಾಕರಿಸಿರುವುದರಿಂದ ಈಗ ಅವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.ಈ ಭಾಗದ ದೊಡ್ಡ ಹಿಡುವಳಿದಾರರಿಗೆ ಬೇಸಾಯ ಈಗ ದುಸ್ತರವೆನಿಸಿದೆ. ಈ ರೈತರ ಬಹುತೇಕ ಮಕ್ಕಳು ಈಗ ನಗರವಾಸಿಗಳು. ಈ ಭಾಗದ ಸಾಕಷ್ಟು ಕೃಷಿ ಕಾರ್ಮಿಕರೂ ನಗರಗಳಿಗೆ ವಲಸೆ ಹೋಗಿದ್ದಾರೆ. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೊರತೆ ಇದೆ. ಏಲಕ್ಕಿಗೆ ಉತ್ತಮ ಬೆಲೆ ಸಿಗುತ್ತಿಲ್ಲ.

 

ತೋಟಗಳಿಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಗುಂಡ್ಯ ಯೋಜನೆಯಿಂದ ತಮ್ಮ ಅರಣ್ಯದಂಚಿನ ತಮ್ಮ ಜಮೀನುಗಳಿಗೆ ಮುಳುಗಡೆಯ ಹೆಸರಿನಲ್ಲಿ ದೊಡ್ಡ ಮೊತ್ತದ ಪರಿಹಾರ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿದ್ದ ದೊಡ್ಡ ರೈತರಿಗೆ ನಿರಾಸೆಯಾಗಿದೆ.ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ನದಿ ಕಣಿವೆಯ ಭಾಗವಾಗಿರುವ ಬಿಸ್ಲೆ, ಕಾಗಿನಹರೆ, ಮುಂತಾದ ಮೀಸಲು ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಸುಮಾರು 23,000 ಸಾವಿರ ಎಕರೆ ರೆವಿನ್ಯೂ ಕಾಡು (ಡೀಮ್ಡ ಫಾರೆಸ್ಟ್) ಹಾಗೂ ಅವಕ್ಕೆ ಹೊಂದಿಕೊಂಡ ಸುಮಾರು 6400 ಎಕರೆ ರೈತರ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಂಡು ಈ ಪ್ರದೇಶವನ್ನು ಆನೆ ಕಾರಿಡಾರ್ ಎಂದು ಘೋಷಿಸುವ ಪ್ರಸ್ತಾವವನ್ನು ಜನರ ಮುಂದಿಟ್ಟಿದೆ.`ಆನೆ ಕಾರಿಡಾರ್ ಯೋಜನೆ ಅರಣ್ಯ ಇಲಾಖೆಯ ಪ್ರಸ್ತಾವ ಅಲ್ಲ. ಕಾಡಾನೆಗಳ ಕಾಟ ತಾಳಲಾರದೇ ನಾವೇ ಸ್ವಇಚ್ಛೆಯಿಂದ ನಮ್ಮ ಭೂಮಿಯನ್ನು ಕೊಳ್ಳುವಂತೆ ಅರಣ್ಯ ಇಲಾಖೆಯನ್ನು ಕೋರಿದ್ದೇವೆ~ ಎಂದು ಒಂದು ವರ್ಗದ ರೈತರು ಹೇಳುತ್ತಿದ್ದಾರೆ. ಗುಂಡ್ಯ ಯೋಜನೆಗೆ ಸ್ಥಳೀಯರಲ್ಲಿ ಪರ,ವಿರೋಧ ಇದ್ದಂತೆ ಆನೆ ಕಾರಿಡಾರ್ ಯೋಜನೆ ಬಗೆಗೂ ಭಿನ್ನಾಭಿಪ್ರಾಯಗಳಿವೆ. ಕಾಡಿನ ಅಂಚಿನಲ್ಲಿರುವ ಊರುಗಳಲ್ಲಿ ಒಂದು ದಶಕದಿಂದೀಚೆಗೆ ಆನೆಗಳು ಮತ್ತು ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.ಆನೆಗಳು ಹೊಲ ಗದ್ದೆ, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಆನೆ ಕಾರಿಡಾರ್ ಯೋಜನೆ ಜಾರಿಯಾದರೆ ವನ್ಯಜೀವಿಗಳ ಸಂರಕ್ಷಣೆ ಉದ್ದೆೀಶ ಈಡೇರುತ್ತದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಸರ್ಕಾರ ಮುಂದುವರೆಯುವುದು ಸೂಕ್ತ. ಉದ್ದೇಶಿತ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿರುವ ಗುಂಡ್ಯ ಕಣಿವೆಯಲ್ಲಿ ರೈಲು ಮಾರ್ಗ, ಗ್ಯಾಸ್ ಪೈಪ್ ಲೈನ್‌ಗಳಿಗಾಗಿ ಕಾಡನ್ನು ಕಡಿದ ನಂತರ ಆನೆಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.ಅಲ್ಲದೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನಗಳ ಸಂಚಾರ ಹಲವು ಪಟ್ಟು ಹೆಚ್ಚಿದೆ. ಈ ಎಲ್ಲಾ ಕಾರಣಗಳಿಂದಲೂ ಆನೆಗಳ ಸಂಚಾರಕ್ಕೆ ಅಡ್ಡಿಯಾಗಿದೆ.

 

ಈ ಭಾಗದಲ್ಲಿ ಕೆಲ ಕಿರು ಜಲವಿದ್ಯುತ್ ಯೋಜನೆಗಳು ಕಾರ್ಯರಂಭ ಮಾಡಿದ ನಂತರ ಆನೆಗಳು ಕಾಡಿನಿಂದ ಹೊರ ಬರುವುದು ಹೆಚ್ಚಾಗಿದೆ. ಗುಂಡ್ಯ ಯೋಜನೆ ನೆಪದಲ್ಲಿ ಖಾಸಗಿ ಜಮೀನು ಮತ್ತು ದಟ್ಟ ಕಾಡುಗಳಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಹೀಗಾಗಿ ಆನೆಗಳಿಗೆ ಇಲ್ಲಿ ಆಹಾರದ ಕೊರತೆ ಹೆಚ್ಚಾಗಿದೆ.ಮೀಸಲು ಅರಣ್ಯಗಳಂಚಿನ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳ ರೆವಿನ್ಯೂ ಅರಣ್ಯ ಹಾಗೂ ಖಾಸಗಿ ಭೂಮಿಗಳನ್ನು ಸೇರಿಸಿಕೊಂಡು ಆನೆ ಕಾರಿಡಾರ್ ವಿಸ್ತರಣೆ ಮಾಡುವ ಪ್ರಸ್ತಾವ ಇಲಾಖೆಯದು. ಈ ವಿಸ್ತರಣೆಯ ನಂತರವೂ ಆನೆಗಳಿಗೆ ಈಗಿರುವ ದೊಡ್ಡ ಅಡಚಣೆಗಳು ಇದ್ದೇ ಇರುತ್ತವೆ ಮತ್ತು ವಿಸ್ತರಿತ ಪ್ರದೇಶದಿಂದಾಚೆಗೆ ಆನೆಗಳು ಬರುವುದಿಲ್ಲ ಎಂಬ ಖಾತ್ರಿ ಇಲ್ಲ.ಆನೆ ಕಾರಿಡಾರ್ ಯೋಜನೆಗೆ  ರೈತರು ಭೂಮಿ ಬಿಟ್ಟುಕೊಡುವುದು ಕಡ್ಡಾಯವಲ್ಲ. ರೈತರಿಗೆ ತಮ್ಮ ಭೂಮಿ ಉಳಿಸಿಕೊಳ್ಳುವ ಅವಕಾಶ ಇದೆ. ಹೊಂಗಡಹಳ್ಳ, ಅತ್ತೀಹಳ್ಳಿ ಮುಂತಾದ ಸುಮಾರು 12 ಗ್ರಾಮಗಳ ಕೆಲ ರೈತರು ಇಲಾಖೆಗೆ 1750 ರಿಂದ 2000 ಎಕರೆ ಭೂಮಿ ನೀಡಲು ಸಿದ್ಧರಿದ್ದಾರೆ.ಜತೆಗೆ ಇದರ ಎರಡು ಪಟ್ಟು ಒತ್ತುವರಿ ಭೂಮಿ ಇಲಾಖೆಗೆ ಸೇರ್ಪಡೆಯಾಗಲಿದೆ. ಅದಕ್ಕೆ ರೈತರಿಗೆ ಪರಿಹಾರ ನೀಡುವ ಅವಶ್ಯಕತೆ ಇಲ್ಲ. ಉಳಿದವರು ತಮ್ಮ  ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ.

 

ಇದರಿಂದಾಗಿ ಇಲಾಖೆ ಗುರುತಿಸಿರುವ ಜಮೀನಿನ ವ್ಯಾಪ್ತಿಯಲ್ಲಿ ಸುಮಾರು 4000 ಎಕರೆಗೂ ಹೆಚ್ಚು ಭೂಮಿ ರೈತರ ವಶದಲ್ಲೇ ಉಳಿಯುತ್ತದೆ. ಅವರೂ ಸಹ ಒತ್ತುವರಿ ಭೂಮಿ ಹೊಂದಿದ್ದಾರೆ.

 

ಅಷ್ಟೂ ಜಮೀನು ವಿಸ್ತರಿತ ಆನೆ ಕಾರಿಡಾರ್ ಒಳಗೇ ಸಾಗುವಳಿ ಜಮೀನಾಗಿ ಉಳಿಯುತ್ತದೆ ಎಂಬುದು ಗಮನಿಸಬೇಕಾದ ಅಂಶ. ಹೀಗಿರುವಾಗ ಆನೆ ತಾಣ ವಿಸ್ತರಿಸಿದರೆ ಏನು ಪ್ರಯೋಜನ? ಯೋಜನೆಯನ್ನು ಕಡ್ಡಾಯ ಮಾಡಿ ಅಲ್ಲಿನ ರೈತರನ್ನೆಲ್ಲ ಸ್ಥಳಾಂತರಿಸಲು ಸಾಧ್ಯವೇ? ಈ ಭಾಗದ ಅನೇಕ ರೈತರಿಗೆ  2-3 ಕಡೆ ಜಮೀನಿದೆ. ಅರಣ್ಯಕ್ಕೆ ಅಂಟಿಕೊಂಡ ಭೂಮಿಯನ್ನು ಆನೆ ಕಾರಿಡಾರ್‌ಗೆ  ಕೊಡುತ್ತಾರೆಯೇ ಹೊರತು ಮಿಕ್ಕ ಭೂಮಿ ಕೊಡುವುದಿಲ್ಲ. ಇಂಥ ರೈತರು ಅಲ್ಲಿಯೇ ಉಳಿಯುತ್ತಾರೆ. ಹೀಗಾಗಿ ಆನೆ ತಾಣ ವಿಸ್ತರಿಸಿದರೂ ನಡುವೆ ಜನವಸತಿ ಇರುತ್ತದಲ್ಲವೇ?ಕಂದಾಯ ಇಲಾಖೆಯಿಂದ ಸುಮಾರು 23,000 ಎಕರೆ ಭೂಮಿ ಅರಣ್ಯ ಇಲಾಖೆಗೆ ಸೇರ್ಪಡೆಯಾಗುವುದು ಕಾಗದದ ಮೇಲಿನ ಹಸ್ತಾಂತರವಷ್ಟೇ. ಈ ಪ್ರದೇಶದ ಜೀವ ವೈವಿಧ್ಯ ಪೂರಕ ಅರಣ್ಯಾಭಿವೃದ್ಧಿ ಯೋಜನೆಯ ರೂಪುರೇಷೆಗಳೇನು? ಈ ನಿಟ್ಟಿನಲ್ಲಿ ಇಲಾಖೆ ಸ್ಪಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆಯೇ ಎಂಬ ವಿವರಗಳು ಸಾರ್ವಜನಿಕರಿಗೆ ಲಭ್ಯವಿಲ್ಲ. ಆನೆ ಕಾರಿಡಾರ್ ವಿಸ್ತರಣೆಯ ಕುರಿತಾಗಿ ತಜ್ಞರ ಸಮಿತಿಯೊಂದು ವರದಿ ಸಿದ್ಧಪಡಿಸುತ್ತಿದೆ. ಅದು ಮೇಲಿನ ಅಂಶಗಳನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸುತ್ತದೆ ಆಶಿಸಬಹುದೇ?ಗುಂಡ್ಯ ಕಣಿವೆಯಲ್ಲಿ ಸ್ಥಳೀಯರಿಂದಾಗಿ ಇನ್ನೂ ಒಂದಷ್ಟು ಕಾಡು ಉಳಿದುಕೊಂಡಿದೆ. ಈ ಪ್ರದೇಶದಲ್ಲಿ  ಅಭಿವೃದ್ಧಿ ಲಾಬಿ, ಟಿಂಬರ್ ಲಾಬಿಗಳಿಂದ ಸಾಕಷ್ಟು ಕಾಡು ನಾಶವಾಗಿದೆ. ಜನರ ಅನುಭವದಲ್ಲಿರುವ ಭೂಮಿ ಒಮ್ಮೆ ಸರ್ಕಾರಕ್ಕೆ ಸೇರಿದರೆ ನಾಳೆ ಅದು ತನಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರೈತರು ಭೂಮಿ ಕೊಡುವ ಮೊದಲು ಹತ್ತು ಸಲ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಪರಿಸರ ಜನಸಂಸ್ಕೃತಿ ದೃಷ್ಟಿಯಿಂದ ಒಳಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.