ಶನಿವಾರ, ಜುಲೈ 31, 2021
25 °C

ಗುಜರಾತ್: ಒಂದು ಹೆಜ್ಜೆ ಮುಂದೆ!

ಬಾಲಕೃಷ್ಣ ಪುತ್ತಿಗೆ Updated:

ಅಕ್ಷರ ಗಾತ್ರ : | |

ಗುಜರಾತ್: ಒಂದು ಹೆಜ್ಜೆ ಮುಂದೆ!

ಅಹಮದಾಬಾದ್: ಸಾಬರ್‌ಮತಿ ನದಿ ದಡದ ಈ ವಾಣಿಜ್ಯ ನಗರಿ, ರಾಜಧಾನಿ ಗಾಂಧಿನಗರ ಹಾಗೂ ಇಡೀ ಗುಜರಾತ್ ರಾಜ್ಯವು ಭಾನುವಾರ ವಿಜೃಂಭಿಸಿತು. ಗುಜರಾತ್ ರಾಜ್ಯ ಸಂಸ್ಥಾಪನೆಯ ಸುವರ್ಣ ವರ್ಷಾಚರಣೆಯ ಸಮಾರೋಪದ ಜೊತೆಗೆ ಇಡೀ ರಾಜ್ಯ ಒಂದು ಹೆಜ್ಜೆ ಮುಂದಡಿ ಇಟ್ಟಿತು!ಸ್ವರ್ಣಿಮ್ ಗುಜರಾತ್‌ನ (ಸುವರ್ಣ ಗುಜರಾತ್) ಸಮಾರೋಪದ ಘೋಷಣೆಯೂ ಇದೇ. ‘ಆಗೆ ಕದಮ್ ಗುಜರಾತ್’. ವರ್ಷವಿಡೀ ನಡೆದ ಹತ್ತು ಹಲವು ಅಭಿವೃದ್ಧಿ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳ ಅಂತಿಮ ಮೇಳ ಇದು. ಹೀಗಾಗಿಯೇ ಇಲ್ಲಿ ಸಂಭ್ರಮ, ಸಡಗರ ಉತ್ತುಂಗಕ್ಕೇರಿದೆ.ಹಬ್ಬದ ವಾತಾವರಣ ನೆಲೆಸಿದೆ. ಜಯ ಜಯ ಗುಜರಾತ್ ಘೋಷಣೆ ಮುಗಿಲು ಮುಟ್ಟಿದೆ. 43 ಡಿಗ್ರಿ ಸೆ. ತಲುಪಿದ ಬೇಗೆಯಲ್ಲೂ ಜಗ್ಗದ ಜನಸಮೂಹ. ತಗ್ಗದ ಉತ್ಸಾಹ. ಪೊಲೀಸ್ ಪಡೆಗಳ ಬಿಗಿ ಪಹರೆಯ ನಡುವೆಯೂ ಉಕ್ಕಿ ಹರಿದ ಜನಸಾಗರ.ಈ ಎಲ್ಲ ಪ್ರದರ್ಶನದ ಹಿಂದಿನ ಶಕ್ತಿ ನರೇಂದ್ರ ಮೋದಿ. ಹೊರ ನೋಟಕ್ಕೆ ಯಾವುದೇ ಅಬ್ಬರ-ಆಡಂಬರ ಇಲ್ಲವಾದರೂ ಮೋದಿ ಅವರು ತಮ್ಮೆಲ್ಲ ಯೋಜನೆಗಳನ್ನು ವ್ಯವಸ್ಥಿತವಾಗಿಯೇ ನಡೆಸುತ್ತ ಬಂದಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನ ಇಲ್ಲೂ ಎದ್ದು ಕಾಣುತ್ತಿದೆ.ಹೊರ ರಾಜ್ಯಗಳ ಪ್ರಮುಖ  ಗಳನ್ನೂ ಅವರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ರಾಜ್ಯದ ಐದೂವರೆ ಕೋಟಿ ಜನತೆಯ ಮನ ಗೆಲ್ಲುವ ರಾಜಕೀಯ ತಂತ್ರಗಾರಿಕೆಗಳಲ್ಲೂ ಅವರು ಒಂದು ಹೆಜ್ಜೆ ಮುಂದಡಿ ಇಟ್ಟಿರುವುದು ವೇದ್ಯವಾಗುತ್ತದೆ.ಮೋದಿ ಅವರು ಈ ರೀತಿ ವಿಜೃಂಭಿಸಲು ಕಾರಣಗಳೂ ಹಲವು. ಮೂರನೇ ಅವಧಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಅವರು ಅಭಿವೃದ್ಧಿ ಪಥದಲ್ಲಿ ಗುಜರಾತ್ ಅನ್ನು ಗಮನಾರ್ಹವಾದ ರೀತಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.ಜನಸಾಮಾನ್ಯರಿಂದ ಹಿಡಿದು ಇಲ್ಲಿನ ವಾಣಿಜ್ಯ ಉದ್ಯಮಿಗಳು, ಆಡಳಿತಾಧಿಕಾರಿಗಳು, ಪೊಲೀಸರು ಕೂಡ ಈ ಮಾತನ್ನು ಒಪ್ಪುತ್ತಾರೆ. ಅವರ ‘ಇನ್ನೊಂದು ಮುಖ’ದ ಬಗ್ಗೆ ಇಲ್ಲಿನ ಜನರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಕೇಶೂಭಾಯಿ ಪಟೇಲ್ ಆಡಳಿತ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ಗುಜರಾತ್ ಹತ್ತು ವರ್ಷ ಹಿಂದಕ್ಕೆ ಹೋಗಿತ್ತು.ಅದಕ್ಕೂ ಹಿಂದೆ ಚಿಮನ್ ಭಾಯಿ ಪಟೇಲ್ ಕಾಲದಲ್ಲಿ ಸ್ವಲ್ಪ ಅಭಿವೃದ್ಧಿ ಕಂಡಿತ್ತು. ಉಳಿದಂತೆ ಇತರ ಮುಖ್ಯಮಂತ್ರಿಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗುಜರಾತ್ ಏನೇನೂ ಅಭಿವೃದ್ಧಿ ಕಂಡಿಲ್ಲ ಎಂಬುದು ಇಲ್ಲಿನ ಜನರ ಅಭಿಮತ. ಕುಡಿಯುವ ನೀರು, ರಸ್ತೆ, ವಿದ್ಯುತ್ ಕ್ಷೇತ್ರಗಳಲ್ಲಿ ಈಚೆಗೆ ಗುಜರಾತ್ ಗಮನಾರ್ಹವಾದ ಪ್ರಗತಿ ಕಂಡಿದೆ.

 

ಗುಜರಾತಿನ ಕೃಷಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನರ್ಮದಾ ಕಾಲುವೆ ಯೋಜನೆಯನ್ನು ಸೌರಾಷ್ಟ್ರ ಮತ್ತು ಕಚ್ ವಲಯಗಳಿಗೆ ವಿಸ್ತರಿಸಿರುವುದು ಭಾರಿ ಪರಿಣಾಮ ಬೀರಿದೆ.

‘ಹಿಂದೆಲ್ಲ ಈ ರಾಜ್ಯದ ಗಡಿ ಭಾಗವಾದ ಕಚ್‌ಗೆ ಹೋಗಬೇಕಾದರೆ ನೀರಿನ ಬಾಟಲಿಗಳನ್ನೂ ಜೊತೆಯಲ್ಲೇ ಒಯ್ಯಬೇಕಾಗಿತ್ತು. ಆದರೆ ಈಗ ಅಲ್ಲಿನ ಜನರೇ ನಮಗೆ ನೀರಿನ ಬಾಟಲಿ ನೀಡುತ್ತಾರೆ’ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಮಹೇಶ್‌ಚಂದ್.ಲಂಚ, ಭ್ರಷ್ಟಾಚಾರದ ಬಗ್ಗೆ ಕೇಳಿದರೆ ‘ಹಣ ಯಾರು ಬಿಡುತ್ತಾರೆ ಹೇಳಿ? ರಾಜ-ಮಹಾರಾಜರೂ ಬಿಟ್ಟಿಲ್ಲ. ಆದರೆ ಮೋದಿ ಹಾಗಲ್ಲ. ಹಣ ಮಾಡುತ್ತಿರಬಹುದು. ಆದರೆ ಅಭಿವೃದ್ಧಿಯೂ ಕ್ಷಿಪ್ರ ಗತಿಯಲ್ಲಿ ಆಗುತ್ತಿದೆ’ ಎನ್ನುತ್ತಾರೆ ಇಲ್ಲಿನ ವಾರ್ತಾ ಇಲಾಖೆ ಸಿಬ್ಬಂದಿ ಕಮಲೇಶ್. ರಸ್ತೆಗಳ ಅಭಿವೃದ್ಧಿ ಬಗ್ಗೆ ಮುಕ್ತ ಕಂಠದಿಂದ ಅವರು ಮೋದಿಯನ್ನು ಪ್ರಶಂಸಿದರು. ಇದು ಒಬ್ಬಿಬ್ಬರ ಧ್ವನಿಯಲ್ಲ. ಗುಜರಾತ್ ಜನತೆಯ ನಾಡಿಮಿಡಿತವೂ ಹೌದು.ಸ್ವರ್ಣಿಮ್ ಗುಜರಾತ್ ಹೆಸರಲ್ಲೂ ಮೋದಿ ಅವರು ಹಲವು ಬಗೆಯ ಮೋಡಿ ಮಾಡಿದ್ದಾರೆ. ವರ್ಷವಿಡೀ ರಾಜ್ಯದ ನಾನಾ ಭಾಗಗಳಲ್ಲಿ ಒಂದಲ್ಲ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಸ್ವ ರ್ಣಿಮ್ ಗುಜರಾತ್ ಸಮಾರೋಪದ ಅಂಗವಾಗಿ ಮೂರು ದಿನಗಳಿಂದ ಇಲ್ಲಿ ಎಡೆಬಿಡದೆ ಕಾರ್ಯಕ್ರಮಗಳು ನಡೆಯುತ್ತಿವೆ.ಭಾನುವಾರ ರಾತ್ರಿ ಇಲ್ಲಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ವೈಭವ ಭವ್ಯ ಲೋಕವನ್ನೇ ತೆರೆದಿಟ್ಟಿತು. ಸಾವಿರಾರು ಕಲಾವಿದರು, ಬಾಲಕಲಾವಿದರು ಸಾಮೂಹಿಕ ಹಾಡು, ನೃತ್ಯ ಸಾದರಪಡಿಸಿದರು. ಅದ್ಭುತ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದರು.ಸುವರ್ಣ ಗುಜರಾತ್ ಯೋಜನೆಯ ಹೆಸರಲ್ಲಿ ಇಲ್ಲಿನ ವಿದ್ಯಾರ್ಥಿ, ಯುವ ಸಮುದಾಯವನ್ನೂ ಮೋದಿ ಅವರು ಸೇರಿಸಿಕೊಂಡಿದ್ದಾರೆ. ರಾಜ್ಯದ ಪ್ರಗತಿಗಾಗಿ ಹಾಗೂ ಸಾಂಸ್ಕೃತಿಕ ವೈಭವ ಸಾರುವ ಸಲುವಾಗಿ ಪ್ರವಾಸಿಗರನ್ನೂ ಆಕರ್ಷಿಸಲು ಹತ್ತು ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದಾರೆ.ಶನಿವಾರ ಸಂಜೆ ಗಾಂಧಿನಗರದಲ್ಲಿ ನಡೆದ ಬೃಹತ್ ಪಥಸಂಚಲನ ಹಾಗೂ ನಂತರ ನಡೆದ ಕಾರ್ಯಕ್ರಮದಲ್ಲಿ  ಮೋದಿ ಅವರು ನೀಡಿದ ಕರೆಯೇ ಇದಕ್ಕೆ ಸಾಕ್ಷಿ. ಪ್ರತಿಯೊಂದು ಗುಜರಾತಿ ಕುಟುಂಬವು ಕನಿಷ್ಠ ಐವರು ಗುಜರಾತೇತರರನ್ನು ಇಲ್ಲಿಗೆ ಪ್ರವಾಸಕ್ಕೆ ಕರೆತರುವಂತೆ ಅವರು ಕರೆ ನೀಡಿದರು.ಇದರಿಂದ ಪ್ರವಾಸೋದ್ಯಮ ಬಹಳಷ್ಟು ಪ್ರಗತಿ ಆಗುತ್ತದೆ ಎಂದರು. ಅದೇ ರೀತಿ ವಿಶ್ವದಾದ್ಯಂತ ಇರುವ ಗುಜರಾತಿ ಸಮುದಾಯಗಳನ್ನು ಸೆಳೆಯಲು ಇದೇ 3 ರಂದು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವುದಾಗಿ ಪ್ರಕಟಿಸಿದರು.ಕೈಗಾರಿಕಾ ರಂಗದಲ್ಲಿ 8ನೇ ಸ್ಥಾನದಲ್ಲಿದ್ದ ಗುಜರಾತ್ ಈಗ ನಂಬರ್ ಒನ್ ಸ್ಥಾನಕ್ಕೆ ಜಿಗಿದಿದೆ. ಕೃಷಿ ಉತ್ಪಾದನೆ 10,000 ಕೋಟಿ ರೂಪಾಯಿಗಳಿಂದ 50,000 ಕೋಟಿಗಳಿಗೆ ಏರಿದೆ. ಅಪರಾಧಗಳ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಗಣನೀಯವಾಗಿ ಇಳಿದಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.

ಹೀಗೆ ಅಭಿವೃದ್ಧಿ ಪಥದಲ್ಲಿ ಗುಜರಾತ್ ದಾಪುಗಾಲು ಇಡುತ್ತಿರುವ ಪರಿಯನ್ನು ಈ ಸ್ವರ್ಣಿಮ್ ಗುಜರಾತ್ ಪ್ರಸ್ತುತಪಡಿಸುತ್ತಿದೆ.ಜಯಜಯ ಗುಜರಾತ್...

ವಿಶ್ವಕ್ಕೆಲ್ಲ ಭಾನುವಾರ ಮೇ ಡೇ ಅಥವಾ ಕಾರ್ಮಿಕರ ದಿನಾಚರಣೆ. ಆದರೆ ಇಲ್ಲಿನ ಜನಕ್ಕೆ ಇದು ಗುಜರಾತಿ ದಿವಸ್. ರಾಜ್ಯೋತ್ಸವದ ಸಂಭ್ರಮ.ಮುಂಬೈ ರಾಜ್ಯದಿಂದ ಗುಜರಾತ್ ಪ್ರತ್ಯೇಕಗೊಂಡು ಗುಜರಾತ್ ಉದಯಿಸಿದ್ದು 1960 ಮೇ ಒಂದರಂದು. ಹೀಗಾಗಿ ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಇದು ಸಂಭ್ರಮದ ದಿನ. ಆದರೆ ಮಹಾರಾಷ್ಟ್ರ ಈ ಸುವರ್ಣ ಸಂಭ್ರಮವನ್ನೇ ಮರೆತಂತಿದೆ ಎಂಬುದು ನರೇಂದ್ರ ಮೋದಿ ಅವರ ಪ್ರತಿಕ್ರಿಯೆ.

ಬಿಡುವಿಲ್ಲದ ಕಾರ್ಯಕ್ರಮ

ಸ್ವರ್ಣಿಮ್ ಗುಜರಾತ್ ಅಂಗವಾಗಿ ಭಾನುವಾರ ಇಲ್ಲಿ ಮತ್ತು ರಾಜಧಾನಿ ಗಾಂಧಿನಗರದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳ ಸರದಿ. ಇಲ್ಲಿನ ಪ್ರಮುಖ ರಸ್ತೆಗಳಲ್ಲೆಲ್ಲ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಾಹನ ಭದ್ರತಾ ಪಡೆಗಳ ಬೆಂಗಾವಲಿನೊಂದಿಗೆ ಓಡಾಡಿದ್ದೇ ಓಡಾಡಿದ್ದು.ಬೆಳಿಗ್ಗೆ 8- ಲಾಲ್ ದರ್ವಾಜಾದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ.8.30- ಇಂದೂಲಾಲ್ ಯಾಜ್ಞಿಕ್ ಪ್ರತಿಮೆಗೆ ಮಾಲಾರ್ಪಣೆ.9- ಸೈಂಟಿಫಿಕ್ ಸಿಟಿಯಲ್ಲಿ ವೈಜ್ಞಾನಿಕ ಸಾಧನೆಗಳ ಪ್ರದರ್ಶನ ಉದ್ಘಾಟನೆ9.30- ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ರಾಜ್ಯದ ಬೆಳವಣಿಗೆ ಕುರಿತ ಚಿತ್ರ ಪ್ರದರ್ಶನ ಉದ್ಘಾಟನೆ10ರಿಂದ- ವಿವಿಧ ಕಡೆ ಪಥಸಂಚಲನ, ಮೆರವಣಿಗೆ     ಸಂಜೆ 4- ಗಾಂಧಿನಗರ ಮಹಾತ್ಮ ಮಂದಿರದಲ್ಲಿ ಪ್ರದರ್ಶನ6.00- ‘ಆಗೆ ಕದಮ್ ಗುಜರಾತ್’ ಸಾಂಸ್ಕೃತಿಕ ರಂಗು6.30- ಕ್ರೀಡಾಂಗಣ ತುಂಬಿದ ಜನಸಾಗರ7.00- ಸಮಾರೋಪ ಸಮಾರಂಭಕ್ಕೆ ಚಾಲನೆ. ರಾತ್ರಿ ಸಾಂಸ್ಕೃತಿಕ ವೈಭವ      

ಕಾಂಗ್ರೆಸ್ ಬಹಿಷ್ಕಾರ

ಗುಜರಾತಿನ ಒಂದೆಡೆ ಸಂಭ್ರಮ ಉತ್ತುಂಗಕ್ಕೇರಿದರೆ ಅತ್ತ ವಿರೋಧ ಪಕ್ಷ ಕಾಂಗ್ರೆಸ್ ಸ್ವರ್ಣಿಮ್ ಗುಜರಾತ್ ಸಮಾರೋಪ ಸಮಾರಂಭದ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕಿದೆ.ಆಡಳಿತ ಪಕ್ಷವನ್ನು ವಿರೋಧಿಸುತ್ತಲೇ ಬಂದಿರುವ ಕಾಂಗ್ರೆಸ್ ಭಾನುವಾರದ ಕಾರ್ಯಕ್ರಮಗಳಿಂದ ದೂರ ಉಳಿದಿದೆ.ಸಂಜೆ ಇಲ್ಲಿನ ಜೆಪಿ ಚೌಕದಲ್ಲಿ ರ್ಯಾಲಿಯನ್ನೂ ನಡೆಸಿತು. ಸ್ವರ್ಣಿಮ್ ಗುಜರಾತ್ ಹೆಸರಲ್ಲಿ ಬಿಜೆಪಿ ಪ್ರಚಾರ ಪಡೆಯುತ್ತಿದೆ. ಕೇವಲ ದಶಕದ ಸಾಧನೆಗಳ ಅಂದರೆ ನರೇಂದ್ರ ಮೋದಿ ಅಧಿಕಾರಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಬಿಂಬಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಶಕ್ತಿಸಿಂಗ್ ಗೊಹಿಲ್ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.