ಮಂಗಳವಾರ, ಮೇ 18, 2021
30 °C

ಗುಣಗರಿಮೆಗಳ ಗಾಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಗಾನಕಲಾ ಪರಿಷತ್ತಿನ 42ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ  ನಾಡಿನ ಹೆಮ್ಮೆಯ ಬಹುಮುಖ ಪ್ರತಿಭೆ ಮತ್ತು ಪರಿಣತಿಗಳ ಗಾಯಕಿ ಆರ್.ಎ.ರಮಾಮಣಿ ಅವರಿಗೆ ಗಾನಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪದ್ಧತಿಯಂತೆ ಮೊದಲನೆಯ ದಿನದಂದು ಅವರ ಕಛೇರಿಯ ಮೂಲಕವೇ ಐದು ದಿನಗಳ ಸಮ್ಮೇಳನಕ್ಕೆ ಚಾಲನೆ ದೊರಕಿತು. ಎಂದಿನಂತೆ ಅವರ ಕಛೇರಿಯು ಕುತೂಹಲದಾಯಕವಾಗಿಯೂ ಪ್ರೇರಕವಾಗಿಯೂ ಮೂಡಿ ಬಂದಿತು. ರಾಗಗಳ ವೈಶಿಷ್ಟ್ಯ, ಮಹತ್ವ, ವ್ಯಾಪ್ತಿ, ವೈಶಾಲ್ಯಗಳನ್ನು ಮನಗಾಣಿಸುವಲ್ಲಿ ಅವರ ಗಾಯನದ ಗುಣಗರಿಮೆಗಳು ಗರಿಗೆದರಿದವು.ಕಛೇರಿಯ ಪ್ರಧಾನಘಟ್ಟವಾಗಿದ್ದ ನಾಟ್ಟಿಕುರಂಜಿ ರಾಗ, ತಾನ ಮತ್ತು ಪಲ್ಲವಿ ರಸಿಕರನ್ನು ಆಳವಾಗಿ ಪ್ರಭಾವಿಸಿತು. ಆರಂಭದಲ್ಲಿ ಹಾಡಲಾಗಿದ್ದ ನಾಟ್ಟಿಕುರಂಜಿ (ವರ್ಣ) ರಾಗವನ್ನೇ ಪಲ್ಲವಿಗೂ ಆಯ್ಕೆಮಾಡಿಕೊಂಡಿದ್ದು ವಿಶೇಷವೇ ಸರಿ. ತ್ರಿಶ್ರರೂಪಕತಾಳದ ಎರಡಕ್ಷರ ಎಡುಪಿನಲ್ಲಿ ನಡೆಪಲ್ಲವಿ (ಮಾ ಮಧುರೇ ಮೀನಾಕ್ಷಿ ಅಂಬಾದೇವಿ)ಯನ್ನು ವಿಶ್ಲೇಷಿಸಿದ ಪರಿ ರೋಮಾಂಚನಗೊಳಿಸಿತು. 9-7-5-4-3ರ ನಡೆಗಳು ಮತ್ತು ತ್ರಿಕಾಲದಲ್ಲಿ ಪಲ್ಲವಿಯ ನಿರೂಪಣೆ ಅವರ ಲಯ ಪ್ರಭುತ್ವವನ್ನು ಪ್ರತಿಬಿಂಬಿಸಿತು. ಮೂರಕ್ಷರ ಕಾಲದ ನಿರ್ವಹಣೆಯಂತೂ ಬೆರಗುಗೊಳಿಸಿತು.ಗಾಯನದಲ್ಲಷ್ಟೇ ಅಲ್ಲದೆ ಮೃದಂಗವಾದನದಲ್ಲೂ ನೈಪುಣ್ಯ ಸಾಧಿಸಿರುವ ರಮಾಮಣಿ ಪ್ರಸ್ತುತಪಡಿಸಿದ ರಾಗಮಾಲಿಕಾ ಸ್ವರಗಳು (ಹಿಂದೋಳ, ಆಭೋಗಿ, ವರಾಳಿ ಮತ್ತು ನಾಸಿಕಾಭೂಷಿಣಿ) ಅವರ ಅಗಾಧ ಮನೋಧರ್ಮಕ್ಕೆ ಕಿರೀಟಪ್ರಾಯವಾಗಿದ್ದವು.ಇದಕ್ಕೂ ಮುನ್ನ ಅವರು ಮಂಡಿಸಿದ ಶಾಮಾಶಾಸ್ತ್ರಿಗಳ `ನನ್ನುಬ್ರೋವ ಲಲಿತ~ (ಲಲಿತ ರಾಗ) ಮುದ ನೀಡಿತು. `ಅತಿ ವೇಗಮೆ~ ಸಾಲಿಗೆ ಐದಕ್ಷರ ಎಡುಪಿನಲ್ಲಿ ಅವರ ಸ್ವರವಿನ್ಯಾಸ ರೋಚಕವೆನಿಸಿತು. `ಮಾಕೇಲರಾ ವಿಚಾರಮು~ (ರವಿಚಂದ್ರಿಕೆ) ಕೃತಿಯ ನಂತರ ಅವರ ತೋಡಿರಾಗ ಮತ್ತು ತ್ಯಾಗರಾಜರ ಲಾಲ್ಗುಡಿ ಪಂಚರತ್ನ ಕೃತಿಗಳಲ್ಲಿ ಒಂದಾದ `ಗತಿನೀವನಿ~ ರಚನೆಯ ಭಾವಕತ್ವ, ನಿಷ್ಪತ್ತಿ ಮತ್ತು ವ್ಯಂಜಕತ್ವಗಳು ಘನಗಾಂಭೀರ್ಯದಿಂದ  ಅಪೂರ್ವವೆನಿಸಿಕೊಂಡವು.ಆಲಾಪನೆ, ಸಾಹಿತ್ಯ ಮತ್ತು ಸ್ವರವಿಸ್ತಾರವು ರಮಾಮಣಿ ಅವರ ಸೃಜನಕ್ರಿಯೆಯ ಪ್ರತಿರೂಪವಾಯಿತು. ಮಹಿಪತಿದಾಸರ `ರಾವೇಂದ್ರ ದಯತೋರಿ~ ಭಾವಮಯವಾಗಿತ್ತು. ಬಿ.ರಘುರಾಂ(ಪಿಟೀಲು), ಕುಮಾರ್(ಮೃದಂಗ), ಬಿ.ಎನ್.ಚಂದ್ರಮೌಳಿ (ಖಂಜರಿ) ಮತ್ತು ಸುಕನ್ಯಾ ರಾಂಗೋಪಾಲ್ (ಘಟ) ಉತ್ಕೃಷ್ಟ ಶ್ರೇಣಿಯ ನುಡಿಸಾಣಿಕೆಯಿಂದ ಕಛೇರಿಯನ್ನು ಅಲಂಕರಿಸಿದರು.ಮನ ಮೆಚ್ಚಿಸಿದ ನಿರೂಪಣೆ

ಅಲ್ಲಿ ಹಾಡಿದ ಯುವ ಮತ್ತು ಪ್ರತಿಭಾನ್ವಿತ ಗಾಯಕಿ ಮಾನಸಿ ಪ್ರಸಾದ್ ತಮ್ಮ ಕಾರ್ಯಕ್ರಮವನ್ನು ಬಹು ಆಸ್ಥೆಯಿಂದ ನೀಡಿದರು.ತೋಡಿರಾಗದ ವರ್ಣ(ಏರಾನಾಪೈ)ದ ತ್ರಿಶ್ರ ಮತ್ತು ಚತುರಶ್ರ ನಡೆಗಳಲ್ಲಿ ಕಛೇರಿಗೆ ಕಲಾತ್ಮಕ ಆರಂಭ ಒದಗಿಸಿತು. `ಸರಸೀರುಹಾಸನ~ (ನಾಟ) ಚುರುಕಾಗಿದ್ದು, ಖರಹರಪ್ರಿಯರಾಗದ ಆಲಾಪನೆಯ ಸವಿಯನ್ನು ಅನುಭವಿಸಲು ಅನುವಾಯಿತು.ಅಪರೂಪವಾಗಿ ಕೇಳಿಬರುವ `ನಡಚಿ ನಡಚಿ~ ಹಾರ್ದಿಕವಾಗಿತ್ತು. ದೀಕ್ಷಿತರ `ತ್ಯಾಗರಾಜಾಯ ನಮಸ್ತೆ~(ಬೇಗಡೆ) ಕೃತಿಯನ್ನು ಹಾಡಬೇಕಾದರೆ ಆವಶ್ಯಕವಾದ ಲಯ ಗಂಭೀರತೆ ಮನಮುಟ್ಟಿತು.ರಾಗ, ತಾನ ಮತ್ತು ಪಲ್ಲವಿಗಾಗಿ ಹಂಸನಾದ ರಾಗವನ್ನು ವಿಶಾಲಹರುಹಿನೊಂದಿಗೆ ನಿರೂಪಿಸಿದ್ದು ವಿಶಿಷ್ಟವಾಗಿತ್ತು. ರಾಗಪ್ರಸರಣ ವಿಪುಲ ಸಂವೇದನೆಗಳಿಂದ ಕೂಡಿತ್ತು. ಹೀಗಾಗಿ ಮೇಲ್‌ಸ್ಥಾಯಿಗಳಲ್ಲಿ ಅವರ ಕಂಠದಲ್ಲಿ ಕಾಣಬಂದ ಕೆಲವು ತೊಂದರೆಗಳು ಗೌಣವೆನಿಸಿಕೊಂಡವು.ಸಂಕೀರ್ಣವಾದ ತ್ರಿಶ್ರ ಧ್ರುವತಾಳದ ಐದಕ್ಷರ ಎಡುಪಿನಲ್ಲಿ `ರಾಮದೂತ ಪವನಾತ್ಮಜ ಭಜರೇ~ ಪಲ್ಲವಿಯನ್ನು ಸಂಪ್ರದಾಯದಂತೆ ತ್ರಿಕಾಲಗಳಲ್ಲಿ ಹಾಡಿ ರಸಿಕರ ಮನ ಮೆಚ್ಚಿಸಿದರು. ಪ್ರತಿಲೋಮದಲ್ಲಿ ಹಾಡಿದ್ದಂತೂ ಕೇಳುಗರನ್ನು ಪುಳಕಿತಗೊಳಿಸಿತು.ಕಾಮವರ್ಧಿನಿ, ತಿಲ್ಲಂಗ್, ಖರಹರಪ್ರಿಯ ಮತ್ತು ಮಧ್ಯಮಾವತಿ ರಾಗಮಾಲಿಕಾ ಸ್ವರಗಳು ಮಾನಸಿ ಅವರ ನೈಜಪ್ರತಿಭೆಯನ್ನು ಪ್ರಕಟಿಸಿದವು.ದೇಶ್ ತಿಲ್ಲಾನದೊಂದಿಗೆ ಮುಕ್ತಾಯವಾದ ಅವರ ಗಾಯನಕ್ಕೆ ಚಾರುಲತಾ ರಾಮಾನುಜಂ (ಪಿಟೀಲು), ವಿ. ಕೃಷ್ಣ (ಮೃದಂಗ) ಮತ್ತು ಬಿ.ಎನ್.ಚಂದ್ರಮೌಳಿ (ಖಂಜರಿ) ಅವರು ಕಲಾಮಯಿ ಒಡನಾಡಿಗಳಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.