ಗುರುವಾರ , ಮೇ 19, 2022
20 °C

ಗುಣಮಟ್ಟದ ಪ್ರಶಸ್ತಿಗಳು ಎಂದರೆ...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಗುಣಮಟ್ಟದ ಪ್ರಶಸ್ತಿಗಳು ಎಂದರೆ...

ಗಿರೀಶ ಕಾಸರವಳ್ಳಿ ನಿರ್ದೇಶನದ `ಕನಸೆಂಬೊ ಕುದುರೆಯನೇರಿ~ ಸಿನಿಮಾದ ಬಗ್ಗೆ ಮಾತನಾಡುತ್ತಾ, `ಇದು ಅಪ್ಪಟ ಕನ್ನಡದ ಕಥೆ~ ಎಂದಿದ್ದರು ಜ್ಞಾನಪೀಠ ಪುರಸ್ಕೃತ ಲೇಖಕ ಯು.ಆರ್.ಅನಂತಮೂರ್ತಿ.

ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಸಿನಿಮಾ ಗಳಿಸಿತ್ತು. ಆದರೆ, 2009ರ ಸಾಲಿನ ರಾಜ್ಯ ಪ್ರಶಸ್ತಿಗಳ ಪಟ್ಟಿಯಲ್ಲಿ ಗಿರೀಶರ ಸಿನಿಮಾದ ಹೆಸರೇ ಇಲ್ಲ. ಚಿತ್ರದ ಮೂಲಕಥೆಗಾರ ಅಮರೇಶ ನುಗಡೋಣಿ ಅವರಿಗೂ ಮನ್ನಣೆ ದೊರೆತಿಲ್ಲ.~ಕನಸೆಂಬೊ ಕುದುರೆಯನೇರಿ~ ಚಿತ್ರದ ಕೇಂದ್ರವಾದ ಈರ‌್ಯನಾಗಿ ವೈಜನಾಥ ಬಿರಾದಾರ್ ಅವರ ಪಾತ್ರ ನಿರ್ವಹಣೆಗೆ ಅಂತರರಾಷ್ಟ್ರೀಯ ಪ್ರಶಸ್ತಿಯೊಂದು ದೊರೆತಿದೆ. 2009ರ ರಾಷ್ಟ್ರಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಕೂಡ ಬಿರಾದಾರ್ ಹೆಸರು ಪ್ರಸ್ತಾಪದಲ್ಲಿತ್ತು.ಆದರೆ, `ಪಾ~ ಚಿತ್ರದ ಅಮಿತಾಭ್ ಬಚ್ಚನ್ ಅವರಿಂದಾಗಿ ಬಿರಾದಾರ್ ಪ್ರಶಸ್ತಿ ವಂಚಿತರಾದರು. ರಾಜ್ಯಪ್ರಶಸ್ತಿ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗಾಗಿ ಬಿರಾದಾರ್ ಪೇಲವ ಮುಖ (ತಮ್ಮ ಪಾತ್ರಗಳಂತೆ) ಹೊಂದಬೇಕಾಯಿತು.`ಕನಸೆಂಬೊ ಕುದುರೆಯನೇರಿ~ ಚಿತ್ರದ ಬಗ್ಗೆ ಮಾತ್ರವಲ್ಲ, ಹೊಸ ಪ್ರತಿಭೆಗಳ ಅನೇಕ ಚಿತ್ರಗಳಿಗೆ 2009ರ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಅವಕಾಶವೇ ದೊರೆತಿಲ್ಲ. ಅಗ್ನಿ ಶ್ರೀಧರ್ ಬಳಗದ `ಕಳ್ಳರ ಸಂತೆ~, ಅಮರ್ ನಿರ್ದೇಶನದ `ದಿಲ್ದಾರ~, ಅರವಿಂದ್ ನಿರ್ದೇಶನದ `ಜುಗಾರಿ~, ಗುರುಪ್ರಸಾದ್ ನಿರ್ದೇಶನದ `ಎದ್ದೇಳು ಮಂಜುನಾಥಾ~, ನಾಗತಿಹಳ್ಳಿ ಚಂದ್ರಶೇಖರರ `ಒಲವೇ ಜೀವನ ಲೆಕ್ಕಾಚಾರ~, ಚಿರು ರವೀಂದ್ರರ `ಪರೀಕ್ಷೆ~ ಸಿನಿಮಾಗಳು ವಿವಿಧ ಕಾರಣಗಳಿಂದಾಗಿ ಗಮನಸೆಳೆದಿದ್ದವು.ಆದರೆ, ಈ ಯಾವ ಸಿನಿಮಾಗಳಿಗೂ ತಕ್ಕ ಮಾನ್ಯತೆ ದೊರೆತಿಲ್ಲ. ನಾಗತಿಹಳ್ಳಿ ಅವರಿಗೆ ಮಾತ್ರ ಕಥಾ ಬರಹಕ್ಕೆ ಪ್ರಶಸ್ತಿ ಕೊಟ್ಟ ಶಾಸ್ತ್ರ ಮಾಡಲಾಗಿದೆ.ನಂಬಲರ್ಹ ಮೂಲಗಳ ಪ್ರಕಾರ, ಪ್ರಶಸ್ತಿ ಆಯ್ಕೆಯ ಅಂತಿಮ ಸಭೆ ನಡೆಯುವ ವೇಳೆಗಾಗಲೇ ಕೆಲವು ಪ್ರಶಸ್ತಿಗಳು ನಿರ್ಧಾರವಾಗಿ ಹೋಗಿದ್ದವು. `ರಸಋಷಿ ಕುವೆಂಪು~ ಚಿತ್ರವನ್ನು ಮೊದಲ ಅತ್ಯುತ್ತಮ ಚಿತ್ರವಾಗಿ ಆಯ್ಕೆ ಮಾಡಲು ಕೆಲವರು ವಿಪರೀತ ಉತ್ಸಾಹ ತೋರಿದರು.ಚಿತ್ರದ ಗುಣಮಟ್ಟದ ಬಗ್ಗೆ ಚರ್ಚೆಯಾಗದೆ, ಕುವೆಂಪು ಹೆಸರಿನ ಕಾರಣದಿಂದಲೇ ಪ್ರಶಸ್ತಿಯನ್ನು ನೀಡಲಾಯಿತು. ಸಿ.ಆರ್.ಸಿಂಹ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿಸುವ ಪ್ರಯತ್ನಗಳು ನಡೆದವು. (ಕೊನೆಯ ಚಿತ್ರ ಎನ್ನುವ ಭಾವನಾತ್ಮಕ ಕಾರಣದಿಂದಾಗಿ ಅತ್ಯುತ್ತಮ ನಟ ವಿಷ್ಣುವರ್ಧನ್‌ರ ಪಾಲಾಯಿತು. `ಎದ್ದೇಳು ಮಂಜುನಾಥಾ~ ಚಿತ್ರದ ಜಗ್ಗೇಶ್ ಮತ್ತೊಮ್ಮೆ ರಾಜ್ಯಪ್ರಶಸ್ತಿ ವಂಚಿತರಾದರು).`ಎದ್ದೇಳು ಮಂಜುನಾಥಾ~ ಚಿತ್ರದ ತಬಲಾ ನಾಣಿ ಹಾಗೂ `ದಿಲ್ದಾರ~ ಚಿತ್ರದ ರಂಗಾಯಣ ರಘು ಮತ್ತಿಬ್ಬರು ನತದೃಷ್ಟ ಕಲಾವಿದರು. ಪೋಷಕ ನಟ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಈ ಇಬ್ಬರ ಅತ್ಯುತ್ತಮ ನಿರ್ವಹಣೆ ಮೂಲೆಗುಂಪಾಯಿತು. ಮಕ್ಕಳ ಚಿತ್ರಗಳ ಆಯ್ಕೆಯ ಸಂದರ್ಭದಲ್ಲಿ `ಗುರುಕುಲ~ದ ಬಗೆಗಿನ ಕೆಲವು ಸದಸ್ಯರ ಆಸ್ಥೆಯಿಂದಾಗಿ, `ಕಿನ್ನರಬಾಲೆ~ ಪ್ರಶಸ್ತಿಯನ್ನು ಹಂಚಿಕೊಳ್ಳಬೇಕಾಯಿತು.ಕಳೆದ ವರ್ಷ `ಸೈಕೊ~ ಚಿತ್ರದ ಸಂಗೀತಕ್ಕೆ ಪ್ರಶಸ್ತಿ ತಪ್ಪಿಸಿಕೊಂಡಿದ್ದ ರಘು ದೀಕ್ಷಿತ್ ಈ ಸಲವೂ (ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಸಂಗೀತ) ನಿರಾಶರಾಗಬೇಕಾಯಿತು. ಇದಕ್ಕೆ ಸಮಿತಿಯಲ್ಲಿನ ತಜ್ಞರು ಮಂಡಿಸಿದ ವಾದ- `ರಘು ದೀಕ್ಷಿತರ ಸಂಗೀತ ಈ ನೆಲದ್ದಲ್ಲ~.ಆದರೆ, `ರಾಜ್~ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿರುವ ಹರಿಕೃಷ್ಣರ ಸಂಗೀತ ಎಷ್ಟು ಸಾಚಾ ಎನ್ನುವ ಬಗ್ಗೆ ಚರ್ಚೆಗಳೇ ನಡೆದಂತಿಲ್ಲ. ಇನ್ನು ಈ ನೆಲದ್ದೇ ಸಂಗೀತವನ್ನು ನೆಚ್ಚಿಕೊಂಡ ಪ್ರವೀಣ್ ಡಿ. ರಾವ್ (ಚಿತ್ರ: ದಿಲ್ದಾರ), ವೀರ್ ಸಮರ್ಥ್ (ಚಿತ್ರ: ಕಾರಂಜಿ) ಅವರನ್ನೂ ಪ್ರಶಸ್ತಿಗೆ ಪರಿಗಣಿಸಿಲ್ಲ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ನಿರ್ಣಯಗಳು ಪೂರ್ವ ನಿರ್ಧರಿತವಾಗಿದ್ದವು ಎನ್ನಲಾಗಿದೆ. ನಿರ್ಮಾಪಕರಾಗಿ, ಗೀತರಚನಕಾರರಾಗಿ ಹೆಚ್ಚಿನ ಸೇವೆ ಸಲ್ಲಿಸಿದ್ದರೂ ಸಿ.ವಿ.ಶಿವಶಂಕರ್ ಅವರನ್ನು ನಿರ್ದೇಶನಕ್ಕಾಗಿ ನೀಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಪರಿಗಣಿಸಿದ್ದು ಕೆಲವರನ್ನು ತೃಪ್ತಿಪಡಿಸುವ ಉಪಾಯದಂತಿತ್ತು.ಚಿತ್ರೋದ್ಯಮದಲ್ಲಿ ಕೂಡ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಸಮಾಧಾನದ ಮಾತುಗಳಿಲ್ಲ. ಗಾಂಧಿನಗರದಲ್ಲಿಗ, ಆಯ್ಕೆ ಸಮಿತಿಯ ಬಂಧುಮಿತ್ರರಿಗೆ ಕೆಲವು ಪ್ರಶಸ್ತಿಗಳು ಹಂಚಿಕೆಯಾಗಿವೆ ಎನ್ನುವ ಗುಲ್ಲು. ಪ್ರಶಸ್ತಿಗಳ ಬಗ್ಗೆ ಇಷ್ಟೆಲ್ಲ ಅಪಸ್ವರಗಳಿದ್ದರೂ `ಗುಣಮಟ್ಟದ ಪ್ರಶಸ್ತಿಗಳನ್ನು ನೀಡಿದ್ದೇವೆ~ ಎಂದು ಆಯ್ಕೆ ಸಮಿತಿ ಹಿಗ್ಗಿದೆ.ರಾಜಕಾರಣದಲ್ಲಿ ಮೌಲ್ಯಗಳ ಅರ್ಥವೇ ಬದಲಾಗಿರುವ ಸಂದರ್ಭವಿದು. ಹಾಗಾಗಿ, ಸಿನಿಮಾದಲ್ಲೂ `ಗುಣಮಟ್ಟ~ದ ಅರ್ಥ ಬದಲಾಗಿರಬೇಕು! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.