ಗುರುವಾರ , ಜೂನ್ 24, 2021
29 °C
ಶೈಕ್ಷಣಿಕ ಅಂಗಳ

ಗುಣಮಟ್ಟ ಶಿಕ್ಷಣಕ್ಕೆ ಗಾಜರಕೋಟ ಶಾಲೆ

ಪ್ರಜಾವಾಣಿ ವಾರ್ತೆ/ ಬಿ.ಎಸ್‌.ಆಲೆಮನಿ Updated:

ಅಕ್ಷರ ಗಾತ್ರ : | |

ಗುರುಮಠಕಲ್‌: ಪ್ರಸಕ್ತ ದಿನಗಳಲ್ಲಿ ಪಾಲಕರಿಗೆ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಕಾಣದಂತಾಗಿವೆ. ಸರ್ಕಾರಿ ಶಾಲೆಗಳ ಪೈಕಿ, ಸುಮಾರು 30 ವರ್ಷದ ಇತಿಹಾಸವಿರುವ ಗಾಜರಕೋಟ ಸರ್ಕಾರಿ ಪ್ರೌಢ ಶಾಲೆ ಇಂದಿಗೂ ತನ್ನ ಶಿಕ್ಷಣದ ಗುಣಮಟ್ಟ, ಕ್ರಿಯಾಶೀಲತೆ, ಪರಿಸರದ ಕಳಕಳಿಯಿಂದಾಗಿ ಈ ಭಾಗದಲ್ಲಿ ಖಾಸಗಿ ಶಾಲೆಗಳನ್ನು ಮೆಟ್ಟಿನಿಂತಿದೆ.1984ರಲ್ಲಿ ಗಾಜರಕೋಟ ಹೋಬಳಿ ಕೇಂದ್ರ­ದಲ್ಲಿ ಪ್ರಾರಂಭವಾದ ಸರ್ಕಾರಿ ಪ್ರೌಢಶಾಲೆ ಪ್ರತಿ ವರ್ಷವು ನೂರಾರು ಮಕ್ಕಳ ಉತ್ತಮ ಭವಿಷ್ಯ ರೂಪಿಸುತ್ತಿದೆ. ಇಂದಿಗೂ ತನ್ನ ಮೂಲ ಗುಣ ಮಟ್ಟದ ಶಿಕ್ಷಣದೊಂದಿಗೆ ಮಕ್ಕಳಲ್ಲಿ ಚೈತನ್ಯ, ಸಂಸ್ಕಾರ, ಮಾನವಿಯ ಮೌಲ್ಯ, ಗುರುಭಕ್ತಿ, ಶಿಸ್ತು, ಪರಿಸರ ಪ್ರೇಮ ತುಂಬುತ್ತಿದೆ. ಅದರಲ್ಲಿ ಶಾಲೆಯ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನವೂ ಅಡಗಿದೆ.ಶಾಲೆಯಲ್ಲಿನ ಉತ್ತಮ ಪರಿಸರ, ವಿಶಾಲ ಮೈದಾನ, ಶಾಲಾ ಕೈತೊಟ (ಉದ್ಯಾನವನ), ಪ್ರಶಾಂತವಾದ ವಾತಾವರಣ, ನೀರು, ಪ್ರತ್ಯೇಕ ಶೌಚಾಲಯ, ಉತ್ತಮ ಶಾಲಾ ಗ್ರಂಥಾಲಯ, ಕ್ರೀಡಾ ಕೊಠಡಿ, ಕ್ರೀಡಾ ಸಾಮಗ್ರಿಗಳು, ಪ್ರಯೋಗಾಲಯ ಇರುವುದರಿಂದ ಮಕ್ಕಳಿಗೆ ಆಕರ್ಷಕ ತಾಣವಾಗಿದೆ.12 ಜನ ಬೋಧಕರಿರುವ ಶಾಲೆಯಲ್ಲಿ 200 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪ್ರತಿ ವರ್ಷ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿಸು­ವುದು ಸಾಮಾನ್ಯವಾಗಿದೆ. 2007–08ರಲ್ಲಿ ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಬಾಲಕಿಯರು ಜಿಲ್ಲಾ ಮಟ್ಟದಲ್ಲಿ ಜಯ ಗಳಿಸುವುದರ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು. 2013–14ರ ದಸರಾ ಕ್ರಿಡಾಕೂಟದಲ್ಲಿ ಬಾಲಕಿ­ಯರ ವಾಲಿಬಾಲ್‌ ಜಿಲ್ಲಾಮಟ್ಟದಲ್ಲಿ ಪ್ರಥಮ ಗಳಿಸುವುದರ ಮೂಲಕ ವಿಭಾಗಮಟ್ಟಕ್ಕೆ ಆಯ್ಕೆ­ಯಾಗಿದ್ದಾರೆ. ಪೈಕಾ ಕ್ರೀಡಾ ಕೂಟದಲ್ಲಿ ಬಾಲ­ಕರ ವಾಲಿಬಾಲ್‌ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.2007–08ರಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ­ದ್ದರು. ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸೆಮಿಫೈನಲ್‌ ತಲು­ಪಿದ್ದರು-. ಪ್ರತಿವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸುವ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಸಾಮೂ­­ಹಿಕ ಹಾಗೂ ವೈಯಕ್ತಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.ಸುಮಾರು 4–5 ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‌. ಉಪನ್ಯಾಸಕ ಸೇರಿ­ದಂತೆ ಉನ್ನತ ಹುದ್ದೆಯಲ್ಲಿ­ದ್ದಾರೆ. ಅಲ್ದೇ ಗ್ರಾಮದ ಶಿವಶರಣು ಬಾಲಪ್ಪ ನಾಯಕೋಡಿ ಮಥುರಾದ ಸಂಶೋಧನ ವಿಜ್ಞಾನ ಕೇಂದ್ರ­ದಲ್ಲಿ ಸಂಶೋಧನಾ ವಿಜ್ಞಾನಿ­ಯಾಗಿ ಹೊರ ಹೊಮ್ಮಿ­ರು­ವುದು ವಿಶೇಷ. ಪ್ರತಿ ವರ್ಷವು ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 80ಕ್ಕಿಂತ ಮೇಲ್ಪಟ್ಟು ಇರುತ್ತದೆ ಎಂದು ಮುಖ್ಯಶಿಕ್ಷಕರು ತಿಳಿಸುತ್ತಾರೆ.ಯಾದಗಿರಿಯಲ್ಲಿ ಈಚೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗ­ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಳ್ಳಾರಿಯ ಗೌತಮ ಬುದ್ದ ಸ್ಮಾರಕ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರರಿಸರ ಮಿತ್ರ ಶಾಲೆ’ ಪ್ರಶಸ್ತಿ ಪಡೆಯುವುದರ ಮೂಲಕ ಮಾದರಿ ಶಾಲೆಯಾಗಿದೆ.ಶಾಲೆಯನ್ನು ಉನ್ನತಿಕರಿಸುವುದರ ಮೂಲಕ ಸರ್ಕಾರ ಕಳೆದ ವರ್ಷದಿಂದ ಪದವಿಪೂರ್ವ ಕಾಲೇಜು ಆರಂಭಿಸಿದೆ. 4 ಎಕರೆ ಜಮೀನಿನಲ್ಲಿ ಇರುವ ಶಾಲೆ ಸುತ್ತಮುತ್ತಲಿನ ಗಿಡಮರ­ಗಳು, ಮುಂಭಾಗದಲ್ಲಿನ ಉದ್ಯಾನ ಆಕರ್ಷಿಸುತ್ತಿದೆ.‘ಆಂಗ್ಲ ವ್ಯಾಮೋಹ ಬೇಡ’

‘ಖಾಸಗಿ ಶಾಲೆಗಳ ಹಾವಳಿಯಲ್ಲಿ, ಸರ್ಕಾರಿ ಶಾಲೆಯನ್ನು ಕೀಳರಿಮೆಯಿಂದ ಕಾಣುವ ಪಾಲಕರಿಗೆ ನಮ್ಮ ಶಾಲೆ ಎದೆ ತಟ್ಟಿ ಹೇಳುತ್ತದೆ. ಯಾವ ಕ್ಷೇತ್ರದಲ್ಲೂ ಸರ್ಕಾರಿ ಶಾಲೆ ಕಡಿಯಿಲ್ಲ. ಪಾಲಕರು ಆಂಗ್ಲ ವ್ಯಾಮೋಹ ಬಿಟ್ಟು ಕನ್ನಡ ಸರ್ಕಾರಿ ಶಾಲೆಗಳ ಕಡೆಗೆ ಗಮನ ಹರಿಸಬೇಕಾಗಿದೆ’.

–ಸುಧಾಕರ ಪೂಜಾರಿ, ಮುಖ್ಯಶಿಕ್ಷಕ 

‘ಗ್ರಾಮೀಣರಿಗೆ ವರದಾನ’

‘ನಮ್ಮ ಊರಿನ ಸರ್ಕಾರಿ ಪ್ರೌಢಶಾಲೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿ­ಗಳಿಗೆ ವರದಾನವಾಗಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಪೈಕಿ ಬಹಳಷ್ಟು ಜನ ಉತ್ತಮ ಶಿಕ್ಷಣದೊಂದಿಗೆ ಉನ್ನತ ಸ್ಥಾನದಲ್ಲಿದ್ದಾರೆ. ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳಾಗಿ ಕೂಡ ಹೊರ ಹೊಮ್ಮಿರುವುದು ಹೆಮ್ಮೆಯ ಸಂಗತಿ’.

–ಅಶೋಕ ಕಲಾಲ್‌, ಎಸ್‌ಡಿಎಂಸಿ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.