ಬುಧವಾರ, ಏಪ್ರಿಲ್ 14, 2021
24 °C

`ಗುರುವಿಗೆ ಕೊಟ್ಟ ಮಾತು ಉಳಿಸಿಕೊಂಡೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಿಘಂಟಿನ ರಚನೆಗೆ ಪರಿಶ್ರಮ ವಹಿಸಿ ಕೆಲಸ ಮಾಡಿ ನನ್ನ ಗುರು ಬಿಎಂಶ್ರೀ ಅವರಿಗೆ ನೀಡಿದ ಮಾತನ್ನು ಉಳಿಸಿಕೊಂಡ ತೃಪ್ತಿ ನನಗಿದೆ' ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು. ರೋಟರಿ ಬೆಂಗಳೂರು ಡೌನ್‌ಟೌನ್ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ರೋಟರಿ ಪಯೋನಿಯರ್ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.

`ನೆಚ್ಚಿನ ಕೆಲಸ ಮಾಡಲು ಹಣ ಅಥವಾ ಹೆಸರು ಬೇಕಾಗಿಲ್ಲ. ಬದಲಿಗೆ, ಪರಿಶ್ರಮ ವಹಿಸಿ ಕೆಲಸವನ್ನು ನಿರ್ವಹಿಸಬೇಕು. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಆಗಲೇ ನಾಡು ಬೆಳೆಯಲು ಸಾಧ್ಯವಾಗುತ್ತದೆ' ಎಂದರು.

`ಒಂದು ಶಬ್ದಕ್ಕೆ 15 ರಿಂದ 20 ರಷ್ಟು ಅರ್ಥಗಳಿರುತ್ತವೆ. ಅವುಗಳನ್ನು ಹುಡುಕಿ ನಿಘಂಟಿನಲ್ಲಿ ದಾಖಲಿಸಬೇಕು. ಹಿಂದಿನ ಕಾಲದಲ್ಲಿ ಟೈಪ್ ರೈಟಿಂಗ್ ಇರಲಿಲ್ಲ. ಕೇವಲ ಕೈ ಬರಹದಿಂದಲೇ ಎಲ್ಲವನ್ನೂ ಸಂಗ್ರಹಿಸಬೇಕಾಗಿತ್ತು. ನಿಘಂಟಿನಲ್ಲಿ ಒಂದು ಪದದ ಅರ್ಥಕ್ಕಾಗಿ ದಿನಪೂರ್ತಿ ಕುಳಿತು ಚರ್ಚೆ ಮಾಡುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ' ಎಂದು ಹೇಳಿದರು.

ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, `ಪ್ರತಿದಿನ ಬೆಳಿಗ್ಗೆ ಸುದ್ದಿ ಪತ್ರಿಕೆಗಳನ್ನು ತೆರೆದರೆ ಅಲ್ಲಿ ಕೊಲೆ, ಸುಲಿಗೆ, ಆತ್ಮಹತ್ಯೆ, ಭ್ರಷ್ಟಾಚಾರ ಇಂತಹ ಅನೇಕ ವಿಷಯಗಳು ಕಣ್ಣಿಗೆ ರಾಚುತ್ತವೆ. ಆ ಸಂದರ್ಭದಲ್ಲಿ ನಮ್ಮ ಸಮಾಜ ಕೆಟ್ಟು ಹೋಗಿದೆ ಎಂದು ಅನಿಸುತ್ತದೆ. ಆದರೆ, ಸಮಾಜದಲ್ಲಿ ಕೆಟ್ಟವರಿದ್ದಂತೆ ಒಳ್ಳೆಯವರು ಕೂಡ ಇದ್ದಾರೆ. ಅವರನ್ನು ಗುರುತಿಸುವ ಕಾರ್ಯವಾಗಬೇಕು' ಎಂದರು.  ರೋಟರಿ ಬೆಂಗಳೂರು ಡೌನ್‌ಟೌನ್ ಅಧ್ಯಕ್ಷ ಬಿ.ಎಸ್.ಶ್ರೀರಾಮ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.