ಭಾನುವಾರ, ಏಪ್ರಿಲ್ 18, 2021
24 °C

ಗುರುವೇ ನಮಃ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುವೇ ನಮಃ

`ನಾನು ನಟಿಸುವ ಪಾತ್ರಗಳು ಆತ್ಮತೃಪ್ತಿ ನೀಡಬೇಕು. ಸಾಮಾಜಿಕ ಬದ್ಧತೆಯಿರುವಂತಹ ಪಾತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ಅಂಥ ಆತ್ಮತೃಪ್ತಿ, ಸಂತೋಷ ಪೌರಾಣಿಕ ಪಾತ್ರಗಳಲ್ಲಿ ದೊರಕುತ್ತದೆ~- ನಟ ಶ್ರೀಧರ್ ಅವರ ಮನದಾಳದ ಮಾತುಗಳಿವು.`ಶ್ರೀ ರಾಘವೇಂದ್ರ ಮಹಿಮೆ~ ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸುತ್ತಿರುವ ಶ್ರೀಧರ್‌ಗೆ ಪೌರಾಣಿಕ ಪಾತ್ರಗಳೆಂದರೆ ಅಚ್ಚುಮೆಚ್ಚು. ಬಾಲ್ಯದಿಂದಲೂ ಪುರಾಣದ ಓದಿನಲ್ಲಿ, ನಾಟಕ ಮತ್ತು ನೃತ್ಯಗಳಲ್ಲಿ ತೊಡಗಿಸಿಕೊಂಡ ಶ್ರೀಧರ್, ಪೌರಾಣಿಕ ಕಥನಗಳಲ್ಲಿ ನಮ್ಮ ದೇಶದ ಸಂಸ್ಕೃತಿ, ಚಿಂತನೆ, ಜೀವನದ ಮೌಲ್ಯಗಳನ್ನು ಕಂಡಿದ್ದಾರೆ.ಪುರಾಣದಲ್ಲಿ ಬರುವ ಎಲ್ಲಾ ಪಾತ್ರಗಳೂ ಎಂದೆಂದಿಗೂ ಪ್ರಸ್ತುತವೆನ್ನುವ ಅವರು ಪೌರಾಣಿಕ ಪಾತ್ರಗಳಲ್ಲಿ ನಟಿಸುವುದಕ್ಕೆ ಹೆಮ್ಮೆ ಪಡುತ್ತಾರೆ. `ಶ್ರೀ ರಾಘವೇಂದ್ರ ಮಹಿಮೆ~ ಧಾರಾವಾಹಿಗಾಗಿ ವಿಶೇಷ ಅಧ್ಯಯನ, ಅಭ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.ರಾಘವೇಂದ್ರ ಸ್ವಾಮಿಗಳು ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿಯಲ್ಲಿ ಕಾಣಿಸುತ್ತಾರೆ. ಅವತಾರ ಪುರುಷ, ಮಹಾಜ್ಞಾನಿ, ವೈರಾಗ್ಯಮೂರ್ತಿ... ಹೀಗೆ. ಈ ಎಲ್ಲಾ ನಂಬಿಕೆಗಳಿಗೂ ನನ್ನ ಪಾತ್ರದಲ್ಲಿ ನ್ಯಾಯ ಒದಗಿಸಬೇಕು. ಹೀಗಾಗಿ ರಾಘವೇಂದ್ರ ಸ್ವಾಮಿಗಳ ಕುರಿತಾದ ಪುಸ್ತಕಗಳು, ಸ್ವಾಮಿಗಳು ಬರೆದ ಕೃತಿಗಳನ್ನು ಓದಿದ್ದೇನೆ. ಅವರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಚಿತ್ರೀಕರಣಕ್ಕೆ ತೆರಳುವ ಮುನ್ನ ಧ್ಯಾನ ಮಾಡುತ್ತೇನೆ.

ಪರಕಾಯ ಪ್ರವೇಶ

ಯಾವುದೇ ಪಾತ್ರವಿರಲಿ, ನಾವು ನಟಿಸಬಾರದು. ಆ ಪಾತ್ರವೇ ನಾವಾಗಬೇಕು. ಆದರೆ ಇಂಥ ಪಾತ್ರ ಇನ್ನೂ ಹೆಚ್ಚಿನದ್ದನ್ನು ಬಯಸುತ್ತದೆ. ಅವರಲ್ಲಿದ್ದ ಆಧ್ಯಾತ್ಮಿಕ ಗುಣಗಳು ನನಗೂ ಬರಬೇಕು. ಮನಸ್ಸಿನ ನಿಯಂತ್ರಣ ಸಾಧಿಸಬೇಕು.ಇವೆಲ್ಲವನ್ನೂ ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎನ್ನುತ್ತಾರೆ. ಅವರಿಗೆ ಈ ಪಾತ್ರ ಅದ್ಭುತ ಅನುಭವ ನೀಡಿದೆ. ಅವರಿಗೆ ಇಂಥದ್ದೇ ಅನುಭವ ಈ ಹಿಂದೆ ಆಗಿದ್ದು `ಶಿಶುನಾಳ ಷರೀಫ~ ಚಿತ್ರದಲ್ಲಿ. ತಮ್ಮ 28ನೇ ವಯಸ್ಸಿನಲ್ಲಿ ವಯಸ್ಸಾದ ಸಂತನ ಪಾತ್ರ ಮಾಡುವಾಗಲೂ ಶ್ರೀಧರ್ ಹಲವು ತಿಂಗಳು ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು.ಕಲಾವಿದನಾಗಿ ರಾಘವೇಂದ್ರ ಸ್ವಾಮಿಗಳನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಅವರ ನಡವಳಿಕೆ, ಸ್ವಭಾವ, ದೇಹಭಾಷೆ ಮುಂತಾದವುಗಳನ್ನು ಅರಿಯಬೇಕು. ಎರಡನೆಯದಾಗಿ ಜನರ ಕಲ್ಪನೆಯಲ್ಲಿನ ರಾಘವೇಂದ್ರರನ್ನೂ ತಿಳಿದುಕೊಳ್ಳಬೇಕು. ಅವರ ನಂಬಿಕೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ.

 

ಹೀಗಾಗಿ ಎರಡರ ಸಮತೋಲನವೂ ಇಲ್ಲಿ ಅತ್ಯಗತ್ಯ. ಆಧ್ಯಾತ್ಮಿಕ ವ್ಯಕ್ತಿ ಎಂದು ಅವರನ್ನು ತೀರಾ ಗಂಭೀರವನದರಾಗಿ, ಭಾವನೆಗಳಿಲ್ಲದ ವ್ಯಕ್ತಿಯಂತೆ ಚಿತ್ರಿಸುವಂತಿಲ್ಲ. ಯೋಗಿಗಳಾಗಿದ್ದರೂ ಜನರನ್ನು ಪ್ರೀತಿಸುತ್ತಿದ್ದರು ಎಂಬುದು ಅಲ್ಲಿ ವ್ಯಕ್ತವಾಗಬೇಕು. ಅದನ್ನು ಸಿದ್ಧಿಸಿಕೊಳ್ಳುವುದು ನನಗಿರುವ ಸವಾಲು ಎನ್ನುತ್ತಾರೆ.ರಾಘವೇಂದ್ರ ಸ್ವಾಮಿಗಳ ಕುರಿತಾಗಿ ಹಲವು ಸಿನಿಮಾ ಹಾಗೂ ಧಾರಾವಾಹಿಗಳು ಬಂದಿವೆ. ಆದರೆ ಈ ಧಾರಾವಾಹಿ ಸಂಪೂರ್ಣ ಭಿನ್ನವಾಗಿದೆ. ಅವುಗಳಲ್ಲಿ ತೆರೆದಿಡದ ಅನೇಕ ಘಟನೆಗಳನ್ನು ಇಲ್ಲಿ ನೋಡಬಹುದು. ರಾಘವೇಂದ್ರ ಸ್ವಾಮಿಗಳ ಹಿಂದಿನ ಜನ್ಮಾಂತರದ ಕಥೆಗಳನ್ನೂ ಧಾರಾವಾಹಿ ಒಳಗೊಂಡಿದೆ.ಅದರಲ್ಲಿ ಶಂಕುಕರ್ಣ, ಪ್ರಹ್ಲಾದರು, ಬಾಹಲಿಕ ಮಹಾರಾಜ, ವ್ಯಾಸರಾಯ ಮುಂತಾದ ಪಾತ್ರಗಳು ಬರಲಿವೆ. ಪ್ರಹ್ಲಾದರ ಪಾತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಪಾತ್ರಗಳನ್ನೂ ಶ್ರೀಧರ್ ನಿರ್ವಹಿಸುತ್ತಿದ್ದಾರೆ.

ಕಾವ್ಯದಿಂದ ಸಂಸ್ಕಾರ

ಪುರಾಣ ನಮ್ಮ ಜೀವನದ ಬೇರುಗಳು. ಅದನ್ನು ಬಿಟ್ಟರೆ ಭಾರತೀಯತೆ ಕಳೆದುಹೋಗುತ್ತದೆ ಎನ್ನುವ ಶ್ರೀಧರ್, ಇಂದಿನ ಮಕ್ಕಳು ರಾಮಾಯಣ - ಮಹಾಭಾರತಗಳನ್ನು ಓದುವ ವಾತಾವರಣ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಹದಿನಾರನೇ ವಯಸ್ಸಿಗೇ ಈ ಎರಡೂ ಮಹಾಕಾವ್ಯಗಳನ್ನು ಓದಿದ್ದರಿಂದಲೇ ಪೌರಾಣಿಕ ಪಾತ್ರಗಳಲ್ಲಿ ತನ್ಮಯತೆ ಪಡೆಯಲು ಸಾಧ್ಯವಾಗಿದ್ದು ಎಂದು ಅವರು ಹೇಳುತ್ತಾರೆ.ಕಮರ್ಷಿಯಲ್ ಧಾರಾವಾಹಿಗಳಿಂದ ಶ್ರೀಧರ್ ಬಲುದೂರ. ಅಂಥ ಧಾರಾವಾಹಿಗಳಿಗೆ ಒಪ್ಪಿಕೊಂಡರೆ ಎರಡು ಮೂರು ವರ್ಷ ತೊಡಗಿಕೊಳ್ಳಬೇಕಾಗುತ್ತದೆ.ಭರತನಾಟ್ಯ ಕಾರ್ಯಕ್ರಮಕ್ಕಾಗಿ ವಿದೇಶ ಸುತ್ತುವ ನನಗೆ ಅದು ಸಾಧ್ಯವಿಲ್ಲ. ಮಿಗಿಲಾಗಿ ಕಮರ್ಷಿಯಲ್ ಧಾರಾವಾಹಿ ಪಾತ್ರಗಳು ತೃಪ್ತಿ ನೀಡುವುದಿಲ್ಲ. ಸಿನಿಮಾಗಳಲ್ಲಿಯೂ ಇಷ್ಟವಾಗುವಂಥ ಪಾತ್ರ ಬಂದರೆ ಮಾತ್ರ ಮಾಡುತ್ತೇನೆ. ಅಮೃತಘಳಿಗೆ, ಸುಂದರಸ್ವಪ್ನ ಮುಂತಾದ ಚಿತ್ರಗಳ ಪಾತ್ರಗಳು ಜನರಿಗೆ ಹಿಡಿಸಿದ್ದವು.ಅಂಥ ಪಾತ್ರಗಳಲ್ಲಿ ನಟಿಸಿದ್ದ ನಾನು ಮಹತ್ವವಿಲ್ಲದ ಪಾತ್ರಗಳಲ್ಲಿ ಕಾಣಿಸಿಕೊಂಡು ಮೊದಲು ಗಳಿಸಿದ್ದ ಹೆಸರನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಸಾಮಾಜಿಕ ಬದ್ಧತೆಯುಳ್ಳ ಪಾತ್ರಗಳಿಗೆ ಮಾತ್ರ ಒಪ್ಪುತ್ತೇನೆ ಎನ್ನುವ ಅವರಿಗೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಎಲ್ಲಾ ಭಾಷೆಗಳಲ್ಲಿಯೂ ಸಮಾಜಕ್ಕೆ ಮತ್ತು ಜನರ ಮನಸ್ಸಿಗೆ ಮುಟ್ಟುವ ಪಾತ್ರಗಳಲ್ಲಿ ನಟಿಸಿದ್ದೇನೆ ಎಂಬ ಖುಷಿಯಿದೆ.

 

ಕೆಲವು ಅಪರೂಪದ ಚಿತ್ರಗಳನ್ನು ಹೊರತುಪಡಿಸಿ ಆ ಬಗೆಯ ಪಾತ್ರಗಳೇ ಇಂದು ಸೃಷ್ಟಿಯಾಗುತ್ತಿಲ್ಲ ಎನ್ನುವ ಶ್ರೀಧರ್, ತಾವು ನಟಿಸಿದ ಅನೇಕ ಪ್ರಮುಖ ಚಿತ್ರಗಳಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳು ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ. ತಮ್ಮ ಹಾಗೂ ಮಾಲಾಶ್ರೀ ಜೋಡಿ ಒಂದು ಕಾಲಕ್ಕೆ ಜನಪ್ರಿಯವಾಗಿದ್ದನ್ನು ಅವರು ನೆನೆಸಿಕೊಳ್ಳುತ್ತಾರೆ.

ಹಾರುತ ದೂರ ದೂರ...

ಪತ್ನಿ ಅನುರಾಧಾ ಜೊತೆಗೂಡಿ ಹದಿನೆಂಟು ವರ್ಷದಿಂದ `ಖೇಚರ ಅಕಾಡೆಮಿ~ ಹೆಸರಿನ ಭರತನಾಟ್ಯ ನೃತ್ಯಶಾಲೆ ನಡೆಸುತ್ತಿರುವ ಶ್ರೀಧರ್, ದೇಶ ವಿದೇಶಗಳಲ್ಲಿ ನಿರಂತರ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಗೆ ಒಂದು ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ತೃಪ್ತಿ ಸಿಗುತ್ತಿದೆ ಎನ್ನುವ ಅವರು, ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಗೆ ನೀಡುವ ಮಹತ್ವ ಕಂಡು ಬೆರಗಾಗಿದ್ದಾರೆ.ಆಧುನಿಕತೆಯ ಅನುಕರಣೆಯಲ್ಲಿ ಮುಳುಗಿದವರು ಒಂದೆಡೆಯಾದರೆ, ಸಂಸ್ಕೃತಿಯನ್ನು ಅರಸುತ್ತಿರುವವರ ವರ್ಗವೇ ದೊಡ್ಡದಿದೆ. ಅವರೆಲ್ಲರೂ ಭಾರತವನ್ನು ಸಂಸ್ಕೃತಿಯ ತವರು ಎಂದು ನಂಬಿದ್ದಾರೆ. ಹೀಗಾಗಿ ಭಾರತೀಯ ಕಲೆಯನ್ನು ವೀಕ್ಷಿಸಲು, ತಿಳಿದುಕೊಳ್ಳಲು ಪಾಶ್ಚಿಮಾತ್ಯ ರಾಷ್ಟ್ರಗಳ ಜನ ಮುಗಿಬೀಳುತ್ತಾರೆ ಎಂದು ಅನುಭವವನ್ನು ಹಂಚಿಕೊಳ್ಳುತ್ತಾರೆ.ನಟನೆಗಿಂತಲೂ ಭರತನಾಟ್ಯದಲ್ಲಿ ಹೆಚ್ಚಿನ ತೃಪ್ತಿ ಕಂಡಿರುವ ಶ್ರೀಧರ್, ಹಂಪಿ ವಿಶ್ವವಿದ್ಯಾಲಯದಲ್ಲಿ `ಭರತನಾಟ್ಯದಲ್ಲಿ ಪುರುಷಾಭಿವ್ಯಕ್ತಿ~ ಎಂಬ ವಿಷಯದಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ. 

ರಾಯರು ಬಂದರು...

ಈಟೀವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ `ಶ್ರೀ ರಾಘವೇಂದ್ರ ಮಹಿಮೆ~ ಕಲಾಗಂಗೋತ್ರಿ ಮಂಜು ನಿರ್ದೇಶಿಸುತ್ತಿರುವ ಧಾರಾವಾಹಿ. ಹಿರಿತೆರೆಯಲ್ಲಿ ಸಂತ ಶಿಶುನಾಳ ಶರೀಫರ ಪಾತ್ರ ವಹಿಸಿದ ನಂತರ ಶ್ರೀಧರ್ ಅವರಿಗೆ ಸಿಕ್ಕ ಅಪರೂಪದ ಪಾತ್ರ ಇದು. ಈ ಧಾರಾವಾಹಿಯ ನಿರ್ಮಾಪಕರು ಭಕ್ತಿ ಪ್ರಧಾನ ಚಿತ್ರಗಳ ತಯಾರಿಕೆಗೆ ಹೆಸರಾದ ತೆಲುಗಿನ ಕೆ. ರಾಘವೇಂದ್ರ ರಾವ್.ಮಹಿಮೆಗಳ ಮೂಲಕವೇ ರಾಘವೇಂದ್ರರ ಕತೆ ಹೇಳಲು ಧಾರಾವಾಹಿ ತಂಡ ನಿರ್ಧರಿಸಿದೆ. ಈಗಾಗಲೇ ನಿರ್ದೇಶಕರು ಒಂದು ತಿಂಗಳಿಗಾಗುವಷ್ಟು ಕಂತುಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ.ಬಾಬು ಹಿರಣ್ಣಯ್ಯ, ಭವ್ಯಶ್ರೀ ರೈ, ಅಲಕ್‌ನಂದ, ನ್ಯೂಸ್ ಪ್ರಕಾಶ್, ಸುಚಿತ್ರ, ಗಿರೀಶ್, ಸಪ್ನರಾಜ್, ಜಯ್‌ಕುಮಾರ್ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಧಾರಾವಾಹಿಗೆ ಸಂಗೀತ ನೀಡಿರುವುದು ವಿಶೇಷ. ಚಿತ್ರಕತೆ ಉದಯ ಭಾಸ್ಕರ್ ಅವರದ್ದು. ಚಿನ್ಮಯಿ ಅವರ ಸಂಭಾಷಣೆ, ಶ್ರೀನಿವಾಸ್ ಕಡವಿಗೆರೆ ಅವರ ಛಾಯಾಗ್ರಹಣ ಮಲ್ಲೇಶ್‌ಎಂ, ಸತ್ಯ ಭಾರದ್ವಾಜ್ ಅವರ ಸಂಕಲನ ಇದೆ. ಆಗಸ್ಟ್ 13ರಿಂದ ರಾತ್ರಿ 8ಗಂಟೆಗೆ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗುತ್ತಿದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.