ಶನಿವಾರ, ಏಪ್ರಿಲ್ 17, 2021
31 °C

ಗುವಾಹಟಿಯ ಅವಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿಯ ಮುಖ್ಯರಸ್ತೆಯಲ್ಲಿ  ಜುಲೈ 9ರ ರಾತ್ರಿ 17 ವರ್ಷದ ಹೆಣ್ಣುಮಗಳೊಬ್ಬಳ ಮೇಲೆ ಪುರುಷರ ಗುಂಪೊಂದು ನಡೆಸಿದ ಲೈಂಗಿಕ ದುರ್ವರ್ತನೆ ಹಾಗೂ ಅವಳನ್ನು ವಿವಸ್ತ್ರಗೊಳಿಸಲು ಯತ್ನಿಸಿದ ವಿಕೃತಿ ಆಘಾತಕಾರಿ.

 

ಯುವತಿಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಆಕೆಯ ನೆರವಿಗೆ ಧಾವಿಸದೆ `ತಮಾಷೆ~ಯಂತೆ ನೋಡುತ್ತಾ ನಿಂತಿದ್ದ ಸಾರ್ವಜನಿಕರ ವರ್ತನೆಯಂತೂ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬಂತಹ ಆತಂಕವನ್ನು ಹುಟ್ಟುಹಾಕುತ್ತದೆ. ಹದಿಹರೆಯದ ಹುಡುಗಿಯ ಮೇಲಿನ ಈ ಅಸಹ್ಯಕರವಾದ ಗೂಂಡಾವರ್ತನೆಯ ವಿಡಿಯೊ ಚಿತ್ರಣ ಅಂತರ್ಜಾಲದಲ್ಲಿ ಪ್ರಸಾರಗೊಂಡು ರಾಷ್ಟ್ರದಾದ್ಯಂತ ಆಕ್ರೋಶ ಹುಟ್ಟಿಸಿದೆ.ಈ ಘಟನೆ ನಡೆದ ಸ್ಥಳಕ್ಕೆ ತಲುಪಲು ಪೊಲೀಸರಿಗೆ 45 ನಿಮಿಷಗಳು ಬೇಕಾಯಿತು ಎಂಬುದು ನಾಚಿಕೆಗೇಡು. ಇದಕ್ಕೆ ಸಮಜಾಯಿಷಿ ನೀಡುತ್ತಾ `ಮೆಷಿನ್‌ನಲ್ಲಿ ಕಾರ್ಡ್ ಹಾಕಿದ ತಕ್ಷಣ ಅಪರಾಧದ ಸ್ಥಳಕ್ಕೆ ಆಗಮಿಸಲು ಪೊಲೀಸರೇನೂ ಎಟಿಎಂ ಮೆಷಿನ್‌ಗಳಲ್ಲ~ ಎಂದು ಅಸ್ಸಾಂ ಡಿಜಿಪಿ ಹೇಳಿದ ಮಾತಂತೂ ಪೊಲೀಸ್ ವ್ಯವಸ್ಥೆಯ ಮನಸ್ಥಿತಿಗೆ ಹಿಡಿದ ಕನ್ನಡಿ.ಈ ಪ್ರಕರಣಕ್ಕೆ   ಸಂಬಂಧಿಸಿದಂತೆ 11ದುಷ್ಕರ್ಮಿಗಳ ಛಾಯಾಚಿತ್ರಗಳಿರುವ ಭಿತ್ತಿಫಲಕಗಳನ್ನು ಗುವಾಹಟಿ ನಗರದಾದ್ಯಂತ ಪ್ರತಿಭಟನಾಕಾರರು ಪ್ರದರ್ಶಿಸಿ ಒತ್ತಡ ಸೃಷ್ಟಿಸಿದ ನಂತರವಷ್ಟೇ ಪೊಲೀಸರು ದುಷ್ಕರ್ಮಿಗಳ ಬಂಧನ ಕಾರ್ಯಾಚರಣೆ ನಡೆಸ್ದ್ದಿದಾರೆ. ಈವರೆಗೆ ಆರು ಮಂದಿಯನ್ನಷ್ಟೇ ಬಂಧಿಸಲಾಗಿದೆ.ರಾಷ್ಟ್ರದಾದ್ಯಂತ ಮಹಿಳೆಯರ ವಿರುದ್ಧ ಅಪರಾಧಗಳು  ಹೆಚ್ಚುತ್ತಿರುವ ಕಾಲ ಇದು. 2011ರಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧಗಳು 2.28ಲಕ್ಷಕ್ಕೇರಿದೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿ. ಭಾರತದ ಅನೇಕ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗಳಿಂದ ಹೆಣ್ಣುಮಕ್ಕಳು ಹಲ್ಲೆಗೊಳಗಾಗಿರುವ ಪ್ರಕರಣಗಳೂ ಈಚಿನ ದಿನಗಳಲ್ಲಿ ವರದಿಯಾಗಿವೆ.ಹೀಗಿದ್ದೂ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗುವುದೇ ಇಲ್ಲ ಎಂಬುದು ನಮ್ಮ ಕಾನೂನಿನ ಮಿತಿಗಳನ್ನು ಎತ್ತಿ ತೋರುತ್ತದೆ. ಜೊತೆಗೆ ಮಹಿಳೆಯ ವಿರುದ್ಧದ ಅಪರಾಧಗಳಿಗೆ ಆಕೆಯೇ ಹೊಣೆ; ಅವಳ ವೇಷಭೂಷಣ, ಚಾರಿತ್ರ್ಯ ಕಾರಣ ಇತ್ಯಾದಿ ಸಬೂಬುಗಳಿಂದ ಅಪರಾಧಿಗಳನ್ನು ದಂಡಿಸುವಲ್ಲಿ ಹಗುರವಾದ ಧೋರಣೆ ತೋರುವುದು ಪೊಲೀಸ್ ವ್ಯವಸ್ಥೆಯಲ್ಲಿ ಈಗಲೂ ಮುಂದುವರಿದಿರುವುದು ದುರದೃಷ್ಟಕರ.

 

ಹೀಗಾಗಿಯೇ ಹೆಣ್ಣುಮಗಳೊಬ್ಬಳ ಮೇಲಿನ ದುರ್ವರ್ತನೆಯ ಘಟನೆಯನ್ನು ಯಾರೂ ಹಗುರವಾಗಿ ಪರಿಗಣಿಸಬಾರದು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಹೇಳಿರುವುದು ಸರಿಯಾಗಿಯೇ ಇದೆ. ಈ ಘಟನೆಗೆ ದೃಶ್ಯ ಮಾಧ್ಯಮ ವ್ಯಕ್ತಿಯೊಬ್ಬರ ಪ್ರಚೋದನೆ ಕುರಿತ ವಿವಾದವೂ ಸುತ್ತಿಕೊಂಡಿದೆ.ಅದೇನೇ ಇರಲಿ, ಘಟನೆಯ ಸಮಗ್ರ ತನಿಖೆ, ತಪ್ಪಿತಸ್ಥರಿಗೆ ತೀವ್ರ ಶಿಕ್ಷೆಯಾಗುವಂತೆ ರಾಷ್ಟ್ರೀಯ ಮಹಿಳಾ ಆಯೋಗ  ನೋಡಿಕೊಳ್ಳುವುದು ಅಗತ್ಯ. 2007ರಲ್ಲಿ ಇದೇ ಗುವಾಹಟಿಯಲ್ಲಿ ಆದಿವಾಸಿ ಮಹಿಳೆ ಲಕ್ಷ್ಮಿ ಓರಾನ್‌ಳನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ ಘಟನೆ ಇನ್ನೂ ಹಸಿರಾಗಿದೆ. ಆಕೆ ಇನ್ನೂ ನ್ಯಾಯದ ನಿರೀಕ್ಷೆಯಲ್ಲಿದ್ದಾಳೆ ಎಂಬುದು ಕಾನೂನಿನ ನಿಧಾನಗತಿಗೆ ಸಾಕ್ಷಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.