ಗುರುವಾರ , ಮೇ 19, 2022
21 °C

ಗೃಹ ಸಚಿವರ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಚೆನ್ನೈ (ಪಿಟಿಐ): ಚುನಾವಣೆಯಲ್ಲಿ ಅಕ್ರಮ ಎಸಗಿದ ಆಪಾದನೆಗಳಿಗೆ ಸಿಲುಕಿರುವ ಚಿದಂಬರಂ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ ಎಂದಿರುವ ಬಿಜೆಪಿ ಹಾಗೂ ಎಐಎಡಿಎಂಕೆ, ತಕ್ಷಣವೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಪ್ರಧಾನಿ ಮನಮೋಹನ್ ಅವರನ್ನು ಆಗ್ರಹಿಸಿವೆ.

ಚಿದಂಬರಂ ಅವರು ಮುಂಚೆಯೇ ರಾಜೀನಾಮೆ ನೀಡಬೇಕಿತ್ತು. ಆದರೆ ನಮ್ಮ ಒತ್ತಾಯವನ್ನು ಪ್ರಧಾನಿಯವರು ಗಂಭೀರವಾಗಿ ಪರಿಗಣಿಸಲಿಲ್ಲ. ಅವರನ್ನು ಸಂಪುಟದಿಂದ ಕೈಬಿಡಲು ಪ್ರಧಾನಿ ಅವರಿಗೆ ಇನ್ನೆಷ್ಟು ಸಾಕ್ಷ್ಯಗಳು ಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕೇಳಿದ್ದಾರೆ.

ಚಿದಂಬರಂ ವಿರುದ್ಧ ಏನೆಲ್ಲಾ ಆರೋಪಗಳು ಕೇಳಿಬಂದರೂ, ಕಾಂಗ್ರೆಸ್, ಯುಪಿಎ, ಪ್ರಧಾನಿ ಮತ್ತು ಸೋನಿಯಾ ಗಾಂಧಿ ಅವರನ್ನು ರಕ್ಷಿಸುತ್ತಿದ್ದಾರೆ. ಹೈಕೋರ್ಟ್ ತೀರ್ಪಿನ ನಂತರವೂ ಏಕೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಚಿದಂಬರಂ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸುವುದು ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪುಚುಕ್ಕೆ ಎಂದು ಎಐಎಡಿಎಂಕೆ ಮುಖ್ಯಸ್ಥೆಯಾದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೆನ್ನೈನಲ್ಲಿ ಟೀಕಿಸಿದ್ದಾರೆ.

ಚುನಾವಣಾ ಅಕ್ರಮಗಳ ಆರೋಪ ಎದುರಿಸುತ್ತಿರುವ ಚಿದಂಬರಂ ಅವರು ತಕ್ಷಣ ತಾವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಸಚಿವ ಸ್ಥಾನದಿಂದ ಪ್ರಧಾನಿಯವರು ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿಚಾರಣೆ ಎದುರಿಸಲು ಅಂಜುತ್ತಿರುವ ಚಿದಂಬರಂ ನ್ಯಾಯ ಪ್ರಕ್ರಿಯೆ ವಿಳಂಬಗೊಳಿಸುವ ದುರುದ್ದೇಶದಿಂದ, ದಾವೆ ವಜಾ ಅರ್ಜಿ ಸಲ್ಲಿಸಿದ್ದರು ಎಂದು ಅವರು ಆಪಾದಿಸಿದ್ದಾರೆ.

ಸರ್ಕಾರ, ಕಾಂಗ್ರೆಸ್ ಸಮರ್ಥನೆ

ಗೃಹ ಸಚಿವ ಪಿ.ಚಿದಂಬರಂ ವಿರುದ್ಧದ ಚುನಾವಣಾ ಅಕ್ರಮದ ದಾವೆ ವಜಾಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ್ದರೂ, ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಗುರುವಾರ ಚಿದಂಬರಂ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿವೆ.

ಈ ತೀರ್ಪಿನ ಹಿನ್ನೆಲೆಯಲ್ಲಿ ಚಿದಂಬರಂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಎಐಎಡಿಎಂಕೆ  ಒತ್ತಾಯ ಮಾಡಿರುವುದನ್ನು ಸರ್ಕಾರ ಖಂಡಿಸಿದೆ.

ಬಿಜೆಪಿ ರಾಜೀನಾಮೆಗಾಗಿ ಒತ್ತಾಯಿಸುತ್ತಿರುವ ಕಾರಣಕ್ಕೆ ಚಿದಂಬರಂ ಅವರು ರಾಜೀನಾಮೆ ಪತ್ರವನ್ನು ಮುದ್ರಿಸಿ ಸಿದ್ಧವಾಗಿಟ್ಟುಕೊಂಡಿರಬೇಕೇ? ಅಥವಾ ಅವರು ಅಂತರಜಾಲದಲ್ಲಿ ತಮ್ಮ ರಾಜೀನಾಮೆ ಪ್ರಕಟಿಸಬೇಕೇ?- ಎಂದು ಕೇಳಿದ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಬೆಳಗಾದ ತಕ್ಷಣ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸುವುದೇ ಆ ಪಕ್ಷದ ಕಾರ್ಯಸೂಚಿಯಾಗಿದೆ ಎಂದು ವ್ಯಂಗ್ಯವಾಡಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರೂ ಗೃಹ ಸಚಿವರನ್ನು ಬೆಂಬಲಿಸಿದರು.  ಚಿದಂಬರಂ ವಿಚಾರಣೆ ಚುನಾವಣಾ ದಾವೆಗೆ ಸಂಬಂಧಿಸಿದ್ದು. ಅದೇನೂ ಗೃಹ ಸಚಿವರಾಗಿ ಅವರ ಕಾರ್ಯಭಾರಕ್ಕೆ ಸಂಬಂಧಿಸಿದ ವಿಚಾರಣೆಯಲ್ಲ ಎಂದು ದಿಗ್ವಿಜಯ್ ಹೇಳಿದರು.

ಶಿವಗಂಗಾ ಕ್ಷೇತ್ರದಿಂದ ಚಿದಂಬರಂ ಅವರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣಾ ತಕರಾರುಗಳ ವಿರುದ್ಧ ಚುನಾವಣಾ ದಾವೆಯನ್ನೇ ಹೂಡಬೇಕಾಗುತ್ತದೆ. ಆದರೆ ಮಾಧ್ಯಮಗಳು ಇದೊಂದು ಕ್ರಿಮಿನಲ್ ಪ್ರಕರಣವೆಂಬಂತೆ ಬಿಂಬಿಸುತ್ತಿವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.