ಬುಧವಾರ, ಜೂನ್ 23, 2021
29 °C
ಭಾರತ- ಶ್ರೀಲಂಕಾ ಅಭ್ಯಾಸ ಪಂದ್ಯ ಇಂದು

ಗೆಲುವಿನ ವಿಶ್ವಾಸದಲ್ಲಿ ಮಹಿ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): ಇತ್ತೀಚಿನ ದಿನಗಳಲ್ಲಿ ಸತತ ವೈಫಲ್ಯ ಅನುಭವಿಸಿ ಆತ್ಮವಿಶ್ವಾಸ ಕಳೆದುಕೊಂಡಿರುವ ಭಾರತ ತಂಡದವರು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಸೋಮವಾರ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ.ಮಹೇಂದ್ರ ಸಿಂಗ್‌ ದೋನಿ ಬಳಗ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮಾರ್ಚ್‌ 21 ರಂದು ಪಾಕಿಸ್ತಾನದ ಜೊತೆ ಪೈಪೋಟಿ ನಡೆಸಲಿದೆ. ಅದಕ್ಕೆ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಬುಧವಾರ ನಡೆಯುವ ಎರಡನೇ ಅಭ್ಯಾಸ ಪಂದ್ಯದಲ್ಲಿ ‘ಮಹಿ’ ಬಳಗ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ.

ಪಾಕ್‌ ವಿರುದ್ಧದ ಮಹತ್ವದ ಹಣಾಹಣಿಗೆ ಸಜ್ಜಾಗಲು ಭಾರತಕ್ಕೆ ಈ ಎರಡು ಅಭ್ಯಾಸ ಪಂದ್ಯಗಳು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ತಂಡದ ಎಲ್ಲ 15 ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ದೊರೆತಿದೆ.ಬಾಂಗ್ಲಾದಲ್ಲಿ ಇತ್ತೀಚೆಗೆ ನಡೆದ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿತ್ತು. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ಪ್ರವಾಸದಲ್ಲಿ ಕೆಟ್ಟ ಪ್ರದರ್ಶನ ತೋರಿತ್ತು. ಇದರಿಂದ ಆಟಗಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಲಂಕಾ ವಿರುದ್ಧ ಗೆಲುವು ದೊರೆತರೆ ಆಟಗಾರರಿಗೆ ಹೊಸ ಹುಮ್ಮಸ್ಸು ದೊರೆಯುವುದು ಖಚಿತ.ಅದೇ ರೀತಿ ಟ್ವೆಂಟಿ-20 ಪಂದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳಲು ಭಾರತ ಪ್ರಯತ್ನಿಸಲಿದೆ. ಏಕೆಂದರೆ ದೋನಿ ಬಳಗ ಈ ಹಿಂದಿನ ಐದು ತಿಂಗಳ ಅವಧಿಯಲ್ಲಿ ಯಾವುದೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಅಕ್ಟೋಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿತ್ತು.

ಸುರೇಶ್‌ ರೈನಾ ಮತ್ತು ಯುವರಾಜ್‌ ಸಿಂಗ್‌ ಅವರಿಗೆ ಇಂದಿನ ಅಭ್ಯಾಸ ಪಂದ್ಯ ಮಹತ್ವದ್ದಾಗಿದೆ. ಯುವರಾಜ್‌ ಹಲವು ತಿಂಗಳ ಬಿಡುವಿನ ಬಳಿಕ ತಂಡಕ್ಕೆ ಮರಳಿದ್ದಾರೆ. ರೈನಾ ಏಷ್ಯಾಕಪ್‌ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಗಾಯದ ಕಾರಣ ಏಷ್ಯಾಕಪ್‌ ಟೂರ್ನಿಯಿಂದ ಹಿಂದೆ ಸರಿದಿದ್ದ ನಾಯಕ ದೋನಿ ಕೂಡಾ ಬ್ಯಾಟಿಂಗ್‌ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿರುವ ಶ್ರೀಲಂಕಾ ತಂಡ ಬಲಿಷ್ಠವಾಗಿದೆ. ಯುವ ಆಟಗಾರ ದಿನೇಶ್‌ ಚಂಡಿಮಾಲ್‌ ಮುನ್ನಡೆಸುತ್ತಿರುವ ತಂಡದಲ್ಲಿ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರಂತಹ ಅನುಭವಿ ಆಟಗಾರರಿದ್ದಾರೆ. ಆದ್ದರಿಂದ ಲಂಕಾ ತಂಡ ಭಾರತಕ್ಕೆ ಪ್ರಬಲ ಸವಾಲು ಒಡ್ಡುವುದು ಖಚಿತ.

ತಂಡಗಳು ಇಂತಿವೆ

ಭಾರತ: ಮಹೇಂದ್ರ ಸಿಂಗ್‌ ದೋನಿ (ನಾಯಕ), ವರುಣ್‌ ಆ್ಯರನ್‌, ಸ್ಟುವರ್ಟ್‌ ಬಿನ್ನಿ, ಶಿಖರ್‌ ಧವನ್‌, ರವೀಂದ್ರ ಜಡೇಜ, ವಿರಾಟ್‌ ಕೊಹ್ಲಿ, ಭುವನೇಶ್ವರ್‌ ಕುಮಾರ್‌, ಅಮಿತ್‌ ಮಿಶ್ರಾ, ಅಜಿಂಕ್ಯ ರಹಾನೆ, ಆರ್‌. ಅಶ್ವಿನ್‌, ಸುರೇಶ್‌ ರೈನಾ, ಮೊಹಮ್ಮದ್‌ ಶಮಿ, ಮೋಹಿತ್‌ ಶರ್ಮ, ರೋಹಿತ್‌ ಶರ್ಮ, ಯುವರಾಜ್‌ ಸಿಂಗ್‌

ಶ್ರೀಲಂಕಾ: ದಿನೇಶ್‌ ಚಂಡಿಮಾಲ್‌ (ನಾಯಕ), ತಿಲಕರತ್ನೆ ದಿಲ್ಶಾನ್‌, ರಂಗನಾ ಹೆರಾತ್‌, ಮಾಹೇಲ ಜಯವರ್ಧನೆ, ನುವಾನ್‌ ಕುಲಶೇಖರ, ಸುರಂಗ ಲಕ್ಮಲ್‌, ಲಸಿತ್‌ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್‌, ಅಜಂತಾ ಮೆಂಡಿಸ್, ಕುಶಾಲ್‌ ಪೆರೇರಾ, ತಿಸಾರ ಪೆರೇರಾ, ಸೀಕುಗೆ ಪ್ರಸನ್ನ, ಕುಮಾರ ಸಂಗಕ್ಕಾರ, ಸಚಿತ್ರ ಸೇನನಾಯಕೆ, ಲಾಹಿರು ತಿರಿಮಾನೆ

ಪಂದ್ಯದ ಆರಂಭ: ರಾತ್ರಿ 7.00ಕ್ಕೆ

(ಭಾರತೀಯ ಕಾಲಮಾನ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.