ಗುರುವಾರ , ಮೇ 19, 2022
22 °C
ಬುಗುಡನಹಳ್ಳಿ ಕೆರೆಗೆ ವಾರದಲ್ಲಿ ನೀರು

ಗೊರೂರು ಡ್ಯಾಂನಿಂದ ನೀರು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಉತ್ತಮ ಮಳೆಯ ಕಾರಣ ಗೊರೂರಿನ ಹೇಮಾವತಿ ಜಲಾಶಯ ತುಂಬುತ್ತಿದ್ದು, ಜಿಲ್ಲೆಯ ಬಾಯಾರಿದ ಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗುತ್ತಿದೆ.ಗೊರೂರು ಜಲಾಶಯದಲ್ಲಿ 20 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಹೇಮಾವತಿ ನೀರು ಪೂರೈಸುವ ನಾಲೆಗೆ ಭಾನುವಾರವೇ 200 ಕ್ಯೂಸಕ್ ನೀರು ಬಿಡಲಾಗಿದೆ. ಹೇಮಾವತಿ ನೀರು ಮೊದಲು ತುರುವೇಕೆರೆಯ ಮಲ್ಲಘಟ್ಟ ಕೆರೆಗೆ ಹರಿದು, ನಂತರ ಇತರ ತಾಲ್ಲೂಕುಗಳ ಕೆರೆಗಳಿಗೆ ಹರಿಯಲಿದೆ.ಜಿಲ್ಲೆಯ ಪ್ರಮುಖ ಕೆರೆಗಳಾದ ಬುಗುಡನಹಳ್ಳಿ, ಹೆಬ್ಬಾಕ, ಗುಬ್ಬಿ, ಕುಣಿಗಲ್ ದೊಡ್ಡಕೆರೆ, ಈಚನೂರು, ಸಿದ್ದಾಪುರ ಕೆರೆಗಳಿಗೆ ಮುಂದಿನ ಒಂದು ವಾರದಲ್ಲಿ ಹೇಮಾವತಿ ನೀರು ಹರಿದು ಬರಲಿದೆ. ನಾಲೆ ಒಣಗಿರುವ ಹಿನ್ನೆಲೆಯಲ್ಲಿ ಹೆಚ್ಚು ನೀರು ಇಂಗಲಿದೆ. ಆದ್ದರಿಂದ ಆರಂಭದಲ್ಲಿ 200 ಕ್ಯೂಸಕ್ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರು ಬಿಡುಗಡೆ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು ಎಂದು ಹೇಮಾವತಿ ನಾಲೆ ಮುಖ್ಯ ಎಂಜಿನಿಯರ್ ಬಾಲಕೃಷ್ಣ `ಪ್ರಜಾವಾಣಿ'ಗೆ ತಿಳಿಸಿದರು.ಜಿಲ್ಲೆಯಲ್ಲಿ ಹೇಮಾವತಿ ನಾಲೆ ಭಾಗದ 250 ಕೆರೆಗಳು ಹಾಗೂ ನಾಲೆಯ ಅಸುಪಾಸಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ತುರುವೇಕೆರೆ, ತುಮಕೂರು, ಕುಣಿಗಲ್, ಗುಬ್ಬಿ, ತಿಪಟೂರು ತಾಲ್ಲೂಕು ಕೆರೆಗಳಿಗೆ ಹರಿಸುವ ನೀರನ್ನು ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೂ ಒದಗಿಸಲಾಗುತ್ತದೆ.ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕಿನ ಕೆರೆಗಳಿಗೆ ಬಿಡುವ ನೀರನ್ನು ಪಟ್ಟಣ ಪ್ರದೇಶಕ್ಕೆ ಮಾತ್ರ ಬಳಸಬೇಕು ಎಂದು ಅವರು ತಿಳಿಸಿದರು.ನೀಗಲಿದೆ ತುಮಕೂರಿನ ದಾಹ

ಹೇಮಾವತಿ ಜಲಾಶಯದಿಂದ ಬಿಡಲಾಗಿರುವ ನೀರು ಒಂದು ವಾರದಲ್ಲಿ ಬುಗುಡನಹಳ್ಳಿ ಕೆರೆ ತಲುಪಲಿದೆ. ನಗರಕ್ಕೆ ಕುಡಿಯುವ ನೀರಿನ ಮೂಲವಾದ ಬುಡಗುಡನಹಳ್ಳಿ ಕೆರೆ ಪ್ರಸ್ತುತ ಸಂಪೂರ್ಣ ಬತ್ತಿದ್ದು, ಕೆರೆಯಲ್ಲಿ 30ರಿಂದ 40 ಅಡಿಗಳಷ್ಟು ನೀರು ತುಂಬಿದರೆ, ತುಮಕೂರು ನಗರದ ಜನರ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ನಗರದಲ್ಲಿರುವ 3.7 ಲಕ್ಷ ನಿವಾಸಿಗಳಿಗೆ ಪ್ರತಿದಿನ ಅಂದಾಜು 50 ಎಂಎಲ್‌ಡಿ (ದಶಲಕ್ಷ ಲೀಟರ್) ನೀರು ಅವಶ್ಯಕತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.