ಶನಿವಾರ, ಮೇ 28, 2022
27 °C

ಗೋಡೆ ಚಿತ್ರ: ಅಂದ ಕಾಯ್ದುಕೊಳ್ಳಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಗರದ ವಿವಿಧ ಪ್ರದೇಶದಲ್ಲಿ ಗೋಡೆಗಳ ಮೇಲೆ ಸುಂದರ ವರ್ಣ ಚಿತ್ರಗಳನ್ನು ಬರೆಯಲಾಗಿದ್ದು, ಅಂತಹ ಚಿತ್ರಗಳ ಅಂದಗೆಡಿಸುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಖಾಸಬಾಗ ರಾಘವೇಂದ್ರ ಕಾಲನಿಯ ಕೃಷ್ಣರಾಜೇಂದ್ರ ತಾಳೂಕರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.ನಗರದ ಅನೇಕ ಕಡೆಗಳಲ್ಲಿ ಗೋಡೆಗಳ ಮೇಲೆ ಸುಂದರ ತೈಲವರ್ಣದ ಚಿತ್ರಗಳನ್ನು ಬರೆಯಲಾಗಿದೆ. ಇದರಿಂದ ನಗರದ ಸೌಂದರ್ಯ ದ್ವಿಗುಣಗೊಂಡಿದೆ. ಅಂತಹ ಚಿತ್ರಗಳ ಮೇಲೆ ಯಾವುದೇ ಕಾರಣಕ್ಕೂ ಜಾಹೀರಾತು ಅಂಟಿಸಲು ಅವಕಾಶ ಮಾಡಿಕೊಡಬಾರದು. ಜತೆಗೆ ಅದನ್ನು ಅಂದಗೆಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಮ್ಮೇಳನದ ತನಕ ಈ ಚಿತ್ರಗಳನ್ನು ಕಾಯ್ದುಕೊಂಡರೆ ಪ್ರಯೋಜನವಿಲ್ಲ. ಅದು ನಿರಂತರವಾಗಿರಬೇಕು ಎಂದು ಆಗ್ರಹಿಸಿದ್ದಾರೆ.ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಈ ಭಾಗದ ಪ್ರಕೃತಿ, ಪ್ರಾಣಿ ವಿಶೇಷ, ಹಿರಿಯ ವಿದ್ವಾಂಸರ ನಾಣ್ಣುಡಿಗಳನ್ನು ಬರೆಯಲಾಗಿದೆ. ಅವೆಲ್ಲ ಕನ್ನಡ ಪ್ರೇಮದ ಸಂಕೇತಗಳಾಗಿವೆ. ಹಾಗೇನಾದರೂ ಗೋಡೆ ಬರಹ ಕೆಡಿಸುವ ಪ್ರಯತ್ನ ಮಾಡಿದರೆ ಅದು ಕನ್ನಡಕ್ಕೆ ಮಾಡುವ ಅಪಮಾನವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಡೆ ಬರಹಗಳನ್ನು ಬರೆಯಲಾಗಿದೆ. ಅಂತಹ ಪ್ರದೇಶದಲ್ಲಿ ಭಿತ್ತಿಪತ್ರಗಳನ್ನು ಇಲ್ಲವೇ ಜಾಹೀರಾತು ಫಲಕ ಅಂಟಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಬೆಳಗಾವಿಯಲ್ಲೂ ಅಂತಹ ಎಚ್ಚರಿಕೆ ಫಲಕಗಳನ್ನು ಹಾಕಬೇಕು. ಆ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಕೋರಿದ್ದಾರೆ. ಈ ಸಂದರ್ಭದಲ್ಲಿ ವಿ.ಎಂ.ಬೆಟಗೇರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.