ಭಾನುವಾರ, ಏಪ್ರಿಲ್ 18, 2021
24 °C

ಗೋಮಟೇಶ ವಿದ್ಯಾಪೀಠ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಶ್ರವಣಬೆಳಗೊಳದ ಚಾವುಂಡರಾಯ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಏಳು ಮಂದಿ ಗಣ್ಯರಿಗೆ ‘ಗೋಮಟೇಶ ವಿದ್ಯಾಪೀಠ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರವಣಬೆಳಗೊಳ ಮಠದ ವತಿಯಿಂದ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ. ಮುಂಬೈನ ಉದ್ಯಮಿ    ಶಂಭುಕುಮಾರ್ ಕಾಸ್ಲಿವಾಲ   32ನೇ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಧಾರವಾಡದ ಡಾ.ಟಿ.ಆರ್. ಜೋಡಟ್ಟಿ, ಮೈಸೂರು ವಿ.ವಿ.ಯ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಪ್ರೀತಿ ಶುಭಚಂದ್ರ ಹಾಗೂ ಬೆಳಗಾವಿ  ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಬೇಡಕಿಹಾಳದ ಕಮಲಾವತಿ ಮಿರ್ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪನ್ಯಾಸಕ ಬಿ.ಪಿ. ನ್ಯಾಮಗೌಡ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಯಿತು.‘ಪ್ರಜಾವಾಣಿ’ ಸಹ ಸಂಪಾದಕ    ಪದ್ಮರಾಜ ದಂಡಾವತಿ ಅವರು ಪತ್ರಿಕಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಜಯಶೀಲರಾವ್ ಅವರಿಗೆ ವಿಶೇಷ ಮಾಧ್ಯಮ ಪ್ರಶಸ್ತಿ ಕೊಡಲಾಯಿತು.ಕಲಾ ಕ್ಷೇತ್ರಕ್ಕೆ ನೀಡುವ ಪ್ರಶಸ್ತಿಯನ್ನು ನಾಟಕ ಹಾಗೂ ಜಾನಪದ ಕಲಾವಿದ ಎಚ್.ಸಿ. ಹನುಮಂತು ಅವರಿಗೆ ಪ್ರದಾನ ಮಾಡಿದರೆ,  ಮಂಡ್ಯದ ಎಚ್.ಪಿ. ಮೋಹನ್ ಅವರಿಗೆ 2011ನೇ ಸಾಲಿನ ‘ಎ.ಆರ್. ನಾಗರಾಜ್ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಜ್ಞಾನ ಮತ್ತು ಶಕ್ತಿಯ ಸದುಪಯೋಗ ಪಡೆದು ಅದನ್ನು ಅಭಿವೃದ್ಧಿಗಾಗಿ ಬಳಸುವ ಕೌಶಲ ಇರುವುದು ಮನುಷ್ಯನಿಗೆ ಮಾತ್ರ. ಈ ಕಾರಣದಿಂದ ವಿಶ್ವದಲ್ಲಿ ಸಾಕಷ್ಟು  ವೈಜ್ಞಾನಿಕ ಆವಿಷ್ಕಾರಗಳಾಗಿವೆ. ಹಳ್ಳಿ ಹಳ್ಳಿಗಳಲ್ಲೂ ಜನರು ವೈಜ್ಞಾನಿಕ ಸಂಶೋಧನೆಯ ಲಾಭ ಪಡೆಯುತ್ತಿದ್ದಾರೆ.ವಿಜ್ಞಾನ ಎಷ್ಟೇ ಬೆಳೆದಿದ್ದರೂ ಪ್ರಕೃತಿಯ    ಕೊಡುಗೆ ಹಾಗೂ ಧರ್ಮವನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು. ‘ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ನಿಸ್ವಾರ್ಥವಾಗಿ ದುಡಿಯುವ ಜನರು ಬೇಕಾಗುತ್ತಾರೆ. ಇಂಥ ಸೇವೆ ಮಾಡಿದವರನ್ನು ಗುರುತಿಸಿ  ಗೌರವಿಸುವುದು ಸಮಾಜದ ಕರ್ತವ್ಯ. ಶ್ರವಣಬೆಳಗೊಳ ಮಠದ ವತಿಯಿಂದ 32 ವರ್ಷಗಳಿಂದ ಈ ಕಾರ್ಯ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.ವಿದ್ಯಾಪೀಠ ಪ್ರಶಸ್ತಿ 25 ಸಾವಿರ ರೂಪಾಯಿ ನಗದು, ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಎ. ಶಾಂತರಾಜ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಸ್.ಎನ್. ಅಶೋಕ ಕುಮಾರ್ ನಿರೂಪಿಸಿ, ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.