ಮಂಗಳವಾರ, ಮೇ 17, 2022
27 °C

ಗೋವು ನಿಜವಾದ ದೇವರು: ಜಗದೀಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರೈತರ ಮನೆಯ ಸದಸ್ಯನಾಗಿ, ಅವಿಭಾಜ್ಯ ಅಂಗವಾಗಿ ಕುಟುಂಬ ನಿರ್ವಹಣೆಗೆ ಆಸರೆಯಾದ ಗೋವುಗಳು ನಮ್ಮ ನಿಜವಾದ ದೇವರು ಎಂದು  ಶಿವಮೊಗ್ಗ ಹಾಲು ಒಕ್ಕೂಟ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಹೇಳಿದರು.ನಗರದ ಹೊರವಲಯದ ಹಸೂಡಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಗುರುವಾರ ದೀಪಾವಳಿ ಹಬ್ಬ ಹಾಗೂ ಹಾಲು ಒಕ್ಕೂಟದ 25ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗೋಪೂಜೆ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅನಾದಿ ಕಾಲದಿಂದಲೂ ರೈತಸ್ನೇಹಿಯಾಗಿರುವ ಗೋವುಗಳು ಆರ್ಥಿಕವಾಗಿ ರೈತರನ್ನು ಸಬಲರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮನೆಯಲ್ಲಿ ಒಂದು ಹಸುವಿದ್ದರೆ ಆ ಮನೆ ಎಂದಿಗೂ ಆರ್ಥಿಕವಾಗಿ ಸಮಸ್ಥಿತಿ ಕಾಯ್ದುಕೊಂಡಿರುತ್ತದೆ ಎಂದ ಅವರು, ಹೈನುಗಾರಿಕೆ ಹೆಚ್ಚಿಸುವ ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.ಜಾಗತೀಕರಣದಿಂದಾಗಿ ಜನರು ಪಟ್ಟಣದತ್ತ ಮುಖ ಮಾಡಿದ್ದಾರೆ. ಅಲ್ಲದೇ, ಗೋವುಗಳ ಲಾಲನೆ-ಪಾಲನೆ ಮಾಡುವವರಿಲ್ಲದೇ ದೇಶಿಯ ಗೋವುಗಳು ಕಣ್ಮರೆಯಾಗುತ್ತಿವೆ ಎಂದ ಅವರು,  ದೇಶಿಯ ಗೋತಳಿಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ  ಮೇಲಿದೆ ಎಂದರು.ರಾಜ್ಯದಲ್ಲಿ ಹೆಚ್ಚು ಹಾಲು ಸಂಗ್ರಹಣೆಯಾಗುತ್ತಿದ್ದು, ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂ 2 ಪ್ರೋತ್ಸಾಹ ಧನದ ಜತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೆ ರೈತರಿಗೆ ರೂ 90 ಪೈಸೆ ಹೆಚ್ಚಳ ಮಾಡಲಾಗಿದ್ದು, ಈಗ ಪ್ರತಿ ಲೀಟರ್‌ಗೆ ರೂ 20 ನೀಡಲಾಗುತ್ತಿದೆ ಎಂದರು.ಹಾಲು ಒಕ್ಕೂಟದ ನಿರ್ದೇಶಕ ಜಯರಾಂ ಗೋಂದಿ ಮಾತನಾಡಿ, ಒಕ್ಕೂಟದ ಕಾರ್ಯ ರೈತರ ಮತ್ತು ಹಾಲು ಒಕ್ಕೂಟದ ನಡುವೆ ಉತ್ತಮ ಸಂಬಂಧ ಏರ್ಪಡಿಸುವುದಾಗಿದ್ದು, ನಿಟ್ಟಿನಲ್ಲಿ ಈ ಗೋಪೂಜೆ ಕಾರ್ಯಕ್ರಮ ಒಕ್ಕೂಟದ ಮೊದಲ ಹೆಜ್ಜೆಯಾಗಿದೆ ಎಂದರು.ಹಾಲು ಒಕ್ಕೂಟದ ನಿರ್ದೇಶಕ ಗಂಗಾಧರ ಮಾತನಾಡಿ, ಹಿಂದಿನ ದಿನಗಳಲ್ಲಿ ಕೇವಲ ಮನೆ ಬಳಕೆಗೆ ಮಾತ್ರವೇ

ಮೀಸಲಾಗಿದ್ದ ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆದಿದೆ ಎಂದ ಅವರು, ಹೊಸೂಡಿ ಗ್ರಾಮದಲ್ಲಿ ಎಚ್‌ಎಫ್, ಜರ್ಸಿ ಹಾಗೂ ಗುಜರಾತಿ ತಳಿಗಳನ್ನು ಸಹ ಪೋಷಣೆ ಮಾಡಲಾಗಿದ್ದು, ಹೆಚ್ಚು ಹಾಲು ಉತ್ಪಾದಕರು ಈ ಗ್ರಾಮದಲ್ಲಿದ್ದಾರೆ ಎಂದರು.ಭಾರತದಲ್ಲಿ ಗೋಮಾತೆಗೆ ಪವಿತ್ರ ಸ್ಥಾನ ನೀಡಲಾಗಿದ್ದು, ಹಿಂದೂ ಸಂಸ್ಕೃತಿಯ ಈ ದೀಪಾವಳಿಯಂದು ಹಮ್ಮಿಕೊಂಡಿರುವ ಗೋಪೂಜೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು. ಮಾಜಿ ಶಾಸಕ ಚಂದ್ರಶೇಖರ್, ಹೊಸೂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈಶ್ವರಗೌಡ, ಕಾರ್ಯದರ್ಶಿ ಚಿದಂಬರಂ, ಸಹಾಯಕ ವ್ಯವಸ್ಥಾಪಕ ಎಸ್. ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಉಮಾ ಪಾಟೀಲ್ ಪ್ರಾರ್ಥಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.