ಮಂಗಳವಾರ, ಮೇ 11, 2021
21 °C

ಗೋ ಮಾಂಸ ಹಬ್ಬ: ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕಾದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 

ಹೈದರಾಬಾದ್ (ಐಎಎನ್ಎಸ್): ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ~ಗೋ ಮಾಂಸ ಹಬ್ಬ~ ಬೆಂಬಲ ಸೂಚಿಸಿದ ವಿದ್ಯಾರ್ಥಿಗಳನ್ನು ಇರಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿದ್ಯಾರ್ಥಿಗಳ ಗುಂಪು ~ವಿದ್ಯಾರ್ಥಿ ನಿಲಯದಲ್ಲಿ ಆಹಾರ ಕ್ರಮದ ಮೇಲೆ ದಬ್ಬಾಳಿಕೆ ಹೇರಲಾಗುತ್ತಿದೆ~ ಎಂದು ಆರೋಪಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗೋ ಮಾಂಸ ಹಬ್ಬದ ಸಂದರ್ಭದಲ್ಲಿ ಐವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಜತೆಗೆ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಳೆದ ಮಧ್ಯರಾತ್ರಿ ವಿದ್ಯಾರ್ಥಿಗಳ ಗುಂಪೊಂದು ~ಸಿ~ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ನಡೆಸಿ ಗೋ ಮಾಂಸ ಹಬ್ಬಕ್ಕೆ ಬೆಂಬಲ ಸೂಚಿಸಿದವರನ್ನು ಚಾಕುವಿನಿಂದ ಇರಿದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಆಂಧ್ರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ನಿಲಯದ ಆಹಾರ ಪಟ್ಟಿಯಲ್ಲಿ ಗೋಮಾಂಸವನ್ನೂ ಸೇರಿಸುವಂತೆ ಒತ್ತಾಯಿಸುವ ಸಲುವಾಗಿ ಭಾನುವಾರ ರಾತ್ರಿ ಕೆಲವು ದಲಿತ ಹಾಗೂ ಎಡಪಂಕ್ತಿಯ ವಿದ್ಯಾರ್ಥಿಗಳ ಗುಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಗೋ ಮಾಂಸ ಹಬ್ಬವನ್ನು ಆಯೋಜಿಸಿತ್ತು. ಇದಕ್ಕೆ 200 ವಿದ್ಯಾರ್ಥಿಗಳು ಹಾಗೂ ಕೆಲವು ಪ್ರಾಧ್ಯಾಪಕರು ಭಾಗವಹಿಸಿ, ಸಿದ್ಧಪಡಿಸಿದ್ದ ಗೋ ಮಾಂಸದ ವಿವಿಧ ಖಾದ್ಯಗಳನ್ನು ಸವಿದರು.

ಈ ಹಬ್ಬವನ್ನು ಆಯೋಜಿಸಿದವರ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳು ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಶ್ರುವಾಯು ಸಿಡಿಸಿ, ಲಾಟಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಕಳೆದ ಎರಡು ವರ್ಷಗಳಿಂದ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣ ಇಂದು ವಿದ್ಯಾರ್ಥಿಗಳ ನಡುವಿನ ಕದನ ಕಣವಾಗಿ ಮಾರ್ಪಟ್ಟಿದೆ.

ಗೋ ಮಾಂಸ ಹಬ್ಬವನ್ನು ತೆಲಂಗಾಣ ವಿದ್ಯಾರ್ಥಿ ಪರಿಷತ್ತು, ಪ್ರಗತಿಪರ ಡೆಮಾಕ್ರೆಟಿಕ್ ವಿದ್ಯಾರ್ಥಿ ಒಕ್ಕೂಟ, ಭಾರತೀಯ ವಿದ್ಯಾರ್ಥಿ ಒಕ್ಕೂಟ ಹಾಗೂ ಇಂಗ್ಲಿಷ್ ಹಾಗೂ ವಿದೇಶಿ ಭಾಷಾ ವಿಭಾಗದ ವಿದ್ಯಾರ್ಥಿಗಳ ಗುಂಪು ಆಯೋಜಿಸಿದ್ದವು.

~ಗೋ ಮಾಂಸ ನಮ್ಮ ಆಹಾರ ಸಂಸ್ಕೃತಿಯ ಭಾಗವಾಗಿದ್ದು, ಪ್ರತಿಯೊಬ್ಬರ ಕೈಗೆಟಕುವ ಪೌಷ್ಠಿಕ ಆಹಾರವಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿರುವ ಕೆಲವು ಆಹಾರ ದಬ್ಬಾಳಿಕೆ ನಡೆಸುತ್ತಿರುವ ಹಿತಾಸಕ್ತಿಗಳು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

~ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ಆಹಾರವನ್ನು ಹುಡುಕಿಕೊಳ್ಳುವ ಹಕ್ಕಿದೆ. ಆದರೆ ಆಯೋಜಿಸಿದ್ದ ಈ ಹಬ್ಬದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಆಡಳಿತ ವರ್ಗ ವಿಫಲವಾಗಿದೆ~ ಎಂದು ಪ್ರತಿಕೋಧ್ಯಮ ಹಾಗೂ ಸಂವಹನ ವಿಭಾಗದ ಮಾಜಿ ಪ್ರಾಧ್ಯಾಪಕ ಪಿ.ಎಲ್.ವಿಶ್ವನಾಥ ರಾವ್ ಆರೋಪಿಸುವ ಮೂಲಕ ಗೋ ಮಾಂಸ ಹಬ್ಬಕ್ಕೆ ಬೆಂಬಲ ಸೂಚಿಸಿದ್ದಾರೆ.

ಗೋ ಮಾಂಸ ಹಬ್ಬವನ್ನು ವಿರೋಧಿಸಿರುವ ಎಬಿವಿಪಿ ಸಂಘಟನೆ ಸೋಮವಾರ ವಿಶ್ವವಿದ್ಯಾಲಯ ಬಂದ್ ಗೆ ಕರೆ ನೀಡಿದೆ. ಈ ಸಂಬಂಧ ಅಹಿತಕರ ಘಟನೆ ತಡೆಯುವ ದೃಷ್ಟಿಯಿಂದ ವಿಶ್ವವಿದ್ಯಾಲಯವನ್ನು ತಲುಪುವ ಎಲ್ಲಾ ರಸ್ತೆಗಳು ಪೊಲೀಸರು ಮುಚ್ಚಿದ್ದಾರೆ. ಹೆಚ್ಚುವರಿ ಪೊಲೀಸ್ ತುಕ್ಕಡಿ ಹಾಗೂ ಅರೆ ಸೇನಾಪಡೆಯನ್ನು ನಿಯೋಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.