ಶನಿವಾರ, ಮೇ 15, 2021
23 °C

ಗೋ ಸಾಕದೇ ಗೋಬರ್ ಗ್ಯಾಸ್

ಸ್ವರೂಪಾನಂದ.ಎಂ.ಕೊಟ್ಟೂರು Updated:

ಅಕ್ಷರ ಗಾತ್ರ : | |

ಅತ್ತ ಬರಗಾಲ ಬಡವರ ಮೇಲೆ ಬರೆ ಎಳೆಯುತ್ತಿದ್ದರೆ, ಇತ್ತ ಸಕಾಲದಲ್ಲಿ ಸಿಲಿಂಡರ್ ಸಿಗದೇ ಸ್ಥಿತಿವಂತ ಪರದಾಡುತ್ತಿದ್ದಾನೆ. ದುಪ್ಪಟ್ಟು ಬೆಲೆ ಕೊಡುತ್ತೇನೆ ಅಂದರೂ ಕಿವಿಗೊಡುವ ಪರಿಸ್ಥಿತಿಯಲ್ಲಿ ಎಲ್‌ಪಿಜಿ ಮಾರಾಟಗಾರರಿಲ್ಲ. ಹೀಗಾಗಿ ಪಟ್ಟಣ ಪ್ರದೇಶಗಳಲ್ಲಿ ಸಿಲಿಂಡರ್‌ಗಾಗಿ ಹಾಹಾಕರ ಎದ್ದಿದೆ.ಆದರೆ ನೀವು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕು ಕಡ್ಡಿರಾಂಪುರದ ಬಸಯ್ಯ ಸ್ವಾಮಿಯವರ ಮನೆಗೆ ಒಮ್ಮೆ ಭೇಟಿ ಕೊಡಿ. ಈ ಕುಟುಂಬ ಮಾತ್ರ ಸಿಲಿಂಡರ್ ಉಪದ್ರವದಿಂದ ದೂರವೇ ಉಳಿದಿದೆ. ಅಂದ ಮಾತ್ರಕ್ಕೆ ಇವರೇನು ಸೌದೆ, ಸೀಮೆ ಎಣ್ಣೆ ಬಳಸಿ ಅಡುಗೆ ಬೇಯಿಸುತ್ತಾರೆ ಅಂದುಕೊಂಡಿರಾ? ಖಂಡಿತಾ ಇಲ್ಲ. ಇವರು ಪ್ರತಿ ನಿತ್ಯ ಗೋಬರ್ ಗ್ಯಾಸ್‌ನ್ನೇ ಬಳಸುವುದು.ಇಷ್ಟಾದರೆ ವಿಶೇಷವೇನಿಲ್ಲ ಬಿಡಿ. ಆದರೆ ಬಸಯ್ಯ ಸ್ವಾಮಿ ರೈತನಾದರೂ ದನಕರುಗಳನ್ನು ಕಟ್ಟಿಲ್ಲ. ಆದರೂ ನಿತ್ಯ ಇವರ ಮನೆಯ ಒಲೆ ಉರಿಯುವುದು ಈ ಗೋಬರ್ ಗ್ಯಾಸ್‌ನಿಂದಲೇ!ಹೌದು ಗೋಬರ್ ಗ್ಯಾಸ್ ಅಂದ ಮೇಲೆ ದನಕರುಗಳ ಸೆಗಣಿ ಬೇಕೇ ಬೇಕಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅದಕ್ಕೆ ಬಸಯ್ಯ ಸ್ವಾಮಿ ಮಾಡುವುದಿಷ್ಟು. ತನ್ನ ಗ್ರಾಮದಲ್ಲಿ ಬಿಡಾಡಿಯಾಗಿ ಓಡಾಡುವ ದನಗಳ ಸಗಣಿ ಸಂಗ್ರಹಿಸುತ್ತಾರೆ, ನೆರೆಹೊರೆ ರೈತ ಬಾಂಧವರ ದನದ ಸಗಣಿ ತಂದು ತೊಟ್ಟಿಗೆ ಹಾಕಿ ಗ್ಯಾಸನ್ನಾಗಿ ಪರಿವರ್ತಿಸುತ್ತಾರೆ.ಬರೀ ಐದು ಬುಟ್ಟಿ ಸಗಣಿ ಸಂಗ್ರಹಿಸಿದರೆ ಒಂದು ವಾರ ಅಡಿಗೆಗೆ ಬೇಕಾದ ಇಂಧನದ ಚಿಂತೆ ಇರುವುದಿಲ್ಲ ಎನ್ನುತ್ತಾರೆ. ಗೋಬರ್ ಯಂತ್ರದಿಂದ ಹೊರಬರುವ ತ್ಯಾಜ್ಯದ ಸಗಣಿಯನ್ನು ಮನೆಯ ಕೈ ತೋಟಕ್ಕೆ ಗೊಬ್ಬರವಾಗಿ ಬಳಸುತ್ತಾರೆ. ಇದರಿಂದ ಕೈತೋಟಕ್ಕೆ ಕಸುವು ತುಂಬುತ್ತಾರೆ.ಗ್ಯಾಸ್‌ಗಾಗಿ ಜನ ಪರಿತಪಿಸುವ ಈ ಸಮಯದಲ್ಲಿ ಸ್ವಾಮಿಯವರ ಈ ಕೆಲಸ ಮಾದರಿಯಾಗಿ ಕಾಣುತ್ತದೆ. ಇವರ ಕುಟುಂಬದ ಹಿರಿಯರು ಮನೆಯ ಹಿತ್ತಲಿನಲ್ಲಿ ಗೋಬರ್ ಗ್ಯಾಸ್‌ಗಾಗಿ ಜಾಗ ಮೀಸಲಿಟ್ಟಿದ್ದರು.ಕೊಟ್ಟಿಗೆಯಲ್ಲಿದ್ದ ದನಗಳ ಸಂತತಿ ನಾನಾ ಕಾರಣಗಳಿಂದ ಕಡಿಮೆಯಾಗಿ ಕೊನೆಗೆ ಕೊಟ್ಟಿಗೆ ಬಣಬಣವಾಯಿತು. ಹೀಗಾಗಿ ಸಗಣಿ ಬಳಸಿ ಗೋಬರ್ ಗ್ಯಾಸ್ ಉತ್ಪಾದನಾ ಕೆಲಸ ನಿಂತು ಹೋಗಿತು. ಇತ್ತ ಎಲ್‌ಪಿಜಿ ಗ್ಯಾಸ್‌ಗಾಗಿ ಪಡುವ ಪಡಿಪಾಟಲು, ಬಳಸುವಲ್ಲಿ ಏರುಪೇರಾದರೆ ಉಂಟಾಗುವ ಅನಾಹುತಗಳು ಇವರನ್ನು ಅದರಿಂದ ವಿಮುಖವಾಗುವಂತೆ ಮಾಡಿತು.ಇದರ ನಡುವೆಯೇ, `ದನಕರುಗಳು ಇಲ್ಲವಾದರೇನಂತೆ ನಾನು ಗೋಬರ್ ಗ್ಯಾಸ್ ಮತ್ತೆ ಬಳಕೆ ಮಾಡುತ್ತೇನೆ~ ಎಂದು ಬಸಯ್ಯಸ್ವಾಮಿ ಪಣತೊಟ್ಟರು. ಇದಕ್ಕೆ ಮಡದಿ ಸುಜಾತ ಕೈ ಜೋಡಿಸಿದರು. ಗೋಬರ್ ಗ್ಯಾಸ್‌ನ ತೊಟ್ಟಿಯನ್ನು ಶುಚಿಗೊಳಿಸಿ ಅಡುಗೆ ಮನೆಗೆ ಗ್ಯಾಸ್ ಸರಾಗವಾಗಿ ಬರಲು ಹೊಸದಾಗಿ ಪೈಪ್‌ಲೈನ್ ಮಾಡಿಸಿದರು.

 

ನೆರೆ-ಹೊರೆಯವರ ಕೊಟ್ಟಿಗೆಯಿಂದ ಪ್ರಾರಂಭದಲ್ಲಿ ಸಗಣಿ ಸಂಗ್ರಹಿಸಿ ಗುಡ್ಡೆ ಹಾಕಿದರು. ಊರಿನಲ್ಲಿ ಬಿಡಾಡಿಯಾಗಿ ಅಡ್ಡಾಡುವ ದನಕರುಗಳ ಸಗಣಿಯನ್ನು ಸಂಗ್ರಹಿಸಿದರು. ಇದನ್ನು ಗುಂಡಿಗೆ ತುಂಬಿಸಿ ಗ್ಯಾಸ್ ಉತ್ಪಾದನೆಗೆ ಕೈ ಹಾಕಿದರು.ಬಿಡಾಡಿ ದನಗಳ ಸಗಣಿ ನಮ್ಮ ಕಣ್ಣ ಮುಂದೆಯೇ ವ್ಯರ್ಥವಾಗಿ ಹೋಗುವುದನ್ನು ಕಾಣುತ್ತೇವೆ. ಇದನ್ನೂ ಬಳಸಬಹುದು ಎಂಬುದಕ್ಕೆ ಸ್ವಾಮಿಯವರೇ ಯತ್ನವೇ ಮಾದರಿ. ಅವರ ಸಂಪರ್ಕಕ್ಕೆ  94491 33154.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.