ಭಾನುವಾರ, ಆಗಸ್ಟ್ 9, 2020
22 °C

ಗೌರವದ ಬಹಿರ್ದೆಸೆಗೆ ಇಲ್ಲ ಶುಕ್ರದೆಸೆ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಗೌರವದ ಬಹಿರ್ದೆಸೆಗೆ ಇಲ್ಲ ಶುಕ್ರದೆಸೆ

ಈ ಪ್ರಸಂಗ ನಡೆದದ್ದು ಬಾಗಲಕೋಟೆಯಲ್ಲಿ. ಸ್ವಚ್ಛತಾ ಆಂದೋಲನದ ಸಭೆಯಲ್ಲಿ `ತಂಬಿಗೆ~ ಪರವಾಗಿ ಮಾತನಾಡಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ. `ಹಳ್ಳಿ ಜನ ಒಂದು ತಂಬಿಗೆ ತುಂಬ ನೀರಿದ್ರೆ ಎಲ್ಲ ಕಾರ್ಯಾನೂ ನಿರ್ಮಲವಾಗಿ ಮುಗಿಸಿಬಿಡ್ತಾರೆ. ಶೌಚಾಲಯಕ್ಕೆ ಸುರಿಯಲು ಬಕೆಟ್ ತುಂಬ ನೀರು ಎಲ್ಲಿಂದ ತರಬೇಕು? ಶೌಚಾಲಯ ಕಟ್ಟಿಸಕ್ಕೆ ಜಾಗವಾದ್ರೂ ಎಲ್ಲಿದೆ?~ ಎಂಬ ಪ್ರಶ್ನೆಯನ್ನು ಅವರು ಅಧಿಕಾರಿಗಳಿಗೆ ಕೇಳಿದ್ದರು.

ಈ ಸದಸ್ಯರ ಮನೋಧರ್ಮ ಹಾಗೂ ಅವರು ಕೇಳಿದ ಪ್ರಶ್ನೆಗಳ ಸುತ್ತ ಗಿರಕಿ ಹೊಡೆಯುತ್ತದೆ ಶೌಚಾಲಯ ಕುರಿತ ಉತ್ತರ ಕರ್ನಾಟಕದ ಜನರ ಮನೋಭಾವ ಮತ್ತು ಬಯಲು ಶೌಚಾಲಯ ಮುಕ್ತ ಮಾಡುವ ಬಗ್ಗೆ ಅವರಿಗೆ ಇರುವ ಆಸಕ್ತಿ. ತಂಬಿಗೆ ಹಿಡಿದುಕೊಂಡು ಹೊಲ, ರಸ್ತೆ ಬದಿಗೆ ಹೆಜ್ಜೆ ಹಾಕುವುದು ಈ ಭಾಗದಲ್ಲಿ ಕಂಡು ಬರುವ ಸಾಮಾನ್ಯ ನೋಟ. ಹುಬ್ಬಳ್ಳಿಯಂಥ ವಾಣಿಜ್ಯ ನಗರದ ಮಧ್ಯಭಾಗದಲ್ಲೂ ಈ ದೃಶ್ಯ ಅಪರೂಪವೇನಲ್ಲ.

ಬಹಿರ್ದೆಸೆಗೆ `ಗೌರವ~ದಿಂದ ಹೋಗಲು ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಸರ್ಕಾರದ ಯೋಜನೆಯ ಲಾಭ ಪಡೆಯುವುದರಲ್ಲಿಯೂ ಗಂಡನ ಮಾತೇ ವೇದವಾಕ್ಯವಾದ್ದರಿಂದ ಆಕೆಗೆ ಬಯಲು ಶೌಚವೇ ಗತಿ. ವಿಜಾಪುರ, ಹಾವೇರಿ, ಗದಗ ಮತ್ತಿತರ ಜಿಲ್ಲೆಗಳ ಹಲವು ಹಳ್ಳಿಗಳಲ್ಲಿ ಶೌಚಾಲಯವಿದ್ದರೂ ಅವು ಮೇವು, ಕಟ್ಟಿಗೆ, ಗೊಬ್ಬರದ ಚೀಲಗಳನ್ನು ಇರಿಸುವ ಜಾಗವಾಗಿ ಪರಿವರ್ತನೆಯಾಗಿವೆ. ಕೆಲವು ಜಿಲ್ಲೆಗಳ ಯಾವುದೇ ಗ್ರಾಮ ಪಂಚಾಯಿತಿ ಇಲ್ಲಿಯವರೆಗೆ ನಿರ್ಮಲ ಗ್ರಾಮ ಪ್ರಶಸ್ತಿಯನ್ನು ಗಳಿಸದಿರುವುದಕ್ಕೆ ಜನರ ಇಂಥ ಮನೋಭಾವವೂ ಕಾರಣ ಎನ್ನುತ್ತಾರೆ ಅಲ್ಲಿನ ಆರೋಗ್ಯ ಕಾರ್ಯಕರ್ತರು.

ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಶೌಚಾಲಯ ವಿಷಯದಲ್ಲಿ `ಸಂಪ್ರದಾಯ~ಕ್ಕೆ ಕಟ್ಟುಬಿದ್ದ ಮನಸ್ಸು ಮುಂತಾದವು ಈ ಭಾಗದಲ್ಲಿ ಬಯಲು ಶೌಚ ಹೆಚ್ಚಲು ಕಾರಣ. ನೀರು ಹಾಗೂ ಜಾಗದ ಅಭಾವದಿಂದಲೂ ಇಲ್ಲಿ ಶೌಚಾಲಯ ಕಟ್ಟಿಸಲು ಜನ ಮನಸ್ಸು ಮಾಡಿಲ್ಲ ಎಂಬುದು ಕೂಡ ಸತ್ಯ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಚ್ಚಿರುವ ಸಾಮೂಹಿಕ ಶೌಚಾಲಯಗಳ ಬಾಗಿಲು ಇನ್ನೂ ತೆರೆಯದ ಕಾರಣ ಮಹಿಳೆಯರು ರಸ್ತೆಬದಿಯಲ್ಲೇ `ಕೂರುವ~ ಪರಿಸ್ಥಿತಿ. `ಸಾಕಾಗಿದೆ ಈ ಅವಮಾನ~ ಎಂದು ಹೇಳುವಾಗ ಇಲ್ಲಿನ ಹರಿಣಶಿಕಾರಿ ಸಮುದಾಯದ ಮಹಿಳೆಯರ ಮನದಲ್ಲಿ ಮೂಡುವ ಸಂಕಟ ಅಳೆಯಲು ಯಾವ ಯೋಜನೆಗೂ ಸಾಧ್ಯವಾಗದು.

ಧಾರವಾಡ ಜಿಲ್ಲೆಯಲ್ಲಿ ಕಡಿಮೆ ವೆಚ್ಚದ ಶೌಚಾಲಯ ನಿರ್ಮಾಣಕ್ಕೆ ಸಂಬಂಧಪಟ್ಟ ಸರ್ವೆ ಕಾರ್ಯ ಮುಕ್ತಾಯದ ಹಂತದ್ಲ್ಲಲಿದೆ. `ಈ ಯೋಜನೆ ಜಿಲ್ಲೆಯಲ್ಲಿ ಶುಚಿತ್ವಕ್ಕೆ ಸಂಬಂಧಿಸಿ ಮಹತ್ವ ಗಳಿಸಲಿದೆ~ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತೇಜಸ್ವಿನಿ ನಾಯ್ಕ ಹೇಳುತ್ತಾರೆ.

ದೊಡ್ಡ ಜಿಲ್ಲೆ ಬೆಳಗಾವಿಯಲ್ಲೂ ಶೌಚಾಲಯಕ್ಕೆ ಸಂಬಂಧಿಸಿ ದೊಡ್ಡ ಕಾರ್ಯಗಳು ನಡೆಯುತ್ತಿವೆ. ಇಲ್ಲಿಯ 43 ಗ್ರಾಮ ಪಂಚಾಯಿತಿಗಳು ನಿರ್ಮಲ ಗ್ರಾಮ ಯೋಜನೆ ಪುರಸ್ಕಾರ ಪಡೆದಿವೆ. ಸವದತ್ತಿ, ರಾಮದುರ್ಗ ಮುಂತಾದ ತಾಲ್ಲೂಕುಗಳಲ್ಲಿ ಅರಿವು ಮೂಡಿಸುವ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. 

ಖಾನಾಪುರದ ಗುಂಡೊಳ್ಳಿ ಗ್ರಾಮದಲ್ಲಿ ಶೌಚಕ್ಕಾಗಿ ಬಯಲಿಗೆ ಹೋದ ತಾಯಿ ಬಿದ್ದು ಕಾಲು ಮುರಿದುಕೊಂಡ ಘಟನೆಯ ನಂತರ ನಾಲ್ಕು ದಿನದಲ್ಲಿ ಮಗ ಶೌಚಾಲಯ ಕಟ್ಟಿಸಿದ್ದಾನೆ.

ಶೌಚಾಲಯ ಕಟ್ಟಿಸಿಕೊಳ್ಳಲು ಮೀನಮೇಷ ಎಣಿಸುವ ಜನರ ಕಣ್ಣು ತೆರೆಸಲು ಇಂಥ ಇನ್ನೆಷ್ಟು ಘಟನೆಗಳು ನಡೆಯಬೇಕೋ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.