ಶಿರಾ: ಗ್ಯಾಸ್ ಟ್ಯಾಂಕರ್ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಆತಂಕ ಸೃಷ್ಟಿಯಾಗಿದ್ದ ಘಟನೆ ಶಿರಾ– ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ನಡೆಯಿತು.
ಮಂಗಳೂರಿನಿಂದ ಆಂಧ್ರದ ಅನಂತಪುರಕ್ಕೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಲಾರಿ ಕ್ಯಾಬಿನ್‌ನಲ್ಲಿ ಕಳ್ಳಂಬೆಳ್ಳ ಟೋಲ್ ದಾಟಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಗ್ಯಾಸ್ ತುಂಬಿದ್ದ ಲಾರಿಯನ್ನು ಕೂಡಲೆ ರಸ್ತೆ ಬದಿಗೆ ನಿಲ್ಲಿಸಿದ ಚಾಲಕ ಸದಾಶಿವಂ ಮತ್ತು ಕ್ಲೀನರ್, ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಕಳ್ಳಂಬೆಳ್ಳ ಪೊಲೀಸರು ರಸ್ತೆಯ ಇಕ್ಕೆಲಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ, ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತಕ್ಕೆ ಅವಕಾಶ ನೀಡದಂತೆ ಬೆಂಕಿ ನಂದಿಸಿದರು. ಲಾರಿ ಮುಂಭಾಗ ಸುಟ್ಟಿದೆ. ಅಪಾಯ ಇಲ್ಲ ಎಂದು ಖಚಿತ ಪಡಿಸಿಕೊಂಡ ನಂತರ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಸಾವು
ಶಿರಾ ತಾಲ್ಲೂಕಿನ ಸೀಬಿ ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಭೂತಕಾಟನಹಳ್ಳಿ ರವಿ ಕುಮಾರ್ (22) ಹಾಗೂ ಹಿರಿಯೂರು ತಾಲ್ಲೂಕಿನ ಗೌಡಪಾಳ್ಯದ ಧನಂಜಯ(23) ಬೈಕಿನಲ್ಲಿ ತುಮಕೂರಿನಿಂದ ಶಿರಾಗೆ ಬರುತ್ತಿದ್ದ ವೇಳೆ ಮುಂದಿನಿಂದ ಬಂದ ಲಾರಿ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿಧಿ ಆಸೆಗೆ ವಿಗ್ರಹ ಭಂಗ ಯತ್ನ
ನಿಧಿ ಆಸೆಗೆ ದುಷ್ಕರ್ಮಿಗಳು ದೇವರ ವಿಗ್ರಹ ಭಂಗಗೊಳಿಸಿದ ಘಟನೆ ಶಿರಾ ತಾಲ್ಲೂಕಿನ ಕೊಟ್ಟ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.
ಗ್ರಾಮದಿಂದ ಮದಲೂರಿಗೆ ತೆರಳುವ ರಸ್ತೆ ಪಕ್ಕದ ಕೆರೆ ಕಟ್ಟೆಗೆ ಹೊಂದಿಕೊಂಡಂತೆ ಇದ್ದ ಗಣಪತಿ ದೇವಾಲಯದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳ ಇತಿಹಾಸವಿರುವ ಗಣಪತಿ ದೇವಾಲಯದಲ್ಲಿ ನಿಧಿ ಇರಬಹುದು ಅಥವಾ ಗಣಪತಿ ವಿಗ್ರಹ ಮಾರಲು ಬಯಸಿರುವ ದುಷ್ಕರ್ಮಿಗಳು ವಿಗ್ರಹ ಕದಲಿಸುವ ವಿಫಲ ಪ್ರಯತ್ನ ನಡೆಸಿದ್ದಾರೆ.
ಗಣಪತಿ ಹೊಟ್ಟೆ ಮೇಲೆ ಹಾರೆಯಿಂದ ಮೀಟಿದ ಗುರುತು ಕಂಡು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.