ಭಾನುವಾರ, ಮೇ 9, 2021
17 °C

ಗ್ಯಾಸ್ ಟ್ರಬಲ್ ಮೂಲ ಅರಿಯಿರಿ

ಡಾ. ಲತಾ ದಾಮ್ಲೆ Updated:

ಅಕ್ಷರ ಗಾತ್ರ : | |

ಗ್ಯಾಸ್ ಟ್ರಬಲ್ ಅಥವಾ ಗ್ಯಾಸ್ಟ್ರಿಕ್ ತೊಂದರೆ ಮಾಮೂಲಿ ಎನ್ನುವಷ್ಟು ಚಿರಪರಿಚಿತ. ಪ್ರತಿಯೊಬ್ಬರೂ ಒಮ್ಮೆಯಾದರೂ ಈ ಬಾಧೆಯಿಂದ ಬಳಲದೇ ಇರುವುದಿಲ್ಲ. ಅದಕ್ಕಾಗೇ ಹಲವಾರು ಔಷಧಿಗಳು ಜಾಹೀರಾತುಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ಮೌತ್ ಫ್ರೆಶ್ನರ್ ರೀತಿ ಉಪಯೋಗಿಸುವವರೂ ಇದ್ದಾರೆ. ಹೊಟ್ಟೆ ಉಬ್ಬರ, ಅತಿಯಾಗಿ ಗುದ ದ್ವಾರದಿಂದ ವಾಯು ಹೊರಗೆ ಹೋಗುವಂತಹ ತೊಂದರೆಗಳಿಂದ ಕೆಲವರು ಬಹಳ ಕಸಿವಿಸಿಯನ್ನು ಅನುಭವಿಸುತ್ತಾರೆ. ಹೇಳಲು ಸಂಕೋಚ ಬೇರೆ. ಇಷ್ಟೆಲ್ಲ ಬಾಧಿಸುವ ಈ ತೊಂದರೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.`ಗ್ಯಾಸ್ಟ್ರಿಕ್' ಲಕ್ಷಣಗಳು ನಿಜಕ್ಕೂ ಹಲವು ರೋಗಗಳಿಗೆ ಸಂಬಂಧಿಸಿರುತ್ತವೆ. ಆದ್ದರಿಂದ ರೋಗವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳದೆ ಕೇವಲ ಅಂಗಡಿಯಲ್ಲಿ ಸಿಗುವ ಅಥವಾ ಜಾಹೀರಾತಿನಲ್ಲಿ ತೋರಿಸುವ ಔಷಧಗಳನ್ನು ಬಳಸುತ್ತಿದ್ದರೆ `ಗ್ರಾಸ್ಟ್ರಿಕ್' ತೊಂದರೆ ಪರಿಹಾರ ಆಗುವುದಿಲ್ಲ. ಸಾಧಾರಣವಾಗಿ ಜನರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು: ಹೊಟ್ಟೆ ಉಬ್ಬರ, ಅತಿಯಾಗಿ ತೇಗು ಬರುವುದು, ಗುದದ್ವಾರದಿಂದ ವಾಯು ಹೊರಬರುವುದು, ಹೊಟ್ಟೆ ಹಿಂಡಿದಂತೆ ನೋವು, ಎದೆಯುರಿ, ಹುಳಿತೇಗು, ಮಲ ವಿಸರ್ಜನೆಯಲ್ಲಿ ತೊಂದರೆ, ಹಸಿವಿನ ತೊಂದರೆ, ವಾಂತಿ ಆದಂತೆ ತೋರುವುದು. ಇಂತಹ ತೊಂದರೆಗಳನ್ನು ಉಂಟು ಮಾಡುವ ಕೆಲವು ವ್ಯಾಧಿಗಳ ಪರಿಚಯ ಇಲ್ಲಿದೆ.1. ಆಮ್ಲಪಿತ್ತ ಅಥವಾ ಅತ್ಯಾಮ್ಲ (ಹೈಪರ್ ಅಸಿಡಿಟಿ)

2. ಪರಿಣಾಮ ಶೂಲ (ಡ್ಯುಯೋಡಿನೈಟಿಸ್)

3. ಜಠರದಲ್ಲಿ ಹುಣ್ಣು (ಪೆಪ್ಟಿಕ್ ಅಲ್ಸರ್)

4. ಅಜೀರ್ಣ (ಡಿಸ್ಪೆಪ್ಸಿಯಾ)

5. ಜಠರಾಮ್ಲದ ವಿಮುಖಗಮನ (ಗ್ಯಾಸ್ಟ್ರೊ ಇಸೋಫೇಜಿಯಲ್ ರಿಫ್ಲೆಕ್ಸ್)

6. ಪಿತ್ತಕೋಶದ ತೊಂದರೆ (ಗಾಲ್ ಬ್ಲ್ಯಾಡರ್ ತೊಂದರೆಗಳು)

7. ಯಕೃತ್ ದೋಷ (ಲಿವರ್ ತೊಂದರೆ)

8. ಇತರ ರೋಗಗಳಿಂದ, ಅತಿಯಾಗಿ ನೋವಿನ ಮಾತ್ರೆಗಳನ್ನು ನುಂಗುವುದರಿಂದ.

9. ಕರುಳಿನ ಸೋಂಕು

10. ಬೊಜ್ಜಿನ ತೊಂದರೆ

11. ಮಲಬದ್ಧತೆಹೀಗೆ ಹತ್ತು ಹಲವಾರು ತೊಂದರೆಗಳಲ್ಲಿ ಹೊಟ್ಟೆಯ ಬಾಧೆ ಕಂಡುಬರುತ್ತದೆ. ಮೇಲಿಂದ ನೋಡಲು ಎಲ್ಲವೂ ಗ್ಯಾಸ್ಟ್ರಿಕ್ ತೊಂದರೆಯಂತೆಯೇ ಕಾಣುತ್ತವೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ರೋಗದ ಅರಿವಾಗುತ್ತದೆ. ಹೀಗಾಗಿ ಲಕ್ಷಣಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಪರೀಕ್ಷೆ ಹಾಗೂ ಕೆಲವು ಪ್ರಯೋಗಾಲಯ ಪರೀಕ್ಷೆಗಳಿಂದ ರೋಗವನ್ನು ಪತ್ತೆ ಹಚ್ಚಿಸಿಕೊಳ್ಳಬೇಕು.ಜಠರ ಮತ್ತು ಜೀರ್ಣ ಪ್ರಕ್ರಿಯೆಯನ್ನು ಸ್ವಲ್ಪ ಅರ್ಥ ಮಾಡಿಕೊಳ್ಳುವುದು ಸಮಂಜಸ. ತಿಂದ ಆಹಾರವನ್ನು ಪಚನ ಮಾಡಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದರಿಂದ ಮುಂದೆ ಸಣ್ಣ ಕರುಳು, ಯಕೃತ್ತು ಸ್ರವಿಸುವ ರಸಗಳು ಪಚನವನ್ನು ಮುಂದುವರಿಸುತ್ತವೆ. ಊಟದಲ್ಲಿರುವ ಸಾರಾಂಶವನ್ನು ದೇಹಕ್ಕೆ ಹೀರಿಕೊಂಡು, ತ್ಯಾಜ್ಯ ವಸ್ತುವನ್ನು ಮುಂದೆ ತಳ್ಳುತ್ತವೆ. ಮತ್ತೆ ದೊಡ್ಡ ಕರುಳಿನ ಗ್ರಂಥಿಗಳು ತ್ಯಾಜ್ಯ ವಸ್ತುವಿನಲ್ಲಿನ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಗಟ್ಟಿಗೊಳಿಸುತ್ತವೆ. ಇದು ಸಕಾಲಿಕವಾಗಿ ದೇಹದಿಂದ ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ರವಿಸುವ ರಸಗಳ ಪ್ರಮಾಣ, ಅಂಗಗಳ ಒಳಗೋಡೆಯ ಸಾಮರ್ಥ್ಯ, ಆಹಾರವನ್ನು ಮುಂದೆ ತಳ್ಳುವ ಕ್ಷಮತೆ ಮತ್ತು ಇವುಗಳಿಗೆ ಪೂರಕವಾಗಿರುವ ನರತಂತುಗಳ ಹೊಂದಾಣಿಕೆ ಅತಿ ಮುಖ್ಯ.ಅನೇಕ ಕಾರಣಗಳಿಂದ ಇವುಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಉದಾ: ಅತಿಯಾಗಿ ನೋವಿನ ಮಾತ್ರೆ ಸೇವಿಸುವುದರಿಂದ ಜಠರದ ಗೋಡೆಯಲ್ಲಿ ಊತವಾಗಿ ಹುಣ್ಣಾಗುತ್ತದೆ. ಅದರಿಂದ ನೋವು ಹಾಗೂ ಆಮ್ಲದ ಸ್ರವಿಸುವಿಕೆಯಲ್ಲಿ ಲೋಪ ಉಂಟಾಗುತ್ತದೆ. ಆಗ ಅಜೀರ್ಣ, ಹೊಟ್ಟೆಯುರಿ, ವೇದನೆ ಉಂಟಾಗುತ್ತದೆ. ಯಕೃತ್ ತೊಂದರೆಯಲ್ಲಿ ಸರಿಯಾಗಿ ಪಿತ್ತಸ್ರಾವ ಆಗದಿರುವಾಗ ಆಹಾರದಲ್ಲಿರುವ ಜಿಡ್ಡಿನಂಶದ ಪಚನ ಆಗುವುದಿಲ್ಲ. ಆದ್ದರಿಂದ ಕಾಮಾಲೆ ಮುಂತಾದ ಯಕೃತ್ ತೊಂದರೆಗಳಲ್ಲಿ ಜಿಡ್ಡಿನ ಅಂಶವನ್ನು ತಿನ್ನದಂತೆ ತಿಳಿಸಲಾಗುತ್ತದೆ. ಇನ್ನು ಮಧುಮೇಹ, ಬೊಜ್ಜು, ವೃದ್ಧಾಪ್ಯ ಇತ್ಯಾದಿಗಳಲ್ಲಿ ಮಾಂಸಪೇಶಿಯ ದೌರ್ಬಲ್ಯದಿಂದ ಪೆರಿಸ್ಟಾಲ್ಸಿಸ್ ಕುಂಠಿತವಾಗುತ್ತದೆ. ಹಾಗಾಗಿ ಆಹಾರ ಮುಂದೆ ಹೋಗಲು ಸಮಯ ತೆಗೆದುಕೊಳ್ಳುತ್ತದೆ. ಅಂತೆಯೇ ಅದು ಹುಳಿಯಾಗಿ ವಾಯುವನ್ನು ಶೇಖರಿಸುತ್ತದೆ, ಮಲಬದ್ಧತೆ ಉಂಟಾಗಬಹುದು.ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಾಂಸ, ಬೇಳೆ, ಕಾಳು ಮುಂತಾದವುಗಳ ಪಚನಕ್ಕೆ ಹೆಚ್ಚಿನ ಆಮ್ಲದ ಅಗತ್ಯ ಇರುತ್ತದೆ. ಅದು ಹೆಚ್ಚಾಗಿ ಉತ್ಪತ್ತಿಯಾದಾಗ ಹುಣ್ಣಾಗುವ ಸಂಭವ ಹೆಚ್ಚು. ಒಂದು ವೇಳೆ ಸರಿಯಾಗಿ ಆಮ್ಲ ಸ್ರವಿಸದಿದ್ದಾಗ ಅಜೀರ್ಣವಾಗಿ ವಾಯು ತುಂಬಿ ಬಾಧೆ ಕೊಡುತ್ತದೆ. ಅಲ್ಲದೆ ಅಶುಚಿಯಾದ ಆಹಾರ ಸೇವನೆಯಿಂದ ಸೋಂಕು ತಗುಲಿ ಜಠರದಲ್ಲಿ ಹುಣ್ಣು ಆಗಬಹುದು. ಪಚನಕ್ಕೆ ಹಾಗೂ ಮಲದ ಉತ್ಪತ್ತಿಗೆ ನೀರು ಅತ್ಯವಶ್ಯಕ. ಸರಿಯಾಗಿ ನೀರು ಸೇವಿಸದಿದ್ದಲ್ಲಿ ಮಲಬದ್ಧತೆ, ಅಜೀರ್ಣ ಉಂಟಾಗುತ್ತದೆ. ಇವೆಲ್ಲವುಗಳಲ್ಲಿ ತೊಂದರೆ ಸಾಮಾನ್ಯವಾಗಿ ಒಂದೇ ರೀತಿ ಇರುವಂತೆ ತೋರಿದರೂ ಕಾರಣ ಬೇರೆ ಬೇರೆ. ಅಜೀರ್ಣಕ್ಕೆ ಒಳ್ಳೆಯದೆಂದು ಹೆಚ್ಚು ಜೀರಿಗೆ ಸೇವಿಸಿದರೆ, ಅತ್ಯಾಮ್ಲ ಇದ್ದವರಿಗೆ ತೊಂದರೆ ಹೆಚ್ಚುತ್ತದೆ!ಈಗೀಗ ಹೆಚ್ಚಾಗಿ ಕಂಡು ಬರುತ್ತಿರುವ ಇನ್ನೊಂದು ತೊಂದರೆ ಎಂದರೆ ಜಠರಾಮ್ಲದ ಮೇಲೆರಚುವಿಕೆ (ಗ್ಯಾಸ್ಟ್ರೋ ಈಸೋಫೇಜಿಯಲ್ ರಿಫ್ಲೆಕ್ಸ್) ಆಮ್ಲತೆಯನ್ನು ಸಹಿಸುವ ಶಕ್ತಿ ಜಠರದ ಗೋಡೆಗೆ ಮಾತ್ರ ಇರುತ್ತದೆ. ಅಲ್ಲದೆ ಈ ಆಮ್ಲ ಮೇಲೆರಚಿ ಅನ್ನನಾಳಕ್ಕೆ ಅಥವಾ ಕೆಳಗೆ ಜಾರಿ ಸಣ್ಣ ಕರುಳಿಗೆ ಹೋಗದಂತೆ ತಡೆಯುವ ಬಾಗಿಲುಗಳ ಥರದವು ಇರುತ್ತವೆ. ಅವು ಆಹಾರ ಜಠರಕ್ಕೆ ಹೋಗುವಾಗ ತೆರೆದುಕೊಂಡು ಮತ್ತೆ ಮುಚ್ಚಿಕೊಳ್ಳುತ್ತವೆ. ಪಚನಕ್ರಿಯೆ ಸಮಯದಲ್ಲಿ ಆಮ್ಲಾಂಶ ಮೇಲೆ ಹಾರಿ ಅನ್ನನಾಳದ ಗೋಡೆಗೆ ಹಾನಿ ಮಾಡದಂತೆ ನೋಡಿಕೊಳ್ಳುವುದು ಇದರ ಮುಖ್ಯ ಕೆಲಸ. ಅತಿಯಾದ ಬೊಜ್ಜು, ಧೂಮಪಾನ, ಅನಿಯಮಿತ ಆಹಾರ ಸೇವನೆ, ಊಟದ ನಂತರ ಕೂಡಲೇ ಮಲಗುವುದು ಇತ್ಯಾದಿಗಳಿಂದ ಇದು ದುರ್ಬಲವಾಗಿ ಆಮ್ಲಾಂಶ ಹಾಗೂ ಆಹಾರದಲ್ಲಿನ ತೀಕ್ಷ್ಣವಸ್ತುಗಳು ಮೇಲೆರಚಿ ಅನ್ನನಾಳದ ಕೊನೆಯಲ್ಲಿ ಹುಣ್ಣುಗಳನ್ನು ಮಾಡುತ್ತವೆ. ಇಲ್ಲಿಯೂ ಮೇಲಿನ ಎದೆ ಭಾಗದಲ್ಲಿ ಅಪಾರ ನೋವು, ಹುಳಿ ತೇಗು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಬೊಜ್ಜು ನಿಯಂತ್ರಣ, ಆಹಾರದಲ್ಲಿ ತೀಕ್ಷ್ಣ ವಸ್ತು, ಮಾಂಸ, ಖಾರಗಳ ನಿಷೇಧ, ಹೇರಳ ನೀರು ಸೇವನೆ, ಊಟದ ನಂತರ ಕನಿಷ್ಠ ಒಂದು ಗಂಟೆ ಬಗ್ಗದಿರುವುದು ಮುಂತಾದವುಗಳ ಪಾಲನೆ ಅಗತ್ಯ.ಇದಲ್ಲದೆ ಹೆಚ್ಚಾಗಿ ಹೊರಗೆ ಅಶುಚಿಕರ ಆಹಾರ ಸೇವಿಸುವುದರಿಂದ ಕರುಳಿನ ಸೋಂಕು ಉಂಟಾಗುತ್ತದೆ. ಇದರಿಂದ ದೊಡ್ಡ ಕರುಳಿನಲ್ಲಿ ಉರಿಯೂತ ಆಗುವ ಸಂಭವ ಇರುತ್ತದೆ. ಇಲ್ಲೂ ಹೊಟ್ಟೆ ನುಲಿತ, ಮಲದಲ್ಲಿ ವ್ಯತ್ಯಾಸ, ವಾಯು ಹೋಗುವುದು ಎಲ್ಲ ಇರುತ್ತದೆ. ಹೀಗೆ ತೊಂದರೆಯ ಮೂಲವನ್ನು ಸರಿಯಾಗಿ ಪರಿಶೀಲಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಆಯುರ್ವೇದದಲ್ಲಿ ಇವುಗಳಿಗೆ ಸೂಕ್ತ ಮತ್ತು ಸುರಕ್ಷಿತ ಪರಿಹಾರಗಳಿವೆ. ಉದಾ: ಶಂಖವಟಿ, ದ್ರಾಕ್ಷಾದಿ ಕಷಾಯ ಇತ್ಯಾದಿ. ಆದರೆ ಮೂಲ ತೊಂದರೆಯನ್ನು ತಿಳಿಯುವುದು ಮುಖ್ಯ.ಹೊಟ್ಟೆ ತೊಂದರೆಗೆ ಮನೆ ಮದ್ದು1. ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು, ಅತ್ಯಾಮ್ಲತೆ ಶಮನವಾಗುತ್ತದೆ.2. ಆಹಾರ ಪಚನವಾಗದೇ ಹೊಟ್ಟೆಯುಬ್ಬರ ಇದ್ದಲ್ಲಿ ಜೀರಿಗೆ, ಒಣದ್ರಾಕ್ಷಿ, ಓಮದ ಕಾಳುಗಳನ್ನು ಜಜ್ಜಿ ಸೇವಿಸಬಹುದು.

3. ಹುಳಿಯಿಲ್ಲದ ಮಜ್ಜಿಗೆಯ ಹೇರಳವಾದ ಸೇವನೆ ಒಳ್ಳೆಯದು.4. ಮಜ್ಜಿಗೆಗೆ ಹಿಂಗು, ಕರಿಬೇವು ಸೇರಿಸಿ ಕುಡಿದರೆ ಹೊಟ್ಟೆಯ ನುಲಿತ ಕಡಿಮೆಯಾಗುತ್ತದೆ.5. ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯಬೇಕು ಅಥವಾ ತಂಬುಳಿ ಮಾಡಬೇಕು.ಇವನ್ನು ಪಾಲಿಸಿ

1. ನಿಯಮಿತ ಸಮಯದಲ್ಲಿ ಮಿತವಾಗಿ ಆಹಾರ ಸೇವಿಸಬೇಕು.

2. ಶುಚಿಯಾದ ಆಹಾರ ಮತ್ತು ನೀರಿನ ಸೇವನೆ.

3. ಹೊರಗೆ ತಿನ್ನುವಾಗ ಹಸಿ ಪದಾರ್ಥಗಳಾದ ಮಜ್ಜಿಗೆ, ಹೆಚ್ಚಿದ ತರಕಾರಿಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು.  

4. ಊಟವಾದ ಕೂಡಲೇ ಬಗ್ಗುವುದು, ಭಾರ ಎತ್ತುವುದು, ಮಲಗುವುದು ಮಾಡಬಾರದು.

5. ಖಾರ ಮಸಾಲೆ, ಮಾಂಸಾಹಾರ ಮಿತವಾಗಿ ಸೇವಿಸಬೇಕು.

6. ನೀರು, ಎಳನೀರನ್ನು ಯಥೇಚ್ಛವಾಗಿ ಸೇವಿಸಬೇಕು.

7. ಧೂಮಪಾನ, ಮದ್ಯಪಾನದಿಂದ ದೂರ ಇರಬೇಕು.

8. ಕರಿದ ಕುರುಕಲು ತಿಂಡಿಗಳು, ಸೋಡಾ ಬಳಸಿರುವಂತಹ, ಬುರುಗು ಬರಿಸುವ (ಬ್ರೆಡ್ ಇತ್ಯಾದಿ), ಮೈದಾ ಹೆಚ್ಚಿರುವ (ಪಿಜ್ಜಾ ಇತ್ಯಾದಿ) ಆಹಾರಗಳ ಸೇವನೆ ಒಳ್ಳೆಯದಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.