ಮಂಗಳವಾರ, ಮೇ 18, 2021
28 °C

ಗ್ರಾ.ಪಂ. ನೌಕರರಿಂದ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಹೊರಡಿಸಿದ ಆದೇಶಗಳು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಜಾರಿ ಆಗದೇ ಇರುವುದು ಸೇರಿದಂತೆ 12 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗ್ರಾ.ಪಂ. ನೌಕರರು ಧರಣಿ ಸತ್ಯಾಗ್ರಹ ನಡೆಸಿದರು.ಸ್ಥಳೀಯ ಡಾ.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನೇರವಾಗಿ ಬಸ್ ನಿಲ್ದಾಣ ರಸ್ತೆಯಿಂದ ಟಿಪ್ಪುಸುಲ್ತಾನ್ ವೃತ್ತದ ಮುಖಾಂತರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ತಲುಪಿತು.ನಂತರ ಅಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಭೀಮಶೀ ಕಲಾದಗಿ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಅಣ್ಣಾರಾಯ ಈಳಗೇರ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಸುರೇಖಾ ರಜಪೂತ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ತಾಲ್ಲೂಕು ಪಂಚಾಯಿತಿಯಿಂದ ಪ್ರಸ್ತಾವಗಳನ್ನು ತರಿಸಿಕೊಂಡು ಜಿಲ್ಲಾ ಪಂಚಾಯತಿಗೆ ಕಳುಹಿಸಬೇಕು. ಅಲ್ಲದೇ ಕಾರ್ಮಿಕ ಇಲಾಖೆಯಿಂದ ಹೊರಡಿಸಿದ ರಾಜ್ಯ ಪತ್ರದ ಅನ್ವಯ ಗ್ರಾ.ಪಂ. ನೌಕರರಿಗೆ ವೇತನ ಹಾಗೂ ಪ್ರತಿ ವರ್ಷದ ಸೂಚ್ಯಂಕದಂತೆ ತುಟ್ಟಿ ಭತ್ಯೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಗ್ರಾಮ ಪಂಚಾಯತಿ ನೌಕರರಿಗೆ ಕರ್ನಾಟಕ ಸರ್ಕಾರದ ಆದೇಶದಂತೆ ಭವಿಷ್ಯನಿಧಿ, ಜೀವವಿಮಾ ಜಾರಿಗೆಯಾಗಬೇಕು. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರ ಸೇವಾ ಪುಸ್ತಕವನ್ನು ಸರ್ಕಾರದ ಆದೇಶದಂತೆ ಜಾರಿಗೆ ತರಬೇಕು ಎಂದು ಕೇಳಿಕೊಂಡರು.ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷಗಳವರೆಗೆ ವೇತನಗಳು ಪಾವತಿ ಮಾಡದೇ ಇರುವ ಗ್ರಾಮ ಪಂಚಾಯತಿಗಳಿಂದ ಮಾಹಿತಿ ತರಿಸಿಕೊಂಡು ವೇತನ ಪಾವತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಧರಣಿ ಸತ್ಯಾಗ್ರಹದ ನೇತೃತ್ವವನ್ನು ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಕೋರಬು, ಮಾಜಿ ಪ್ರಧಾನಕಾರ್ಯದರ್ಶಿ ಎಸ್.ಜಿ. ಬೋರಗಿ, ಗ್ರಾಪಂ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಮಠ, ಎಸ್.ಜಿ. ಅಲ್ಲಾಪೂರ, ಯಲ್ಲಪ್ಪ ಹರಿಜನ, ಎಸ್.ಎಚ್. ಹಾಳಕೇರಿ, ನಾರಾಯಣಕರ, ಎಂ.ಕೆ.ಚಳ್ಳಗಿ, ಬಿ.ಎಸ್. ರಾಮಗಿರಿಮಠ, ಖಲೀಲ, ದೇವೀಂದ್ರ ಬಸವಪಟ್ಟಣ, ಗಜಾನನ ತಿವಾರಿ ವಹಿಸಿದ್ದರು.ನೌಕರರ ಪ್ರತಿಭಟನೆ

ಮುದ್ದೇಬಿಹಾಳ ವರದಿ:
ಸರ್ಕಾರದ ಎಲ್ಲ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಜಾರಿ ಮಾಡುವಲ್ಲಿ ಹಾಗೂ ಸಾರ್ವಜ ನಿಕರಿಗೆ ಮೂಲ ಸೌಕರ್ಯಗಳನ್ನು ನೀಡಲು ಗ್ರಾ.ಪಂ.ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಆದರೆ ಅವರ ಬಹುದಿನದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ದೂರಿ ತಾಲ್ಲೂಕಿನ 31 ಗ್ರಾಮ ಪಂಚಾಯಿತಿಗಳ ನೂರಾರು ನೌಕರರು ಈಚೆಗೆ ಪ್ರತಿಭಟನೆ ನಡೆಸಿದರು.ಕೆಲವು  ಗ್ರಾಮ ಪಂಚಾಯಿತಿಗಳಲ್ಲಿ ಅನುಮೋದನೆ ಪಡೆದ ನೌಕರರಿಗೆ ಮಾತ್ರ ಕನಿಷ್ಠ ವೇತನ ನೀಡುತ್ತಿದ್ದು, ಅನುಮೋದನೆಗೊಳ್ಳದ ನೌಕರರಿಗೂ ಸಹ ಕನಿಷ್ಠ ಕೂಲಿ ನೀಡಬೇಕು.  ಗ್ರಾಮ ಪಂಚಾಯತಿಗಳ ನೌಕರರಿಗೆ ಸರ್ಕಾರದ ಆದೇಶದಂತೆ ಭವಿಷ್ಯ ನಿಧಿ, ಜೀವ ವಿಮಾ ಜಾರಿಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.ಪ್ರತಿಭಟನೆಯಲ್ಲಿ ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಬಸನಗೌಡ ಬಿರಾದಾರ, ಎಂ.ಬಿ. ಕೊರಬು, ಡಿ.ಬಿ. ಮುದೂರ, ಜಿ.ಎಲ್. ಬಿರಾದಾರ, ಎಚ್.ಎ.ಬಿರಾದಾರ, ಎನ್.ಬಿ. ಕಲಾರಿ, ಆರ್.ಆರ್. ಹಡಪದ, ಎಲ್.ಎಂ. ವಾಲಿಕಾರ, ರಾಜು ಬಿದರಕುಂದಿ, ಬಸು ಹೆಳವರ, ಬಿ.ಬಿ. ಪಾಟೀಲ, ಪ್ರಭುಗೌಡ ಕಿರವಳ್ಳಿ, ಎಲ್.ಕೆ. ದಾಸರ, ಅಶೋಕ ಬಜಂತ್ರಿ, ಲಕ್ಷ್ಮಣಗೌಡ ಬಿರಾದಾರ ಎಂ.ಕೆ. ಗುಡಿಮನಿ ಮೊದಲಾದವರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.