ಗ್ರಾಮೀಣ ಗ್ರಾಹಕರ ಕುಂದು ಕೊರತೆಗೆ ಸ್ಪಂದಿಸಲು ಸಲಹೆ

ಶುಕ್ರವಾರ, ಮೇ 24, 2019
29 °C

ಗ್ರಾಮೀಣ ಗ್ರಾಹಕರ ಕುಂದು ಕೊರತೆಗೆ ಸ್ಪಂದಿಸಲು ಸಲಹೆ

Published:
Updated:

ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ಕುಂದುಕೊರತೆಗಳಿಗೆ ವಿದ್ಯುತ್ ಸರಬರಾಜು ಕಂಪೆನಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಯೊಂದು ಉಪ ವಿಭಾಗದಲ್ಲಿ ಎರಡು ತಿಂಗಳಿಗೆ ಒಮ್ಮೆಯಾದರೂ ಗ್ರಾಹಕರ ಕುಂದುಕೊರತೆಗಳನ್ನು ಆಲಿಸುವ ಸಭೆಗಳು ನಡೆಯಬೇಕು. ಈ ಬಗ್ಗೆ ನಿರ್ದೇಶನ ನೀಡಿದ್ದರೂ ಪಾಲನೆಯಾಗುತ್ತಿಲ್ಲ ಎಂದರು.ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಗುರುವಾರ ಆಯೋಗದ ಕಚೇರಿಯಲ್ಲಿ ನಡೆದ ಬೆಸ್ಕಾಂ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ಗ್ರಾಹಕರು ವಿದ್ಯುತ್ ದರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಆದರೆ ಅವರ ಕುಂದುಕೊರತೆಗಳನ್ನು ಕೇಳುವವರೇ ಇಲ್ಲ ಎಂಬ ದೂರುಗಳು ಎಲ್ಲೆಡೆ ಕೇಳಿಬರುತ್ತಿವೆ ಎಂದರು. ಪ್ರತಿ ವರ್ಷ ವಿದ್ಯುತ್ ದರ ಮಾತ್ರ ಪರಿಷ್ಕರಣೆಯಾಗುತ್ತಿದೆ, ಆದರೆ ದೂರವಾಣಿ ಮೂಲಕ ದೂರು ಸಲ್ಲಿಸಿದರೆ ಅದನ್ನು ದಾಖಲಿಸಿಕೊಳ್ಳುವುದಿಲ್ಲ. ಗ್ರಾಹಕರೊಂದಿಗೆ ಸಂವಾದ ನಡೆಸಲು ಪ್ರತಿ ವರ್ಷ ಅಂದಾಜು ವೆಚ್ಚದಲ್ಲಿ ಪ್ರತ್ಯೇಕ ಅನುದಾನ ನೀಡಲಾಗಿದೆ. ಅದನ್ನು ಏಕೆ ಬಳಸುತ್ತಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಅವರನ್ನು ತರಾಟೆಗೆ ತೆಗೆದುಕೊಂಡರು.ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿರುತ್ತವೆ. ಕಂಬಗಳು ವಾಲಿರುತ್ತವೆ. ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ. ಇದಕ್ಕೆ ನಿರ್ವಹಣೆಯ ಕೊರತೆಯೇ ಕಾರಣ ಎಂಬುದಾಗಿ ಹೇಳಿದರು.ಗ್ರಾಮೀಣ ಭಾಗದಲ್ಲಿ ಗ್ರಾಹಕರು ದೂರು ಸಲ್ಲಿಸಿದರೂ ಕೇಳುವವರೇ ಇಲ್ಲ. ದೂರು ನೀಡಿದಾಗ ಅದರ ಸಂಖ್ಯೆ ನೀಡುವುದಿಲ್ಲ ಎಂದು ಜನ ಜಾಗೃತಿ ವೇದಿಕೆಯ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಹಕರ 205 ಕೋಟಿ ರೂಪಾಯಿ ಹಣ ಕಾಣೆಯಾಗಿದೆ. ಇದನ್ನು ಪತ್ತೆಹಚ್ಚಿ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕು. ಇದಕ್ಕೆ ಶೇ 6 ದರದಲ್ಲಿ ಬಡ್ಡಿ ನೀಡಬೇಕು. ಹೋದ ವರ್ಷವೇ ಆಯೋಗ ಹೆಚ್ಚಿನ ದರ ನಿಗದಿಪಡಿಸಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ  ಮಹಾಸಂಸ್ಥೆಯ ವಿದ್ಯುತ್ ವಿಭಾಗದ ಮುಖ್ಯಸ್ಥ ಎಂ.ಜಿ.ಪ್ರಭಾಕರ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry