ಮಂಗಳವಾರ, ಏಪ್ರಿಲ್ 20, 2021
31 °C

ಗ್ರಾಮೀಣ ಪ್ರದೇಶಕ್ಕೆ ವೈದ್ಯರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಹಲವು ವೈದ್ಯಕೀಯ ಕಾಲೇಜುಗಳು ಅಸ್ತಿತ್ವದಲ್ಲಿದ್ದರೂ ಗ್ರಾಮೀಣ ಭಾಗದ ಜನರ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಅವಶ್ಯವಿರುವ ವಿದ್ಯಾರ್ಥಿಗಳನ್ನು ನೀಡುವಲ್ಲಿ ವಿಫಲವಾಗಿವೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕುಲಸಚಿವ ಡಾ. ಡಿ. ಪ್ರೇಮ್‌ಕುಮಾರ್ ಅಭಿಪ್ರಾಯಪಟ್ಟರು. ಡಾ.ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತರೆ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಅಂಬೇಡ್ಕರ್ ಅವರ ಹೆಸರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೆಲ್ಲರೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು’ ಎಂದು ಕರೆ ನೀಡಿದರು. ‘ವಿಶ್ವವಿದ್ಯಾಲಯವು ವೈದ್ಯಕೀಯ ಚಿಕಿತ್ಸೆಯಲ್ಲದೇ ರೋಗಿಯ ಭಾವನೆಗಳಿಗೆ ಸ್ಪಂದಿಸುವ ವಿಧಾನದ ಕುರಿತು ಹೊಸ ಪುಸ್ತಕವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.ಪದವಿ ಪಡೆಯುವುದೇ ಜೀವನದ ಗುರಿಯಾಗಬಾರದು. ಉತ್ತಮ ಧ್ಯೇಯೋದ್ದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಮುಖಿ ಬದುಕನ್ನು ತಾವೇ ರೂಪಿಸಿಕೊಳ್ಳುವಂತಾಗಬೇಕು’ ಎಂದು ಆಶಿಸಿದರು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ಕುಬೇರ ಮಾತನಾಡಿ, ‘ಪದವೀಧರರಾಗುವ ಮೊದಲು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ವೈದ್ಯಕೀಯ ವೃತ್ತಿಗೆ ಪದಾರ್ಪಣೆ ಮಾಡುವ ಯುವಜನಾಂಗ ವೃತ್ತಿಯೊಂದಿಗೆ ಹಲವು ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕಿದೆ’ ಎಂದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾಧಾಕೃಷ್ಣ, ಡಾ. ಎನ್.ಟಿ.ಮುರಳಿ ಮೋಹನ್, ಪಿ.ಎಲ್ ನಂಜುಂಡಸ್ವಾಮಿ, ಡಾ.ಬಿ.ಆರ್. ರಮೇಶ್, ಪ್ರಾಚಾರ್ಯ ಸ್ಟ್ಯಾನ್ಲಿ ಜಾನ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.